ಅಸ್ಪಶ್ಯತೆ ನಿವಾರಣೆಯ ಮಕ್ಕಳಾಟ

Update: 2018-04-12 18:40 GMT

ಭಾಗ-1

ಅಸ್ಪಶ್ಯತೆಯ ಕಲ್ಪನೆ ಕೇವಲ ಹಿಂದೂ ಧರ್ಮದಲ್ಲಿ ಅಷ್ಟೇ ಅಲ್ಲ ಇತರ ಧರ್ಮಗಳಲ್ಲೂ ಕಂಡುಬರುತ್ತದೆ. ಯಹೂದಿ ಧರ್ಮದಲ್ಲಿ ಮನುಷ್ಯ ಹೆಣ ಮುಟ್ಟಿದರೆ ಮೈಲಿಗೆಯಾಗುತ್ತದೆ ಎಂದು ಹೇಳಿದೆ. ಈ ಧರ್ಮದಲ್ಲಿ ಯಜ್ಞದಲ್ಲಿ ಮಾಂಸವನ್ನು ಮಡಿಯಲ್ಲಿ ಭಕ್ಷಿಸುವ ಪದ್ಧತಿಯಿತ್ತು ಹಾಗೂ ಹಾಗೆ ಮಡಿಯಲ್ಲಿರುವ ಮನುಷ್ಯ ಮೈಲಿಗೆಯಾದ ಮನುಷ್ಯನನ್ನು ಅಸ್ಪಶ್ಯರನ್ನಾಗಿ ಪರಿಗಣಿಸುತ್ತಿದ್ದನು.ಕೇವಲ ಮಡಿ ಹಾಗೂ ಮಲಿನತೆಯ ಮಾಲಿನ್ಯವನ್ನಷ್ಟೇ ಯಹೂದಿ ಧರ್ಮದಲ್ಲಿ ಹೇಳಿದೆಯೆಂದಲ್ಲ, ಯಾವುದೇ ಕಾರಣದಿಂದ ಓರ್ವ ಮನುಷ್ಯನ ಮೈಯಿಂದ ರಕ್ತಸ್ರಾವವಾಗುತ್ತಿದ್ದರೆ ಆತನನ್ನು ಅಸ್ಪಶ್ಯನನ್ನಾಗಿ ಪರಿಗಣಿಸಬೇಕು ಎನ್ನುವ ನಿಯಮ ಯಹೂದಿ ಧರ್ಮದಲ್ಲಿದೆ. ಪಾರ್ಸಿ ಧರ್ಮದಲ್ಲೂ ಅಸ್ಪಶ್ಯತೆಯ ಕಲ್ಪನೆ ಕಂಡುಬರುತ್ತದೆ. ಪಾರ್ಸಿ ಧರ್ಮಗ್ರಂಥದ ದೃಷ್ಟಿಯಿಂದ ನೋಡಿದಾಗ ಕೆಳಗಿನ ಮೂರು ಕಾರಣಗಳಿಂದ ಮನುಷ್ಯ ‘ಟಬೂ’ ಅಸ್ಪಶ್ಯ ಆಗಬಲ್ಲ. 1. ಹೆಣ ಮುಟ್ಟಿದಾಗ, 2. ಸ್ತ್ರೀ ರಜಸ್ವಲೆಯಾಗಿರುವಾಗ, 3. ಮೇಲೆ ಹೇಳಿರುವ ಅಸ್ಪಶ್ಯರನ್ನು ಮುಟ್ಟಿದಾಗ.

ಹಿಂದೂ ಧರ್ಮದಂತೆ ಈ ಎರಡೂ ಧರ್ಮಗಳಲ್ಲಿ ಅಸ್ಪಶ್ಯತೆಯ ಕಲ್ಪನೆ ಹರಡಿದ್ದರೂ ಹಿಂದೂ ಧರ್ಮದಲ್ಲಿ ಅಸ್ಪಶ್ಯರೆಂಬ ಬೇರೆ ವರ್ಗ ಹುಟ್ಟಿಕೊಂಡಿದೆ ಹಾಗೂ ಯಹೂದಿ ಹಾಗೂ ಪಾರ್ಸಿ ಧರ್ಮದಲ್ಲೇಕೆ ಹುಟ್ಟಿಕೊಂಡಿಲ್ಲ? ಹಿಂದೂ ಧರ್ಮದ ಅಸ್ಪಶ್ಯತೆ ಶಾಶ್ವತ ಹಾಗೂ ಇತರ ಧರ್ಮದಲ್ಲದು ತಾತ್ಕಾಲಿಕ ಯಾಕಾಯಿತು? ಹಾಗೆಯೇ ಇತರ ಧರ್ಮಗಳು ಈ ಅಸ್ಪಶ್ಯತಾ ರೂಪಿ ಬಹಿಷ್ಕಾರದಿಂದ ಮುಕ್ತವಾಗಲು ಯಾವ ದಾರಿಯನ್ನು ಕಂಡುಕೊಂಡವು ಹಾಗೂ ಹಿಂದೂ ಧರ್ಮದಲ್ಲಿ ಆ ದಾರಿ ಯಾಕಿಲ್ಲ? ಅನ್ನುವಂತಹ ಪ್ರಶ್ನೆಗಳು ಚರ್ಚೆಗೆ ಯೋಗ್ಯವಾಗಿವೆ ಹಾಗೂ ಮುಂದೊಂದು ದಿನ ಈ ಪ್ರಶ್ನೆಗಳನ್ನು ಚರ್ಚಿಸುವ ಮನಸ್ಸಿದೆ.

 ಇಂದು ಕೇವಲ ಅಸ್ಪಶ್ಯತಾ ನಿವಾರಣೆಯ ಪ್ರಯತ್ನದ ಬಗ್ಗೆ ತಪಾಸಣೆ ನಡೆಸುವುದೆಂದು ಯೋಚಿಸಿದ್ದೇನೆ. ಅದಕ್ಕಾಗಿ ಅಸ್ಪಶ್ಯತೆಯ ಕಲ್ಪನೆ ಎಲ್ಲ ದೇಶ ಹಾಗೂ ಧರ್ಮಗಳಲ್ಲಿ ಕಂಡುಬಂದರೂ ‘‘ಪರಂಪರಾಗತ ಅಸ್ಪಶ್ಯತೆಯ ವರ್ಗ ಭಾರತದಲ್ಲಲ್ಲದೆ ಇನ್ನೆಲ್ಲೂ ಇಲ್ಲ’’ ಎಂದಷ್ಟೇ ಹೇಳಿದರೆ ಸಾಕು. ಈ ಪರಂಪರಾಗತ ದಲಿತರನ್ನು ಮೇಲ್ಜಾತಿಯವರನ್ನಾಗಿಸಿ ಕೊಳ್ಳಲು ಈ ದೇಶದಲ್ಲಿ ಯಾವುದೇ ಪ್ರಯತ್ನವಾಗಿಲ್ಲ ಎಂದು ಹೇಳಿದರೆ ತಪ್ಪಾದೀತು. ಇದರ ಬಗ್ಗೆ ಆದ ಪ್ರಯತ್ನಗಳನ್ನು ಕಾಲಮಾನದಂತೆ ಎರಡು ಭಾಗಗಳಲ್ಲಿ ವಿಂಗಡಿಸಬಹುದು.

1. ಪ್ರಾಚೀನ ಕಾಲದ ಪ್ರಯತ್ನ ಹಾಗೂ 2. ಆಧುನಿಕ ಕಾಲದ ಪ್ರಯತ್ನ.

ಪ್ರಾಚೀನ ಕಾಲದಲ್ಲಿ ಮೊದಲು ಗೌತಮ ಬುದ್ಧನು ಅಸ್ಪಶ್ಯತೆ ನಿವಾರಣೆಗಾಗಿ ಪ್ರಯತ್ನಿಸಿದನು. ವೇದಗಳಲ್ಲಿ ಸಮಾನತೆಯನ್ನು ಪ್ರತಿಪಾದಿಸಿದ್ದರೂ ಕರ್ಮಠ ಜನರ ಪ್ರಾಬಲ್ಯದಿಂದ ವೇದಗಳಲ್ಲಿ ಈ ತತ್ವಕ್ಕೆ ವ್ಯವಹಾರದಲ್ಲಿ ಯಾವುದೇ ಸ್ಥಾನವಿರಲಿಲ್ಲ. ಕರ್ಮಠ ಜನರ ನಡತೆಯಿಂದ ಧರ್ಮದ ಹೆಸರಿನಲ್ಲಿ ಸಮತೆ ಹಾಗೂ ಪ್ರೀತಿ ಇರಬೇಕಾದ ಜಾಗದಲ್ಲಿ ಜಾತಿ ಭೇದದಂತಹ ವಿಷಮತೆ ಹಾಗೂ ಹಿಂಸೆ ಆರಂಭವಾಯಿತು. ಈ ವಿಷಮತೆ ಹಾಗೂ ಹಿಂಸೆಯನ್ನು ಖಂಡಿಸಲು ಬುದ್ಧನ ಅವತಾರವಾಯಿತು. ಆತ ತನ್ನ ಜೀವಿತ ಕಾಲದಲ್ಲಿ ಎಲ್ಲರೂ ಒಂದೇ ಎನ್ನುವ ದೃಷ್ಟಿಕೋನ ಹಾಗೂ ನಾವು ಮತ್ತೊಬ್ಬರಿಗೆ ಯಾವುದೇ ರೀತಿಯಿಂದ ದುಃಖ ಕೊಡಬಾರದು ಅನ್ನುವಂತಹ ಉಪದೇಶ ಮಾಡಿದನು. ಅಷ್ಟೇ ಅಲ್ಲದೆ ಎಲ್ಲ ಮನುಷ್ಯರಲ್ಲಿರುವ ನೈಸರ್ಗಿಕ ಐಕ್ಯತೆಯನ್ನು ವ್ಯವಹಾರದಲ್ಲಿಳಿಸಿದನು. ಇದಕ್ಕೆ ಒಂದೇ ಸಾಕ್ಷಿ ಸಾಕು, ಹಿಂದೂ ಧರ್ಮದ ಭಿಕ್ಷು ವರ್ಗದವರು ಕೇವಲ ಬ್ರಾಹ್ಮಣರೇ ಆಗಿರುತ್ತಾರೆ. ಆದರೆ ಬುದ್ಧನು ತನ್ನ ಭಿಕ್ಷು ವರ್ಗದಲ್ಲಿ ಎಲ್ಲ ಜಾತಿಯ ಜನರಿಗೂ ಸ್ಥಳಾವಕಾಶ ಮಾಡಿಕೊಟ್ಟು ಸ್ಥಾವಿರ ಅನ್ನುವ ಭಂಗಿಯನ್ನು ಕೂಡ ಬುದ್ಧನು ತನ್ನ ಭಿಕ್ಷು ವರ್ಗದಲ್ಲಿ ಸೇರಿಸಿಕೊಂಡ ಕಥೆ ಬಹಳ ಪ್ರಸಿದ್ಧವಾಗಿದೆ.

ಬುದ್ಧ ಧರ್ಮದ ಅಂತ್ಯವಾಗಿ ಮತ್ತೊಂದು ಧರ್ಮ ತನ್ನ ಸ್ಥಾನ ಪಡೆದುಕೊಂಡಾಗ ಬುದ್ಧ ಆರಂಭಿಸಿದ್ದ ಅಸ್ಪಶ್ಯತೆ ನಿವಾರಣೆಯ ಕೆಲಸ ಮುಂದುವರಿಯಲಿಲ್ಲ ಹಾಗೂ ಅದ್ವೈತ ಪಂಥವನ್ನು ಸ್ಥಾಪಿಸಿದ ಶಂಕರಾಚಾರ್ಯರು ವ್ಯಾವಹಾರಿಕ ಹಾಗೂ ಪಾರಮಾರ್ಥಿಕ ಆಚರಣೆ ಹಾಗೂ ಸತ್ಯದ ಎರಡು ಭಾಗಗಳನ್ನು ಮಾಡಿ ಸಮತೆ ಅನ್ನುವುದು ಕೇವಲ ಪಾರಮಾರ್ಥಿಕ ದೆಸೆಯಾಗಿ ಮಾತ್ರ ಎಂದು ನಿರ್ಧರಿಸಿದರು. ಹೀಗೆ ಸಮತೆಯ ತತ್ವಕ್ಕೆ ಮಿತಿ ಹಾಕಿದ್ದರಿಂದ ವ್ಯಾವಹಾರಿಕ ದೆಸೆಯ ಭೇದಭಾವಗಳು ಹೆಚ್ಚುತ್ತಾ ಹೋದವು ಹಾಗೂ ಅದನ್ನು ತಡೆಯಬೇಕೆಂದು ಶಂಕರಾಚಾರ್ಯರಿಗಾಗಲಿ ಇಲ್ಲವೇ ಅವರ ಅನುಯಾಯಿಗಳಾದ ಮಧ್ವಾಚಾರ್ಯರು ಹಾಗೂ ವಲ್ಲಭಾಚಾರ್ಯರಿಗಾಗಲಿ ಅನಿಸಲೇ ಇಲ್ಲ ಆದರೆ ವಿಶಿಷ್ಟಾದ್ವೈತ ಪಂಥದ ಆದ್ಯ ಪ್ರವರ್ತಕರಾದ ರಾಮಾನುಜಾಚಾರ್ಯರು ಮಾತ್ರ ಈ ವಿಷಯದಲ್ಲಿ ತುಂಬಾ ಒಳ್ಳೆಯ ಕೆಲಸ ಮಾಡಿದರು. ಹಿಂದೂ ಧರ್ಮದಲ್ಲಿ ಸಮಾನತೆಯನ್ನು ಪುರಸ್ಕರಿಸಿದವರು ಹಾಗೂ ಜಾರಿಗೆ ತಂದವರೆಂದರೆ ಈ ಆಚಾರ್ಯರೊಬ್ಬರೇ. ಖುದ್ದು ರಾಮಾನುಜಾಚಾರ್ಯರ ಗುರುಗಳು ಬ್ರಾಹ್ಮಣರಾಗಿರಲಿಲ್ಲ. ಅವರು ಕಾಂಚಿಪೂರ್ಣ ಅನ್ನುವ ಬ್ರಾಹ್ಮಣೇತರರನ್ನು ತಮ್ಮ ಗುರುಗಳನ್ನಾಗಿ ಸ್ವೀಕರಿಸಿದರು.

ಅಷ್ಟೇ ಅಲ್ಲ ತಮ್ಮ ಗೊಡ್ಡು ವಿಚಾರಗಳ ಹೆಂಡತಿ ಕಾಂಚಿಪೂರ್ಣರು ಊಟ ಮಾಡಿದ ನಂತರ ಆ ಜಾಗವನ್ನು ಶುದ್ಧ ಮಾಡಿ ಅವರ ಅವಮಾನ ಮಾಡಿದಳೆನ್ನುವ ಕಾರಣದಿಂದ ಸಿಟ್ಟಿಗೆದ್ದು ಆಕೆಯನ್ನು ಮನೆಯಿಂದ ಹೊರಗಟ್ಟಿ ತಾವು ಸನ್ಯಾಸಿಯಾದರು. ಮುಂದೆ ಸನ್ಯಾಸಾಶ್ರಮ ಪಡೆದು ಉಪದೇಶ ಕೊಡಲಾರಂಭಿಸಿದ ಮೇಲೆ ಕುಂಭಕೋಣ ಎಂಬಲ್ಲಿ ಅವರು ವಿಜಯ ಸಾಧಿಸಿ ಮುಂದೆ ತಿರುವಲ್ಲಿ ಎಂಬಲ್ಲಿಗೆ ಹೋದರು. ಅವರಲ್ಲಿ ತಂಗಿದ್ದಾಗ ಒಬ್ಬ ಚಾಂಡಾಲ ಸ್ತ್ರೀಯರೊಡನೆ ಆದ ಅವರ ಸಂವಾದದಿಂದ ಅವರಿಗೆ ಆಕೆ ಮಾನಸಿಕವಾಗಿ ಸಾಕಷ್ಟು ಬೆಳೆದಿರುವುದು ಕಂಡು ಬಂದು ಎಲ್ಲರೆದುರು ಅವರು ಆಕೆಯನ್ನು ಕುರಿತು ‘‘ಹೇ ಚಾಂಡಾಲ ಸ್ತ್ರೀಯೇ ನನ್ನನ್ನು ಕ್ಷಮಿಸು. ನೀನು ನನಗಿಂತ ಪವಿತ್ರಳು’’ ಎಂದು ಹೇಳಿ ತಕ್ಷಣ ಅವಳಿಗೆ ತನ್ನ ಪಂಥದ ದೀಕ್ಷೆ ಕೊಟ್ಟರು ಹಾಗೂ ಆಕೆಯ ಮೂರ್ತಿಯೊಂದನ್ನು ತಯಾರಿಸಿ ಅಲ್ಲಿಯ ದೇವಾಲಯದಲ್ಲಿ ಸ್ಥಾಪಿಸಿದರು. ಇಂದು ಕೂಡ ಆ ದೇವಸ್ಥಾನದಲ್ಲಿ ಆಕೆಯ ಮೂರ್ತಿಯನ್ನು ತೋರಿಸಲಾಗುತ್ತದೆ ಹಾಗೂ ಎಲ್ಲ ಭಕ್ತರು ಆಕೆಯನ್ನು ಭಕ್ತಿಭಾವದಿಂದ ಪೂಜಿಸುತ್ತಾರೆ.

ಧನುರ್ದಾಸ ಅನ್ನುವನೊಬ್ಬ ದಲಿತನಾಗಿದ್ದರೂ ರಾಮಾನುಜಾಚಾರ್ಯರು ಅವನನ್ನು ತನ್ನ ಶಿಷ್ಯನನ್ನಾಗಿ ಮಾಡಿಕೊಂಡರು ಹಾಗೂ ಆಚಾರ್ಯರಿಗೆ ಅವನ ಮೇಲೆ ಎಷ್ಟು ಪ್ರೀತಿ ಇತ್ತೆಂದರೆ ಸ್ನಾನಕ್ಕೆಂದು ನದಿಗೆ ಹೋಗುವಾಗ ದಾಶರಥಿ ಅನ್ನುವ ಬ್ರಾಹ್ಮಣ ಶಿಷ್ಯನ ಹೆಗಲ ಮೇಲೆ ಕೈಯಿಟ್ಟು ಹೋಗುವ ಇವರು ಸ್ನಾನ ಮಾಡಿ ಬರುವಾಗ ಮಾತ್ರ ಧನುರ್ದಾಸ ಹೆಗಲಿನ ಆಧಾರ ಪಡೆಯುತ್ತಿದ್ದರು. ಹೀಗೆ ಮಾಡುವುದರ ಹಿಂದೆ ಅಸ್ಪಶ್ಯತೆಯನ್ನು ಅಲ್ಲಗಳೆಯುವ ಅವರ ಉದ್ದೇಶ ಸ್ಪಷ್ಟವಾಗುತ್ತದೆ. ಯಾದವಗಿರಿಯ ಮೇಲೆ ರಾಮಾನುಜಾಚಾರ್ಯರು ವಿಷ್ಣುವಿನ ದೇವಸ್ಥಾನ ಕಟ್ಟಿಸಿದಾಗ ಎಲ್ಲಾ ದಲಿತರಿಗೂ ದೇವಸ್ಥಾನದಲ್ಲಿ ಪ್ರವೇಶ ದೊರಕಿಸುವ ಯೋಜನೆಯೊಂದನ್ನು ರೂಪಿಸಿದ್ದರು. ದೇವಸ್ಥಾನದ ಹತ್ತಿರದಲ್ಲಿದ್ದ ಕೆರೆಯಲ್ಲಿ ದಲಿತರಿಗೆ ಸ್ನಾನ ಮಾಡುವ ಅನುಮತಿ ಇತ್ತು ಹಾಗೂ ದೇವಸ್ಥಾನದಲ್ಲಿ ದೇವರ ದರ್ಶನ ಪಡೆಯುವ ಸ್ವಾತಂತ್ರ್ಯವೂ ಇತ್ತು. ಇತ್ತೀಚೆಗೆ ಈ ಆಜ್ಞೆಯನ್ನು ಉತ್ಸವ ಕಾಲಕ್ಕಾಗಿ ಮಾತ್ರ ಸೀಮಿತಗೊಳಿಸಲಾಗಿದೆ ಅನ್ನುವುದು ನಿಜ. ಆದರೆ ಇದರಿಂದ ಮುಖ್ಯವಾಗಿ ಆಚಾರ್ಯರ ಉದ್ದೇಶ ಸಮಾನತೆಯದ್ದಾಗಿತ್ತು ಅನ್ನುವುದು ತಿಳಿಯುತ್ತದೆ. ತಮ್ಮ ಸಂಪ್ರದಾಯದ ಪ್ರಚಾರ ಮಾಡಲು ಆಚಾರ್ಯರು 700 ಮಠಗಳನ್ನು ಸ್ಥಾಪಿಸಿದರು.

ಅವರು ಈ ಕೆಲಸಕ್ಕೆ ಆರಿಸಿದ್ದ ಹನ್ನೆರಡು ಶಿಷ್ಯರೆಲ್ಲರೂ ಹೀನ ಜಾತಿಯವರಾಗಿದ್ದರು. ರಾಮಾನುಜ ಸಂಪ್ರದಾಯದವರು ಸ್ಪರ್ಶ ಭೇದವನ್ನು ನಷ್ಟ ಮಾಡಲು ಪ್ರಯತ್ನಿಸಿದಂತೆ ಚೈತನ್ಯ ಸಂಪ್ರದಾಯದವರೂ ಪ್ರಯತ್ನಿಸಿದರು. ಬಹುಶಃ ಇವರು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಮಾಡಿದ್ದಾರೆ. ರಾಮಾನುಜಾಚಾರ್ಯರು ಅಲ್ಲಲ್ಲಿ ಪವಿತ್ರ ದೇವಾಲಯಗಳನ್ನು ದಲಿತರಿಗೆ ತೆರವು ಮಾಡಿಕೊಟ್ಟಂತೆ ಈ ಚೈತನ್ಯ ಗುರುಗಳು ಜಗನ್ನಾಥ ದೇವಾಲಯವನ್ನು ದಲಿತರಿಗೆ ತೆರವು ಮಾಡಿಕೊಟ್ಟರು. ಇಂದು ಅನೇಕ ವರ್ಷಗಳಿಂದ ಜಗನ್ನಾಥನ ದೇವಸ್ಥಾನದಲ್ಲಿ ಎಲ್ಲ ಜನರೂ ಒಂದೇ ಎಂದು ಎದುರಿಗೇ ಒಪ್ಪಿಕೊಳ್ಳುತ್ತಾರೆ. ಊಟ ತಿಂಡಿಗಳಲ್ಲಿ ಹಾಗೂ ಕೇವಲ ಸ್ಪರ್ಷವಾಗುತ್ತದೆ ಅನ್ನುವ ಕಾರಣಕ್ಕಾಗಿ ಯಾವುದೇ ಜಾತಿಯ ಮನುಷ್ಯನನ್ನಿಲ್ಲಿ ದೂರವಿಡುವುದಿಲ್ಲ. ಮೈಲಿಗೆಯನ್ನು ನಂಬಲೇ ಬಾರದು ಅನ್ನುವುದೇ ಅಲ್ಲಿಯ ಪದ್ಧತಿ. ಎಲ್ಲ ಜಾತಿಯ ಜನ-ದಲಿತರು ಕೂಡಾ ಜಗನ್ನಾಥ ದೇವಾಲಯದಲ್ಲಿ ಸರಿಸಮನಾಗಿ ಪ್ರವೇಶಿಸಬಹುದಾಗಿದೆ. ಎಲ್ಲ ಜಾತಿಯ ಹಾಗೂ ಎಲ್ಲ ಮತಗಳ ಜನ ತಮ್ಮ ಹುಟ್ಟಾ ಉಚ್ಚ ನೀಚ ಭಾವನೆಗಳನ್ನು ಮರೆತು ಒಂದೇ ದೇವರಲ್ಲಿ ನತಮಸ್ತಕರಾಗುತ್ತಾರೆ. ಆತನೇ ಜಗನ್ನಾಥ. ಈ ಎಲ್ಲ ಪ್ರಯತ್ನಗಳ ಪರಿಣಾಮ ಒಳ್ಳೆಯದಾಗಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News