ದೇಶದ ವಿರುದ್ಧ ಪ್ರಧಾನಿಯ ಉಪವಾಸ!

Update: 2018-04-13 05:48 GMT

ಗಾಂಧೀಜಿಯ ಹೋರಾಟದ ಅತಿದೊಡ್ಡ ಅಸ್ತ್ರ ಉಪವಾಸವಾಗಿತ್ತು. ಅವರ ಪಾಲಿಗೆ ಉಪವಾಸವೆಂದರೆ ‘ಆತ್ಮವಿಮರ್ಶೆ’ ಅಥವಾ ಆತ್ಮಶೋಧನೆಯಾಗಿತ್ತು. ಇನ್ನು ಸರಳವಾಗಿ ಹೇಳುವುದಾದರೆ ‘ತನ್ನೊಳಗನ್ನು ತಾನು ಶುದ್ಧೀಕರಿಸಿಕೊಳ್ಳುವುದು’. ಬಹುಶಃ ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಹಮ್ಮಿಕೊಂಡ ಉಪವಾಸ ಗಾಂಧೀಜಿ ನಂಬಿದ ‘ಆತ್ಮವಿಮರ್ಶೆ’ಯ ಭಾಗವೇ ಆಗಿದ್ದರೆ ಅದು ಸ್ವಾಗತಾರ್ಹ. ತನ್ನ ಈವರೆಗಿನ ಆಡಳಿತದ ತಪ್ಪು ಒಪ್ಪುಗಳನ್ನು ಸ್ವೀಕರಿಸಿ, ತನ್ನೊಳಗನ್ನು ಶುದ್ಧೀಕರಿಸುವ ಉದ್ದೇಶ ನರೇಂದ್ರ ಮೋದಿಗಿದ್ದರೆ ಅದನ್ನು ದೇಶದ ಜನರೆಲ್ಲ ಬೆಂಬಲಿಸಬೇಕಾಗುತ್ತದೆ. ಆದರೆ ಅಂತಹದೊಂದು ಆತ್ಮವಿಮರ್ಶೆಯ ಲಕ್ಷಣಗಳಾವುದೂ ಮೋದಿ ಬಳಗದಲ್ಲಿ ಕಾಣಿಸಿಲ್ಲ. ನೋಟು ನಿಷೇಧದ ಪರಿಣಾಮವಾಗಿ ಸರ್ವನಾಶವಾದ ಗ್ರಾಮೀಣ ಕೃಷಿ ಉದ್ದಿಮೆಗೆ ಅರ್ಪಿಸಿದ ಶೋಕಾಚರಣೆಯಂತಿದೆ ನರೇಂದ್ರ ಮೋದಿ ಬಳಗದ ಈ ಉಪವಾಸ. ಜಿಎಸ್‌ಟಿ, ಜಾನುವಾರು ಮಾರಾಟ ನಿಯಂತ್ರಣ, ದಲಿತ ದೌರ್ಜನ್ಯ ಕಾಯ್ದೆಯ ಮೇಲಿನ ಹಸ್ತಕ್ಷೇಪ ಇವೆಲ್ಲದರಿಂದ ನೊಂದು ಬೆಂದ ಜೀವಗಳ ಸಮಸ್ಯೆಗಳ ಅಣಕದಂತಿದೆ ಪ್ರಧಾನಿಯ ಉಪವಾಸ. ಇವುಗಳಿಗೆ ತನ್ನಿಂದ ಯಾವ ಪರಿಹಾರವೂ ಸಾಧ್ಯವಿಲ್ಲ ಎಂಬುದನ್ನು ಈ ಉಪವಾಸದ ಮೂಲಕ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಇದಕ್ಕೆ ಹೊರತಾದ ಬೇರಾವ ಉದ್ದೇಶವೂ ಈ ಉಪವಾಸಕ್ಕಿಲ್ಲ. ತಮ್ಮ ಉಪವಾಸ ವಿರೋಧ ಪಕ್ಷಗಳ ವಿರುದ್ಧ ಎನ್ನುತ್ತಿದ್ದಾರೆ ಪ್ರಧಾನಿ ಮೋದಿ.

ಹಾಗಾದರೆ ಅವರು ಈ ಉಪವಾಸದ ಮೂಲಕ ವಿರೋಧ ಪಕ್ಷಗಳಿಂದ ನಿರೀಕ್ಷಿಸುವುದಾದರೂ ಏನನ್ನು? ವಿರೋಧ ಪಕ್ಷಗಳು ಸುಮ್ಮನಿದ್ದು ಮೋದಿ ನೇತೃತ್ವದ ಸರಕಾರದ ಜನದ್ರೋಹಿ ನೀತಿಗಳಿಗೆ ಅವಕಾಶ ಮಾಡಿಕೊಡಬೇಕೆ? ಹಾಗಾದರೆ ವಿರೋಧ ಪಕ್ಷವೆನ್ನುವುದು ಇರುವುದಾದರೂ ಯಾಕೆ? ಇಷ್ಟಕ್ಕೂ ಕೇಂದ್ರದಲ್ಲಿ ವಿರೋಧ ಪಕ್ಷ ಅತ್ಯಂತ ದುರ್ಬಲವಾಗಿದೆ. ಇಷ್ಟು ಸಣ್ಣ ಸಂಖ್ಯೆಯ ವಿರೋಧ ಪಕ್ಷವನ್ನು ಎದುರಿಸಲು ಮತ್ತು ಅವರನ್ನು ಮನವೊಲಿಸಿ ಕಲಾಪವನ್ನು ಯಶಸ್ವಿಯಾಗಿ ಮುಂದುವರಿಸಲು ಸಾಧ್ಯವಾಗುತ್ತಿಲ್ಲ ಎಂದರೆ ಅದು ಮೋದಿ ನೇತೃತ್ವದ ಸರಕಾರದ ಸ್ಪಷ್ಟ ವೈಫಲ್ಯವಾಗಿದೆ. ವಿರೋಧ ಪಕ್ಷಗಳು ಮುಂದಿಟ್ಟ ಪ್ರಶ್ನೆಗಳಿಗೆ ಉತ್ತರಿಸುವುದು, ಅವರನ್ನು ಸಮಾಧಾನ ಪಡಿಸುವುದು ಮೋದಿ ಸರಕಾರದ ಕರ್ತವ್ಯದ ಭಾಗವಾಗಿದೆ. ಅವರ ಪ್ರಶ್ನೆಗಳು ಈ ದೇಶದ ಪ್ರಜೆಗಳ ಪ್ರಶ್ನೆಗಳಾಗಿವೆ. ಇಂದು ಮೋದಿ ಆ ಪ್ರಶ್ನೆಗಳ ವಿರುದ್ಧ ಉಪವಾಸ ಕೂರುತ್ತಿದ್ದಾರೆ ಎಂದರೆ ಅದರ ಅರ್ಥ ಈ ದೇಶದ ಜನರ ವಿರುದ್ಧವೇ ಉಪವಾಸ ಕೂತಿದ್ದಾರೆ. ತನ್ನನ್ನು ತಾನು ಬಲಾಢ್ಯನೆಂದು ಮಾಧ್ಯಮಗಳ ಮೂಲಕ ಬಿಂಬಿಸಿಕೊಳ್ಳುತ್ತಿರುವ ಮೋದಿ ನೇತೃತ್ವದ ಸರಕಾರಕ್ಕೆ, ಅಲ್ಪ ಸಂಖ್ಯೆ ದುರ್ಬಲ ವಿರೋಧಪಕ್ಷವನ್ನು ಎದುರಿಸಲಾಗುತ್ತಿಲ್ಲವೆಂದರೆ, ಅದು ಖಂಡಿತವಾಗಿಯೂ ಜನರ ಸಮಸ್ಯೆಯಲ್ಲ. ಸರಕಾರದ ಸಮಸ್ಯೆ.

ತನ್ನ ಸಂಪುಟದ ಸಭೆಯನ್ನು ಕರೆದು,ಅಲ್ಲಿ ಚರ್ಚಿಸಿ ಬಗೆ ಹರಿಸಿಕೊಳ್ಳಬೇಕಾದ ವಿಷಯ ಅಥವಾ ಸರ್ವ ಪಕ್ಷಗಳ ಸಭೆ ಕರೆದು ಅವರನ್ನು ಮನವೊಲಿಸಿ ತನ್ನ ಮುತ್ಸದ್ದಿತನವನ್ನು ಸಾಬೀತು ಪಡಿಸಬೇಕಾದ ವಿಷಯ. ಜವಾಹರಲಾಲ್ ನೆಹರೂ ಅವರಿಂದ ಹಿಡಿದು, ವಾಜಪೇಯಿಯವರೆಗೆ ಬೇರೆ ಬೇರೆ ಪ್ರಧಾನಿಗಳು ಇಂತಹ ಸನ್ನಿವೇಶಗಳನ್ನು ಎದುರಿಸಿದ್ದಾರೆ ಮತ್ತು ಅವರು ವಿರೋಧ ಪಕ್ಷಗಳ ಟೀಕೆ, ಆಗ್ರಹಗಳಿಗೆ ಕಿವಿಯಾಗಿ ಅದಕ್ಕೆ ಪೂರಕವಾಗಿ ಸ್ಪಂದಿಸುವ ಮೂಲಕ ಸದನವನ್ನು ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಸಂಸತ್ತಿನ ಅತಿ ದೊಡ್ಡ ವೈಫಲ್ಯವೆಂದರೆ, ವಿರೋಧ ಪಕ್ಷಗಳ ಮಾತುಗಳಿಗೆ ಸರಕಾರ ಕಿವುಡಾಗಿದೆ. ಸರ್ವಾಧಿಕಾರಿ ಮನಸ್ಥಿತಿಯೊಂದು ಪ್ರಧಾನಿಯ ಕುರ್ಚಿಯಲ್ಲಿ ಕೂತು ಆಡಳಿತ ನಡೆಸುತ್ತಿದೆ. ಆದುದರಿಂದಲೇ, ಪ್ರಜಾಸತ್ತಾತ್ಮಕವಾಗಿ ಕಲಾಪವನ್ನು ಮುಂದುವರಿಸಲು ಅದಕ್ಕೆ ಸಾಧ್ಯವಾಗುತ್ತಿಲ್ಲ. ಪ್ರಶ್ನೆಗಳನ್ನು ಸಹಿಸುತ್ತಿಲ್ಲ. ಹೌದು. ಇಂದು ನಿಜಕ್ಕೂ ನರೇಂದ್ರ ಮೋದಿಯವರು ಉಪವಾಸ ಕೂರಲೇ ಬೇಕಾದ ಕೆಲವು ಸನ್ನಿವೇಶಗಳು ದೇಶಾದ್ಯಂತ ನಿರ್ಮಾಣವಾಗುತ್ತಿದೆ. ಇದನ್ನು ಅಲ್ಲಗಳೆಯಲಾಗದು. ಮೋದಿ ಸರಕಾರ ಉಪವಾಸವನ್ನು ಆತ್ಮವಿಮರ್ಶೆಯ ಭಾಗವಾಗಿ ಸ್ವೀಕರಿಸಿದರೆ ಆ ಉಪವಾಸ ದೇಶಕ್ಕೆ ಒಳಿತನ್ನು ಮಾಡೀತು. ವಿಶ್ವದ ಮುಂದೆ ಭಾರತದ ವರ್ಚಸ್ಸು, ಘನತೆ ಉಳಿಯಬೇಕಾದರೆ ತನ್ನದೇ ಸಹೋದ್ಯೋಗಿಗಳ ಮನಃಪರಿವರ್ತನೆಗಾಗಿ ಮೋದಿ ಉಪವಾಸ ಕೂರಬೇಕಾಗಿದೆ.

ಮೊತ್ತ ಮೊದಲಾಗಿ, ನೋಟು ನಿಷೇಧದ ನಿರ್ಧಾರದಿಂದ ನೂರಕ್ಕೂ ಅಧಿಕ ಮಂದಿ ಬ್ಯಾಂಕಿನ ಮುಂದೆ ಕ್ಯೂ ನಿಂತು, ತಮ್ಮ ಪ್ರಾಣವನ್ನು ಅರ್ಪಿಸಿದರು. ಅವರೆಲ್ಲರೂ ಪ್ರಧಾನಿಯ ಮಾತಿನ ಮೇಲೆ ಭರವಸೆಯಿಟ್ಟು ದೇಶಕ್ಕಾಗಿ ಪ್ರಾಣ ಅರ್ಪಿಸಿದ್ದರು. ಆದರೆ ಅವರ ಬಲಿದಾನ ವ್ಯರ್ಥವಾಯಿತು. ಭರವಸೆ ಹುಸಿಯಾಯಿತು. ಆ ಕಾರಣಕ್ಕಾಗಿ ಪ್ರಧಾನಿ ಮೋದಿ ಕನಿಷ್ಠ ಒಂದು ವಾರ ಅನ್ನಾಹಾರ ತ್ಯಜಿಸಿ ಉಪವಾಸ ಕೂರಬೇಕಾಗಿದೆ. ನೋಟು ನಿಷೇಧದ ಬಳಿಕ ಸಣ್ಣ ಪುಟ್ಟ ಉದ್ದಿಮೆಗಳೆಲ್ಲ ನಾಶವಾಗುತ್ತಿವೆ. ಕೃಷಿ ಉದ್ಯಮ ಬೀದಿಗೆ ಬಿದ್ದಿದೆ. ದೇಶದ ಅರ್ಥವ್ಯವಸ್ಥೆ ಕುಸಿತಗೊಂಡಿದೆ. ನಿರೋದ್ಯೋಗಿಗಳೆಲ್ಲ ಪಕೋಡಾ ಮಾರಬೇಕಾದ ಸ್ಥಿತಿಗೆ ಬಂದಿ ನಿಂತಿದ್ದಾರೆ. ಇದನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಒಪ್ಪಿಕೊಂಡಿದ್ದಾರೆ. ಈ ದೇಶದ ಯುವಕರಿಗೆ ಉದ್ಯೋಗ ನೀಡುತ್ತೇನೆ ಎಂಬ ಭರವಸೆಯನ್ನು ಕೊಟ್ಟು ಮೋದಿ ಅಧಿಕಾರದ ಗದ್ದುಗೆ ಹಿಡಿದಿದ್ದರು. ಆ ಭರವಸೆ ಹುಸಿಯಾದುದಕ್ಕಾಗಿ ಮೋದಿ ಉಪವಾಸ ಕೂರಬೇಕಾಗಿದೆ. ತಿನ್ನುವ ಆಹಾರಕ್ಕೂ ಜಿಎಸ್‌ಟಿ ತೆರಿಗೆಯನ್ನು ಹೇರಿ ದೇಶದ ಬಡಜನರ ಹಸಿವನ್ನು ಇನ್ನಷ್ಟು ಹೆಚ್ಚಿಸಿದ್ದಕ್ಕಾಗಿ ಅವರು ಉಪವಾಸದ ಮೊರೆ ಹೋಗಬೇಕಾಗಿದೆ. ನಮ್ಮ ಸೈನಿಕರ ಒಂದು ತಲೆಗೆ ಹತ್ತು ತಲೆ ಎಂಬ ಘೋಷಣೆಯನ್ನು ಮಾಡುತ್ತಾ ಮೋದಿ ಪ್ರಧಾನಿಯಾದರು.

ಆದರೆ ದೇಶದ ಗಡಿಯಲ್ಲಿ ನಮ್ಮ ಸೈನಿಕರು ಹಿಂದೆಂದಿಗಿಂತಲೂ ಅಧಿಕ ಪ್ರಮಾಣದಲ್ಲಿ ಸಾಯುತ್ತಿದ್ದಾರೆ. ಪಾಕಿಸ್ತಾನದ ಸೈನಿಕರ ಗುಂಡೇಟಿಗೆ ನಮ್ಮ ಸೈನಿಕರು ಬಲಿಯಾಗುತ್ತಿದ್ದ ಹೊತ್ತಿನಲ್ಲೇ ಪ್ರಧಾನಿ ಮೋದಿಯವರು ಪಾಕಿಸ್ತಾನಕ್ಕೆ ತೆರಳಿ ಅಂದಿನ ಪ್ರಧಾನಿ ನವಾಝ್‌ಶರೀಫ್ ಅವರ ಮೊಮ್ಮಗಳ ಮದುವೆಯಲ್ಲಿ ಬಿರಿಯಾನಿ ಉಂಡು ಬಂದರು. ಅದರ ಪ್ರಾಯಶ್ಚಿತಕ್ಕಾಗಿ ಮೋದಿ ಉಪವಾಸ ಕೂರಬೇಕಾಗಿದೆ. ಡೋಕಾಲಾದಲ್ಲಿ ನಮ್ಮದೇ ನೆಲದ ಮೇಲೆ ಯಾವ ಭಯವೂ ಇಲ್ಲದೆ ಚೀನಾದ ಸೈನಿಕರು ಬೀಡು ಬಿಟ್ಟಿದ್ದಾರೆ. ಈ ಬಗ್ಗೆ ಈವರೆಗೆ ಮೋದಿಯವರು ಯಾವ ಸ್ಪಷ್ಟೀಕರಣವನ್ನೂ ನೀಡಿಲ್ಲ. ಇದೇ ಸಂದರ್ಭದಲ್ಲಿ ನೂರಾರು ಕೋಟಿ ರೂಪಾಯಿಗಳನ್ನು ಮುಳುಗಿಸಿದ ಬೃಹತ್ ಉದ್ಯಮಿಗಳನ್ನು ವಿದೇಶಕ್ಕೆ ರವಾನಿಸಿ ರಕ್ಷಿಸಲಾಯಿತು. ನೋಟು ನಿಷೇಧದ ಪ್ರಯೋಗಕ್ಕೆ ಪ್ರಾಣ ಅರ್ಪಿಸಿದ ಶ್ರೀಸಾಮಾನ್ಯನಿಗೆ ಮಾಡಿದ ದ್ರೋಹ ಇದಾಗಿತ್ತು. ದಲಿತ ದೌರ್ಜನ್ಯ ಕಾಯ್ದೆ ದುರ್ಬಲ ಗೊಳ್ಳುವ ಮೂಲಕ ದಲಿತರ ಮೇಲೆ ದಾಳಿಗೆ ಪೂರ್ಣ ಪರವಾನಿಗೆ ಸಿಕ್ಕಂತಾಗಿದೆ. ಇದನ್ನು ವಿರೋಧಿಸಿ ಬೀದಿಗಿಳಿದ ಹತ್ತಕ್ಕೂ ಅಧಿಕ ದಲಿತರನ್ನು ಗುಂಡಿಟ್ಟು ಕೊಲ್ಲಲಾಗಿದೆ. ಮೋದಿ ಈ ಬಗ್ಗೆ ಒಂದು ವಿಷಾದವನ್ನೂ ವ್ಯಕ್ತಪಡಿಸಿಲ್ಲ. ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶ ಅಕ್ಷರಶಃ ಜಂಗಲ್‌ರಾಜ್ ಆಗಿ ಪರಿವರ್ತನೆಗೊಂಡಿದೆ. ಸರಕಾರದ ಅಂಗವಾಗಿರುವ ಶಾಸಕರೇ ಸಾಮೂಹಿಕ ಅತ್ಯಾಚಾರದಲ್ಲಿ ಗುರುತಿಸಲ್ಪಡುತ್ತಿದ್ದಾರೆ. ಆದರೆ ಆರೋಪಿಗಳ ಬಂಧನವಾಗುತ್ತಿಲ್ಲ.

ಮುಖ್ಯಮಂತ್ರಿ ಆದಿತ್ಯನಾಥ್‌ರ ಮನಃ ಪರಿವರ್ತನೆಯಾಗಾಗಿ ಅವರ ನಿವಾಸದ ಎದುರು ಮೋದಿ ಅತ್ಯವಶ್ಯವಾಗಿ ಉಪವಾಸ ಕೂರಬೇಕಾಗಿದೆ. ಅಂತಿಮವಾಗಿ, ಜಮ್ಮುವಿನಲ್ಲಿ ಬಾಲಕಿಯೊಬ್ಬಳನ್ನು ಸಾಮೂಹಿಕವಾಗಿ ದೇವಸ್ಥಾನದೊಳಗೇ ಅತ್ಯಾಚಾರಗೈದು, ಬರ್ಬರ ಚಿತ್ರಹಿಂಸೆ ನೀಡಿ ಕೊಲೆಗೈಯಲಾಯಿತು. ಜೈ ಶ್ರೀರಾಮ್, ಭಾರತ್ ಮಾತಾ ಕಿ ಜೈ ಎಂದು ಆ ಅತ್ಯಾಚಾರ ಕೊಲೆಯನ್ನು ಸಮರ್ಥಿಸಿ ಬೀದಿಗಿಳಿದು ಸಂಘಪರಿವಾರದ ಹಿನ್ನೆಲೆಯ ವಕೀಲರು ಪ್ರತಿಭಟನೆ ನಡೆಸಿದರು. ಇವರ ಮನಃ ಪರಿವರ್ತನೆಗಾಗಿ ನರೇಂದ್ರ ಮೋದಿ ಉಪವಾಸ ಕೂತು ಈ ದೇಶದ ಮಾನವನ್ನು ವಿಶ್ವದ ಮುಂದೆ ಉಳಿಸಬೇಕಾಗಿದೆ. ಇಂದು ಗಾಂಧಿ ಬದುಕಿದ್ದರೆ ಖಂಡಿತವಾಗಿಯೂ ಈ ಎಲ್ಲ ಘಟನೆಗಳನ್ನು ವಿರೋಧಿಸಿ ಉಪವಾಸ ಕೂತೇ ತಮ್ಮ ಪ್ರಾಣವನ್ನು ಅರ್ಪಿಸುತ್ತಿದ್ದರು. ತನ್ನ ಕಾರಣದಿಂದಲೇ ಸಂಭವಿಸುತ್ತಿರುವ ಈ ದುರಂತಗಳನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ಸಾಂಕೇತಿಕವಾಗಿಯಾದರೂ ಉಪವಾಸ ಕೂರಲೇ ಬೇಕಾಗಿದೆ. ಅಂತಹದೊಂದು ಉಪವಾಸ ಮೋದಿಯ ಆಡಳಿತ ಕಳಂಕವನ್ನು ಅಲ್ಪವಾದರೂ ತೊಳೆದೀತೇನೋ! 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News