ಕೆಮ್ಮಿನ ಕಾಟದಿಂದ ಪಾರಾಗಲು ಹೀಗೆ ಮಾಡಿ....

Update: 2018-04-13 10:15 GMT

ಮಾನವ ಶರೀರವು ಒಂದು ನೈಸರ್ಗಿಕ ಅದ್ಭುತವಾಗಿದೆ. ಅದು ಸ್ವಯಂ ಆಗಿ ಅಚ್ಚರಿ ಮೂಡಿಸುವ ರೀತಿಯಲ್ಲಿ ಕೆಲಸ ಮಾಡುತ್ತಿರುತ್ತದೆ. ಅದು ತನ್ನನ್ನು ತಾನೇ ದುರಸ್ತಿ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿರುವುದರಿಂದ ಇತರ ಯಂತ್ರಗಳಿಗಿಂತ ಭಿನ್ನವಾಗಿದೆ. ತನ್ನ ಸಹಜ ಕಾರ್ಯಗಳನ್ನು ಮುಂದುವರಿಸಲು ನಮ್ಮ ಶರೀರವು ಹಲವಾರು ಕೆಲಸಗಳನ್ನು ಮಾಡುತ್ತಿರುತ್ತದೆ. ಈ ಪೈಕಿ ಕೆಲವು ನಮಗೆ ಸಮಸ್ಯೆಗಳನ್ನು ಹುಟ್ಟುಹಾಕಬಹುದು, ಆದರೆ ಶರೀರವು ತನ್ನಲ್ಲಿಯ ಯಾವುದೋ ತೊಂದರೆಯನ್ನು ನಿವಾರಿಸಿಕೊಳ್ಳಲು ಆ ಕೆಲಸವನ್ನು ಮಾಡುತ್ತಿರುತ್ತದೆ.

ಕೆಮ್ಮು ಕಾಣಿಸಿಕೊಳ್ಳುವುದು ನಮ್ಮ ಶರೀರದ ಇಂತಹ ಕೆಲಸಗಳಲ್ಲೊಂದಾಗಿದೆ. ಕೆಮ್ಮಿನ ಉದ್ದೇಶ ನಮ್ಮ ಉಸಿರಾಟ ಮಾರ್ಗವನ್ನು ಮಾಲಿನ್ಯಕಾರಕಗಳು ಮತ್ತು ಶ್ಲೇಷ್ಮಗಳಿಂದ ಮುಕ್ತವಾಗಿಡುವುದಾಗಿದೆ. ನಮ್ಮ ಉಸಿರಾಟದ ಮಾರ್ಗದಲ್ಲಿ ಏನಾದರೂ ಸಿಕ್ಕಿ ಹಾಕಿಕೊಂಡಿದ್ದರೆ ಗಂಟಲಲ್ಲಿರುವ ನರಗಳು ಮಿದುಳಿಗೆ ಸಂಕೇತಗಳನ್ನು ರವಾನಿಸುತ್ತವೆ ಮತ್ತು ಮಿದುಳು ದಿಢೀರ್ ಆಗ ಸಂಕುಚಿತಗೊಳ್ಳುವಂತೆ ಎದೆಯ ಮಾಂಸಖಂಡಗಳಿಗೆ ಸೂಚನೆಯನ್ನು ನೀಡುತ್ತದೆ, ಇದರ ಪರಿಣಾಮವಾಗಿ ಎದೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಗಾಳಿಯು ಹೊರತಳ್ಳಲ್ಪಡುತ್ತದೆ. ಇದನ್ನೇ ನಾವು ಕೆಮ್ಮು ಎಂದು ಕರೆಯುತ್ತೇವೆ.

ಹಲವಾರು ಕಾರಣಗಳಿಂದ ಕೆಮ್ಮು ಉಂಟಾಗುತ್ತದೆ. ಮಾಲಿನ್ಯಕಾರಕಗಳು, ಧೂಳು, ಹೊಗೆ ಅಥವಾ ರಾಸಾಯನಿಕಗಳಿಗೆ ತೆರೆದುಕೊಳ್ಳುವುದರಿಂದ ಹಿಡಿದು ಶೀತದಿಂದುಂಟಾ ಗುವ ಶ್ಲೇಷ್ಮದಂತಹ ಸಾಮಾನ್ಯ ಕಾರಣಗಳೂ ಕೆಮ್ಮನ್ನುಂಟು ಮಾಡುತ್ತವೆ.

ಕೆಮ್ಮು ನಮ್ಮ ಉಸಿರಾಟದ ಮಾರ್ಗವನ್ನು ಸ್ವಚ್ಛವಾಗಿರಿಸಲು ಶರೀರದ ಸಹಜ ಪ್ರತಿಕ್ರಿಯೆ ಯಾಗಿದ್ದರೂ ಅದು ನಮಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಸಾಮಾನ್ಯ ಕೆಮ್ಮು 2-3 ದಿನಗಳಲ್ಲಿ ಗುಣವಾಗುತ್ತದೆ ಮತ್ತು ಅದಕ್ಕೆ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿಲ್ಲ. ಸರಳ ಮನೆಮದ್ದುಗಳೇ ಸಾಕು.

ಶ್ಲೇಷ್ಮವನ್ನು ನಿವಾರಿಸುವ ಮೂಲಕ ಕೆಮ್ಮನ್ನು ಗುಣಪಡಿಸುವ ಹಲವಾರು ಪರಿಣಾಮಕಾರಿ ಮನೆಮದ್ದುಗಳಿವೆ. ಅಂತಹ ಕೆಲವು ಪ್ರಮುಖ ಪರಿಹಾರ ಉಪಾಯಗಳ ಕುರಿತು ಮಾಹಿತಿಯಿಲ್ಲಿದೆ......

► ಅರಿಷಿಣ ಮತ್ತು ಕಾಳುಮೆಣಸಿನ ಕಷಾಯ

 ಇದು ಕೆಮ್ಮನ್ನು ಗುಣಪಡಿಸಲು ಅತ್ಯಂತ ಪರಿಣಾಮಕಾರಿ ಮದ್ದಾಗಿದೆ. ಅರಿಷಿಣವು ಶ್ಲೇಷ್ಮ ವಿಕರ್ಷಕವಾಗಿದ್ದರೆ ಕಾಳುಮೆಣಸು ಶ್ಲೇಷ್ಮದ ಹರಿದಾಟವನ್ನು ಉತ್ತೇಜಿಸುತ್ತದೆ. ಇವೆರಡೂ ಸೇರಿಕೊಂಡು ಗಂಟಲಿನಲ್ಲಿರುವ ಶ್ಲೇಷ್ಮವನ್ನು ಹೊರಹಾಕುವ ಮೂಲಕ ಕೆಮ್ಮಿನಿಂದ ಶೀಘ್ರ ಬಿಡುಗಡೆ ನೀಡುತ್ತವೆ. ಈ ಕಷಾಯದ ಸಾಮರ್ಥ್ಯವನ್ನು ಹೆಚ್ಚಿಸಲು ಜೇನನ್ನು ಬೆರೆಸಬಹುದಾಗಿದೆ.

ವಿಧಾನ: ಎರಡು ಕಪ್ ನೀರನ್ನು ಕುದಿಸಿ ಅದಕ್ಕೆ ಕಾಲು ಚಮಚ ಅರಿಷಿಣ ಪುಡಿ ಮತ್ತು 2-3 ಇಡೀ ಕಾಳುಮೆಣಸನ್ನು ಸೇರಿಸಿ. ನೀರಿನ ಪ್ರಮಾಣ ಅರ್ಧಕ್ಕಿಳಿಯುವವರೆಗೆ ಕುದಿಸಿ. ಬಳಿಕ ಈ ಕಷಾಯವನ್ನು ಸೆೋಸಿ ಸೇವಿಸಿ. ಕೆಮ್ಮು ಸಂಪೂರ್ಣ ಗುಣವಾಗುವವರೆಗೆ ದಿನಕ್ಕೆರಡು ಬಾರಿ ಈ ಕಷಾಯವನ್ನು ಕುಡಿಯಿರಿ.

► ಶುಂಠಿ ಮತ್ತು ಜೇನಿನ ಕಷಾಯ

ಇದು ಕೆಮ್ಮಿಗೆ ಇನ್ನೊಂದು ಅತ್ಯುತ್ತಮ ಮದ್ದಾಗಿದೆ. ಶುಂಠಿಯು ಅತ್ಯುತ್ತಮ ಡಿಕಂಜೆಸ್ಟಂಟ್ ಮತ್ತು ಹಿಸ್ಟಾಮಿನ್ ನಿರೋಧಕವಾಗಿರುವು ದರಿಂದ ಶ್ಲೇಷ್ಮವನ್ನು ನೀರಾಗಿಸುತ್ತದೆ ಮತ್ತು ಗಂಟಲಿನ ಕಿರಿಕಿರಿಯನ್ನು ನಿವಾರಿಸುತ್ತದೆ. ಜೇನು ತಕ್ಷಣ ಕೆಮ್ಮಿನಿಂದ ನೆಮ್ಮದಿಯನ್ನು ನೀಡುತ್ತದೆ.

ವಿಧಾನ: ಒಂದು ಕಪ್ ನೀರನ್ನು ಕುದಿಸಿ ಅದಕ್ಕೆ ಶುಂಠಿಯ 4-5 ಸಣ್ಣತುಂಡುಗಳನ್ನು ಸೇರಿಸಿ. ಐದು ನಿಮಿಷಗಳವರೆಗೆ ಕುದಿಯಲು ಬಿಡಿ. ಬಳಿಕ ಸೋಸಿ ಒಂದು ಚಮಚ ಜೇನನ್ನು ಸೇರಿಸಿ ದಿನಕ್ಕೆರಡು ಬಾರಿ ಸೇವಿಸಿ. 3-4 ಹನಿ ಲಿಂಬೆರಸವನ್ನು ಸೇರಿಸಿಕೊಂಡರೆ ರುಚಿಯನ್ನು ನೀಡುತ್ತದೆ.

► ಪುದೀನಾ ತೈಲದ ಹಬೆ

ಪುದೀನಾ ಔಷಧೀಯ ಮೂಲಿಕೆಯಾಗಿದ್ದು, ಗಂಟಲಿಗೆ ಶಮನ ನೀಡುತ್ತದೆ.

ವಿಧಾನ: 150 ಎಂ.ಎಲ್.ನೀರನ್ನು ಬಿಸಿ ಮಾಡಿ, ಅದು ಕುದಿಯುತ್ತಿರುವಾಗ 3-4 ಹನಿ ಪುದೀನಾ ತೈಲದ ಹನಿಗಳನ್ನು ಸೇರಿಸಿ. ನಿಮ್ಮ ತಲೆಯನ್ನು ಟವೆಲ್‌ನಿಂದ ಮುಚ್ಚಿಕೊಂಡು ದೀರ್ಘ ಉಸಿರಾಟದೊಂದಿಗೆ ಈ ನೀರಿನ ಹಬೆಯನ್ನು ಆಘ್ರಾಣಿಸಿ.

► ಈರುಳ್ಳಿ

ಈರುಳ್ಳಿಯ ಕಟುವಾದ ವಾಸನೆ ಕೆಮ್ಮನ್ನು ತಕ್ಷಣ ನಿಲ್ಲಿಸುತ್ತದೆ. ಹಿಸ್ಟಾಮಿನ್ ನಿರೋಧಕ ವಾಗಿರುವ ಈರುಳ್ಳಿಯು ಶ್ವಾಸನಾಳವನ್ನು ಆರೋಗ್ಯಯುತವಾಗಿರಿಸಲು ಪೂರಕವಾಗಿದೆ.

ವಿಧಾನ: ಈರುಳ್ಳಿಯನ್ನು ಸಣ್ಣ ತುಂಡುಗಳನ್ನಾಗಿ ಮಾಡಿ ಬ್ಲೆಂಡರ್‌ನಲ್ಲಿ ಹಾಕಿ ಬ್ಲೆಂಡ್ ಮಾಡಿ. ಬಳಿಕ ಅದನ್ನು ಹಿಂಡಿ ರಸವನ್ನು ತೆಗೆಯಿರಿ. ಅರ್ಧ ಚಮಚ ಈ ರಸಕ್ಕೆ ಒಂದು ಚಮಚ ಜೇನು ಸೇರಿಸಿ ದಿನಕ್ಕೆ ಕನಿಷ್ಠ ಒಂದು ಬಾರಿ ಸೇವಿಸಿ.

► ಬೆಳ್ಳುಳ್ಳಿ

ಶ್ವಾಸನಾಳದಲ್ಲಿಯ ಶ್ಲೇಷ್ಮದ ನಿವಾರಣೆಗಾಗಿ ಬೆಳ್ಳುಳ್ಳಿಯನ್ನು ಹಿಂದಿನಿಂದಲೂ ಬಳಸಲಾ ಗುತ್ತಿದೆ. ಅದರಲ್ಲಿಯ ಸೂಕ್ಷ್ಮಜೀವಿ ನಿರೋಧಕ ಗುಣಗಳು ಗಂಟಲಿನ ಸೋಂಕನ್ನು ಶಮನ ಗೊಳಿಸಲು ನೆರವಾಗುತ್ತವೆ ಮತ್ತು ಪುನಃ ಸೋಂಕು ತಗಲುವುದನ್ನು ತಡೆಯುತ್ತವೆ.

ವಿಧಾನ: ಬೆಳ್ಳುಳ್ಳಿಯ 2-3 ಎಸಳುಗಳನ್ನು ಒಂದು ಕಪ್ ನೀರಿನಲ್ಲಿ ಐದು ನಿಮಿಷಗಳ ಕಾಲ ಕುದಿಸಿ. ಬಳಿಕ ಸೋಸಿ ಕೆಲವು ಹನಿ ಲವಂಗದ ತೈಲ ಮತ್ತು ಒಂದು ಚಮಚ ಜೇನನ್ನು ಸೇರಿಸಿ ದಿನಕ್ಕೆರಡು ಬಾರಿ ಸೇವಿಸಿ.

► ಮರಾಠಿ ಮೊಗ್ಗು ಮತ್ತು ತುಳಸಿ

ಅಡುಗೆಗೆ ಬಳಸುವ ಗರಂ ಮಸಾಲೆಯಲ್ಲಿರುವ ಮರಾಠಿ ಮೊಗ್ಗು ಎಲ್ಲ ಉಸಿರಾಟದ ತೊಂದರೆಗಳಿಗೆ ಉತ್ತಮ ಮದ್ದು ಆಗಿದೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ. ಅದನ್ನು ತುಳಸಿಯೊಂದಿಗೆ ಸೇವಿಸಿದರೆ ಶ್ಲೇಷ್ಮವನ್ನು ಹೊರಗೆ ಹಾಕಿ ಕೆಮ್ಮಿನಿಂದ ಮುಕ್ತಿ ನೀಡುತ್ತದೆ.

ವಿಧಾನ: 2-3 ಮರಾಠಿ ಮೊಗ್ಗು ಮತ್ತು 4-5 ತಾಜಾ ತುಳಸಿ ಎಲೆಗಳನ್ನು ಒಂದು ಕಪ್ ನೀರಿನಲ್ಲಿ ಕುದಿಸಿ. ಇದನ್ನು ಸೋಸಿ ದಿನಕ್ಕೆರಡು ಬಾರಿ ಸೇವಿಸಿ.

► ಬಾದಾಮಿ

ಬಾದಾಮಿ ಪೌಷ್ಟಿಕಾಂಶಗಳ ಆಗರವಾಗಿದೆ. ನಿಯಮಿತವಾಗಿ ಬಾದಾಮಿಯನ್ನು ಸೇವಿಸಿದರೆ ಅದು ಎಲ್ಲ ಪ್ರಮುಖ ಸೋಂಕುಗಳ ವಿರುದ್ಧ ಹೋರಾಡಲು ನೆರವಾಗುತ್ತದೆ. ಅದು ನೈಸರ್ಗಿಕ ಕೆಮ್ಮು ನಿವಾರಕವೂ ಹೌದು. ಜೇನಿನೊಂದಿಗೆ ಮಿಶ್ರಗೊಳಿಸಿದರೆ ಅದು ಕೆಮ್ಮಿನ ಚಿಕಿತ್ಸೆಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ. ಇದು ಮಕ್ಕಳಿಗೆ ಹೇಳಿ ಮಾಡಿಸಿದ ಮದ್ದಾಗಿದೆ.

ವಿಧಾನ: 4-5 ಬಾದಾಮಿಗಳನ್ನು ನೀರಿನಲ್ಲಿ ನೆನೆಸಿಟ್ಟು ಬಳಿಕ ಸಿಪ್ಪೆಯನ್ನು ತೆಗೆದು ಜಜ್ಜಿ ಪೇಸ್ಟ್ ತಯಾರಿಸಿ. ಇದನ್ನು ಒಂದು ಚಮಚ ಜೇನಿನಿಂದಿಗೆ ಬೆರೆಸಿಕೊಂಡು ದಿನಕ್ಕೆ ಮೂರು ಬಾರಿ ಸೇವಿಸಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News