ಶೂಟರ್, ಕುಸ್ತಿಪಟುಗಳಿಂದ ಮುಂದುವರಿದ ಚಿನ್ನದ ಬೇಟೆ

Update: 2018-04-13 18:40 GMT

ಗೋಲ್ಡ್‌ಕೋಸ್ಟ್, ಎ.13: ಕಾಮನ್‌ವೆಲ್ತ್ ಗೇಮ್ಸ್‌ನ 9ನೇ ದಿನವಾದ ಶುಕ್ರವಾರ ಭಾರತ ಮೂರು ಚಿನ್ನ ಸಹಿತ ಒಟ್ಟು 11 ಪದಕಗಳನ್ನು ಗೆದ್ದುಕೊಂಡಿತು. ಕುಸ್ತಿಪಟುಗಳು ಹಾಗೂ ಶೂಟರ್‌ಗಳು ಚಿನ್ನದ ಬೇಟೆ ಮುಂದುವರಿಸಿದರು. ಬಾಕ್ಸರ್‌ಗಳು ಕೂಡ ತಮ್ಮ ಅಮೂಲ್ಯ ಕೊಡುಗೆ ನೀಡಿದರು.

ಈಗಾಗಲೇ ಒಟ್ಟು 42 ಪದಕಗಳನ್ನು ಗೆದ್ದುಕೊಂಡಿರುವ ಭಾರತ ಗೇಮ್ಸ್‌ನ ಕೊನೆಯ ಎರಡು ದಿನಗಳಲ್ಲಿ ಇನ್ನಷ್ಟು ಪದಕ ಗೆಲ್ಲುವ ವಿಶ್ವಾಸದಲ್ಲಿದೆ.

 37ರ ಹರೆಯದ ರೈಫಲ್ ಶೂಟರ್ ತೇಜಸ್ವಿನಿ ಸಾವಂತ್ ಚಿನ್ನದ ಪದಕ ಜಯಿಸಿ ಶುಕ್ರವಾರ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟರು. 15ರ ಹರೆಯದ ಶೂಟರ್ ಅನೀಶ್ ಭನ್ವಾಲ್ ಚಿನ್ನ ಗೆದ್ದ ಕಿರಿಯ ಅಥ್ಲೀಟ್ ಎನಿಸಿಕೊಂಡರು. ಕುಸ್ತಿಪಟು ಬಜರಂಗ್ ಪೂನಿಯಾ ಕೂಡ ಚಿನ್ನಕ್ಕೆ ಮುತ್ತಿಟ್ಟರು.

ಶೂಟರ್ ಅಂಜುಮ್ ವೌದ್ಗಿಲ್, ಕುಸ್ತಿಪಟುಗಳಾದ ಪೂಜಾ ಧಂಡಾ ಹಾಗೂ ವೌಸಮ್ ಖತ್ರಿ ಬೆಳ್ಳಿ ಪದಕ ಜಯಿಸಿದರು. ಟೇಬಲ್ ಟೆನಿಸ್‌ನಲ್ಲಿ ಮನಿಕಾ ಬಾತ್ರಾ ಹಾಗೂ ವೌಮಾ ದಾಸ್ ಬೆಳ್ಳಿ ಗೆದ್ದುಕೊಂಡರು. ಬಾಕ್ಸರ್‌ಗಳಾದ ನಮನ್ ತನ್ವರ್, ಮುಹಮ್ಮದ್ ಹಸ್ಸಾಮುದ್ದೀನ್ ಹಾಗೂ ಮನೋಜ್‌ಕುಮಾರ್, 19ರ ಹರೆಯದ ಕುಸ್ತಿತಾರೆ ದಿವ್ಯಾ ಕಾಕ್ರನ್ ಕಂಚಿನ ಪದಕ ಜಯಿಸಿದ್ದಾರೆ.

►ಸಾವಂತ್‌ಗೆ ಎರಡನೇ ಪದಕ:

ಭಾರತದ ಹಿರಿಯ ಶೂಟರ್ ಸಾವಂತ್ ಗೋಲ್ಡ್‌ಕೋಸ್ಟ್ ಗೇಮ್ಸ್‌ನಲ್ಲಿ ಎರಡನೇ ಪದಕ ಜಯಿಸಿದ್ದಾರೆ. ಗುರುವಾರ ಮಹಿಳೆಯರ 50 ಮೀ.ರೈಫಲ್ ಪ್ರೋನ್ ಶೂಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದ ಸಾವಂತ್ ಶುಕ್ರವಾರ ನಡೆದ ವನಿತೆಯರ 50 ಮೀ. ರೈಫಲ್ 3 ಪ್ರೊನ್ ಫೈನಲ್‌ನಲ್ಲಿ ಒಟ್ಟು 457.8 ಅಂಕ ಗಳಿಸಿ ದಾಖಲೆ ನಿರ್ಮಿಸಿದ್ದಲ್ಲದೆ ಚಿನ್ನ ಬಾಚಿಕೊಂಡರು.

 ಭಾರತಕ್ಕೆ 15ನೇ ಚಿನ್ನ ಗೆದ್ದುಕೊಟ್ಟ ಸಾವಂತ್ 4 ವರ್ಷಗಳ ಹಿಂದಿನ ಚಿನ್ನದ ಸಾಧನೆಯನ್ನು ಸರಿಗಟ್ಟಲು ನೆರವಾದರು. 24ರ ಹರೆಯದ ವೌದ್ಗಿಲ್ 455.7 ಅಂಕ ಗಳಿಸಿ ಎರಡನೇ ಸ್ಥಾನ ಪಡೆದರು. ಚೊಚ್ಚಲ ಸಿಡಬ್ಲುಜಿ ಪದಕ ಜಯಿಸಿದರು.

ಯುವ ಶೂಟರ್ ಅನೀಶ್ ಪುರುಷರ 25 ಮೀ. ರ್ಯಾಪಿಡ್ ರೈಫಲ್ ಪಿಸ್ತೂಲ್ ಫೈನಲ್‌ನಲ್ಲಿ ಒಟ್ಟು 30 ಅಂಕ ಗಳಿಸಿ ಚಿನ್ನ ಜಯಿಸಿದರು. ಈ ಮೂಲಕ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಗರಿಷ್ಠ ಚಿನ್ನದ ಪದಕ ಜಯಿಸಲು ಕಾರಣರಾದರು.

ಇಂದು ಎಲ್ಲ ನಾಲ್ವರು ಕುಸ್ತಿಪಟುಗಳು ಪದಕ ಜಯಿಸಿದ್ದು ವಿಶೇಷವಾಗಿತ್ತು. 2014ರ ಗ್ಲಾಸ್ಗೊ ಗೇಮ್ಸ್‌ನಲ್ಲಿ 61 ಕೆಜಿ ವಿಭಾಗದಲ್ಲಿ ಬೆಳ್ಳಿ ಜಯಿಸಿದ್ದ ಬಜರಂಗ್ ವೇಲ್ಸ್‌ನ ಕೇನ್ ಚಾರಿಗ್ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿ ಚಿನ್ನ ಜಯಿಸಿದರು. ಪುರುಷರ 97 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ವೌಸಮ್ ಖತ್ರಿ ಬೆಳ್ಳಿ ಗೆದ್ದುಕೊಂಡರು.

 ಮಹಿಳೆಯರ 57 ಕೆಜಿ ಫ್ರೀಸ್ಟೈಲ್ ವಿಭಾಗದ ಫೈನಲ್ಸ್‌ನಲ್ಲಿಪೂಜಾ ದ.ಆಫ್ರಿಕದ ಮಾರ್ಟಿನ್ ಎರಸ್ಮಸ್‌ಗೆ ಸೋಲುವುದರೊಂದಿಗೆ ಬೆಳ್ಳಿ ಜಯಿಸಿದರೆ, ತನ್ನ ಚೊಚ್ಚಲ ಗೇಮ್ಸ್‌ನಲ್ಲಿ ದಿವ್ಯಾ 68 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕಂಚು ಜಯಿಸಿದ್ದಾರೆ.

 ತನ್ವರ್ ಪುರುಷರ ಬಾಕ್ಸಿಂಗ್‌ನ 91 ಕೆಜಿ ವಿಭಾಗದ ಸೆಮಿ ಫೈನಲ್‌ನಲ್ಲಿ ಆಸ್ಟ್ರೇಲಿಯದ ಜೇಸನ್ ವಾಟ್ಲಿ ವಿರುದ್ಧ ಶರಣಾಗಿ ಕಂಚಿಗೆ ತೃಪ್ತಿಪಟ್ಟರು. ಪುರುಷರ 56 ಕೆಜಿ ಸೆಮಿ ಫೈನಲ್‌ನಲ್ಲಿ ಇಂಗ್ಲೆಂಡ್‌ನ ಪೀಟರ್ ಮೆಕ್‌ಗ್ರೈಲ್ ವಿರುದ್ಧ ಹಸ್ಸಾಮುದ್ದೀನ್ 0-5 ಅಂತರದಿಂದ ಸೋತಿದ್ದಾರೆ. ಮನೋಜ್‌ಕುಮಾರ್ ಕೂಡ 69 ಕೆಜಿ ಸೆಮಿ ಫೈನಲ್‌ನಲ್ಲಿ ಇಂಗ್ಲೆಂಡ್‌ನ ಪ್ಯಾಟ್ ಮೆಕ್‌ಕಾರ್ಮಕ್‌ಗೆ ಸೋತಿದ್ದಾರೆ.

ಬಾಕ್ಸರ್‌ಗಳಾದ ಅಮಿತ್ ಫಾಂಗಲ್, ಗೌರವ್ ಸೋಳಂಕಿ, ಮನೀಶ್ ಕೌಶಿಕ್, ವಿಕಾಸ್ ಕ್ರಿಶನ್ ಹಾಗೂ ಸತೀಶ್ ಕುಮಾರ್ ಫೈನಲ್‌ಗೆ ಪ್ರವೇಶಿಸುವ ಮೂಲಕ ಮತ್ತಷ್ಟು ಪದಕದ ಭರವಸೆ ಮೂಡಿಸಿದ್ದಾರೆ.

ಪುರುಷರ 46-49 ಕೆ.ಜಿ. ಸೆಮಿಫೈನಲ್‌ನಲ್ಲಿ ಅಮಿತ್ ಉಗಾಂಡದ ಜುಮಾ ಮಿರೊರನ್ನು 5-0 ಅಂತರದಿಂದ ಸೋಲಿಸಿದರು. ಪುರುಷರ 52 ಕೆಜಿ ಸೆಮಿ ಫೈನಲ್‌ನಲ್ಲಿ ಸೋಳಂಕಿ ಶ್ರೀಲಂಕಾದ ಇಶಾನ್ ಬಂಡಾರರನ್ನು 4-0 ಅಂತರದಿಂದ ಸೋಲಿಸಿದ್ದಾರೆ.

 ಪುರುಷರ 60 ಕೆಜಿ ಸೆಮಿ ಫೈನಲ್‌ನಲ್ಲಿ ಕೌಶಿಕ್ ಉತ್ತರ ಐರ್ಲೆಂಡ್‌ನ ಜೇಮ್ಸ್ ಮೆಕ್‌ಗಿವರ್ನ್‌ರನ್ನು 4-1 ರಿಂದ ಮಣಿಸಿದರು. ಪುರುಷರ 75 ಕೆಜಿ ವಿಭಾಗದಲ್ಲಿ ವಿಕಾಸ್ ಉತ್ತರ ಐರ್ಲೆಂಡ್‌ನ ಸ್ಟೀವನ್ ಡೊನ್ಲೀ ಅವರನ್ನು ಸೋಲಿಸಿದರೆ, ಸತೀಶ್ ಕುಮಾರ್ ಫೈನಲ್‌ಗೆ ತಲುಪಿದ ಭಾರತದ 5ನೇ ಬಾಕ್ಸರ್ ಎನಿಸಿಕೊಂಡರು. ಸತೀಶ್ ಎದುರಾಳಿ ಕೆಡ್ಡಿ ಅಗ್ನೆಸ್ 2ನೇ ಸುತ್ತಿನ ಪಂದ್ಯ ನಡೆಯುತ್ತಿದ್ದಾಗ ಟವಲ್ ಎಸೆದ ಕಾರಣ ತೀರ್ಪುಗಾರರು ಪಂದ್ಯವನ್ನು ರದ್ದುಗೊಳಿಸಿದರು.

►ಬ್ಯಾಡ್ಮಿಂಟನ್:    

ಮಹಿಳೆಯರ ಡಬಲ್ಸ್ ಜೋಡಿ ಸಿಕ್ಕಿ ರೆಡ್ಡಿ ಹಾಗೂ ಅಶ್ವಿನಿ ಪೊನ್ನಪ್ಪ ಶ್ರೀಲಂಕಾದ ಹಸಿನಿ ಅಂಬಲಾಗಾಡ್ಜೆ ಹಾಗೂ ಮಧುಶಿಕಾರನ್ನು 2-0 ಅಂತರದಿಂದ ಸೋಲಿಸಿ ಸೆಮಿ ಫೈನಲ್‌ಗೆ ತಲುಪಿದರು. ಸಾತ್ವಿಕ್ ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಮಲೇಷ್ಯಾದ ಎದುರಾಳಿಯನ್ನು 2-1 ರಿಂದ ಸೋಲಿಸಿ ಸೆಮಿ ಫೈನಲ್‌ಗೆ ತಲುಪಿದರು. ಪುರುಷರ ಸಿಂಗಲ್ಸ್‌ನಲ್ಲಿ ಕೆ. ಶ್ರೀಕಾಂತ್ ಸಿಂಗಾಪುರದ ಝಿನ್ ರೀ ರಿಯಾನ್‌ರನ್ನು 21-15, 21-12 ಅಂತರದಿಂದಲೂ, ಮಹಿಳೆಯರ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್ ಕೆನಡಾದ ರಚೆಲ್‌ರನ್ನು 21-8, 21-13 ಅಂತರದಿಂದ ಸೋಲಿಸಿ ಸೆಮಿ ಫೈನಲ್‌ಗೆ ತಲುಪಿದ್ದಾರೆ. ಸೈನಾ ಸೆಮಿಫೈನಲ್‌ನಲ್ಲಿ ಗ್ಲಿಮೋರ್‌ರನ್ನು ಎದುರಿಸಲಿದ್ದಾರೆ.

ಸ್ಕ್ವಾಷ್: ಮಹಿಳೆಯರ ಡಬಲ್ಸ್ ಸ್ಕ್ವಾಷ್ ಸ್ಪರ್ಧೆಯಲ್ಲಿ ಜೋಶ್ನಾ ಚಿನ್ನಪ್ಪ ಹಾಗೂ ದೀಪಿಕಾ ಪಲ್ಲಿಕಲ್ ಕೆನಡಾದ ಎದುರಾಳಿಯನ್ನು 2-1 ಅಂತರದಿಂದ ಸೋಲಿಸಿ ಸೆಮಿ ಫೈನಲ್‌ಗೆ ತಲುಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News