ಖಾಲಿಹೊಟ್ಟೆಯಲ್ಲಿ ಬಾಳೇಹಣ್ಣು ತಿಂದರೆ ಏನಾಗುತ್ತದೆ...?

Update: 2018-04-14 10:54 GMT

ಬೆಳಗ್ಗಿನ ತಿಂಡಿ ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ಅದು ಪೌಷ್ಟಿಕಾಂಶಗಳಿಂದ ಕೂಡಿರಬೇಕು ಮತ್ತು ದಿನದ ಕಾರ್ಯಗಳ ಆರಂಭಕ್ಕೆ ಮುನ್ನ ಹೊಟ್ಟೆ ತುಂಬ ಆಹಾರ ಸೇವನೆಯು ನಮ್ಮ ಶರೀರಕ್ಕೆ ಅಗತ್ಯ ಶಕ್ತಿಯನ್ನು ನೀಡುತ್ತದೆ. ಆದರೆ ಇಂದಿನ ಗಡಿಬಿಡಿಯ ಜೀವನದಲ್ಲಿ ಹಲವರು ಬೆಳಗ್ಗಿನ ತಿಂಡಿಯನ್ನು ಸೇವಿಸುವುದನ್ನು ತಪ್ಪಿಸಿಕೊಳ್ಳುತ್ತಾರೆ. ಕೆಲಸದ ನಿಮಿತ್ತ ಹೊರಗೆ ತೆರಳುವವರು ಅವಸರದಲ್ಲಿ ಒಂದು ಗುಟುಕು ಚಹಾವನ್ನೋ ಕಾಫಿಯನ್ನೋ ಕುಡಿದು ಬಾಳೇಹಣ್ಣು ಅಥವಾ ಇತರ ಹಣ್ಣುಗಳನ್ನು ತಿಂದು ತಮ್ಮ ಬ್ರೇಕ್‌ಫಾಸ್ಟ್ ಮುಗಿಸಿಬಿಡುತ್ತಾರೆ. ಆದರೆ ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯದಲ್ಲ.

ಬಾಳೇಹಣ್ಣು ಅತ್ಯುತ್ತಮ ಪೌಷ್ಟಿಕಾಂಶಗಳನ್ನು ಒಳಗೊಂಡಿರುವ ಆಹಾರಗಳಲ್ಲಿ ಒಂದಾಗಿದೆಯಾದರೂ ಖಾಲಿಹೊಟ್ಟೆಯಲ್ಲಿ ತಿಂದರೆ ಅದರಲ್ಲಿ ಅಧಿಕ ಪ್ರಮಾಣದಲ್ಲಿರುವ ಪೊಟ್ಯಾಷಿಯಂ ಮತ್ತು ಮ್ಯಾಗ್ನೇಷಿಯಂ ಶರೀರದಲ್ಲಿ ಖನಿಜಗಳ ಮಟ್ಟದಲ್ಲಿ ಅಸಮತೋಲನವನ್ನು ಉಂಟು ಮಾಡುತ್ತವೆ.

ಖಾಲಿಹೊಟ್ಟೆಯಲ್ಲಿ ಬಾಳೇಹಣ್ಣನ್ನು ತಿನ್ನುವುದರಿಂದ ದೂರವಿರುವುದು ಒಳ್ಳೆಯದು. ಈ ಹಣ್ಣು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ, ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ದಣಿವು, ಮಲಬದ್ಧತೆ ಮತ್ತು ಅಲ್ಸರ್‌ನ ಅಪಾಯವನ್ನು ಕಡಿಮೆ ಮಾಡುತ್ತದೆ. ಹಿಮೊಗ್ಲೋಬಿನ್ ಉತ್ಪತ್ತಿಯನ್ನು ಪ್ರಚೋದಿಸುವ ಮೂಲಕ ರಕ್ತಹೀನತೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಆದರೆ ಬಾಳೇಹಣ್ಣನ್ನು ಸರಿಯಾದ ಸಮಯದಲ್ಲಿ ತಿಂದರೆ ಮಾತ್ರ ಇವೆಲ್ಲ ಆರೋಗ್ಯಲಾಭಗಳು ನಮ್ಮ ಶರೀರಕ್ಕೆ ದೊರೆಯುತ್ತವೆ.

ಖಾಲಿಹೊಟ್ಟೆಯಲ್ಲಿ ಬಾಳೇಹಣ್ಣನ್ನು ತಿಂದರೆ ಶರೀರದಲ್ಲಿಯ ಪೊಟ್ಯಾಷಿಯಂ ಮತ್ತು ಮ್ಯಾಗ್ನೇಷಿಯಂ ಮಟ್ಟದಲ್ಲಿ ಅಸಮತೋಲನ ಉಂಟಾಗುವುದರ ಜೊತೆಗೆ ಅದರಲ್ಲಿಯ ಆಮ್ಲೀಯ ಗುಣವು ಕರುಳಿನ ಸಮಸ್ಯೆಯನ್ನು ಹೆಚ್ಚಿಸುತ್ತದೆ.

ಬಾಳೇಹಣ್ಣು ಪೌಷ್ಟಿಕ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಅದರಲ್ಲಿ ಪೊಟ್ಯಾಷಿಯಂ, ಮ್ಯಾಗ್ನೇಷಿಯಂ ಮತ್ತು ನಾರು ಸಮೃದ್ಧವಾಗಿರುವುದರಿಂದ ವೈದ್ಯರೂ ಅದನ್ನು ಶಿಫಾರಸು ಮಾಡುತ್ತಾರೆ. ಅದು ಹಸಿವನ್ನು ನೀಗಿಸುತ್ತದೆ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ. ಅದರಲ್ಲಿ ಶೇ.25ರಷ್ಟು ಸಕ್ಕರೆಯ ಅಂಶವಿದ್ದು, ಇದು ಶರೀರದ ಕಾರ್ಯ ನಿರ್ವಹಣೆಗೆ ಅಗತ್ಯ ಶಕ್ತಿಯನ್ನು ಒದಗಿಸುವಲ್ಲಿ ನೆರವಾಗುತ್ತದೆ. ಅಲ್ಲದೆ ಬಾಳೇಹಣ್ಣಿನಲ್ಲಿ ಟ್ರಿಪ್ಟೋಫಾನ್, ವಿಟಾಮಿನ್ ಬಿ, ಕಬ್ಬಿಣ ಮತ್ತು ವಿಟಾಮಿನ್ ಬಿ6 ಕೂಡ ಇವೆ.

ಇಷ್ಟೆಲ್ಲ ಪೌಷ್ಟಿಕಾಂಶಗಳನ್ನು ಒಳಗೊಂಡಿರುವ ಬಾಳೇಹಣ್ಣನ್ನು ಖಾಲಿಹೊಟ್ಟೆಯಲ್ಲಿ ತಿನ್ನುವುದಕ್ಕಿಂತ ಇತರ ಆಹಾರಗಳೊಂದಿಗೆ ಸೇವಿಸಿದರೆ ಹೆಚ್ಚು ಆರೋಗ್ಯಕರವಾಗಿರುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ.

ಬಾಳೇಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿರುವ ಸಕ್ಕರೆ ಶರೀರಕ್ಕೆ ಶಕ್ತಿಯನ್ನು ನೀಡುತ್ತದೆ ಯಾದರೂ ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ಕೆಲವೇ ಗಂಟೆಗಳಲ್ಲಿ ಈ ಶಕ್ತಿ ಉಡುಗುತ್ತದೆ ಹಾಗೂ ದಣಿವು, ಸೋಮಾರಿತನ ಮತ್ತು ನಿದ್ರೆಯ ಮಂಪರಿಗೆ ಕಾರಣವಾಗುತ್ತದೆ ಎನ್ನುವುದು ಸಂಶೋಧನೆಗಳಿಂದ ಬೆಳಕಿಗೆ ಬಂದಿದೆ.

ಬಾಳೇಹಣ್ಣಿನಿಂದ ದಿನದ ಆರಂಭ ಒಳ್ಳೆಯದು, ಆದರೆ ಅದರೊಂದಿಗೆ ಇತರ ಆಹಾರವೂ ಸೇರಿರಬೇಕು ಎನ್ನುವುದು ಪೌಷ್ಟಿಕಾಂಶ ತಜ್ಞರ ಅಭಿಪ್ರಾಯವಾಗಿದೆ.

ಬಾಳೇಹಣ್ಣನ್ನು ನೆನೆಸಿದ ಒಣಹಣ್ಣುಗಳೊಂದಿಗೆ ಸೇವಿಸಿದರೆ ಅದರ ಆಮ್ಲೀಯ ಗುಣವು ಬೀರುವ ಪರಿಣಾಮವನ್ನು ಕನಿಷ್ಠಗೊಳಿಸಬಹುದು. ಅಲ್ಲದೆ ಖಾಲಿಹೊಟ್ಟೆಯಲ್ಲಿ ಅದನ್ನು ತಿನ್ನುವುದರಿಂದ ಅದರಲ್ಲಿಯ ಅಧಿಕ ಮ್ಯಾಗ್ನೇಷಿಯಂ ಅಸಮತೋಲನವನ್ನು ಉಂಟು ಮಾಡಿ ಹೃದಯದ ಸಮಸ್ಯೆಗಳಿಗೂ ಕಾರಣವಾಗಬಹುದು.

ಖಾಲಿಹೊಟ್ಟೆಯಲ್ಲಿ ಬಾಳೇಹಣ್ಣು ತಿನ್ನಬಾರದು ಎಂದು ಆಯುರ್ವೇದವೂ ಹೇಳುತ್ತದೆ. ಕೇವಲ ಬಾಳೇಹಣ್ಣು ಮಾತ್ರವಲ್ಲ, ಖಾಲಿಹೊಟ್ಟೆಯಲ್ಲಿ ಯಾವುದೇ ಹಣ್ಣನ್ನು ಸೇವಿಸುವುದರಿಂದ ದೂರವುಳಿಯಬೇಕು. ಏಕೆಂದರೆ ಇಂದು ಸಹಜವಾಗಿ ಮಾಗಿರುವ ಹಣ್ಣುಗಳು ದೊರೆಯುವುದು ಅಪರೂಪ. ಅವುಗಳನ್ನು ಬೆಳೆಯಲು ಮತ್ತು ಹಣ್ಣಾಗಿಸಲು ರಾಸಾಯನಿಕಗಳನ್ನು ಬಳಸಲಾಗುತ್ತದೆ. ಹೀಗಾಗಿ ಖಾಲಿಹೊಟ್ಟೆಯಲ್ಲಿ ಹಣ್ಣುಗಳನ್ನು ಸೇವಿಸಿದರೆ ಪೌಷ್ಟಿಕತೆಯು ದೊರೆಯುವ ಬದಲು ಈ ರಾಸಾಯನಿಕಗಳು ನೇರವಾಗಿ ಶರೀರವನ್ನು ಪ್ರವೇಶಿಸಿ ಆರೋಗ್ಯ ಸಮಸ್ಯೆಗಳನ್ನುಂಟು ಮಾಡುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News