ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ರಾಜಕೀಯ ಮಾಲಿನ್ಯ ತಡೆಗಟ್ಟಿ: ಅನಿಲ್ ಶೆಟ್ಟಿ

Update: 2018-04-14 16:28 GMT

ಬೆಂಗಳೂರು, ಎ.14: ವಿಧಾನಸಭಾ ಚುನಾವಣೆಯಲ್ಲಿ ಗರಿಷ್ಠ ಪ್ರಮಾಣದ ಮತ ಚಲಾವಣೆ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ರಾಜಕೀಯದಲ್ಲಿನ ಮಾಲಿನ್ಯ ತಡೆಗಟ್ಟಬೇಕು ಎಂದು ಅನಿಲ್ ಶೆಟ್ಟಿ ಹೇಳಿದರು.

ಶನಿವಾರ ನಗರದ ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ ಪ್ರಯುಕ್ತ ಜಿ2 ಇಂಡಿಯಾ ಚಾರಿಟಬಲ್ ಟ್ರಸ್ಟ್ ಮತ್ತು ದಲಿತಪರ ಸಂಘಟನೆಗಳು ಆಯೋಜಿಸಿದ್ದ ’ಮತದಾರರ ಐಕ್ಯತೆ ನಡಿಗೆ’ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕರ್ನಾಟಕ ರಾಜಕಾರಣವನ್ನು ಅಪರಾಧಿಗಳ ಹಿಡಿತದಿಂದ ಮುಕ್ತಗೊಳಿಸಬೇಕಾದಾರೆ ಮತದಾರರು ಯೋಗ್ಯವ್ಯಕ್ತಿಗೆ ಮತ ಹಾಕಬೇಕು. ಅಲ್ಲದೆ, ಭ್ರಷ್ಟ ಮತ್ತು ಕೋಮುವಾದಿ ರಾಜಕೀಯ ಪಕ್ಷಗಳಿಗೆ ತಮ್ಮ ಮತಗಳನ್ನು ಮಾರಿಕೊಳ್ಳದೆ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡುವ ವ್ಯಕ್ತಿ, ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿದರು.

ಪ್ರಸ್ತುತ ರಾಜಕೀಯ ಕೆಸರೆರಚಾಟದಲ್ಲಿ ಯುವ ಮತದಾರರು ಜಾಗೃತರಾಗಬೇಕು. ಚುನಾವಣೆಯಲ್ಲಿನ ಮತದಾನದ ಮಹತ್ವ ಅರಿತು ತಮ್ಮ ಸುತ್ತಲ್ಲಿನವರಿಗೂ ತಿಳಿಸಬೇಕಾಗಿರುವುದು ವಿದ್ಯಾವಂತರ ಜವಾಬ್ದಾರಿ. ಯುವಕರು ಮತದಾನದಿಂದ ದೂರ ಉಳಿಯುತ್ತಿರುವುದರಿಂದ ಭ್ರಷ್ಟರು ಆಯ್ಕೆ ಆಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ವೇಳೆ ಮೈಸೂರು ಬ್ಯಾಂಕ್ ವೃತ್ತದಿಂದ ಮತದಾನ ಜಾಗೃತಿಯ ನಾಮಫಲಕ ಹಿಡಿದು ಸ್ವಾತಂತ್ರ ಉದ್ಯಾನವನದವರೆಗೂ ಜಾಥಾ ನಡೆಸಿ ಸಾರ್ವಜನಿಕರಿಗೆ ಮತದಾನದ ಅರಿವು ಮೂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News