ಬೆನ್ನುನೋವಿನಲ್ಲೂ ಹೋರಾಟ ಬಿಡದ ಧೋನಿ

Update: 2018-04-16 18:17 GMT

ಚೆನ್ನೈ, ಎ.16: ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಟ್ವೆಂಟಿ-20 ಟೂರ್ನಿಯ 2018ರ ಆವೃತ್ತಿಯಲ್ಲಿ ಮೊದಲ ಬಾರಿ ಸೋಲು ಅನುಭವಿಸಿದೆ. ಅದು ಕೂಡಾ 4 ರನ್‌ಗಳಅಂತರದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸೋಲು ಅನುಭವಿಸಿದೆ.

ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಕ್ರೀಸ್‌ನಲ್ಲಿ ಅಜೇಯರಾಗಿ 44 ಎಸೆತಗಳಲ್ಲಿ 79 ರನ್‌ಗಳ ಅಮೂಲ್ಯ ಕೊಡುಗೆ ನೀಡಿದ್ದರೂ, ಅವರ ತಂಡ ಗೆಲುವಿನ ದಡ ಸೇರುವಲ್ಲಿ ಎಡವಿದೆ.

 ವೆಸ್ಟ್‌ಇಂಡೀಸ್‌ನ ದೈತ್ಯ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಪಂಜಾಬ್ ತಂಡದ ಪರ ಮೊದಲ ಬಾರಿ 22 ಎಸೆತಗಳಲ್ಲಿ ಅರ್ಧಶತಕದ ನೆರವು ನೀಡಿದ ಹಿನ್ನೆಲೆಯಲ್ಲಿ ಪಂಜಾಬ್ ತಂಡ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತ್ತು.

ಚೆನ್ನೈ ತಂಡ ಸೋತದ್ದು ಹೇಗೆ ?

  ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ರವಿವಾರ ರಾತ್ರಿ ನಡೆದ ಪಂದ್ಯದ ಕೊನೆಯ 4 ಓವರ್‌ಗಳಲ್ಲಿ ಚೆನ್ನೈ ತಂಡದ ಗೆಲುವಿಗೆ 64 ರನ್‌ಗಳ ಆವಶ್ಯಕತೆ ಇತ್ತು. ಧೋನಿ ಆ ನಿಟ್ಟಿನಲ್ಲಿ ಹೋರಾಟ ನಡೆಸಿದ್ದರು. ಕೊನೆಯ ಓವರ್‌ನಲ್ಲಿ ಚೆನ್ನೈ 17 ರನ್ ಮಾಡಬೇಕಿದ್ದ ಒತ್ತಡಕ್ಕೆ ಸಿಲುಕಿತು.ಆದರೆ ಕೊನೆಯ ಓವರ್ ಎಸೆದ ಮೊಹಿತ್ 12 ರನ್ ಬಿಟ್ಟುಕೊಟ್ಟರು. ಇದರಿಂದಾಗಿ ಧೋನಿ ಲೆಕ್ಕಾಚಾರ ತಪ್ಪಿತು.

ಆಗಾಗ ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಿದ್ದರೂ ಧೋನಿ 44 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 6 ಬೌಂಡರಿಗಳ ಸಹಾಯದಿಂದ 79 ರನ್ ನೀಡಿ ತಂಡವನ್ನು ಗೆಲುವಿನ ದಡ ಸೇರಿಸುವ ಪ್ರಯತ್ನ ನಡೆಸಿದರು.

 ಕೊನೆಯ ಓವರ್‌ನ ಕೊನೆಯ 4ಎಸೆತದಲ್ಲಿ 15 ರನ್ ಮಾಡಬೇಕಿತ್ತು. ಆದರೆ ಧೋನಿ 1 ಸಿಕ್ಸರ್ ಮತ್ತು 1 ಬೌಂಡರಿ ಬಾರಿಸಿದರು. ಆದರೆ ಎರಡು ಎಸೆತಗಳಲ್ಲಿ ಅವರಿಗೆ ರನ್ ಗಳಿಸಲು ಸಾಧ್ಯವಾಗಲಿಲ್ಲ. ಈ ಕಾರಣದಿಂದ ತಂಡ ಗೆಲುವಿನಂಚಿನಲ್ಲಿ ಮುಗ್ಗರಿಸಿತು. 198 ರನ್‌ಗಳ ಗೆಲುವಿನ ಸವಾಲು ಪಡೆದಿದ್ದ ಸಿಎಸ್‌ಕೆ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 193 ರನ್ ಗಳಿಸಿತು. ಕಿಂಗ್ಸ್ ಇಲೆವೆನ್ ತಂಡದ ಆ್ಯಂಡ್ರೊ ಟೈ (47ಕ್ಕೆ 2), ರವಿಚಂದ್ರನ್ ಅಶ್ವಿನ್(32ಕ್ಕೆ 1) ಮತ್ತು ಮೋಹಿತ್ ಶರ್ಮಾ (47ಕ್ಕೆ 1) ಸೂಪರ್ ಕಿಂಗ್ಸ್‌ಗೆ ಆಘಾತ ನೀಡಲು ನೆರವಾದರು.

 198 ರನ್‌ಗಳ ಸವಾಲನ್ನು ಬೆನ್ನಟ್ಟಿದ ಚೆನ್ನೈ ತಂಡದ ಆರಂಭಿಕ ದಾಂಡಿಗ ಶೇನ್ ವಾಟ್ಸನ್ (11)ಅವರನ್ನು ಎರಡನೇ ಓವರ್‌ನಲ್ಲಿ ಮೋಹಿತ್ ಶರ್ಮಾ ಪೆವಿಲಿಯನ್‌ಗೆ ಅಟ್ಟಿದ್ದರು. ಮೋಹಿತ್ ಎಸೆತದಲ್ಲಿ ವಾಟ್ಸನ್ ಸತತ ಬೌಂಡರಿ ಬಾರಿಸಿ ನಡುಕವನ್ನುಂಟು ಮಾಡಿದ್ದರು. ಮುರಳಿ ವಿಜಯ್ ಮತ್ತು ಅಂಬಟಿ ರಾಯುಡು ಮುಂದಿನ ಎರಡು ಓವರ್‌ಗಳಲ್ಲಿ 22 ರನ್ ಸಿಡಿಸಿ ರನ್‌ರೇಟ್ ಕಾಯ್ದು ಕೊಂಡರು. ಆದರೆ 4ನೇ ಓವರ್‌ನಲ್ಲಿ ಆಸ್ಟ್ರೇಲಿಯದ ಆ್ಯಂಡ್ರೊ ಟೈರನ್ನು ದಾಳಿಗಿಳಿಸಿದ ಹಿನ್ನೆಲೆಯಲ್ಲಿ ಪಂಜಾಬ್ ತಂಡದ ಪಾಲಿಗೆ ಯಶಸ್ಸು ಲಭಿಸಿತು. ಅವರು ಮೊದಲ ಎಸೆತದಲ್ಲಿ ವಿಜಯ್‌ಗೆ ಪೆವಿಲಿಯನ್ ಹಾದಿ ತೋರಿಸಿದರು.7 ನೇ ಓವರ್‌ನಲ್ಲಿ ನಾಯಕ ಅಶ್ವಿನ್ ಅವರು ಸ್ಯಾಮ್ ಬಿಲ್ಲಿಂಗ್ ವಿಕೆಟ್ ಉಡಾಯಿಸಿದರು.

   6.4 ಓವರ್‌ಗಳಲ್ಲಿ 57ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ಚೆನ್ನೈ ತಂಡವನ್ನು ನಾಯಕ ಧೋನಿ ಮತ್ತು ರಾಯುಡು ಆಧರಿಸಿದರು. ಅವರು ಯುವರಾಜ್ ಮತ್ತು ಅಶ್ವಿನ್ 8 ಮತ್ತು 9ನೇ ಓವರ್‌ನಲ್ಲಿ 10 ಮತ್ತು 13 ರನ್ ಕಬಳಿಸಿದರು. ಸಿಎಸ್‌ಕೆ 10 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 85 ರನ್ ಗಳಿಸಿತು.

 ಧೋನಿ ಮತ್ತು ರಾಯುಡು 50 ರನ್‌ಗಳನ್ನು ಕಬಳಿಸಿ 12ನೇ ಓವರ್‌ನ ಮುಕ್ತಾಯಕ್ಕೆ ತಂಡದ ಸ್ಕೋರ್‌ನ್ನು 100ಕ್ಕೆ ತಲುಪಿಸಿದರು. 14ನೇ ಓವರ್‌ನಲ್ಲಿ ಅಶ್ವಿನ್ ಈ ಜೊತೆಯಾಟವನ್ನು ಮುರಿದರು. ರಾಯುಡು 1 ರನ್‌ನಿಂದ ಅರ್ಧಶತಕ ವಂಚಿತಗೊಂಡರು. ಅವರು 35 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 5 ಬೌಂಡರಿಗಳ ಸಹಾಯದಿಂದ 49 ರನ್ ಗಳಿಸಿದರು. ನಾಲ್ಕನೆ ವಿಕೆಟ್‌ಗೆ ಧೋನಿ ಮತ್ತು ರಾಯುಡು 57 ರನ್‌ಗಳ ಜೊತೆಯಾಟ ನೀಡಿದರು.

      38 ಎಸೆತಗಳಲ್ಲಿ 85 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಎಸ್‌ಕೆ ಸಿಲುಕಿತು. ಧೋನಿ ಮತ್ತು ಜಡೇಜ ಹೋರಾಟ ಮುಂದುವರಿಸಿ 4.4 ಓವರ್‌ಗಳಲ್ಲಿ 50 ರನ್ ಕಬಳಿಸಿದರು. ಟೈಯ 19ನೇ ಓವರ್‌ನ ಎರಡನೇ ಎಸೆತದಲ್ಲಿ ಜಡೇಜ ಔಟಾದರು. ಆದರೆ ಧೋನಿ ಆ ಓವರ್‌ನಲ್ಲಿ 2 ಸಿಕ್ಸರ್ ಮತ್ತು 1 ಬೌಂಡರಿಯೊಂದಿಗೆ 19 ರನ್ ಕಬಳಿಸಿದರು. ಕೊನೆಯ ಓವರ್‌ನಲ್ಲಿ ಮೋಹಿತ್ ಶರ್ಮಾ ಅವರ ಮೊದಲ ಎಸೆತದಲ್ಲಿ ಡ್ವೇಯ್ನೆ ಬ್ರಾವೋ 1 ರನ್ ಗಳಿಸಿ ಧೋನಿಗೆ ಗುಡುಗಲು ಅವಕಾಶ ಮಾಡಿಕೊಟ್ಟರು. 2ನೇ ಎಸೆತದಲ್ಲಿ ಧೋನಿಗೆ ರನ್ ಮಾಡಲು ಸಾಧ್ಯವಾಗಲಿಲ್ಲ. ಮೂರನೇ ಎಸೆತ ವೈಡ್ ಆಗಿತ್ತು. ಬಳಿಕದ ಎಸೆತದಲ್ಲಿ ಧೋನಿ ಬೌಂಡರಿ ಬಾರಿಸಿದರು. 4 ಮತ್ತು 5ನೇ ಎಸೆತದಲ್ಲಿ ರನ್ ಬರಲಿಲ್ಲ. ಇದು ಚೆನ್ನೈ ತಂಡದ ಸೋಲಿಗೆ ಕಾರಣವಾಯಿತು. ಕೊನೆಯ ಎಸೆತದಲ್ಲಿ ಧೋನಿ ಸಿಕ್ಸರ್ ಸಿಡಿಸಿದರು. ಹೀಗಿದ್ದರೂ ಧೋನಿ ಹೋರಾಟ ವ್ಯರ್ಥಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News