ಕೈದಿಗಳ ಪಲಾಯನ ಮತ್ತು ಹತ್ಯೆ: ಉತ್ತರ ಸಿಗದ ಪ್ರಶ್ನೆಗಳು

Update: 2018-04-17 05:00 GMT

ಆ ಎಂಟು ಮಂದಿ ತಾವು ಪೊಲೀಸರಿಗೆ ಶರಣಾಗುವುದಾಗಿ ಸಂಕೇತಗಳನ್ನು ನೀಡಿದಂತೆ ಕಾಣುತ್ತಿರುವಾಗ, ಪೊಲೀಸರು ಅವರನ್ನು ಜೀವಂತವಾಗಿಯೇ ಹಿಡಿಯಬಹುದಿತ್ತಲ್ಲವೇ? ಪೊಲೀಸರು ಹೇಳುವಂತೆ, ಆ ಎಂಟು ಮಂದಿ ಟೂತ್‌ಬ್ರಷ್ ಹಾಗೂ ಮರದ ತುಂಡುಗಳಿಂದ ಮಾಡಲಾದ ಕೀಲಿ ಕೈಗಳನ್ನು ಬಳಸಿ ತಮ್ಮ ಜೈಲು ಕೋಣೆಗಳಿಂದ ಹೊರ ಬರಲು ಮತ್ತು ಹೊರ ಬಂದ ಬಳಿಕ ಬೆಡ್ ಶೀಟ್‌ಗಳನ್ನು ಬಳಸಿ ಜೈಲಿನ ಮೂವತ್ತೆರಡು ಅಡಿ ಮತ್ತು ಇಪ್ಪತ್ತೈದು ಅಡಿ ಎತ್ತರದ ಗೋಡೆಗಳನ್ನು ಹತ್ತಿ ಗೋಡೆ ದಾಟಲು ಅದು ಹೇಗೆ ಸಾಧ್ಯವಾಯಿತು? ಅಥವಾ ಪೊಲೀಸರು ಹೇಳುವ ಇಡೀ ಪಲಾಯನ ಪ್ರಕರಣ ಆ 8 ಮಂದಿಯನ್ನು ಕೊಲ್ಲುವ ಒಂದು ಸಂಚು ಇದ್ದಿರಬಹುದೇ?

 ಸ್ಟೂಡೆಂಟ್ ಇಸ್ಲಾಮಿಕ್ ಮೂಮೆಂಟ್ ಆಫ್ ಇಂಡಿಯಾ (ಸಿಮಿ -ಎಸ್‌ಐಎಂಐ)ಯ ಎಂಟು ಮಂದಿ ವಿಚಾರಣಾಧೀನ ಪುರುಷರನ್ನು 2016ರಲ್ಲಿ ಗುಂಡು ಹೊಡೆದು ಹತ್ಯೆಗೈಯಲಾಯಿತು. ಏಳು ತಿಂಗಳ ಹಿಂದೆ ಆ ಪ್ರಕರಣದ ನ್ಯಾಯಾಂಗ ವಿಚಾರಣೆಯ ವರದಿಯನ್ನು ಸಲ್ಲಿಸಲಾಯಿತು. ಆದರೆ ಮಧ್ಯಪ್ರದೇಶದ ಬಿಜೆಪಿ ಸರಕಾರ ಆ ವರದಿಯ ಬಗ್ಗೆ ಏನೂ ಕ್ರಮ ಕೈಗೊಂಡಿಲ್ಲ.

ನಿಷೇಧಿತ ಸಿಮಿಯ ಎಂಟು ಮಂದಿ ಸದಸ್ಯರು ಭೂಪಾಲ್‌ನ ಬಿಗಿ ಭದ್ರತೆಯ ಸೆಂಟ್ರಲ್ ಜೈಲಿನಿಂದ ತಪ್ಪಿಸಿಕೊಂಡರು ಎನ್ನಲಾದ ದಿನದ ಮರುದಿನ ಬೆಳಗ್ಗೆ ಪೊಲೀಸ್ ಎನ್‌ಕೌಂಟರ್‌ನಲ್ಲಿ ಆ ಎಂಟು ಮಂದಿಯನ್ನು ಹತ್ಯೆಗೈಯಲಾಗಿತ್ತು.
ಆದರೆ ಎನ್‌ಕೌಂಟರ್ ಎನ್ನಲಾಗಿರುವ ಆ ಘಟನೆಯ ವೈರಲ್ ಆದ ವೀಡಿಯೊಗಳು ಮತ್ತು ಘಟನೆ ನಡೆದ ಕೂಡಲೇ ಮಾಧ್ಯಮಗಳಲ್ಲಿ ಹರಿದಾಡಿದ ಪೊಲೀಸರ ವಯರ್‌ಲೆಸ್ ಸಂಭಾಷಣೆಗಳು ‘‘ಅದೊಂದು ಎನ್‌ಕೌಂಟರ್’’ ಎಂಬ ಪೊಲೀಸರ ಹೇಳಿಕೆಯ ಬಗ್ಗೆ ಗಂಭೀರ ಸ್ವರೂಪದ ಅನುಮಾನಗಳಿಗೆ ಎಡೆ ಮಾಡಿದವು. ಘಟನೆಯು ಹಲವಾರು ಗಂಭೀರ ಪ್ರಶ್ನೆಗಳನ್ನು ಎತ್ತಿತು.
ಆ ಎಂಟು ಮಂದಿ ತಾವು ಪೊಲೀಸರಿಗೆ ಶರಣಾಗುವುದಾಗಿ ಸಂಕೇತಗಳನ್ನು ನೀಡಿದಂತೆ ಕಾಣುತ್ತಿರುವಾಗ, ಪೊಲೀಸರು ಅವರನ್ನು ಜೀವಂತವಾಗಿಯೇ ಹಿಡಿಯಬಹುದಿತ್ತಲ್ಲವೇ? ಪೊಲೀಸರು ಹೇಳುವಂತೆ, ಆ ಎಂಟು ಮಂದಿ ಟೂತ್‌ಬ್ರಷ್ ಹಾಗೂ ಮರದ ತುಂಡುಗಳಿಂದ ಮಾಡಲಾದ ಕೀಲಿ ಕೈಗಳನ್ನು ಬಳಸಿ ತಮ್ಮ ಜೈಲು ಕೋಣೆಗಳಿಂದ ಹೊರ ಬರಲು ಮತ್ತು ಹೊರ ಬಂದ ಬಳಿಕ ಬೆಡ್ ಶೀಟ್‌ಗಳನ್ನು ಬಳಸಿ ಜೈಲಿನ ಮೂವತ್ತೆರಡು ಅಡಿ ಮತ್ತು ಇಪ್ಪತ್ತೈದು ಅಡಿ ಎತ್ತರದ ಗೋಡೆಗಳನ್ನು ಹತ್ತಿ ಗೋಡೆ ದಾಟಲು ಅದು ಹೇಗೆ ಸಾಧ್ಯವಾಯಿತು? ಅಥವಾ ಪೊಲೀಸರು ಹೇಳುವ ಇಡೀ ಪಲಾಯನ ಪ್ರಕರಣ ಆ 8 ಮಂದಿಯನ್ನು ಕೊಲ್ಲುವ ಒಂದು ಸಂಚು ಇದ್ದಿರಬಹುದೇ?
ಎರಡು ವಿಚಾರಣೆಗಳ ಹಾಗೂ ಮಾನವ ಹಕ್ಕು ಕಾರ್ಯಕರ್ತರ ಮುಂದುವರಿದ ಪ್ರತಿಭಟನೆಯ ಬಳಿಕ ದೀಪಾವಳಿಯ ಮರುದಿನ ಬೆಳಗ್ಗೆ 2016ರ ಅಕ್ಟೋಬರ್ 31ರಂದು ನಡೆದ ತಥಾಕಥಿತ ಪೊಲೀಸ್ ಮುಖಾಮುಖಿಯ ಬಗ್ಗೆ ಕೇಳಲಾದ ಈ ಹಾಗೂ ಇನ್ನಷ್ಟು ಮುಖ್ಯ ಪ್ರಶ್ನೆಗಳಿಗೆ ಉತ್ತರ ಸಿಗದೆ ಅವು ಹಾಗೆಯೇ ಉಳಿದುಕೊಂಡಿವೆ.
ಪೊಲೀಸರು ನಡೆಸಿದ ತನಿಖೆಯಲ್ಲಿ ಹಲವು ನ್ಯೂನತೆಗಳಿದ್ದವು ಎಂದು ರಾಷ್ಟ್ರೀಯ ಮಾನವ ಹಕ್ಕು ಆಯೋಗ ಹೇಳಿತು. ಆ ಬಳಿಕ ನ್ಯಾಯಾಧೀಶರಿಂದ ನಡೆದ ಒಂದು ವಿಚಾರಣೆ ಪೊಲೀಸರಿಗೆ ಕ್ಲೀನ್ ಚಿಟ್ ನೀಡಿತು. ತರುವಾಯ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಎಸ್. ಕೆ. ಪಾಂಡೆ ನಡೆಸಿದ ವಿಚಾರಣೆಯ ಒಂದು ವರದಿಯನ್ನು 2017ರ ಆಗಸ್ಟ್‌ನಲ್ಲಿ ಸರಕಾರಕ್ಕೆ ಸಲ್ಲಿಸಲಾಯಿತು ಈ ವರದಿಯನ್ನು ರಾಜ್ಯ ಅಸೆಂಬ್ಲಿಯಲ್ಲಿ ಮಂಡಿಸಬೇಕಾಗಿತ್ತು ಆದರೆ ರಾಜ್ಯ ಸರಕಾರ ಅದನ್ನು ಮಂಡಿಸದೆ ಕುಳಿತಿದೆ.
ನ್ಯಾಯಾಂಗ ವಿಚಾರಣೆಯ ಹಾಗೆಯೇ, ಪಾಂಡೆ ಕೂಡ ಪೊಲೀಸರಿಗೆ ಕ್ಲೀನ್‌ಚಿಟ್ ನೀಡಿದ್ದಾರೆಂದು ಭೋಪಾಲ್‌ನಲ್ಲಿ ಸುದ್ದಿ ಇದೆ ಮತ್ತು ಒಂದು ಚುನಾವಣಾ ವರ್ಷದಲ್ಲಿ ಸರಕಾರ ವರದಿಯನ್ನು ಸಾರ್ವಜನಿಕರ ಮುಂದೆ ಮಂಡಿಸಲು ಬಯಸುವುದಿಲ್ಲ, ಯಾಕೆಂದರೆ ಅದು ಸರಕಾರಕ್ಕೆ ತಿರುಗುಬಾಣವಾಗುವ ಸಾಧ್ಯತೆ ಇದೆ.

ಹಲವು ವಿಚಾರಣೆಗಳು ಕೆಲವೇ ಉತ್ತರಗಳು
ಪೊಲೀಸ್ ಎನ್‌ಕೌಂಟರ್ ನಡೆದು ಕೆಲವು ದಿನಗಳ ಬಳಿಕ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಟಿ), ಜೈಲಿನಿಂದ ಎಂಟು ಮಂದಿಯ ಪಲಾಯನ ಕುರಿತು ವಿಚಾರಣೆ ನಡೆಸುವುದಾಗಿ ಮುಖ್ಯವುಂತ್ರಿ ಚೌಹಾಣ್ ಘೋಷಿಸಿದರು; ಪೊಲೀಸ್
ಎನ್‌ಕೌಂಟರ್‌ಹತ್ಯೆಗಳ ಬಗ್ಗೆ ವಿಚಾರಣೆ ಎಂದು ಅವರು ಹೇಳಲಿಲ್ಲ. ಜೈಲಿನಿಂದ ತಪ್ಪಿಸಿಕೊಂಡವರನ್ನು ಹಿಡಿದು ಎನ್‌ಕೌಂಟರ್ ನಡೆಸಿದ್ದಕ್ಕಾಗಿ ಅವರು ಪೊಲೀಸರನ್ನು ಹೊಗಳಿದ್ದಷ್ಟೇ ಅಲ್ಲ; ಅವರು ತೋರಿದ ಧೈರ್ಯಕ್ಕಾಗಿ ಅವರನ್ನು ಸನ್ಮಾನಿಸಿದರು ಕೂಡ.
ಆದರೆ ಆ ಎನ್‌ಕೌಂಟರ್‌ಗಳು ’ನ್ಯಾಯಾಂಗೇತರ ಹತ್ಯೆಗಳು’ ಎಂದು ಕರೆದು ಜನರು ಪ್ರತಿಭಟನೆಗಳನ್ನು ನಡೆಸಿದಾಗ, ಆ ಪ್ರತಿಭಟನೆಗಳು ರಾಷ್ಟ್ರದ ಗಮನ ಸೆಳೆದಾಗ ಮುಖ್ಯಮಂತ್ರಿಗಳು ನ್ಯಾಯಾಂಗ ವಿಚಾರಣೆ ನಡೆಸುವುದಾಗಿ ಘೋಷಿಸಲೇಬೇಕಾಯಿತು.
ಚಮಚಗಳಿಂದ ಮತ್ತು ಟೂತ್‌ಬ್ರಷ್‌ಗಳಿಂದ ಬಿಗಿ ಭದ್ರತೆಯ ಜೈಲು ಕೋಣೆಗಳನ್ನು ತೆರೆಯಲು ಹೇಗೆ ಸಾಧ್ಯವಾಯಿತೆಂದು ಕೇಳಲಾದ ಪ್ರಶ್ನೆಗಳಿಗೆ ನ್ಯಾಯಾಲಯದಲ್ಲಿ ಸರಿಯಾದ ಉತ್ತರ ಸಿಗಲಿಲ್ಲ. ಅಲ್ಲದೆ ಡಿಫೆನ್ಸ್ ಲಾಯರ್‌ಗಳಿಗೆ ಹಾಗೂ ಮೃತರ ಕುಟುಂಬಗಳಿಗೆ ಶವ ಪರೀಕ್ಷೆಯ ವರದಿಗಳನ್ನು ಒದಗಿಸಲಿಲ್ಲ ಎನ್ನಲಾಗಿದೆ. ಹಾಗೆಯೇ, ಜೈಲಿನ ಬೀಗ ತೆರೆಯಲು ಬಳಸಿದ ಕೀಲಿ ಕೈಗಳೂ ಸೇರಿದಂತೆ, ಪೊಲೀಸರು ವಶಪಡಿಸಿಕೊಂಡ ವಸ್ತುಗಳನ್ನು ನ್ಯಾಯಾಲಯದಲ್ಲಿ ಸಲ್ಲಿಸದೆ ಅವುಗಳ ಫೋಟೊಗಳ್ನಷ್ಟೇ ಸಲ್ಲಿಸಲಾಯಿತು ಎನ್ನಲಾಗಿದೆ.

ಒಂದಕ್ಕೊಂದು ವಿರುದ್ಧವಾದ ಪುರಾವೆಗಳು ಇಲ್ಲದ ಸಿಸಿಟಿವಿ ದಾಖಲೆ
ಎನ್‌ಕೌಂಟರ್‌ನಲ್ಲಿ ಮಡಿದ ಎಂಟು ಮಂದಿಗೆ ತೀರಾ ಸಮೀಪದಿಂದ ಗುಂಡು ಹೊಡೆಯಲಾಗಿತ್ತು ಎಂದು ಶವ ಪರೀಕ್ಷೆ ಮತ್ತು ರಾಸಾಯನಿಕ ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳು ಸೂಚಿಸುತ್ತವೆ. ಮಡಿದ ಪ್ರತಿಯೊಬ್ಬರ ಎದೆಯಲ್ಲೂ ಗುಂಡಿನಿಂದಾದ ಗಾಯಗಳಿದ್ದವು. ಹಾಗೆಯೇ ಜೈಲಿನಿಂದ ತಪ್ಪಿಸಿಕೊಳ್ಳುವವರೆಗೆ ನಡೆದ ಘಟನೆಗಳ ಬಗ್ಗೆ ಪ್ರಾಸಿಕ್ಯೂಷನ್ ಸಾಕ್ಷಿಗಳ ಹೇಳಿಕೆಗಳು ಪರಸ್ಪರ ಒಂದಕ್ಕೊಂದು ವಿರುದ್ಧವಾಗಿವೆ. ಅಲ್ಲದೆ ಕ್ಯಾಮರಾಗಳು ‘ಆ ರಾತ್ರಿ ಕಾರ್ಯವೆಸಗದೆ ಇದ್ದುದರಿಂದ’ ಎಂಟು ಮಂದಿ ಜೈಲಿನಿಂದ ತಪ್ಪಿಸಿಕೊಂಡ ಘಟನೆಯ ಸಿಸಿಟಿವಿ ದೃಶ್ಯಾವಳಿ ಲಭ್ಯವಿಲ್ಲ. ಇಷ್ಟೇ ಅಲ್ಲದೆ ಇನ್ನೂ ಹಲವಾರು ಪ್ರಶ್ನೆಗಳು ಉತ್ತರ ದೊರಕದೆ ಬಾಕಿ ಉಳಿದಿವೆ. ಪಲಾಯನಗೈಯಲು ಯತ್ನಿಸಿದಾಗ ಆ ಎಂಟು ಮಂದಿಯ ಕೈಯಲ್ಲಿ ಅವರ ಆಪ್ತನೊಬ್ಬ ನೀಡಿದ ಪಿಸ್ತೂಲ್‌ಗಳಿದ್ದವು ಎನ್ನಲಾಗಿದೆ. ಹಾಗಾದರೆ ಪೊಲೀಸರು ಮತ್ತು ಎಂಟು ಮಂದಿ ಪುರುಷರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಪೊಲೀಸರಿಗೆ ಗಾಯಗಳಾಗಲಿಲ್ಲವೇ? ಇತ್ಯಾದಿ ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಸಿಗದೆ, ಇಡೀ ಪ್ರಕರಣವು ಪೊಲೀಸರು ಎನ್‌ಕೌಂಟರ್ ನಡೆಸಿದ್ದಾರೆಂಬುದನ್ನು ತೋರಿಸುತ್ತದೆ. ಹೆಚ್ಚಿನ ಗುಂಡಿನ ಗಾಯಗಳು ಮೃತರ ದೇಹದ ಮೇಲ್ಭಾಗದಲ್ಲಿ, ತಲೆ, ಎದೆ ಮತ್ತು ಬೆನ್ನಿನ ಭಾಗಗಳಲ್ಲಿ ಕಂಡು ಬಂದಿರುವುದು ಮಾನವ ಹಕ್ಕು ಕಾರ್ಯಕರ್ತರ ಅನುಮಾನಗಳನ್ನು ಪುಷ್ಟೀಕರಿಸುತ್ತದೆ.
ಕೃಪೆ: theprint.in

Writer - ಅನನ್ಯ ಭಾರದ್ವಾಜ್

contributor

Editor - ಅನನ್ಯ ಭಾರದ್ವಾಜ್

contributor

Similar News

ಜಗದಗಲ
ಜಗ ದಗಲ