ಬೇಸಿಗೆಯ ಧಗೆಯಿಂದ ನಿಮ್ಮ ಮಗುವನ್ನು ರಕ್ಷಿಸಲು ಹೀಗೆ ಮಾಡಿ

Update: 2018-04-17 09:56 GMT

ದೇಶಾದ್ಯಂತ ಬೇಸಿಗೆಯ ಬಿರುಬಿಸಿಲು ಕಾಡುತ್ತಿದೆ. ಜನರು ಧಗೆಯಿಂದ ಬವಣೆಗೊಳಗಾಗಿದ್ದಾರೆ. ಮೈಯಿಂದ ಧಾರಾಕಾರವಾಗಿ ಹರಿಯುತ್ತಿರುವ ಬೆವರು ಒರೆಸಿಕೊಂಡೇ ಸುಸ್ತಾಗುತ್ತಿದ್ದಾರೆ. ಬೇಸಿಗೆಯ ಸಮಸ್ಯೆ ಯಾರಿಗೂ ತಪ್ಪಿದ್ದಲ್ಲ. ಆದರೆ ಈ ಬೇಸಿಗೆ ಎನ್ನುವುದು ತಾಯಂದಿರ ಪಾಲಿಗೆ ದುಃಸ್ವಪ್ನವಾಗಿದೆ, ಏಕೆಂದರೆ ಪುಟ್ಟಮಕ್ಕಳು ಬೇಸಿಗೆಯಲ್ಲಿ ತೀವ್ರ ಬಾಧೆಗೊಳಗಾಗುತ್ತವೆ. ಅತಿಯಾದ ಉಷ್ಣತೆಯನ್ನು ತಡೆದುಕೊಳ್ಳಲು ಮಕ್ಕಳಿಗೆ ಸಾಧ್ಯವಿಲ್ಲ ಮತ್ತು ಇದರಿಂದಾಗಿ ಹಲವಾರು ಸಮಸ್ಯೆಗಳು ಕಂದಮ್ಮಗಳನ್ನು ಕಾಡುತ್ತವೆ.

ಪುಟ್ಟಮಕ್ಕಳ ಮೃದುವಾದ ಚರ್ಮವು ಅತಿಯಾದ ತಾಪಮಾನ ಮತ್ತು ಬೆವರನ್ನು ಸಹಿಸುವುದಿಲ್ಲ. ಚರ್ಮದ ಮೇಲೆ ದದ್ದುಗಳು ಏಳುತ್ತವೆ ಮತ್ತು ಬಿಸಿಲಿನಿಂದ ಚರ್ಮವು ಕಂದುತ್ತದೆ. ಇದು ಮಕ್ಕಳಿಗೆ ತುಂಬ ಕಿರಿಕಿರಿಯನ್ನುಂಟು ಮಾಡುತ್ತದೆ. ಇದರಿಂದ ಮಕ್ಕಳು ರಗಳೆಯನ್ನು ಮಾಡುತ್ತವೆ ಮತ್ತು ಇದು ತಾಯಂದಿರ ಚಿಂತೆಯನ್ನು ಹೆಚ್ಚಿಸುತ್ತದೆ.

 ತಂಪುರಸಗಳು ಮತ್ತು ಹಣ್ಣುಗಳು ಮಕ್ಕಳ ಪಾಲಿಗೆ ಎಷ್ಟರ ಮಟ್ಟಿಗೆ ಆರೋಗ್ಯಕರ ಎನ್ನುವುದು ತಿಳಿದಿರುವದಿಲ್ಲವಾದ್ದರಿಂದ ಮಕ್ಕಳ ಶರೀರವನ್ನು ತಂಪಾಗಿರಿಸುವುದು ದೊಡ್ಡ ಹೋರಾಟವೇ ಆಗುತ್ತದೆ. ಇಂತಹ ಸಂದರ್ಭದಲ್ಲಿ ತಾಯಂದಿರೇನು ಮಾಡಬೇಕು?

ಮಗು ಮತ್ತು ತಾಯಿ ನೆಮ್ಮದಿಯಾಗಿರಬೇಕೆಂದರೆ ಮಗುವಿಗೆ ಹಿತಕರವಾದ ವಾತಾವರಣ ಬೇಕು.

ಮಕ್ಕಳಲ್ಲಿ ಬೇಸಿಗೆಯ ಸಮಸ್ಯೆ ಯನ್ನು ನಿವಾರಿಸಲು ಕೆಲವು ಸರಳ ಉಪಾಯಗಳಿಲ್ಲಿವೆ...

► ಸೂಕ್ತ ಬಟ್ಟೆ ತೊಡಿಸಿ

 ಇದು ಮಗುವಿನ ಕಾಳಜಿಯಲ್ಲಿ ಅತ್ಯಂತ ಮುಖ್ಯ ಹೆಜ್ಜೆಯಾಗಿದೆ. ಮಗುವಿಗೆ ಸಡಿಲವಾದ ಹತ್ತಿಯ ಬಟ್ಟೆಗಳನ್ನೇ ತೊಡಿಸಿ, ಹೆಚ್ಚು ಆಡಂಬರದ ಬಟ್ಟೆಯ ಅಗತ್ಯವಿಲ್ಲ. ಮೃದುವಾದ ಗಾಳಿಯಾಡುವ ಬಟ್ಟೆಗಳು ಬೆವರನ್ನು ಹೀರಿಕೊಳ್ಳಲು ಮತ್ತು ದದ್ದುಗಳನ್ನು ತಡೆಯಲು ನೆರವಾಗುತ್ತವೆ. ತೋಳಿಲ್ಲದ ಬನಿಯನ್ ಮತ್ತು ನಿಕ್ಕರ್ ಬೇಸಿಗೆಯಲ್ಲಿ ಮಕ್ಕಳಿಗೆ ಆರಾಮವನ್ನುಂಟು ಮಾಡುತ್ತವೆ.

► ದಿನಕ್ಕೆ ಕನಿಷ್ಠ ಎರಡು ಸಲ ಸ್ನಾನ

ಪುಟ್ಟಮಕ್ಕಳು ಹೆಚ್ಚಿನ ಸಮಯ ಮನೆಯೊಳಗೇ ಇದ್ದರೂ ಮೈಯನ್ನು ಬೇಗನೆ ಕೊಳೆ ಮಾಡಿಕೊಳ್ಳುತ್ತವೆ. ಅವುಗಳಿಗೆ ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ಸ್ನಾನ ಮಾಡಿಸಿ. ಇದರಿಂದ ಅವುಗಳ ಚರ್ಮ ಬೆವರು ಮತ್ತು ರೋಗಾಣುಗಳಿಂದ ಮುಕ್ತವಾಗಿರುತ್ತದೆ. ಸ್ನಾನಕ್ಕೆ ಉಗುರು ಬೆಚ್ಚಗಿನ ನೀರು ಸಾಕು. ಮಕ್ಕಳನ್ನು ಹೆಚ್ಚು ಹೊತ್ತು ತಾಜಾ ಆಗಿರಿಸಲು ಧಗೆಯ ತೊಂದರೆಗಳನ್ನು ಕಡಿಮೆ ಮಾಡುವ ಟಾಲ್ಕಂ ಪೌಡರ್ ಬಳಸಿ.

► ಡೈಪರ್ ಬಳಕೆ ಕಡಿಮೆ ಮಾಡಿ

ಮಗು ಆಗಾಗ್ಗೆ ನೀರು ಕುಡಿಯುತ್ತಿರುವುದು ಒಳ್ಳೆಯದು, ಇದರಿಂದ ಅದರ ಶರೀರ ಜಲೀಕರಣಗೊಳ್ಳುತ್ತದೆ. ಆದರೆ ಡೈಪರ್‌ನ್ನು ಸುದೀರ್ಘ ಸಮಯ ತೊಡಿಸಬೇಡಿ. ಡೈಪರ್‌ಗಳು ಪ್ಲಾಸ್ಟಿಕ್‌ನಿಂದ ತಯಾರಾಗಿ ರುತ್ತವೆ ಮತ್ತು ಅವುಗಳಲ್ಲಿ ಗಾಳಿಯಾಡುವುದಿಲ್ಲ. ಹೀಗಾಗಿ ಶೀಘ್ರವೇ ದದ್ದುಗಳನ್ನುಂಟು ಮಾಡುತ್ತವೆ. ಇದು ಮಗುವಿಗೆ, ವಿಶೇಷವಾಗಿ ಧಗೆ ಹೆಚ್ಚಾಗಿರುವಾಗ ತೀವ್ರ ಕಿರಿಕಿರಿಯನ್ನುಂಟು ಮಾಡುತ್ತದೆ. ಹೀಗಾಗಿ ಮಗುವಿಗೆ ಹತ್ತಿಯ ಚಡ್ಡಿಯನ್ನೇ ತೊಡಿಸಿ ಮತ್ತು ನಿಯಮಿತವಾಗಿ ಬಾತ್‌ರೂಮ್‌ಗೆ ಕರೆದೊಯ್ಯುವುದನ್ನು ಅಭ್ಯಾಸ ಮಾಡಿಸಿ. ಕೇವಲ ರಾತ್ರಿಯ ವೇಳೆಯಲ್ಲಿ ಮತ್ತು ಹೊರಗೆ ಕರೆದೊಯ್ಯುವ ಸಂದರ್ಭದಲ್ಲಿ ಮಾತ್ರ ಮಗುವಿಗೆ ಡೈಪರ್ ತೊಡಿಸುವುದನ್ನು ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು. ನಿಮ್ಮ ಮಗು ಬಾಥ್‌ರೂಮಿಗೆ ಕರೆದೊಯ್ಯುವಷ್ಟು ದೊಡ್ಡದಾಗಿಲ್ಲದಿದ್ದರೆ ಹಳೆಯ ಬಟ್ಟೆಗಳನ್ನು ಡೈಪರ್‌ನಂತೆ ಬಳಸಿ.

► ಹೆಚ್ಚು ದ್ರವಾಹಾರಗಳನ್ನು ನೀಡಿ

ಬೇಸಿಗೆಯ ಕಾಲದಲ್ಲಿ ಪುಟ್ಟಮಕ್ಕಳು ಆಗಾಗ್ಗೆ ಸ್ವಲ್ಪ ಸ್ವಲ್ಪ ನೀರನ್ನು ಗುಟುಕರಿಸುತ್ತಿರುವದು ಅಗತ್ಯವಾಗಿದೆ. ಸೀಯಾಳದ ನೀರು ಅಥವಾ ಹಣ್ಣುಗಳ ರಸವನ್ನು ಸ್ವಲ್ಪ ಪ್ರಮಾಣದಲ್ಲಾದರೂ ಕುಡಿಸುತ್ತಿದ್ದರೆ ಒಳ್ಳೆಯದು. ಈ ದ್ರವಗಳು ಮಗುವಿನ ಶರೀರದ ಉಷ್ಣತೆಯನ್ನು ನಿಯಂತ್ರಿಸುವಲ್ಲಿ ನೆರವಾಗುತ್ತವೆ ಮತ್ತು ಅತಿಯಾದ ಉಷ್ಣತೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ದೂರವೇ ಇರಿಸುತ್ತವೆ.

ಎದೆಹಾಲುಣ್ಣುತ್ತಿರುವ ಮಕ್ಕಳಿಗೆ ಬೇಸಿಗೆಯಲ್ಲಿ ಹೆಚ್ಚುವರಿ ನೀರನ್ನು ಕುಡಿಸುವ ಅಗತ್ಯವಿಲ್ಲ. ಅವುಗಳಿಗೆ ಅಗತ್ಯವಾಗಿರುವ ಎಲ್ಲವೂ ಎದೆಹಾಲಿನಲ್ಲಿಯೇ ದೊರೆಯುತ್ತದೆ.

► ಬಿರುಬಿಸಿಲಿನಲ್ಲಿ ಮಕ್ಕಳು ಮನೆಯಲ್ಲಿಯೇ ಇರಲಿ

ತಾಯಿ ಎಲ್ಲೇ ಹೊರಗೆ ಹೊರಟರೂ ಪುಟ್ಟಮಗು ತಾನೂ ಬರುವುದಾಗಿ ರಚ್ಚೆ ಹಿಡಿಯುವುದು ಸಾಮಾನ್ಯ. ಹೀಗಾಗಿ ತಾಯಂದಿರು ಹೊರಗೆ ಹೋಗುವ ಕಾರ್ಯಕ್ರಮವನ್ನು ಸಂಜೆಯ ವೇಳೆಗೆ ಇಟ್ಟುಕೊಳ್ಳುವುದು ಒಳ್ಳೆಯದು.ಬೇಸಿಗೆಯ ಬಿಸಿಲಿನಲ್ಲಿ ಹೊರಗೆ ಹೋಗುವುದರಿಂದ ತಾಯಿ ಮತ್ತು ಮಗುವಿಗೆ ತೊಂದರೆ ತಪ್ಪಿದ್ದಲ್ಲ. ಬಿಸಿಲಲ್ಲಿ ಹೊರಗೆ ಹೋಗುವುದು ಅನಿವಾರ್ಯವಾದರೆ ಮಗುವನ್ನು ಮನೆಯಲ್ಲಿಯೇ ಬಿಡುವುದು ಒಳ್ಳೆಯದು.

► ಎಣ್ಣೆಯ ಮಸಾಜ್ ಬೇಡ

ಬೇಸಿಗೆಯಲ್ಲಿ ಪುಟ್ಟಮಕ್ಕಳಿಗೆ ಎಣ್ಣೆಯ ಮಸಾಜ್ ಹಲವಾರು ಸಮಸ್ಯೆಗಳನ್ನು ಸೃಷ್ಟಿಸುವುದರಿಂದ ಅದನ್ನು ಮಾಡಲೇಬಾರದು. ಏಕೆಂದರೆ ಹೆಚ್ಚಿನ ಸಂದರ್ಭಗಳಲ್ಲಿ ಮಗುವಿನ ಚರ್ಮದಲ್ಲಿರುವ ಎಣ್ಣೆಯ ಅಂಶವು ತೊಳೆದರೂ ಸಂಪೂರ್ಣವಾಗಿ ಹೋಗುವುದಿಲ್ಲ ಮತ್ತು ಚರ್ಮವು ಜಿಡ್ಡಾಗಿರುತ್ತದೆ. ಬೆವರು ಮತ್ತು ಎಣ್ಣೆಯ ಜೋಡಿ ಸರಿ ಹೋಗುವುದಿಲ್ಲ ಮತ್ತು ಇದು ಮಗುವಿನ ಚರ್ಮದಲ್ಲಿ ದದ್ದುಗಳಿಗೆ ಕಾರಣವಾಗಬಹುದು.

► ಮಗುವನ್ನು ಉಷ್ಣತೆಯಿಂದ ರಕ್ಷಿಸಿ

ಬಿಸಿಲಿನಲ್ಲಿ, ಇಳಿಸಂಜೆಯ ಹೊತ್ತಿನಲ್ಲಿಯೂ ಮಗುವನ್ನು ಹೊರಗೆ ಕರೆದೊಯ್ಯುವುದಿದ್ದರೆ ತಲೆಗೆ ಟೊಪ್ಪಿಗೆಯನ್ನು ತೊಡಿಸಿ. ಮಗುವಿನ ತಲೆ ಬೇಗನೆ ಬಿಸಿಯಾಗುತ್ತದೆ ಮತ್ತು ಇದು ಶರೀರದ ಉಷ್ಣತೆಯನ್ನು ಹೆಚ್ಚಿಸುತ್ತದೆ.

► ಮಗುವಿನ ಮೈ ಬಿಸಿಯನ್ನು ನಿಯಂತ್ರಿಸುತ್ತಿರಿ

ಮಗುವಿನ ಕುತ್ತಿಗೆಯ ಹಿಂಭಾಗವನ್ನು ಆಗಾಗ್ಗೆ ಮುಟ್ಟಿ ನೋಡುತ್ತಿದ್ದರೆ ಮೈ ಎಷ್ಟು ಬಿಸಿಯಿದೆ ಎನ್ನುವುದು ಗೊತ್ತಾಗುತ್ತದೆ. ಬಿಸಿ ಜಾಸ್ತಿಯಿದ್ದರೆ ದ್ರವಗಳನ್ನು ನೀಡಿ ಮತ್ತು ತೊಟ್ಟಿರುವ ಬಟ್ಟೆಗಳನ್ನು ಕಡಿಮೆ ಮಾಡಿ.

ತನಗೇನಾಗುತ್ತಿದೆ ಎನ್ನುವುದನ್ನು ಹೇಳಲು ಪುಟ್ಟಮಗುವಿಗೆ ಸಾಧ್ಯವಾಗ ದಿರಬಹುದು, ಆದರೆ ಅದು ಸಾಕಷ್ಟು ಸಂಕೇತಗಳನ್ನು ನೀಡುತ್ತಿರುತ್ತದೆ. ಅವುಗಳನ್ನು ಅರ್ಥ ಮಾಡಿಕೊಂಡು ಅಗತ್ಯ ಕ್ರಮಗಳನ್ನು ಕೈಗೊಂಡರೆ ಬೇಸಿಗೆಯಲ್ಲಿಯೂ ಮಗುವು ಆರಾಮವಾಗಿರುತ್ತದೆ,ಜೊತೆಗೆ ತಾಯಿಯೂ ಆರಾಮವಾಗಿರುತ್ತಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News