ಇಲ್ಲಿ ಯುವತಿಯರಿಗೆ ಮೊಬೈಲ್, ಜೀನ್ಸ್ ನಿಷೇಧ !

Update: 2018-04-17 17:02 GMT

ಸೋನೇಪತ್, ಎ. 17: ಹರ್ಯಾಣ ಸೋನೆಪತ್ ಜಿಲ್ಲೆಯ ಗ್ರಾಮ ಪಂಚಾಯತ್ ಒಂದು ಯುವತಿಯರು ಮೊಬೈಲ್ ಬಳಸುವುದು ಹಾಗೂ ಜೀನ್ಸ್ ಧರಿಸುವುದನ್ನು ನಿಷೇಧಿಸಿದೆ. ಖಾಪ್ಲಾಂಡ್‌ನ ಹೃದಯ ಭಾಗದಲ್ಲಿರುವ ಇಶಾಪುರ ಖೇರಿ ಗ್ರಾಮದ ಸರಪಂಚ್ ಪ್ರೇಮ್ ಸಿಂಗ್ ಎರಡು ತಿಂಗಳ ಹಿಂದೆ ಪಂಚಾಯತ್ ನಡೆದ ಸಂದರ್ಭ ಈ ಆದೇಶ ನೀಡಿದ್ದಾರೆ.

ಆದರೆ, ಈ ನಿಷೇಧ ಇತ್ತೀಚೆಗಷ್ಟೇ ಅನುಷ್ಠಾನಗೊಳ್ಳುತ್ತಿದೆ. ನಮ್ಮ ಗ್ರಾಮದಿಂದ ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರು ಪೋಷಕರ ಆಜ್ಞೆ ಮೀರಿ ಯುವಕರೊಂದಿಗೆ ಓಡಿ ಹೋಗುತ್ತಿದ್ದಾರೆ. ಇದರಿಂದ ಗ್ರಾಮಕ್ಕೆ ಕೆಟ್ಟ ಹೆಸರು ಬರುತ್ತಿದೆ. ಯುವತಿಯರು ಮೊಬೈಲ್ ಬಳಸುವುದು ಹಾಗೂ ಆಧುನಿಕ ಉಡುಗೆ ಧರಿಸುವುದು ಇದಕ್ಕೆ ಕಾರಣ ಎಂದು ಸಿಂಗ್ ಹೇಳಿದ್ದಾರೆ.

‘‘ಮೊಬೈಲ್ ಬಳಸುತ್ತಿರುವ ಯುವತಿಯರು ಯುವಕರ ಸಂಪರ್ಕ ಇರಿಸಿಕೊಳ್ಳುತ್ತಾರೆ ಹಾಗೂ ಅವರೊಂದಿಗೆ ಓಡಿ ಹೋಗಲು ಯೋಜನೆ ರೂಪಿಸುತ್ತಾರೆ. ಅಲ್ಲದೆ ಅವರು ಧರಿಸುವ ಜೀನ್ಸ್‌ನಂತಹ ಆಧುನಿಕ ಉಡುಪು ಯುವಕರನ್ನು ಅನಗತ್ಯವಾಗಿ ಆಕರ್ಷಿಸುತ್ತಿದೆ’’ ಎಂದು ಸಿಂಗ್ ಹೇಳಿದ್ದಾರೆ.

“ನನಗೆ ಇಬ್ಬರು ಪುತ್ರಿಯರಿದ್ದಾರೆ. ಇಬ್ಬರನ್ನೂ ವಿವಾಹ ಮಾಡಿ ಕೊಡಲಾಗಿದೆ. ಓರ್ವಳಿಗೆ 9ನೇ ತರಗತಿ ಓದುವ ಪುತ್ರಿಯಿದ್ದಾಳೆ. ಅವಳಿಗೆ ಪೋಷಕರ ಮಾರ್ಗದರ್ಶನದಲ್ಲಿ ಕರೆ ಸೌಲಭ್ಯ ಮಾತ್ರ ಇರುವ ಸರಳ ಮೊಬೈಲ್ ಅನ್ನು ಮಾತ್ರ ಬಳಸಲು ಅವಕಾಶ ನೀಡಲಾಗಿದೆ” ಎಂದು ಸಿಂಗ್ ಹೇಳಿದ್ದಾರೆ. ಸಿಂಗ್ ಅವರ ಈ ನಿರ್ಧಾರವನ್ನು ಇತರ ಹಳ್ಳಿಯ ಜನರು ಪ್ರಶಂಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News