ಬಸವಣ್ಣನವರ ಆರ್ಥಿಕ ಪ್ರಜ್ಞೆ

Update: 2018-04-17 18:45 GMT

ಬಸವಣ್ಣನವರು 850 ವರ್ಷಗಳ ಹಿಂದೆ ಜಾತಿಭೇದ, ವರ್ಣಭೇದ, ಲಿಂಗಭೇದ, ವರ್ಗಭೇದ ಮತ್ತು ಕಾಯಕಭೇದಗಳಿಲ್ಲದ ಹೊಸ ಪರ್ಯಾಯ ಸಮಾಜವನ್ನು ನಿರ್ಮಿಸುವಲ್ಲಿ ಯಶಸ್ಸು ಸಾಸಿದರು. ಅವರ ಸರ್ವಸಮಾನತೆಯ ಪ್ರಜಾಪ್ರಭುತ್ವವಾದಿ ಸಮಾಜ, ‘‘21ನೇ ಶತಮಾನದ ನಮ್ಮ ಸಮಾಜ ಹೇಗಿರಬೇಕು’’ ಎಂಬುದಕ್ಕೆ ಮುನ್ಸೂಚನೆಯಾಗಿದೆ.
ಪ್ರಜಾಪ್ರಭುತ್ವವಾದಿ ನೆಲೆಯ ಚಿಂತನಮಂಥನಕ್ಕಾಗಿ ಬೇಕಾದ ‘ಅನುಭವ ಮಂಟಪ’ ಎಂಬುದು ವಿಶಿಷ್ಟವಾದ ಸಮಾಜೋ ಧಾರ್ಮಿಕ ಸಂಸತ್ ಆಗಿದೆ.
ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸುವುದರ ಮೂಲಕ ಜನರಲ್ಲಿ ಪ್ರಜಾಪ್ರಭುತ್ವದ ಅರಿವು ಮೂಡಿಸಿದ್ದರು. ಅಸ್ಪಶ್ಯರು ಮೊದಲು ಮಾಡಿ ವಿವಿಧ ಜಾತಿಗಳ ಜನ ಅನುಭವ ಮಂಟಪದಲ್ಲಿದ್ದರು. 770 ಅಮರಗಣಂಗಳಲ್ಲಿ ಬಹುಪಾಲು ಮಂದಿ ವಿವಿಧ ಕಾಯಕಜೀವಿಗಳೇ ಆಗಿದ್ದರು. ಲೋಕವೇ ತಾನಾದವನು ಅಂದರೆ ಸಕಲ ಜೀವಾತ್ಮರಿಗೆ ಲೇಸನೇ ಬಯಸುವವನು ಮಾತ್ರಗಣ ಎಂದು ಕರೆಯಿಸಿಕೊಳ್ಳುತ್ತಾನೆ. ಹೀಗೆ ಶರಣರು ಎಲ್ಲ ರೀತಿಯ ಆರ್ಥಿಕ, ಸಾಮಾಜಿಕ ಮತ್ತು ಧಾರ್ಮಿಕ ಅಸಮಾನತೆಗಳಿಗೆ ವಿರುದ್ಧವಾಗಿದ್ದರು.
ಪ್ರಜಾಪ್ರಭುತ್ವದ ಆಶಯಗಳಿಗೆ ಪೂರಕವಾದ ವಿಚಾರಗಳನ್ನು ವಚನಕಾರರೆಲ್ಲ ಹೊಂದಿದ್ದರು ಎಂಬುದಕ್ಕೆ ಅವರ ಚಳವಳಿ ಮತ್ತು ವಚನಗಳು ಸಾಕ್ಷಿಯಾಗಿವೆ. ಬಸವಣ್ಣನವರು ಇಷ್ಟಲಿಂಗದ ಮೂಲಕ ದೇವರನ್ನು ಖಾಸಗೀಕರಣಗೊಳಿಸಿದರು. ಜಂಗಮ ಲಿಂಗದ ಮೂಲಕ ಮನುಷ್ಯನನ್ನು ಸಾಮಾಜೀಕರಣಗೊಳಿಸಿದರು. ಮನುಷ್ಯ ನಿಜವಾಗಿಯೂ ಸಾಮಾಜೀಕರಣಗೊಂಡಾಗ ಜೀವಕಾರುಣ್ಯದಿಂದ ತುಂಬಿದ ಸರ್ವಸಮಾನತೆಯ ಪ್ರಜ್ಞೆಯುಳ್ಳ ಶರಣನೆಂದೆನಿಸಿಕೊಳ್ಳುತ್ತಾನೆ.
19ನೇ ಶತಮಾನದಲ್ಲಿ ಕಮ್ಯುನಿಸ್ಟ್ ತತ್ವಜ್ಞಾನಿ ಕಾರ್ಲ್ ಮಾರ್ಕ್ಸ್ ‘‘ಜಗತ್ತಿನ ಕಾರ್ಮಿಕರೇ ಒಂದಾಗಿರಿ ನೀವು ಒಂದಾದರೆ ನಿಮ್ಮ ಸಂಕೋಲೆಗಳನ್ನು ಹೊರತುಪಡಿಸಿ ನೀವು ಏನನ್ನೂ ಕಳೆದುಕೊಳ್ಳುವುದಿಲ್ಲ’’ ಎಂದು ಸಾರಿದರು. ಬಸವಣ್ಣನವರು 12ನೇ ಶತಮಾನದಲ್ಲೇ ಭಾರೀ ತೆರಿಗೆ ಮತ್ತು ಸುಲಿಗೆ ಯಿಂದ ನರಳುತ್ತಿದ್ದ ಕಾಯಕ ಜೀವಿಗಳನು,್ನ ಅಸ್ಪಶ್ಯತೆಯಿಂದ ಬಳಲುತ್ತಿದ್ದ ದಲಿತರನ್ನು, ಎಲ್ಲ ಹಕ್ಕುಗಳಿಂದ ವಂಚಿತರಾಗಿದ್ದ ಮಹಿಳೆಯರನ್ನು ವಿಮೋಚನೆಯ ದಾರಿಯೆಡೆಗೆ ತಂದರು.
ವಿಶ್ವಸಂಸ್ಥೆಯ ಮಾನವ ಹಕ್ಕುಗಳು ಕೂಡ ಬಸವಪ್ರಜ್ಞೆಯಿಂದ ಹೊರತಾಗಿಲ್ಲ. ಜೀವಿಸುವ ಹಕ್ಕು, ಮಾತನಾಡುವ ಹಕ್ಕು, ವರ್ಗ, ವರ್ಣ ಮತ್ತು ಲಿಂಗಭೇದ ನೀತಿಯ ವಿರುದ್ಧ ಹೋರಾಡುವ ಹಕ್ಕುಗಳು ಮಾನವಹಕ್ಕುಗಳಾಗಿರುತ್ತವೆ. ವಿಶ್ವಸಂಸ್ಥೆಯ ಮಾನವಹಕ್ಕುಗಳ ವಿಭಾಗ ತನ್ನ 30 ಅಂಶಗಳ ಕಾರ್ಯಕ್ರಮದಲ್ಲಿ ಈ ಮಾನವ ಹಕ್ಕುಗಳನ್ನು ಕುರಿತು ವಿವರಿಸಿದೆ. ಈ ಎಲ್ಲ ಮಾನವ ಹಕ್ಕುಗಳನ್ನು ಸಾಸುವುದೇ ವಚನಚಳವಳಿಯ ಗುರಿಯಾಗಿತ್ತು.
ಕುಟುಂಬ ಪ್ರೇಮ, ಸಮಾಜ ಪ್ರೇಮ, ದೇಶಪ್ರೇಮ ಮತ್ತು ವಿಶ್ವಪ್ರೇಮ ಬಸವಧರ್ಮದ ಪ್ರೇಮತ್ವವಾಗಿದೆ. ಇವೆಲ್ಲ ಕೂಡಿದಾಗಲೇ ಲಿಂಗಪ್ರೇಮವಾಗುತ್ತದೆ. ‘‘ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ’’ ಎಂದು ಜೇಡರ ದಾಸಿಮಯ್ಯನವರು ಕುಟುಂಬ ಪ್ರೇಮದ ಮಹತ್ವವನ್ನು ತಿಳಿಸಿದ್ದಾರೆ. ‘‘ಜೀವಿಸುವ ಜೀವಕ್ಕೆ ಶೃಂಗಾರ ಗಣಮೇಳಾಪ’’ ಎಂದು ಅಕ್ಕಮಹಾದೇವಿ ಸಮಾಜಪ್ರೇಮ ಸಾರಿದ್ದಾರೆ. ‘‘ಕಳ್ಳ ನಾಣ್ಯ ಸಲುಗೆಗೆ ಸಲ್ಲದು’’ ಎಂದು ಬಸವಣ್ಣ ಸೂಚಿಸಿದ್ದಾರೆ. ‘‘ಆರಂಬವ ಮಾಡಿ ಸಂಸಾರ ಸ್ಥಿತಿ ಕಳೆಯದಿದ್ದರೆ ಆ ಆರಂಬವೆ ಕೇಡು’’ ಎಂದು ಎಂದು ಚನ್ನಬಸವಣ್ಣನವರು ವಿಶ್ವಪ್ರೇಮ ಮೆರೆದಿದ್ದಾರೆ.
ಬಸವಪ್ರಜ್ಞೆಯ ಆರ್ಥಿಕ ಸಮಾನತೆಯಿಂದ ಕೂಡಿದ ಮಾನವಹಕ್ಕುಗಳ ಪ್ರಜ್ಞೆಯಾಗಿದೆ: ಪ್ರಜಾಪ್ರಭುತ್ವವಾದಿ ಪ್ರಜ್ಞೆಯಾಗಿದೆ: ಮುಂದುವರಿದ ಸಮಾಜವಾದಿ ಪ್ರಜ್ಞೆಯಾಗಿದೆ. ಅಂತೆಯೆ ಬಸವಣ್ಣನವರು ಹಳೆಯ 33 ಕೋಟಿ ದೇವತೆಗಳನ್ನು ಆಚೆ ತಳ್ಳಿದ ನಂತರ ನಮಗೆ ಹೊಸ ಸರ್ವಸಮತಾವಾದಿ ದೇವರನ್ನು ಕೊಟ್ಟರು. ಬಸವಣ್ಣನವರ ಕೂಡಲಸಂಗಮದೇವ ಮಾದಾರ ಚೆನ್ನಯ್ಯನ ಮನೆಯಲ್ಲಿ ಅಂಬಲಿಯನ್ನು ಕುಡಿಯುವ ದೇವರಾಗಿದ್ದಾನೆ. ಬಡವರ, ಹಿಂದುಳಿದವರ, ದಲಿತರ, ಕಾಯಕಜೀವಿಗಳ ಒಟ್ಟಾರೆ ಇಡೀ ಮಾನವಕುಲದ ದೇವರಾಗಿದ್ದಾನೆ.
‘‘ಲಿಂಗ ವ್ಯಸನಿ ಜಂಗಮ ಪ್ರೇಮಿ’’ ಎಂದೆನಿಸಯ್ಯ ಎಂದು ಬಸವಣ್ಣನವರು ಹೇಳುವಲ್ಲಿ ವೌಲ್ಯಗಳಿಂದ ತುಂಬಿದ ಒಳಜಗತ್ತು ಹೊರ ಜಗತ್ತನ್ನು ಆಳಬೇಕೆಂದು ಸೂಚಿಸುತ್ತಾರೆ. ನಮ್ಮ ವ್ಯಸನಗಳೆಲ್ಲ ಒಳಜಗತ್ತಿಗೆ ಸಂಬಂಸಿರಬೇಕು. ಆದರೆ ನಮ್ಮ ಪ್ರೇಮಭಾವ ಹೊರಜಗತ್ತಿಗೆ ಸಂಬಂಸಿರಬೇಕು ಎಂದು ಬಸವಣ್ಣನವರು ಬಯಸುತ್ತಾರೆ. ಬಸವ ತತ್ವದ ಪ್ರಕಾರ ಮಾನವೀಯ ವೌಲ್ಯಗಳು ಜಗತ್ತನ್ನು ಆಳಬೇಕು. ಆದರೆ ಇಂದು ಮಾರುಕಟ್ಟೆ ವೌಲ್ಯಗಳು ಜಗತ್ತನ್ನು ಆಳತೊಡಗಿವೆ. ಸಕಲ ಜೀವಾತ್ಮರನ್ನು ಬಯಸುವವನು ಭಕ್ತ. ಸಕಲ ವಸ್ತುಗಳನ್ನು ಬಯಸುವವನು ಭವಿ. ಸದ್ಯ ಜಗತ್ತು ಭವಿಗಳ ಸಾಮ್ರಾಜ್ಯವಾಗುತ್ತಿದೆ. ಈ ಜಗತ್ತನ್ನು ಭಕ್ತರ ಸಾಮ್ರಾಜ್ಯ ಮಾಡಿದಾಗ ಮಾತ್ರ ಮೇಲು ಕೀಳಿಲ್ಲದ, ಸುಲಿಗೆ ಇಲ್ಲದ, ಘನತೆವೆತ್ತ ಸ್ವತಂತ್ರ ಮಾನವನ ಉದಯವಾಗುತ್ತದೆ. ಇಂಥ ಹೊಸ ಮನುಷ್ಯರ ಸಮಾಜವನ್ನು ಸೃಷ್ಟಿಸುವುದು ಬಸವಣ್ಣನವರ ಉದ್ದೇಶವಾಗಿತ್ತು. ದೇವರಿಗೆ ಶರಣಾಗುವುದೆಂದರೆ ಭವದಲ್ಲಿ ಯಾರಿಗೂ ಶರಣಾಗತರಾಗದೆ ಸ್ವತಂತ್ರೀರರಾಗಿ ಬದುಕುವುದು. ‘‘ಕೂಡಲಸಂಗನ ಶರಣರು ಸ್ವತಂತ್ರೀರರು’’ ಎಂದು ಬಸವಣ್ಣನವರು ಹೇಳುತ್ತಾರೆ. ಸ್ವತಂತ್ರೀರರ ಸಮಾಜದಲ್ಲಿ ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಾಗುತ್ತದೆ.
 ಮಾನವನ ವ್ಯಕ್ತಿತ್ವ ವಿಕಸನಗೊಳ್ಳಬೇಕಾದರೆ ಮೊದಲಿಗೆ ಕಾಯಕ ಮಾಡಬೇಕು. ಅಂತರಂಗ ಶುದ್ಧಿಗಾಗಿ ಸಮರ್ಪಣಾ ಭಾವದ ಮೂಲಕ ಧ್ಯಾನ, ಅಂದರೆ ಇಷ್ಟಲಿಂಗ ಪೂಜೆ ಮತ್ತು ಬಹಿರಂಗ ಶುದ್ಧಿಗಾಗಿ ಕಾಯಕ ದಾಸೋಹದ ಮೂಲಕ ಜಂಗಮಲಿಂಗದ ಪೂಜೆ ಮಾಡಬೇಕು. ಅಂತರಂಗ ಶುದ್ಧಿಯಿಂದ ಆತ್ಮಕಲ್ಯಾಣವಾಗುತ್ತದೆ. ಬಹಿರಂಗ ಶುದ್ಧಿಯಿಂದ ಲೋಕಕಲ್ಯಾಣವಾಗುತ್ತದೆ. ಆತ್ಮಕಲ್ಯಾಣ ಸ್ವಾತಂತ್ರದ ಆನಂದ ನೀಡಿದರೆ ಲೋಕಕಲ್ಯಾಣ ಜವಾಬ್ದಾರಿಯ ಪ್ರಜ್ಞೆ ಮೂಡಿಸುವುದು. ಇವೆಲ್ಲ ಸೇರಿ ವ್ಯಷ್ಟಿ ಅನುಭವವಾಗುವುದು. ಅನುಭವ ಮಂಟಪದ ಚಿಂತನ-ಮಂಥನದಲ್ಲಿ ಸರ್ವರೂ ಸಮಷ್ಟಿ ಅನುಭವ ಪಡೆಯುವರು. ಈ ಸಮಷ್ಟಿ ಅನುಭವದ ಅರಿವೇ ಗುರುವಾಗಿ ಅನುಭಾವದೆಡೆಗೆ ಒಯ್ಯುವುದು. ಆಗ ಮಾನವ ನಿಜ ಮಾನವನಾಗುವನು. ಆ ನಿಜಮಾನವನೇ ಶರಣ. ಆತನೇ ನವಮಾನವ. ಜಗತ್ತು ಇಂಥ ಶರಣರ ಸಂಕುಲವಾಗಬೇಕು ಎಂದು ಬಸವಣ್ಣನವರು ಬಯಸಿದ್ದರು.
ನಮ್ಮಳಗೇ ನಾವು ಬಯಲಾಗುವ ಕ್ರಮವನ್ನು ಅರಿತುಕೊಳ್ಳಲು ಕೂಡ ಬಸವಣ್ಣನವರು ಮಾರ್ಗದರ್ಶನ ಮಾಡಿದ್ದಾರೆ. ಅವುಗಳಲ್ಲಿ ಗುರು-ಲಿಂಗ-ಜಂಗಮ ಮತ್ತು ಕಾಯಕ-ಪ್ರಸಾದ-ದಾಸೋಹ ವಿಚಾರಗಳು ಬಹುಮುಖ್ಯವಾಗಿವೆ. ‘‘ನಾನು ಆರಂಭವ ಮಾಡುವೆನಯ್ಯ ಗುರುಪೂಜೆಗೆಂದು, ನಾನು ಬೆವಹಾರದ ಮಾಡುವೆನಯ್ಯ ಲಿಂಗಾರ್ಚನೆಗೆಂದು, ನಾನು ಪರಸೇವೆಯ ಮಾಡುವೆನಯ್ಯ ಜಂಗಮದಾಸೋಹಕ್ಕೆಂದು’’ ಎಂದು ಬಸವಣ್ಣನವರು ಹೇಳುವಾಗ ಕಾಯಕ ಕೇವಲ ಸ್ವಾವಲಂಬನೆಗಾಗಿ ಅಲ್ಲ. ಅದಕ್ಕೆ ತ್ರಿವಿಧ ದಾಸೋಹದ ಜವಾಬ್ದಾರಿಗಳಿವೆ ಎಂಬುದನ್ನು ಸೂಚಿಸುತ್ತಾರೆ. ನಮ್ಮ ಕಾಯಕದಿಂದ ಬಂದದ್ದನ್ನು ದೇವರ ಪ್ರಸಾದವಾಗಿ ಸ್ವೀಕರಿಸುವುದರ ಮೂಲ ಗಳಿಕೆಯ ಅಹಂನಿಂದ ಹೊರಬಂದು, ಆ ಗಳಿಸಿದ್ದನ್ನೆಲ್ಲ ನಮಗಾಗಿಯೇ ಖರ್ಚು ಮಾಡದೆ ಸಾಮಾಜಿಕ ಜವಾಬ್ದಾರಿಯನ್ನು ಸಮರ್ಪಣಾ ಭಾವದಿಂದ ನಿಭಾಯಿಸುವುದಕ್ಕೆ ದಾಸೋಹವೆಂದು ಕರೆಯುತ್ತಾರೆ. ಅಂತೆಯೆ ಬಸವಧರ್ಮದಲ್ಲಿ ಗುರು -ಲಿಂಗ-ಜಂಗಮಕ್ಕೂ ಕಾಯಕ- ಪ್ರಸಾದ- ದಾಸೋಹಕ್ಕೂ ಅವಿನಾಭಾವ ಸಂಬಂಧವಿದೆ. ಇವುಗಳನ್ನು ಪ್ರತಿಪಾದಿಸುವ ವಚನ ಸಾಹಿತ್ಯ ನಿಜವಾದ ಕ್ರಾಂತಿಕಾರಿ ಸಾಹಿತ್ಯವಾಗಿದೆ. ವಚನಗಳಲ್ಲಿ ಸಂಪೂರ್ಣ ಕ್ರಾಂತಿಯ ಬೀಜಮಂತ್ರಗಳಿವೆ. ವಚನಗಳು ಲೋಕಹಿತದ ಸಾಹಿತ್ಯ ಮತ್ತು ತತ್ವದ ಆಗರಗಳಾಗಿವೆ.
ಸಾಮ್ರಾಜ್ಯಶಾಹಿಗಳು ಬೀಸಿದ ಜಾಗತೀಕ ರಣದ ಜಾಲದಲ್ಲಿ ಜಗತ್ತು ಸಿಕ್ಕಿಕೊಂಡು ಒದ್ದಾಡುತ್ತಿದೆ. ವಚನ ಸಾಹಿತ್ಯ ಸಾರುವ ಭಕ್ತಿ ಸಾಮ್ರಾಜ್ಯದ ಸ್ಥಾಪನೆಯಾದಾಗ ಮಾತ್ರ ಜಗತ್ತು ಎಲ್ಲ ರೀತಿಯ ಹಿಂಸೆ ಸುಲಿಗೆ, ಗಲಭೆ ಮತ್ತು ಕ್ರೌರ್ಯ ದಿಂದ ಮುಕ್ತವಾಗುವುದು. ಸುಲಿಗೆಯ ಸಾಮ್ರಾಜ್ಯಕ್ಕೆ ಭಕ್ತಿ ಸಾಮ್ರಾಜ್ಯ ವೊಂದೇ ಉತ್ತರ ಎಂಬುದನ್ನು ಜಗತ್ತು ಅರಿತುಕೊಳ್ಳುವ ದಿನಗಳು ದೂರವಿಲ್ಲ. ಬಸವಣ್ಣನವರ ಬಡ್ಡಿರಹಿತ ಅರ್ಥಶಾಸವೊಂದೇ ಈ ಜಗತನ್ನು ಕಾಪಾಡಬಲ್ಲದು. ಯೋಗ್ಯ ಉತ್ಪಾದನೆ, ಯೋಗ್ಯ ಬಳಕೆ, ಮತ್ತು ಯೋಗ್ಯ ವಿತರಣೆ ಇವು ಮೂರು ಬಸವಣ್ಣನವರ ಅರ್ಥಶಾಸದ ಪ್ರಮುಖ ಅಂಶಗಳಾಗಿವೆ. ಕಾಯಕವೆಂದರೆ ಯೋಗ್ಯವಾದುದ್ದನ್ನೇ ಉತ್ಪಾದಿಸುವ ಕ್ರಿಯೆ. ಪ್ರಸಾದವೆಂದರೆ ಯೋಗ್ಯ ಬಳಕೆ, ದಾಸೋಹವೆಂದರೆ ಯೋಗ್ಯ ವಿತರಣೆ. ಈ ಮೂರು ಆರ್ಥಿಕ ಪ್ರಕ್ರಿಯೆಗಳನ್ನು ಜಾಗತೀಕರಣದ ಮೂಲಕ ಹಾಳುಗೆಡವಿ ಭಾರತದಂಥ ಬಡರಾಷ್ಟ್ರಗಳನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಳ್ಳು ವುದೇ ಸಾಮ್ರಾಜ್ಯಶಾಹಿ ರಾಷ್ಟ್ರಗಳ ಮುಖ್ಯ ಉದ್ದೇಶವಾಗಿದೆ. ರೈತರು, ಕೃಷಿಕಾರ್ಮಿಕರು, ದಲಿತರು, ಮಹಿಳೆಯರು ಮತ್ತು ಎಲ್ಲ ವಿಧವಾದ ಕಾಯಕಜೀವಿಗಳ ಧರ್ಮವಾದ ಬಸವಧರ್ಮ ಇಂಥ ಜಾಗತಿಕ ಬಿಕ್ಕಟ್ಟನ್ನು ಪರಿಹರಿಸುವ ಸಾಮರ್ಥ್ಯವನ್ನು ಹೊಂದಿದೆ. ಹೊಸ ಮಾನವೀಯ ಜಗತ್ತಿಗಾಗಿ ಬಸವಧರ್ಮದ ರಹಸ್ಯವನ್ನು ಅರಿತುಕೊಳ್ಳುವುದು ಈ ಕಾಲದ ತುರ್ತು ಅವಶ್ಯಕತೆಯಾಗಿದೆ.
 ಕಾಯಕವು ನಮ್ಮ ದೈಹಿಕ ಮತ್ತು ಬೌದ್ಧಿಕ ಶಕ್ತಿಯನ್ನು ಹೆಚ್ಚಿಸುವುದು. ನಮ್ಮ ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡುವುದು ಮಾನಸಿಕ ಒತ್ತಡಗಳಿಂದ ರಕ್ಷಿಸುವುದು. ಪರಾವಲಂಬಿಗಳಾಗದಂತೆ ನೋಡಿಕೊಳ್ಳುವುದು. ಕೊನೆಗೆ ನಮ್ಮನ್ನು ಸ್ವತಂತ್ರೀರರನ್ನಾಗಿ ಮಾಡುವುದು.‘‘ಕೂಡಲಸಂಗನ ಶರಣರು ಸ್ವತಂತ್ರೀರರು’’ ಎಂದು ಬಸವಣ್ಣನವರು ಹೇಳುತ್ತಾರೆ. ಕಾಯಕ ಮಾಡದವನಿಗೆ ಹಸಿವು, ರುಚಿ, ವಿಶ್ರಾಂತಿ ಮತ್ತು ನಿದ್ದೆಯ ಮಹತ್ವ ಗೊತ್ತಾಗುವುದಿಲ್ಲ. ಕಾಯಕ ಜೀವಿಯ ಹಸಿವು ಎಲ್ಲ ಅಹಾರ ಪದಾರ್ಥಗಳನ್ನು ಪ್ರಸಾದವಾಗಿಸುತ್ತದೆ. ರುಚಿಕರವಾಗಿ ಸುತ್ತದೆ. ಆತನಿಗೆ ವಿಶ್ರಾಂತಿ ಮತ್ತು ನಿದ್ರೆಯ ಸುಖ ಸಹಜವಾಗಿಯೇ ಸಿಗುತ್ತದೆ. ಸತ್ಯಶುದ್ಧ ಕಾಯಕದಿಂದ ಮನಸ್ಸು ಪವಿತ್ರವಾಗಿರುತ್ತದೆ. ಆದ್ದರಿಂದ ಕಾಯಕ ತತ್ವವು ವಿಶ್ವಮಾನ್ಯವಾಗಿದೆ.
 ‘‘ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
 ಚಿತ್ತಶುದ್ಧದಲ್ಲಿ ಕಾಯಕ ಮಾಡುವಲ್ಲಿ
ಸದ್ಭಕ್ತಂಗೆ ಎತ್ತ ನೋಡಿದತ್ತ ಲಕ್ಷ್ಮಿ ತಾನಾಗಿಪ್ಪಳು
ಮಾರಯ್ಯಪ್ರಿಯ ಅಮರೇಶ್ವರ ಲಿಂಗದ
ಸೇವೆಯಯಳ್ಳನ್ನಕ್ಕರ’’

 ಬಸವಧರ್ಮ ಮನುಧರ್ಮಕ್ಕೆ ಮುಖಾಮುಖಿಯಾಗಿ ನಿಲ್ಲ್ಲುವ ಮೂಲಕ ಜಾತಿ ವರ್ಣಗಳ ಮಹತ್ವವನ್ನು ಅಲ್ಲಗಳೆದು ಕಾಯಕದ ಮಹತ್ವವನ್ನು ಎತ್ತಿ ಹಿಡಿಯುತ್ತದೆ.
ವಾನರನಿಂದ ನರನಾಗುವ ಪ್ರಕ್ರಿಯೆಯಲ್ಲಿ ಕಾಯಕದ ಪಾತ್ರ ಮಹತ್ವದ್ದಾಗಿದೆ ಎಂದು ಕಾರ್ಲ್‌ಮಾರ್ಕ್ಸ್ ಅವರ ಆಪ್ತ ಸಂಗಾತಿಯಾಗಿದ್ದ ್ರೆಡರಿಕ್ ಏಂಗೆಲ್ಸ್ ಅವರು ತಮ್ಮ ‘‘ಪಾರ್ಟ್ ಪ್ಲೇಯ್ಡ್ ಬೈ ಲೇಬರ್ ಇನ್ ದಿ ಟ್ರಾಂನ್ಶಿಷನ್‌ರ್ಾಂ ಏಪ್ ಟು ಮ್ಯಾನ್’’ ಕಿರುಹೊತ್ತಿಗೆಯಲ್ಲಿ ತಿಳಿಸಿದ್ದಾರೆ. ‘‘ಮಾನವನ ಎಲ್ಲ ಇರುವಿಕೆಗೆ ದುಡಿಮೆ ಮೊಟ್ಟಮೊದಲ ಆಧಾರ. ಇದು ಎಷ್ಟರ ಮಟ್ಟಿಗೆ ನಿಜವೆಂದರೆ ಒಂದರ್ಥದಲ್ಲಿ ದುಡಿಮೆಯೇ ಮನುಷ್ಯನ್ನು ಸೃಷ್ಟಿಸಿತ್ತೆಂದು ನಾವು ಹೇಳಬೇಕಾಗುತ್ತದೆ.’’ ಎಂದು ಏಂಗೆಲ್ಸ್ ಬರೆದಿದ್ದಾರೆ. ಇವೆಲ್ಲ ಕಾಯಕ ಸಿದ್ಧಾಂತದ ಮೂಲಾಧಾರಗಳಾಗಿವೆ.
 ಕಾಯಕವು ಮಾನವನ ಏಕತೆಯನ್ನು ಸಾಸುವ ಮೂಲಮಂತ್ರವಾಗಿದೆ. ಕಾಯಕ ಭೂಲೋಕದ ಮಹತ್ವವನ್ನು ತಿಳಿಸುತ್ತದೆ. ಈ ಭೂಮಿಯನ್ನು ಬದುಕಲು ಹೆಚ್ಚು ಯೋಗ್ಯವಾಗುವಂತೆ ಮಾಡುತ್ತದೆ. ಕಾಯಕವು ಮಾನವರ ಮಧ್ಯದ ಅಂತಸ್ತುಗಳನ್ನು ಒಡೆದು ಹಾಕುತ್ತದೆ. ಕಂದಕಗಳನ್ನು ತುಂಬುತ್ತದೆ. ಕಾಯಕ ಮಾಡುವುದೆಂದರೆ ಬದುಕನ್ನು ಪ್ರೀತಿಸುವುದು.
ಬಸವಣ್ಣನವರು ಭಕ್ತರಲ್ಲಿ ಸರ್ವಸಮಾನತೆಯನ್ನು ಕಾಣುತ್ತಾರೆ. ಶರಣರ ದೃಷ್ಟಿಯಲ್ಲಿ ಯಾವ ಕಾಯಕವೂ ಚಿಕ್ಕದಲ್ಲ ಅಥವಾ ದೊಡ್ಡದಲ್ಲ. ನಾವು ಗಳಿಸಿದ್ದೆಲ್ಲ ನಮ್ಮದು ಎಂಬ ಅಹಂಕಾರವನ್ನು ಪ್ರಸಾದ ಪ್ರಜ್ಞೆ ಹೊಡೆದು ಹಾಕುತ್ತದೆ. ನಾವು ಗಳಿಸಿದ್ದೆಲ್ಲ ದೇವರ ಕೃಪೆ ಎಂಬುದರ ಅರಿವಾದಾಗ ಅದನ್ನು ಪ್ರಸಾದವೆಂದು ಜೋಪಾನವಾಗಿಟ್ಟುಕೊಂಡು ಸುವ್ಯವಸ್ಥಿತವಾಗಿ ಬಳಸುತ್ತೇವೆ. ಸತ್ಕಾರ್ಯಗಳಿಗಾಗಿ ವ್ಯಯಿಸುತ್ತೇವೆ. ಆ ವಸ್ತುವಿನ ಮಹತ್ವವನ್ನು ಅರಿತುಕೊಂಡು ಅನ್ಯಾಯವಾಗಿ ದುಂದುವೆಚ್ಚ ಮಾಡದಂತೆ ಎಚ್ಚರಿಕೆ ವಹಿಸುತ್ತೇವೆ. ಸೇವಾ ಮನೋಭಾವ ತಾಳುತ್ತೇವೆ. ದುಃಖಿಗಳಿಗೆ ಮತ್ತು ಕಷ್ಟದಲ್ಲಿರುವವರಿಗೆ ಒಳ್ಳೆಯದಾಗುವ ಹಾಗೆ ನಮ್ಮಲ್ಲಿರುವ ದೇವರ ಸಂಪತ್ತನ್ನು ವಿನಿಯೋಗಿಸಬಯಸುತ್ತೇವೆ. ಜಗತ್ತಿನ ಬಗ್ಗೆ ತೀವ್ರವಾದ ಕಾಳಜಿ ಹೊಂದುತ್ತೇವೆ.
  ಜಗತ್ತಿನಲ್ಲಿ ದಾಸೋಹ ಭಾವ ಇರುವುದರಿಂದಲೇ ಶೇಕಡಾ 75ರಷ್ಟು ಮಂದಿ ಬದುಕುತ್ತಿದ್ದಾರೆ. ‘‘ಆಧುನಿಕ ಔಪಚಾರಿಕ ಅರ್ಥವ್ಯವಸ್ಥೆ ಜಗತ್ತಿನ ಕಾರ್ಮಿಕ ಶಕ್ತಿಯ ಶೇಕಡಾ 25ರಷ್ಟನ್ನು ಮಾತ್ರ ಬಯಸುತ್ತದೆ. ಉಳಿದ ಶೇಕಡಾ 75ರಷ್ಟು ಜನ ಅನೌಪಚಾರಿಕ ಅರ್ಥವ್ಯವಸ್ಥೆಯಿಂದಾಗಿ ಬದುಕುವುದರಲ್ಲಿ ತಲ್ಲೀನರಾಗಿದ್ದಾರೆ.’’ ಎಂದು ಖ್ಯಾತ ಸಮಾಜವಿಜ್ಞಾನಿ ಮತ್ತು ಆರ್ಥಿಕ ತಜ್ಞ ಥಿಯೊಡೊರ್ ಶನಿನ್ ಹೇಳುತ್ತಾರೆ. ಅವರು ನೂರಾರು ದೇಶಗಳ ಜನರ ಆರ್ಥಿಕ ಸ್ಥಿತಿಗತಿಗಳ ಆಧ್ಯಯನ ಮಾಡಿ ಈ ನಿರ್ಣಯಕ್ಕೆ ಬಂದಿದ್ದಾರೆ. ಜಗತ್ತಿನ ಶೇಕಡಾ 75ರಷ್ಟು ಮಂದಿ ನೆರೆಹೊರೆಯವರು ಸಹಾಯ ಸಹಕಾರದೊಂದಿಗೆ ಬದುಕುತ್ತಿದ್ದಾರೆ. ಜನ ಇನ್ನೂ ಪರಸ್ಪರ ಕಷ್ಟಸುಖಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂಬುದು ಇದರರ್ಥ. ಜಗತ್ತಿನಲ್ಲಿ ಇನ್ನೂ ದಾಸೋಹಂಭಾವ ಇದೆ ಎಂಬುದು ಇದರಿಂದ ವ್ಯಕ್ತವಾಗುತ್ತದೆ.
‘‘ಶಿವಭಕ್ತರೇ ಅಕರು ನೋಡಯ್ಯ
ಇದಕ್ಕೆ ಅಕವಾಗಿ ಜಂಗಮವ ಕಂಡೆ.
ಈ ದ್ವಿವಿಧವನೊಂದೆ ಎಂದು ನಂಬಿದೆ
ಕೂಡಲಸಂಗಮದೇವಾ.’’

ಹೀಗೆ ವಚನ ಸಾಹಿತ್ಯ ಈ ಜಗತ್ತಿನ ಗೌರವ ಕಾಪಾಡುತ್ತದೆ. ಭೂಮಿಯ ಮಹತ್ವ ಸಾರುತ್ತದೆ. ಲೋಕದ ಜನರ ಹಿತಚಿಂತನೆ ಮಾಡುತ್ತದೆ. ಮಾನವರ ಹಿತ ಕಾಪಾಡುವುದೇ ಸಾಹಿತ್ಯದ ಮುಖ್ಯ ಉದ್ದೇಶವಾಗಿದೆ. ವಚನ ಸಾಹಿತ್ಯ ಮಾನವನ ಹಿತ ಕಾಪಾಡುವ ಕ್ರಮ ವಿಶ್ವಸಾಹಿತ್ಯಕ್ಕೆ ಮಾರ್ಗದರ್ಶಕವಾಗಿದೆ.


Writer - - ರಂಜಾನ್ ದರ್ಗಾ

contributor

Editor - - ರಂಜಾನ್ ದರ್ಗಾ

contributor

Similar News

ಜಗದಗಲ
ಜಗ ದಗಲ