ಬಸವಣ್ಣನವರ ಆಯ್ದ ವಚನಗಳು

Update: 2018-04-18 07:22 GMT

ಲೋಕದ ಡೊಂಕ ನೀವೇಕೆ ತಿದ್ದುವಿರಿ?

ಲೋಕದ ಡೊಂಕ ನೀವೇಕೆ ತಿದ್ದುವಿರಿ?

ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ;
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ,
ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ
ಕೂಡಲಸಂಗಮದೇವ.

                            -ಬಸವಣ್ಣ
ಜನರು ಲೋಕದಲ್ಲಿನ ಓರೆಕೋರೆಗಳನ್ನು ತಿದ್ದಲು ಮುಂದಾಗುವ ಬದಲಿಗೆ ತಮ್ಮಳಗಿನ ಮತ್ತು ತಮ್ಮ ದೈನಂದಿನ ಬದುಕಿನಲ್ಲಿನ ಓರೆಕೋರೆಗಳನ್ನು ತಿದ್ದಿಕೊಳ್ಳಬೇಕು. ತಮ್ಮ ತಮ್ಮ ಶಾರೀರಿಕ ಮತ್ತು ಮಾನಸಿಕ ಬಯಕೆಗಳನ್ನು ಋಜು ಮಾರ್ಗದಲ್ಲಿ ಈಡೇರಿಸಿಕೊಳ್ಳಬೇಕು. ಆದರೆ ಈ ಮಾರ್ಗ ಬಹುಪಾಲು ಜನರಿಗೆ ಬಲು ಕಠಿಣವೆನಿಸುವುದು. ಏಕೆಂದರೆ ಋಜು ಮಾರ್ಗವು ಆತ್ಮವಿಮರ್ಶೆಯಿಂದ ಕೂಡಿರುತ್ತದೆ. ಪರಧನ, ಪರಸತಿಯರ ಬಯಸುವುದು ವಾಮಮಾರ್ಗಿಗಳ ಲಕ್ಷಣವಾಗಿರುತ್ತದೆ. ಇಂಥವರು ತತ್ವಜ್ಞಾನದ ಮಾತುಗಳನ್ನು ಆಡುತ್ತಲೇ ಸಭ್ಯಗೃಹಸ್ಥರು ಮಾಡಲಾರದಂಥ ಕೃತ್ಯಗಳಲ್ಲಿ ತೊಡಗಿರುತ್ತಾರೆ. ಲೋಕದ ಡೊಂಕನ್ನು ತಿದ್ದುವುದರಲ್ಲಿ ಇವರು ಅತ್ಯುತ್ಸಾಹಿಗಳಾಗಿರುತ್ತಾರೆ. ಸಹಾನುಭೂತಿಯ ಮಾತುಗಳನ್ನಾಡುತ್ತ ದುಃಖ ವ್ಯಕ್ತಪಡಿಸುತ್ತಿರುತ್ತಾರೆ. ಈ ರೀತಿ ಪರರ ದುಃಖಕ್ಕೆ ಅಳುವವರನ್ನು ದೇವರು ಮೆಚ್ಚುವುದಿಲ್ಲ ಎಂದು ಬಸವಣ್ಣನವರು ತಿಳಿಸುತ್ತಾರೆ.

 ಪರರ ದುಃಖಕ್ಕೆ ಅಳುವುದಕ್ಕಿಂತ ಪರರ ದುಃಖ ನಿವಾರಣೆಗಾಗಿ ಪ್ರಯತ್ನಿಸುವುದು ಬಹು ಮುಖ್ಯವಾಗಿದೆ. ದುಃಖವೆಂಬುದು ಭೌತಿಕ ವಸ್ತುಗಳಿಂದ ಬರುವ ದುಃಖ ಮಾತ್ರವಲ್ಲ, ಈ ಬದುಕಿಗೆ ಸಂಬಂಧಿಸಿದಂತೆ ಇರಬೇಕಾದ ಪರಿಜ್ಞಾನವಿಲ್ಲದಿದ್ದರೆ ದುಃಖವು ಆವರಿಸುವುದು. ಬರೀ ಭೌತಿಕ ವಸ್ತುಗಳಿಗೆ ಸಂಬಂಧಿಸಿದ ದುಃಖ ಮಾತ್ರ ಜಗತ್ತಿನಲ್ಲಿ ಇದ್ದಿದ್ದರೆ ಶ್ರೀಮಂತರು ದುಃಖಿಗಳಾಗುವ ಪ್ರಸಂಗವೇ ಬರುತ್ತಿರಲಿಲ್ಲ. ನಿಜದ ನಿಲುವನ್ನು ಅರಿತವನು ದುಃಖದಿಂದ ದೂರಾಗುತ್ತಾನೆ. ಲೋಕದ ಓರೆಕೋರೆಗಳು ಸರಿಯಾಗಬೇಕಾದರೂ ಪ್ರತಿಯೊಬ್ಬ ಮಾನವ ತನ್ನ ಒಳಗೂ ಹೊರಗೂ ಬದಲಾಗಬೇಕಾಗುತ್ತದೆ. ಯಾವುದೇ ಒಬ್ಬ ವ್ಯಕ್ತಿ ಕುಳಿತು ಜಗತ್ತಿನ ಸಮಸ್ಯೆಯನ್ನು ಬಗೆಹರಿಸಲಿಕ್ಕಾಗದು. ಪ್ರತಿಯೊಬ್ಬರು ಪರಮಾತ್ಮನ ಧ್ಯಾನದಿಂದ ತಮ್ಮ ತಪ್ಪನ್ನು ತಿದ್ದಿಕೊಳ್ಳುತ್ತ ಅಂತರಂಗ ಶುದ್ಧಿ ಮಾಡಿಕೊಳ್ಳಬೇಕು. ಸಮಾಜಕ್ಕೆ ಉಪಕಾರಿಯಾಗುತ್ತ ಬಹಿರಂಗ ಶುದ್ಧಿ ಮಾಡಿಕೊಳ್ಳಬೇಕು. ಆಗ ನಮ್ಮಿಂದ ಬೇರೆಯವರಿಗೆ ದುಃಖವಾಗದು. ಬೇರೆಯವರು ನಮಗೆ ದುಃಖವನ್ನುಂಟು ಮಾಡಲಾರರು. ಲೋಕ ಹೀಗೆ ಸುಂದರವಾಗಬೇಕಾದರೆ ನಮ್ಮ ದೇಹದ ಮತ್ತು ಮನಸ್ಸಿನ ದೌರ್ಬಲ್ಯಗಳನ್ನು ಅರಿತುಕೊಳ್ಳಬೇಕು. ದೇಹವು ದುರ್ಬಲವಾಗಿದೆ. ಅದು ಎಷ್ಟೇ ಶಕ್ತಿಶಾಲಿಯಾಗಿದ್ದರೂ ಕಾಲವು ಅದನ್ನು ದುರ್ಬಲಗೊಳಿಸುತ್ತದೆ. ಆದರೆ ದೇಹದೊಳಗಿನ ಮನಸ್ಸು ಸುಖದ ಬೆನ್ನು ಹತ್ತಿ ಎಲ್ಲವನ್ನೂ ಬಯಸುತ್ತಲೇ ಇರುತ್ತದೆ. ಮನಸ್ಸಿನ ಬಯಕೆಗಳು ಪ್ರಬಲವಾಗಿವೆ. ದೇಹ ದುರ್ಬಲಗೊಂಡರೂ ಅವು ಪ್ರಬಲವಾಗಿಯೇ ಇರಲು ಬಯಸುತ್ತವೆ. ದೇಹ ಮತ್ತು ಮನಸ್ಸಿನ ಎಲ್ಲ ಬಯಕೆಗಳನ್ನು ಸನ್ಮಾರ್ಗದಲ್ಲಿ ಈಡೇರಿಸಲು ಪ್ರಯತ್ನಿಸಬೇಕು. ಸನ್ಮಾರ್ಗದಿಂದ ಸಾಧ್ಯವಾಗದ ಬಯಕೆಗಳನ್ನು ಈಡೇರಿಸಲು ಪ್ರಯತ್ನಿಸದೆ ತನು ಮನಗಳನ್ನು ಸಂತೈಸುವುದನ್ನು ಕಲಿಯಬೇಕು ಎಂಬ ಸಮಾಧಾನದ ರಹಸ್ಯವನ್ನು ಬಸವಣ್ಣನವರು ಇಲ್ಲಿ ಸೂಚಿಸಿದ್ದಾರೆ.

***

ಮನವೇ ಸರ್ಪ

ಮನವೇ ಸರ್ಪ, ತನು ಹೇಳಿಗೆ;

ಹಾವಿನೊಡತಣ ಹುದುವಾಳಿಗೆ!
ಇನ್ನಾವಾಗ ಕೊಂದಿಹುದೆಂದರಿಯೆ.
ಇನ್ನಾವಾಗ ತಿಂದಿಹುದೆಂದರಿಯೆ.
ನಿಚ್ಚಕ್ಕೆ ನಿಮ್ಮ ಪೂಜಿಸಬಲ್ಲಡೆ
ಅದೇ ಗಾರುಡ, ಕೂಡಲಸಂಗಮದೇವಾ.
                                             -ಬಸವಣ್ಣ

 ಬಸವಣ್ಣನವರು ಈ ವಚನದಲ್ಲಿ ಮನಸ್ಸು, ದೇಹ ಮತ್ತು ಪೂಜೆಗೆ ಸಂಬಂಧಿಸಿದಂತೆ ಪರಿಣಾಮಕಾರಿಯಾದ ಕಾವ್ಯಪ್ರತಿಮೆಯನ್ನು ಸೃಷ್ಟಿಸಿದ್ದಾರೆ. ಮಾನವನ ಮನಸ್ಸೆಂಬುದು ವಿಷಸರ್ಪ. ದೇಹವೆಂಬುದು ಹಾವಿನ ಬುಟ್ಟಿ. ದೇಹದೊಳಗಿರುವ ಈ ವಿಷಸರ್ಪ ಮಾನವರನ್ನು ಯಾವಾಗ ಕೊಲ್ಲುವುದೋ ಗೊತ್ತಿಲ್ಲ. ಯಾವಾಗ ನುಂಗುವುದೊ ಗೊತ್ತಿಲ್ಲ. ಈ ವಿಷಸರ್ಪದ ಜೊತೆಗೇ ಮಾನವ ಸಹಬಾಳ್ವೆ ಮಾಡಬೇಕಿದೆ. ಹಾಗೆ ಸಹಬಾಳ್ವೆ ಮಾಡುತ್ತ ಹಾವಿನ ಬಾಯಿಗೆ ತುತ್ತಾಗದೆ ಬದುಕಬೇಕಿದೆ. ಈ ಎಚ್ಚರದೊಂದಿಗೆ ಸದಾ ಇರಬೇಕಾಗಿದೆ. ಆದರೆ ಮಾನವರು ಈ ಭಯದಿಂದ ಮುಕ್ತರಾಗುವುದಕ್ಕೆ ಬಸವಣ್ಣನವರು ಗರುಡಮಂತ್ರವನ್ನು ಹೇಳಿಕೊಡುತ್ತಿದ್ದಾರೆ. ನಿತ್ಯ ದೇವರಧ್ಯಾನದಲ್ಲಿರುವುದೇ ಆ ಗರುಡಮಂತ್ರ. ಎಂಥದೇ ವಿಷಕಾರಿ ಸರ್ಪವಾಗಿದ್ದರೂ ಗರುಡನ ಮುಂದೆ ನಿಷ್ಕ್ರಿಯವಾಗುತ್ತದೆ. ನಿರಂತರ ದೇವರಧ್ಯಾನವು ಎಂಥ ಕ್ರೂರ ಮನಸ್ಸನ್ನು ಕೂಡ ಹದ್ದುಬಸ್ತಿನಲ್ಲಿಡುತ್ತದೆ. ಆಗ ಆ ಮನಸ್ಸೆಂಬ ಸರ್ಪ ನಮ್ಮ ಜೊತೆಗೆ ಇದ್ದರೂ ನಮ್ಮನ್ನು ಕೊಲ್ಲುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ.
 ಈ ಮನಸ್ಸೆಂಬ ಸರ್ಪ ಅನೇಕ ಪ್ರಕಾರದ ವಿಷಗಳನ್ನು ತನ್ನೊಳಗೆ ಇಟ್ಟುಕೊಂಡಿದೆ. ಕಾಮ, ಕ್ರೋಧ, ಮದ, ಮತ್ಸರ, ಮೋಹ, ಲೋಭ ಮುಂತಾದ ನಾನಾರೀತಿಯ ವಿಷಗಳು ಈ ಮನಸ್ಸಿನಲ್ಲಿ ತುಂಬಿಕೊಂಡಿವೆ. ಈ ವಿಷದಿಂದ ದಿವ್ಯೌಷಧಿಯನ್ನು ಮಾಡುವ ಕಲೆಯನ್ನೂ ಬಸವಣ್ಣನವರು ಕಲಿಸಿದ್ದಾರೆ. ಕಾಮಿಯು ಲಿಂಗಕಾಮಿಯಾದಾಗ ಕಾಮನೆಗಳಿಂದ ಮುಕ್ತನಾಗುವನು. ಕ್ರೋಧ ಉಳ್ಳಾತ ತನ್ನ ಅವಗುಣಗಳ ವಿರುದ್ಧ ಕ್ರೋಧ ವ್ಯಕ್ತಪಡಿಸಬೇಕು. ಮದ ಉಳ್ಳಾತ ತನ್ನ ಅಹಂಕಾರದ ಸೊಕ್ಕು ಮುರಿಯಬೇಕು. ಹೀಗೆ ಅರಿಷಡ್ವರ್ಗಗಳನ್ನು ಶರಣರು ಶಿವಧ್ಯಾನವೆಂಬ ಗರುಡಮಂತ್ರದಿಂದ ಪಳಗಿಸಿದರು. ಹೀಗೆ ಅವುಗಳ ಜೊತೆಗೆ ಬದುಕುತ್ತ ಲೋಕಕ್ಕೆ ಮಾರ್ಗದರ್ಶಿಯಾದರು.
 ಈ ರೀತಿ ಲಿಂಗಕಾಮಿಯಾದವರು ಜಂಗಮಪ್ರೇಮಿಯಾಗುತ್ತಾರೆ ಎಂದು ಬಸವಣ್ಣನವರು ಇನ್ನೊಂದು ವಚನದಲ್ಲಿ ಹೇಳಿದ್ದಾರೆ. ವಿವಿಧ ಧರ್ಮಗಳ ಬಹುಪಾಲು ಜನರು ತಮ್ಮ ತಮ್ಮ ದೇವರುಗಳ ಮೇಲೆ ಪ್ರೇಮಭಾವವನ್ನು ವ್ಯಕ್ತಪಡಿಸುತ್ತಾರೆ. ಆದರೆ ಜಗತ್ತಿನ ವಸ್ತುಗಳನ್ನು ಪಡೆದುಕೊಳ್ಳುವ ಕಾಮನೆಗಳನ್ನು ಹೊಂದಿರುತ್ತಾರೆ. ಶಿವಕಾಮಿಯಾದವರು, ಅಂದರೆ ಸರ್ವಸುಖವನ್ನು ಮತ್ತು ದಿವ್ಯಾನಂದವನ್ನು ದೇವರ ಧ್ಯಾನದಲ್ಲೇ ಕಾಣುವವರು ಭೌತಿಕ ವಸ್ತುಗಳ ಬಗ್ಗೆ ಕಾಮನೆಗಳನ್ನು ಹೊಂದಿರುವುದಿಲ್ಲ. ಆಗ ಅವರಲ್ಲಿ ಜಗತ್ತಿನ ಸಕಲ ಚರಾಚರಗಳ ಬಗ್ಗೆ ಪ್ರೇಮಭಾವ ಮೂಡುತ್ತದೆ. ತಮಗಾಗಿ ಹೆಚ್ಚಿನದೇನನ್ನೂ ಬಯಸದಂಥ ಸ್ಥಿತಿಯನ್ನು ತಲುಪುತ್ತಾರೆ. ಆಗ ಅದೇ ಮನಸ್ಸೆಂಬ ಸರ್ಪ ಅವರ ಜೊತೆ ನಿಜವಾದ ಅರ್ಥದಲ್ಲಿ ಸಹಬಾಳ್ವೆ ಮಾಡಲು ಆರಂಭಿಸುತ್ತದೆ. ಹೀಗೆ ಮಾನವನು ತನ್ನ ಮನಸ್ಸಿನ ಮೇಲೆ ವಿಜಯ ಮತ್ತು ಸಾಂಗತ್ಯವನ್ನು ಸಾಧಿಸಿ ಈ ಬದುಕನ್ನು ಆನಂದಿಸಬೇಕೆಂಬುದು ಬಸವಣ್ಣನವರ ಆಶಯವಾಗಿದೆ.

***
ಮಾಡಿ ನೀಡಿ ಲಿಂಗವ ಪೂಜಿಸಿ

ಮಾಡಿ ನೀಡಿ ಲಿಂಗವ ಪೂಜಿಸಿಹೆವೆಂಬವರು ನೀವೆಲ್ಲ ಕೇಳಿರಣ್ಣಾ:

ಹಾಗದ ಕೆರಹ ಹೊರಗೆ ಕಳೆದು
ದೇಗುಲಕ್ಕೆ ಹೋಗಿ ನಮಸ್ಕಾರವ ಮಾಡುವನಂತೆ
ತನ್ನ ಕೆರಹಿನ ಧ್ಯಾನವಲ್ಲದೆ ದೇವರ ಧ್ಯಾನವಿಲ್ಲ.
ಧನವನಿರಿಸದಿರಾ, ಇರಿಸಿದಡೆ ಭವ ಬಪ್ಪುದು ತಪ್ಪದು.
ಕೂಡಲಸಂಗನ ಶರಣರಿಗೆ ಸವೆಸಲೇಬೇಕು.
                                           -ಬಸವಣ್ಣ

 ಗುಡಿಗುಂಡಾರಗಳಿಗೆ ಅಲ್ಪಸ್ವಲ್ಪಧನಸಹಾಯ ಮಾಡುತ್ತ, ಒಂದಿಷ್ಟು ದಾನ ನೀಡುತ್ತ ‘ಸ್ಥಾವರಲಿಂಗವನ್ನು ಪೂಜಿಸುತ್ತಿದ್ದೇವೆ’ ಎಂದು ಹೇಳುವ ನೀವೆಲ್ಲ ಕೇಳಿರಣ್ಣಾ ಎಂದು ಬಸವಣ್ಣನವರು ಸದ್ವಿನಯದಿಂದ ಹೇಳುತ್ತ ನಿಜದ ನಿಲುವನ್ನು ತಾಳಿದ್ದಾರೆ. ಅಗ್ಗದ ಚಪ್ಪಲಿಗಳನ್ನು ಹೊರಗೆ ಕಳೆದು ದೇವಾಲಯದ ಒಳಗೆ ಹೋಗಿ ಲಿಂಗಕ್ಕೆ ಕೈಮುಗಿದು ಧ್ಯಾನಸ್ಥ ಸ್ಥಿತಿಯಲ್ಲಿ ನಿಂತಾಗ ಮನಸ್ಸಿನಲ್ಲಿ ದೇವಸ್ವರೂಪದ ಚಿತ್ಕಳೆ ಮೂಡದೆ ಹೊರಗೆ ಬಿಟ್ಟ ಚಪ್ಪಲಿಗಳೇ ಕಣ್ಣಿಗೆ ಕಟ್ಟಿದಂತಾಗುತ್ತದೆ. ಚಪ್ಪಲಿಗಳ್ಳರು ಬಂದಿರಬಹುದು; ಚಪ್ಪಲಿಗಳನ್ನು ಒಯ್ದಿರಬಹುದು ಎಂಬ ವಿಚಾರಗಳು ಮನದಲ್ಲಿ ಹೊಳೆಯತೊಡಗುತ್ತವೆ. ಬೇಗ ಹೋಗಿ ಚಪ್ಪಲಿಗಳು ಇವೆಯೊ ಇಲ್ಲವೊ ಎಂಬುದನ್ನು ನೋಡಬೇಕು ಎಂಬ ತೀವ್ರತೆ ಉಂಟಾಗುತ್ತದೆ. ಹೀಗೆ ಧ್ಯಾನವು ಚಪ್ಪಲಿಮಯವಾಗುತ್ತದೆ. ಅಗ್ಗದ ಚಪ್ಪಲಿಗಳಿಗೆ ಇಷ್ಟೊಂದು ಯೋಚನೆ ಮಾಡುವವರು ಕಷ್ಟದಲ್ಲಿರುವವರ ಬಗ್ಗೆ ಏನು ಕಾಳಜಿ ಮಾಡಬಲ್ಲರು! ಹೀಗೆ ಜಿಪುಣತನದಿಂದ ಬದುಕುತ್ತ ಧನಸಂಗ್ರಹಿಸುವುದರಲ್ಲೇ ಇಡೀ ಆಯುಷ್ಯ ಕಳೆಯುವವರಿಗೆ ದೇವರ ಧ್ಯಾನವೆಂಬುದು ಭ್ರಮೆಯಾಗಿ ಉಳಿಯುತ್ತದೆ. ಇಂಥವರು ವಸ್ತುಮೋಹಿಗಳಾಗಿ ವಸ್ತುವಿನ ಧ್ಯಾನದಲ್ಲೇ ಜೀವಸವೆಸುವರು. ಭವಭಾರಿಗಳಾಗಿ ಭೌತಿಕ ಜಗತ್ತಿನಲ್ಲೇ ತೊಳಲಾಡುವರು. ಬಸವಣ್ಣನವರು ಹೀಗೆಲ್ಲ ಹೇಳುತ್ತಲೇ ಸಾಮಾಜಿಕ ಅರ್ಥಶಾಸ್ತ್ರದ ರಹಸ್ಯವನ್ನು ಬಿಚ್ಚಿಡುವರು. ಒಂದು ದೇಶದ ಶಾಂತಿ ಮತ್ತು ಸುವ್ಯವಸ್ಥೆ ಅಲ್ಲಿನ ನ್ಯಾಯಬದ್ಧ ಸಾಮಾಜಿಕ ಅರ್ಥವ್ಯವಸ್ಥೆಯ ಮೇಲೆ ನಿಂತಿರುತ್ತದೆ. ಹಣದ ಚಲನಶೀಲತೆ ಇಡೀ ಸಮಾಜದಲ್ಲಿ ಏಕಪ್ರಕಾರವಾಗಿರಬೇಕು. ಆದರೆ ಸುಲಿಗೆ ವ್ಯವಸ್ಥೆಯಲ್ಲಿ ಹಣವು ಬಡವರ ಮಧ್ಯೆ ಚಲನಶೀಲತೆಯ ತೀವ್ರತೆಯನ್ನು ಕಳೆದುಕೊಂಡಿರುತ್ತದೆ. ಹಣವು ಶ್ರೀಮಂತರ ಮಧ್ಯೆ ಮಾತ್ರ ಹೆಚ್ಚು ಚಲನಶೀಲವಾದಾಗ ಸಮಾಜದಲ್ಲಿ ಆರ್ಥಿಕ ಅಸಮತೋಲನ ಉದ್ಭವವಾಗುತ್ತದೆ. ಆಗ ಸಾಮಾಜಿಕ ಅಶಾಂತಿ ತಲೆದೋರುತ್ತದೆ. ಅರ್ಥಶಾಸ್ತ್ರಜ್ಞರೂ ಆಗಿದ್ದ ಬಸವಣ್ಣನವರು ದಾಸೋಹ ತತ್ವದ ಮೂಲಕ ಹಣದ ಚಲನಶೀಲತೆಯಲ್ಲಿ ಸಮತೋಲನ ಕಾಪಾಡುವುದನ್ನು ಕಲಿಸಿಕೊಟ್ಟರು.

ಹಣವನ್ನು ಕೂಡಿಡದೆ ಕೂಡಲಸಂಗನ ಶರಣರಿಗೆ ಸವೆಸಲೇಬೇಕು ಎಂದು ಬಸವಣ್ಣನವರು ಹೇಳುತ್ತಾರೆ. ಅಂದರೆ ದಾಸೋಹ ರೂಪದಲ್ಲಿ ಸಮಾಜಸೇವೆ ಮಾಡಬೇಕು. ಹೀಗೆ ಮಾಡುವುದರಿಂದ ಸಮಾಜದಲ್ಲಿ ಆರ್ಥಿಕ ಅಸಮತೋಲನ ಉಂಟಾಗದು. ಆತ್ಮಶೋಧನೆ ಮತ್ತು ಸಾಮಾಜಿಕ ಪರಿವರ್ತನೆಗಾಗಿ ಅರಿವು ಮೂಡಲು ಬೇಕಾದ ಧ್ಯಾನಕ್ಕಾಗಿ ಇಷ್ಟಲಿಂಗವಿದೆ ಎಂಬ ವಿಚಾರವನ್ನು ಕೂಡ ಬಸವಣ್ಣನವರು ಇಲ್ಲಿ ಪರೋಕ್ಷವಾಗಿ ತಿಳಿಸಿದ್ದಾರೆ. ಹೀಗೆ ಬಸವಣ್ಣನವರು ಸರ್ವಸಮತ್ವದ ದೇವರು ಮತ್ತು ಸುಲಿಗೆ ಇಲ್ಲದ ಸಮಾಜದ ಕುರಿತು ಮಾಡುವ ಚಿಂತನೆ ವಿನೂತನವಾಗಿದೆ.

***

ಭಂಡವ ತುಂಬಿದ ಬಳಿಕ

 ಭಂಡವ ತುಂಬಿದ ಬಳಿಕ

ಸುಂಕವ ತೆತ್ತಲ್ಲದೆ ವಿರಹಿತ ಹೋಗಬಾರದು.
ಲಿಂಗಸಂಬಂಧಿಯಾದಡೆ ಜಂಗಮಪ್ರೇಮಿ ನೀನಾಗು,
ಅಲ್ಲದಿದ್ದಡೆ ಪರುಷ ದೊರೆಕೊಳ್ಳದಯ್ಯ,

ಜಂಗಮದಲ್ಲಿ ನಿರುತ ಭರಿತ, ಕೂಡಲಸಂಗಮದೇವ.
                                                     -ಬಸವಣ್ಣ

 ಬಿಜ್ಜಳನ ಪ್ರಧಾನಿಯಾಗಿದ್ದ ಬಸವಣ್ಣನವರು ಸರ್ವ ಸಮಾನತೆಯ ಶರಣಸಮಾಜ ನಿರ್ಮಾಣದ ಮುಂದಾಳು ಕೂಡ ಆಗಿದ್ದರು. ಅವರ ತತ್ವನಿಷ್ಠೆ, ಕಾಯಕ ನಿಷ್ಠೆ ಮತ್ತು ನವಸಮಾಜನಿಷ್ಠೆ ಅನನ್ಯವಾದುದು. ಈ ವಚನ ಅವರ ಈ ಮೂರೂ ನಿಷ್ಠೆಗಳನ್ನು ಒಳಗೊಂಡಿದೆ. ಪ್ರತಿಯೊಬ್ಬರಿಗೆ ತತ್ವ (ದೇವರು), ಕಾಯಕ (ವ್ಯವಸ್ಥೆ) ಮತ್ತು ಸಮಾಜ (ಜಂಗಮ)ದ ಪ್ರಜ್ಞೆ ಇರದಿದ್ದರೆ ಅರಾಜಕತೆ ತಲೆದೋರುತ್ತದೆ. ಬಸವಣ್ಣನವರು ಏಕದೇವೋಪಾಸಕರಾಗಿ ತತ್ವನಿಷ್ಠರಾಗಿದ್ದರು. ಕಾಯಕ ಮಾಡುತ್ತ ವ್ಯವಸ್ಥೆಗೆ ಸಲ್ಲಿಸಬೇಕಾದುದನ್ನು ಸಲ್ಲಿಸಲು ಜನರಿಗೆ ಪ್ರಧಾನಿಯಾಗಿ ಕಲಿಸಿದರು. ಸಮೃದ್ಧ ಉತ್ಪಾದನೆ ಮೂಲಕ ಕಲ್ಯಾಣದಲ್ಲಿ ಅರಾಜಕತೆ ಉಂಟಾಗದಂತೆ ನೋಡಿಕೊಂಡರು. ಅವರ ಕಾಲದಲ್ಲಿ ಕಲ್ಯಾಣದ ಆರ್ಥಿಕ ಸ್ಥಿತಿ ಎಷ್ಟೊಂದು ಉಚ್ಛ್ರಾಯ ಸ್ಥಿತಿ ತಲುಪಿತ್ತೆಂದರೆ ಅಲ್ಲಿ ಕೊಡುವವರಿದ್ದರು ಹೊರತಾಗಿ ಬೇಡುವವರಿರಲಿಲ್ಲ. ಸರಕನ್ನು ತುಂಬಿದ ಬಂಡಿಯನ್ನು ಸುಂಕದ ಕಟ್ಟೆಯ ಮುಂದಿನ ದಾರಿಯಲ್ಲೇ ಹಾಯಿಸಿಕೊಂಡು ಸುಂಕವನ್ನು ಕೊಟ್ಟು ಹೋಗಬೇಕು. ಅಡ್ಡದಾರಿ ಹಿಡಿದು ಕಳ್ಳತನದಿಂದ ಸುಮ್ಮನೆ ಹೋಗಬಾರದು. ಏಕೆಂದರೆ ಒಂದು ದೇಶದಲ್ಲಿ ಬದುಕುವಾಗ ಆ ದೇಶದ ನಿಯಮವನ್ನು ಪಾಲಿಸಬೇಕು. ಕಲ್ಯಾಣದ ಪ್ರಧಾನಿಯಾಗಿ ಬಸವಣ್ಣನವರು ಕೊಡುವ ಈ ಎಚ್ಚರಿಕೆ ಪ್ರಭುಸಮ್ಮಿತವಾಗಿದೆ. ಅಂದರೆ ಆಜ್ಞಾರೂಪದಲ್ಲಿದೆ. ಈ ವಚನದ ಮುಂದಿನ ಸಾಲುಗಳಲ್ಲಿ ಇದೇ ವಿಚಾರವನ್ನು ಆಧ್ಯಾತ್ಮಿಕ ಮತ್ತು ಸಾಮಾಜಿಕವಾಗಿ ಹೇಳುತ್ತಾರೆ. ಇಲ್ಲಿ ಹೇಳುವ ಕ್ರಮ ಕಾಂತಾಸಮ್ಮಿತವಾಗಿದೆ. ಅಂದರೆ ಸತಿಯು ಪತಿಗೆ ಸೂಕ್ಷ್ಮದಲ್ಲಿ ತಿಳಿಹೇಳುವ ರೀತಿಯಲ್ಲಿದೆ. ಬಸವಣ್ಣನವರು ಹೀಗೆ ಹೇಳುತ್ತಾರೆ: ನೀನು ಏಕದೇವನ ಕುರುಹಾದ ಇಷ್ಟಲಿಂಗದಲ್ಲಿ ನಿಷ್ಠೆಯನ್ನಿಟ್ಟಿದ್ದರೆ ಸಮಾಜವನ್ನು ಪ್ರೀತಿಸುವವನಾಗು. ಇಲ್ಲದಿದ್ದರೆ ಪರುಷ ಪ್ರಾಪ್ತವಾಗುವುದಿಲ್ಲ. ಲೋಹವನ್ನು ಚಿನ್ನವಾಗಿಸುವ ಸ್ಪರ್ಶಮಣಿಯಾದ ಪರುಷದಂತೆ ದೇವರಿದ್ದಾನೆ. ನಾವು ಮಾನವರು ಲೋಹದಂತೆ ಇದ್ದೇವೆ. ಪರುಷ ತಾಗದೆ ಲೋಹವು ಚಿನ್ನವಾಗದು. ಅದೇ ರೀತಿ ನಮ್ಮಾಳಗಿನ ಪರಮಾತ್ಮನೆಂಬ ಪರುಷ ನಮ್ಮನ್ನು ತಟ್ಟದಿದ್ದರೆ ನಮ್ಮ ಅರಿವು ಮತ್ತು ಅಂತಃಕರಣಗಳು ಅಶುದ್ಧವಾಗೇ ಉಳಿದು ನಾವು ಬಂಗಾರದ ಮನುಷ್ಯರಾಗುವುದಿಲ್ಲ. ಅಂದರೆ ನಿಜಮಾನವರಾಗುವುದಿಲ್ಲ. (ಶರಣರು, ಸೂಫಿಗಳು, ಸಂತರು, ದಾಸರು, ಅನುಭಾವಿಗಳು, ಮಾನವತಾವಾದಿಗಳು ಮುಂತಾದವರೇ ನಿಜಮಾನವರು.) ದೇವರು ನಿಶ್ಚಿತವಾಗಿಯೂ ಸಮಾಜದಲ್ಲಿ ತುಂಬಿಕೊಂಡಿದ್ದಾನೆ. ಆದ್ದರಿಂದ ದೇವರನ್ನು ಪ್ರೀತಿಸಬೇಕೆಂಬುವವರು ಸಮಾಜವನ್ನು ಪ್ರೀತಿಸಬೇಕು ಎಂದು ಬಸವಣ್ಣನವರು ಹೇಳಿದ್ದಾರೆ.

***
ದಾಸೀಪುತ್ರ

 ದಾಸೀಪುತ್ರನಾಗಲಿ, ವೇಶ್ಯಾಪುತ್ರನಾಗಲಿ

ಶಿವದೀಕ್ಷೆಯಾದಬಳಿಕ ಸಾಕ್ಷಾತು ಶಿವನೆಂದು ವಂದಿಸಿ ಪೂಜಿಸಿ,
ಪಾದೋದಕ ಪ್ರಸಾದವ ಕೊಂಬುದೆ ಯೋಗ್ಯ.
ಹೀಗಲ್ಲದೆ ಉದಾಸೀನವ ಮಾಡಿ ಬಿಡುವವರಿಗೆ
ಪಂಚಮಹಾಪಾತಕ ನರಕ ಕಾಣಾ,
ಕೂಡಲಸಂಗಮದೇವಾ.
                                           -ಬಸವಣ್ಣ

ಮಧ್ಯಯುಗದ ಜಮೀನುದಾರಿ ಪದ್ಧತಿಯ ಸಮಾಜದಲ್ಲಿ ಬಡವರ ಸೇವೆಗೆ ಬೆಲೆ ಇದ್ದಿಲ್ಲ. ಬಹಳಷ್ಟು ಬಡವರು ಜೀವನಪರ್ಯಂತ ಅನ್ನ ಬಟ್ಟೆಗಾಗಿ ಬಿಟ್ಟಿ ಸೇವೆ ಮಾಡುವ ಪರಿಸ್ಥಿತಿ ಇತ್ತು. ಅದೇ ರೀತಿ ಬಡ ಹೆಣ್ಣುಮಕ್ಕಳು ಕೂಡ ಅಸಹಾಯಕರಾಗಿದ್ದರು. ಅನೇಕ ಹೆಣ್ಣುಮಕ್ಕಳು ಶ್ರೀಮಂತರ ಭೋಗದ ವಸ್ತುಗಳಾಗದೆ ಬೇರೆ ದಾರಿ ಇರಲಿಲ್ಲ. ಅವರು ದಾಸಿಯರಾಗಿ ಇಲ್ಲವೆ ವೇಶ್ಯೆಯರಾಗಿ ಬದುಕನ್ನು ದೂಡುತ್ತಿದ್ದರು. ಶ್ರೀಮಂತರನೇಕರಿಗೆ ವೇಶ್ಯೆಯರ ಸಂಘ ಗೌರವದ ವಿಷಯವಾಗಿತ್ತು. ಅನೇಕರು ಮನೆಯಲ್ಲಿ ದಾಸಿಯರ ಜೊತೆ ಲೈಂಗಿಕ ಸಂಪರ್ಕವಿಟ್ಟುಕೊಳ್ಳುವುದು ಪುರುಷಪ್ರಧಾನ ಸಮಾಜದಲ್ಲಿ ಸಹಜವೆಂದೇ ಪರಿಗಣಿಸಲಾಗಿತ್ತು. ಇಂಥ ದಾಸಿಯರು ಮತ್ತು ವೇಶ್ಯೆಯರಿಗೆ ಜನಿಸಿದ ಮಕ್ಕಳಿಗೆ ಸಮಾಜದಲ್ಲಿ ಯಾವುದೇ ಸ್ಥಾನವಿರಲಿಲ್ಲ. ಆ ಮಕ್ಕಳು ದಿಕ್ಕುದೆಸೆಯಿಲ್ಲದೆ ತಿರುಗುವಂಥ ಪರಿಸ್ಥಿತಿ ಇತ್ತು. ಮುಂದೆ ದೊಡ್ಡವರಾದ ಮೇಲೆ ಅವರು ಬಿಟ್ಟಿ ಕೆಲಸ ಮಾಡುತ್ತ ಇಲ್ಲವೆ ಕಾಲಾಳುಗಳಾಗಿ ಸೈನ್ಯದಲ್ಲಿ ಸೇವೆಸಲ್ಲಿಸುತ್ತ ಬದುಕುತ್ತಿದ್ದರು. ಹೆಂಗೂಸುಗಳಾಗಿದ್ದರೆ ತಾಯಂದಿರ ದಾರಿಯನ್ನೇ ಹಿಡಿದು ದಾಸಿಯರಾಗಿ ಇಲ್ಲವೆ ವೇಶ್ಯೆಯರಾಗಿ ಅದೇ ನರಕದಲ್ಲಿರುತ್ತಿದ್ದರು. ಅಂದಿನ ಕಾಲದಲ್ಲಿ ಕಲ್ಯಾಣ ನಗರ ರಾಜಧಾನಿಯಾಗಿತ್ತಲ್ಲದೆ ಭಾರೀ ವ್ಯವಹಾರ ಕೇಂದ್ರವೂ ಆಗಿತ್ತು. ಸಹಜವಾಗಿಯೇ ದೇವದಾಸಿಯರೂ ವೇಶ್ಯೆಯರೂ ಇದ್ದರು.
 ಇಂಥ ಪ್ರತಿಕೂಲ ವಾತಾವರಣದಲ್ಲಿ ಪ್ರಧಾನಿ ಬಸವಣ್ಣನವರು ಕಾಯಕಜೀವಿಗಳನ್ನು ಒಂದುಗೂಡಿಸಿ ಜನಮಾನಸದಲ್ಲಿ ಹೊಸ ಮಾನವೀಯ ಕನಸುಗಳನ್ನು ಬಿತ್ತಿ ಕಲ್ಯಾಣದೊಳಗೊಂದು ಪವಿತ್ರಕಲ್ಯಾಣ ನಿರ್ಮಿಸಿದ್ದು ವಿಶ್ವದ ಇತಿಹಾಸದಲ್ಲಿ ಅನುಪಮ ಉದಾಹರಣೆಯಾಗಿದೆ. ದಾಸಿಯರು, ವೇಶ್ಯೆಯರು, ಅನಾಥಮಕ್ಕಳು, ಅನೈತಿಕ ಸಂಬಂಧದಿಂದ ಹುಟ್ಟಿದ ಮಕ್ಕಳು, ಅಸ್ಪಶ್ಯರು ಮತ್ತು ಎಲ್ಲರೀತಿಯ ಕಷ್ಟದ ಕಾಯಕ ಮಾಡುವವರ ಮೇಲೆ ಬಸವಣ್ಣನವರು ಅಂತಃಕರಣದ ಧಾರೆ ಎರೆದರು. ಅವರ ಹೊಸ ಬದುಕಿಗಾಗಿ ಚಿಂತಿಸಿದರು. ಬಿಟ್ಟಿ ಕೆಲಸ ಮಾಡುವವರನ್ನು ಸ್ವತಂತ್ರ ಕಾಯಕಜೀವಿಗಳನ್ನಾಗಿ ಮಾಡಿದರು. ದಾಸಿಯರನ್ನು ಮತ್ತು ವೇಶ್ಯೆಯರನ್ನು ನರಕ ಸದೃಶ ಬದುಕಿನಿಂದ ಹೊರತಂದು, ಇಷ್ಟಲಿಂಗದ ಮೂಲಕ ಪುಣ್ಯಾಂಗನೆಯರನ್ನಾಗಿಸಿ ವಿವಿಧ ಕಾಯಕಗಳಲ್ಲಿ ತೊಡಗುವಂತೆ ಮಾಡಿದರು. ಹೀಗೆ ಅವರ ಬದುಕು ಪವಿತ್ರವಾಯಿತು. ಇಂಥವರ ಮಕ್ಕಳು ಇಷ್ಟಲಿಂಗ ದೀಕ್ಷೆ ಪಡೆದನಂತರ ಎಲ್ಲರಂತೆ ಸಮಾನರಾಗುತ್ತಾರೆ. ದೀಕ್ಷೆ ಪಡೆದ ಇವರಿಗೆ ವಂದಿಸಬೇಕು, ಪೂಜಿಸಬೇಕು, ಇವರಿಂದ ಪಾದೋದಕ ಮತ್ತು ಪ್ರಸಾದ ಸ್ವೀಕರಿಸಬೇಕು. ಒಂದುವೇಳೆ ಲಿಂಗವಂತರು ಉದಾಸೀನ ಮಾಡಿದರೆ ಪಂಚಮಹಾಪಾತಕದ ನರಕಕ್ಕೆ ಹೋಗುತ್ತಾರೆ ಎಂದು ಬಸವಣ್ಣನವರು ಎಚ್ಚರಿಸುತ್ತಾರೆ.

Writer - - ರಂಜಾನ್ ದರ್ಗಾ

contributor

Editor - - ರಂಜಾನ್ ದರ್ಗಾ

contributor

Similar News

ಜಗದಗಲ
ಜಗ ದಗಲ