ಇದೀಗ ಎನ್ ಐಎಗೆ ಅಂತರ್ ಧರ್ಮೀಯ ಮದುವೆಯ ತನಿಖೆ ನಡೆಸಲು ಸಮಯ ಲಭಿಸಬಹುದು

Update: 2018-04-18 17:56 GMT

ಹೊಸದಿಲ್ಲಿ, ಎ.18: ಮಕ್ಕಾ ಮಸೀದಿ ಪ್ರಕರಣದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿರುವ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯನ್ನು ಖ್ಯಾತ ಗೀತರಚನೆಗಾರ, ಕವಿ ಜಾವೇದ್ ಅಖ್ತರ್ ಟೀಕಿಸಿದ್ದಾರೆ. ಮಕ್ಕಾ ಮಸೀದಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸ್ವಾಮಿ ಅಸೀಮಾನಂದ ಸೇರಿದಂತೆ ಆರೋಪಿಗಳ ಅಪರಾಧವನ್ನು ಸಾಬೀತುಪಡಿಸಲು ಎನ್‌ಐಎ ವಿಫಲವಾಗಿರುವ ಬಗ್ಗೆ ಅಖ್ತರ್ ಟೀಕಿಸಿದ್ದಾರೆ.

 ‘ಉದ್ದೇಶಿತ ಕಾರ್ಯ ಸಾಧಿಸಲಾಗಿದೆ. ಮಕ್ಕಾ ಮಸೀದಿ ಪ್ರಕರಣದಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿರುವುದಕ್ಕೆ ಎನ್‌ಐಎಯನ್ನು ಅಭಿನಂದಿಸುತ್ತೇನೆ. ಇದೀಗ ಅವರಿಗೆ ಅಂತರ್ ಸಮುದಾಯದ ಮದುವೆಯ ಬಗ್ಗೆ ತನಿಖೆ ನಡೆಸಲು ಸಾಕಷ್ಟು ಸಮಯ ದೊರಕುತ್ತದೆ’ ಎಂದು ಅಖ್ತರ್ ಟ್ವೀಟ್ ಮಾಡಿದ್ದಾರೆ.( ಹಿಂದು ಮಹಿಳೆ ಮುಸ್ಲಿಂ ಯುವಕನನ್ನು ಮದುವೆಯಾಗಿರುವ ಹಾದಿಯಾ ಪ್ರಕರಣವನ್ನು ಅಖ್ತರ್ ಉಲ್ಲೇಖಿಸಿದ್ದಾರೆ). ಇದಕ್ಕೆ ಪ್ರತ್ಯುತ್ತರ ನೀಡಿರುವ ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹ ರಾವ್, “ರಾಹುಲ್ ಗಾಂಧಿಯವರ ಭಕ್ತರಾಗಿರುವ ನೀವು ಈ ರೀತಿ ಬರೆಯುವುದರಲ್ಲಿ ಅಚ್ಚರಿಯಿಲ್ಲ. ಹಿಂದೂ ಭಯೋತ್ಪಾದಕತೆ ಎಂಬ ಪದದ ಸೃಷ್ಟಿಕರ್ತ ನೀವೇ ಏನು” ಎಂದು ಪ್ರಶ್ನಿಸಿದ್ದಾರೆ. ಜಾವೇದ್‌ಜೀ, “ಹಿಂದೂ ಭಯೋತ್ಪಾದಕತೆ ಎಂಬ ಪದದ ಜನಕರಾದ ಕಾಂಗ್ರೆಸ್ ಪಕ್ಷವನ್ನು ನೀವು ಪ್ರಾಮಾಣಿಕವಾಗಿ ಖಂಡಿಸುತ್ತೀರಿ ಎಂದು ನಾನು ಭಾವಿಸಿದ್ದೆ. ಬಹುಷಃ ನೀವು ಸಿನೆಮಕ್ಕೆ ಚಿತ್ರಕತೆ ರಚಿಸಿಕೊಟ್ಟಂತೆ ರಾಹುಲ್ ಗಾಂಧಿಯವರಿಗೂ ಕಲ್ಪಿತ ಕತೆಯನ್ನು ರಚಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಅಥವಾ ಈ ಹಿಂದೆ ‘ಮೌತ್ ಕಾ ಸೌದಾಗರ್’ ಎಂಬ ಪದವನ್ನು ಚಾಲನೆಗೆ ತಂದ ನೀವೇ ಹಿಂದೂ ಭಯೋತ್ಪಾದಕತೆ ಎಂಬ ಪದದ ಸೃಷ್ಟಿಕರ್ತರೇ” ಎಂದು ರಾವ್ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News