ಸಂಘ ಪರಿವಾರದ ‘‘ಆರ್ಯರು ಭಾರತದ ಮೂಲನಿವಾಸಿಗಳು’’ ಸಿದ್ಧಾಂತಕ್ಕೆ ಕೊಡಲಿಯೇಟು?

Update: 2018-04-18 18:33 GMT

ಭಾಗ-1

ಸಂಘಪರಿವಾರಿಗರಂತೂ ಸಿಂಧೂ ಕಣಿವೆಯ ಜನ ‘ಆರ್ಯರು’; ಸಿಂಧೂ ನಾಗರಿಕತೆ ಮತ್ತು ವೈದಿಕ ನಾಗರಿಕತೆ ಎರಡೂ ಒಂದೇ ಎಂದು ವಾದಿಸುತ್ತಲೇ ಬಂದಿದ್ದಾರೆ. ಸಂಘಪರಿವಾರಿಗರು ಸಿಂಧೂ ಕಣಿವೆಯ ನಾಗರಿಕತೆಯನ್ನು ‘ಸಿಂಧೂ ಸರಸ್ವತಿ ನಾಗರಿಕತೆ’ ಎಂದು ಕರೆಯುವ ಉದ್ದೇಶವೂ ಇದೇ ಆಗಿದೆ. ಅವರು ತಮ್ಮ ವಾದಕ್ಕೆ ಸಮರ್ಥನೆಯಾಗಿ ಎನ್.ಎಸ್.ರಾಜಾರಾಮ್‌ರಂಥವರ ಸಂಶೋಧನೆಗಳನ್ನು ಉಲ್ಲೇಖಿಸುತ್ತಾರೆ. ಸಿಂಧೂ ನಾಗರಿಕತೆಯ ಜನ ಅಶ್ವಾರೂಢ ‘ಆರ್ಯರು’ ಎಂಬುದಕ್ಕೆ ಪುರಾವೆಯಾಗಿ ಸಿಂಧೂ ಕಣಿವೆಯ ಉತ್ಖನನಗಳಲ್ಲಿ ಕುದುರೆ ಚಿತ್ರವಿರುವ ಮುದ್ರೆ ದೊರೆತಿದೆ ಎನ್ನುವ ರಾಜಾರಾಮ್‌ರ ‘ಕುದುರೆ’ ಸಿದ್ಧಾಂತವನ್ನು ಆಸ್ಕೊ ಪಾರ್ಪೋಲ, ಮೈಕಲ್ ವಿಟ್‌ಸಲ್, ಸ್ಟೀವ್ ಫಾರ್ಮರ್ ಮುಂತಾದ ಅಂತರ್‌ರಾಷ್ಟ್ರೀಯ ಖ್ಯಾತಿಯ ವಿಜ್ಞಾನಿಗಳು ಚಿಂದಿಚೂರು ಮಾಡಿದ್ದಾರೆ. ತಮ್ಮ ವಾದಕ್ಕೆ ಪುರಾವೆಯಾಗಿ ಕ್ರಿ.ಪೂ. 2000ಕ್ಕೆ ಮೊದಲು ಕುದುರೆ ಎಂಬ ಪ್ರಾಣಿ ದಕ್ಷಿಣ ಏಶ್ಯಾ ಪ್ರದೇಶದಲ್ಲೇ ಇರಲಿಲ್ಲ ಎಂಬ ವೈಜ್ಞಾನಿಕ ಸತ್ಯಾಂಶವನ್ನು ಉಲ್ಲೇಖಿಸಿದ್ದಾರೆ.

ಮಾನವನ ಎಣೆಯಿಲ್ಲದ ಕುತೂಹಲದ ಫಲವಾಗಿ ಮಾನವಕುಲದ ಜ್ಞಾನದ ಪರಿಧಿ ವಿಸ್ತಾರಗೊಳ್ಳುತ್ತಾ ಸಾಗಿದೆ. ಪ್ರತಿದಿನವೆಂಬಂತೆ ಹೊರಬೀಳುತ್ತಿರುವ ಹೊಸ ಹೊಸ ವೈಜ್ಞಾನಿಕ ಆವಿಷ್ಕಾರಗಳು ಮತ್ತು ಅಧ್ಯಯನಗಳು ಹೊಸ ಹೊಸ ವಿಷಯಗಳನ್ನು ಪರಿಚಯಿಸುತ್ತಿವೆ, ಹೊಸ ಹೊಸ ಸತ್ಯಗಳನ್ನು ನಮ್ಮ ಮುಂದೆ ತೆರೆದಿಡುತ್ತಿವೆ. ಮಾನವನ ಉಗಮ ಮತ್ತು ವಿಕಸನ ಇಂತಹ ಒಂದು ಕುತೂಹಲಭರಿತ ವಿಚಾರ. ಆದರೆ ಮಧ್ಯ ಮತ್ತು ದಕ್ಷಿಣ ಏಶ್ಯಾದ ಜನರ ವಿಕಸನಕ್ಕೆ ಸಂಬಂಧಿಸಿದಂತೆ ಕರಾರುವಾಕ್ಕಾದ ಸಂಶೋಧನೆಗಳ ಕೊರತೆ ಕೆಲವೊಂದು ದುರುಳ ವ್ಯಕ್ತಿಗಳು ಮತ್ತು ರಾಜಕಾರಣಿಗಳಿಗೆ ವರದಾನವಾಗಿ ಪರಿಣಮಿಸಿದೆ. ಅಂತಹ ಅಪರಿಪೂರ್ಣ ಸಂಶೋಧನೆಗಳನ್ನು ಇವರು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸಿ ಅನುಕೂಲ ಸಿದ್ಧಾಂತಗಳನ್ನು ಸೃಷ್ಟಿಸಿಕೊಂಡರು. ಉದಾಹರಣೆಗೆ ಜರ್ಮನಿಯ ನಾಝಿಗಳು ಆರ್ಯ ಆಕ್ರಮಣ ಸಿದ್ಧಾಂತವನ್ನು ಹುಟ್ಟುಹಾಕಿ ತಾವು ಆರ್ಯ ವಂಶಜರು, ತಮ್ಮದು ಜಗತ್ತಿನ ಅತ್ಯಂತ ಶ್ರೇಷ್ಠ ಜನಾಂಗ ಎಂದು ಪ್ರತಿಪಾದಿಸಿದರು. ಅವರ ಜನಾಂಗೀಯವಾದದಿಂದ ಜನಿಸಿದ ಅನ್ಯ ಜನರ ದ್ವೇಷ ಅಂತಿಮವಾಗಿ ಕೋಟ್ಯಂತರ ಯಹೂದ್ಯರ ನರಮೇಧದಲ್ಲಿ ಪರ್ಯವಸಾನವಾಯಿತು. ಆ ಅತ್ಯಂತ ಅಮಾನುಷ ಘಟನೆಯನ್ನು ಮನುಕುಲ ಎಂದೆಂದಿಗೂ ಮರೆಯಲಾರದು, ಯಾವತ್ತಿಗೂ ಕ್ಷಮಿಸಲಾರದು. ಇತ್ತ ಭಾರತದ ಸಂಘ ಪರಿವಾರಿಗರು ಏನು ಮಾಡಿದರು? ನಾಝಿಗಳಿಗಿಂತ ಮತ್ತೂ ಒಂದು ಹೆಜ್ಜೆ ಮುಂದಕ್ಕೆ ಹೋದ ಇವರು ಆರ್ಯರು ಮತ್ತು ಇಂಡೋ-ಯುರೋಪಿಯನ್ ಭಾಷೆಗಳ ಮೂಲಸ್ಥಾನವೇ ಭಾರತ; ಆರ್ಯರು ಬಳಿಕ ಇಲ್ಲಿಂದ ಜಗತ್ತಿನ ವಿವಿಧ ಭಾಗಗಳಿಗೆ ಗುಳೇ ಹೋದರೆಂದು ವಾದಿಸುತ್ತಾ ಬಂದಿದ್ದಾರೆ. ಇಂಡೋ-ಯುರೋಪಿಯನ್ ಭಾಷೆಗಳ ಗುಂಪಿಗೆ ಸೇರಿದ ಸಂಸ್ಕೃತ ಭಾಷೆಯನ್ನು ಆಡುತ್ತಿದ್ದ ‘ಆರ್ಯರು’ ಹೊರಗಿನಿಂದ ಬಂದವರೆಂದು ಒಪ್ಪಲು ಸಂಘ ಪರಿವಾರಿಗರು ಸುತರಾಂ ಸಿದ್ಧರಿಲ್ಲ. ಯಾಕೆಂದರೆ ಆಗ ಅವರು ಕೂಡಾ ಮೊಗಲರು, ಕ್ರೈಸ್ತರಂತೆ ಆಕ್ರಮಣಕಾರರಾಗಿ ಇಲ್ಲಿಗೆ ಬಂದವರು ಎಂದಾಗುತ್ತದೆ. ಅವರ ‘‘ಅನ್ಯರ ಆಕ್ರಮಣಕ್ಕೆ ತುತ್ತಾದ ಭಾರತದ ಹಿಂದೂಗಳು’’ ಎಂಬ ಅನುಕಂಪ ಗಿಟ್ಟಿಸುವ ವಾದ ಧರಾಶಾಯಿಯಾಗುತ್ತದೆ. ಆದುದರಿಂದಲೇ ಅವರು ಕೇವಲ ಹಿಂದೂಗಳು ಮಾತ್ರ ಭಾರತದ ಮೂಲನಿವಾಸಿಗಳು, ಉಳಿದ ಶೂದ್ರ, ದಲಿತ, ಆದಿವಾಸಿ, ಅಲ್ಪಸಂಖ್ಯಾತ ಜನರೆಲ್ಲ ಅನ್ಯರೆೆಂದು ಬಿಂಬಿಸಲು ಶತಪ್ರಯತ್ನ ನಡೆಸುತ್ತ ಬಂದಿದ್ದಾರೆ. ಸಂಘಪರಿವಾರಿಗಳೆಲ್ಲರೂ ಭಾರತದ ಆದಿವಾಸಿಗಳನ್ನು ವನವಾಸಿಗಳೆಂದು ಕರೆಯುವುದು ಇದೇ ಕಾರಣಕ್ಕೆ. ಅವರಿಗೆ ಈ ರೀತಿ ವಾದಿಸದೆ ಗತ್ಯಂತರವಿಲ್ಲ, ಏಕೆಂದರೆ ಅವರ ಹಿಂದುತ್ವ ಸಿದ್ಧಾಂತ ಮತ್ತು ಹಿಂದೂ ರಾಷ್ಟ್ರ ಪರಿಕಲ್ಪನೆ ನಿಂತಿರುವುದೇ ಇದರ ಆಧಾರದಲ್ಲಿ. ಭಾರತವನ್ನು ವೈದಿಕ ಶ್ರೇಷ್ಠತೆಯ ಹಿಂದೂ ರಾಷ್ಟ್ರವಾಗಿ ಪರಿವರ್ತಿಸುವ ಗುರಿಯನ್ನು ಹೊಂದಿರುವ ಸಂಘ ಪರಿವಾರಕ್ಕೆ ಇಲ್ಲಿನ ಅಲ್ಪಸಂಖ್ಯಾತರ ದಮನಕ್ಕೆ ಬೇಕಿರುವ ಪ್ರಮುಖ ಅಸ್ತ್ರವನ್ನು ಒದಗಿಸಿದವರು ಇನ್ಯಾರೂ ಅಲ್ಲ, ಅದರ ಮೂಲ ಗುರು ಸಾವರ್ಕರ್. ಭಾರತದ ಮತಾಂತರಗೊಂಡ ಮುಸಲ್ಮಾನರು ಮತ್ತು ಕ್ರೈಸ್ತರು ಈ ನೆಲದ ಮಕ್ಕಳಲ್ಲ, ಹಿಂದೂಗಳಲ್ಲ, ಅವರೆಲ್ಲ ಹೊರಗಿನವರು, ಶತ್ರುಗಳು ಎಂದು ಬಿಂಬಿಸುವುದಕ್ಕೋಸ್ಕರ ಸಾವರ್ಕರ್ ತನ್ನ ‘ಹಿಂದುತ್ವ’ ಪುಸ್ತಕದಲ್ಲಿ ಪಿತೃಭೂಮಿ ಮತ್ತು ಪುಣ್ಯಭೂಮಿಗಳ ಪರಿಕಲ್ಪನೆಯನ್ನು ಹುಟ್ಟುಹಾಕಿದರು: ‘‘ಈ ಭಾರತ ಭೂಮಿ, ಈ ಸಿಂಧುಸ್ಥಾನವು ಸಂತಾಲರಿಂದ ಆರಂಭಿಸಿ ಸಾಧುಗಳವರೆಗಿನ ಎಲ್ಲಾ ಹಿಂದೂಗಳಿಗೆ ಏಕಕಾಲಕ್ಕೆ ಪಿತೃಭೂಮಿಯೂ ಪುಣ್ಯಭೂಮಿಯೂ ಆಗಿದೆ. ಆದುದರಿಂದಲೇ ಆದಿಯಲ್ಲಿ ಬಲವಂತವಾಗಿ ಹಿಂದೂಯೇತರ ಧರ್ಮಕ್ಕೆ ಮತಾಂತರಿಸಲ್ಪಟ್ಟುದರ ಫಲವಾಗಿ ಹಿಂದೂಗಳ ಜೊತೆಯಲ್ಲಿ ಸಮಾನ ಪಿತೃಭೂಮಿಯನ್ನೂ ಸಮಾನ ಸಾಂಸ್ಕೃತಿಕ ಸಂಪತ್ತಾದ ಭಾಷೆ, ಕಾನೂನು, ಸಂಪ್ರದಾಯಗಳು, ಜನಪದ ಮತ್ತು ಚರಿತ್ರೆಗಳ ಹೆಚ್ಚಿನ ಭಾಗವನ್ನೂ ಆನುವಂಶಿಕವಾಗಿ ಪಡೆದಿರುವ ನಮ್ಮ ದೇಶದ ಕೆಲವೊಂದು ಮುಸಲ್ಮಾನರು ಮತ್ತು ಕ್ರೈಸ್ತರು ಹಿಂದೂಗಳಲ್ಲ, ಅವರನ್ನು ಹಿಂದೂಗಳೆಂದು ಪರಿಗಣಿಸಲು ಸಾಧ್ಯವಿಲ್ಲ. ಇತರ ಯಾವನೇ ಹಿಂದೂ ವ್ಯಕ್ತಿಯ ಹಾಗೆ ಹಿಂದೂಸ್ಥಾನ ಅವರ ಪಾಲಿಗೂ ಪಿತೃಭೂಮಿಯಾಗಿದ್ದರೂ ಅದು ಅವರ ಪುಣ್ಯಭೂಮಿ ಅಲ್ಲ. ಅವರ ಪುಣ್ಯಭೂಮಿಗಳಿರುವುದು ದೂರದ ಅರೇಬಿಯಾದಲ್ಲಿ ಅಥವಾ ಫೆಲೆಸ್ತೀನ್‌ನಲ್ಲಿ. ಅವರ ಪುರಾಣಗಳು, ಅವರ ದೇವಮಾನವರು, ಅವರ ಚಿಂತನೆಗಳು ಮತ್ತು ವೀರರು ಈ ಮಣ್ಣಿನ ಮಕ್ಕಳಲ್ಲ. ಪರಿಣಾಮವಾಗಿ ಅವರ ಹೆಸರುಗಳಲ್ಲಿ ಮತ್ತು ಜೀವನದೃಷ್ಟಿಯಲ್ಲಿ ಸ್ವಲ್ಪ ವಿದೇಶೀ ಮೂಲದ ವಾಸನೆ ಹೊಡೆಯುತ್ತದೆ’’ (‘ಹಿಂದುತ್ವ’, ಸಾವರ್ಕರ್, ಪುಟ 113).

ಸಾವರ್ಕರ್ ಅಸ್ತ್ರದ ಮೊನೆಗೆ ಮತ್ತೋರ್ವ ದ್ವೇಷದ ಗುರು ಗೋಳ್ವಾಲ್ಕರ್ ಚಿಂತನೆಗಳ ಸಂಚಯವನ್ನು ಕೂಡಿಸಿ ಬ್ರಹ್ಮಾಸ್ತ್ರವೊಂದನ್ನು ಸಿದ್ಧಪಡಿಸಿದ ಸಂಘ ಪರಿವಾರ ಅದರ ಮೂಲಕ ತನ್ನೆಲ್ಲಾ ಸದಸ್ಯರಿಗೆ ಅಲ್ಪಸಂಖ್ಯಾತರ ವಿರುದ್ಧ ದ್ವೇಷದ ವಿಷವನ್ನು ಉಣಿಸುತ್ತಾ ಬಂದಿದೆ. ಆ ಅತ್ಯಂತ ಭೀಕರ, ಮಾರಕ ದ್ವೇಷ ಅವರನ್ನು ಎಂತೆಂತಹ ಬರ್ಬರ ಹಾಗೂ ಅಮಾನವೀಯ ಕೃತ್ಯಗಳಿಗೆ ಪ್ರಚೋದಿಸುತ್ತಿದೆ ಎಂಬುದನ್ನು ದೇಶ ನೋಡುತ್ತಾ ಬಂದಿದೆ. ಕಳೆದ ನಾಲ್ಕು ವರ್ಷಗಳಿಂದೀಚೆಗೆ ಅವುಗಳ ತೀವ್ರತೆ ಹಾಗೂ ಪ್ರಮಾಣದಲ್ಲಿ ಹಲವು ಪಟ್ಟು ಏರಿಕೆಯಾಗಿರುವುದನ್ನೂ ಗಮನಿಸಿದೆ.

ಪರಿಸ್ಥಿತಿ ಬದಲಾಗುತ್ತಿದೆ

ಆದರೆ ಈಗ ಪರಿಸ್ಥಿತಿ ಬದಲಾಗುತ್ತಿದೆ. ಪಿತೃಭೂಮಿ ಮತ್ತು ಪುಣ್ಯಭೂಮಿಗಳ ಪರಿಕಲ್ಪನೆಯನ್ನು ಸಮರ್ಥಿಸಲು ಸಾಧ್ಯವೇ ಆಗದಂತಹ ಶೋಧನೆಗಳು ಒಂದೊಂದಾಗಿ ಹೊರಬೀಳುತ್ತಿವೆ. ಆಧುನಿಕ ಡಿಎನ್‌ಎ ಆಧಾರಿತ ವೈಜ್ಞಾನಿಕ ಅಧ್ಯಯನಗಳು ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಭೂತಾನ, ಮಾಲ್ದೀವ್ಸ್ ಮತ್ತು ಶ್ರೀಲಂಕಾ ದೇಶಗಳನ್ನೊಳಗೊಂಡ ಭಾರತೀಯ (ಅಥವಾ ದಕ್ಷಿಣ ಏಶ್ಯಾ) ಉಪಖಂಡದ ಜನರ ವಂಶಪರಂಪರೆಗೆ ಸಂಬಂಧಪಟ್ಟಂತೆ ದೀರ್ಘ ಕಾಲದಿಂದ ಬಾಕಿ ಉಳಿದಿದ್ದ ಕೆಲವೊಂದು ಪ್ರಶ್ನೆಗಳಿಗೆ ಸಮಾಧಾನ ಒದಗಿಸುವ ಹಾಗೆ ತೋರುತ್ತಿದೆ. ಇತ್ತೀಚಿನ ಇಂತಹ ಒಂದು ಅಂತರ್‌ರಾಷ್ಟ್ರೀಯ ಮಟ್ಟದ ಅಧ್ಯಯನದಲ್ಲಿ ಹಾರ್ವರ್ಡ್, ಎಂಐಟಿ, ರಶ್ಯನ್ ವಿಜ್ಞಾನ ಅಕಾಡಮಿ, ಬೀರಬಲ್ ಸಾಹ್ನಿ ಪ್ರಾಗೈತಿಹಾಸಿಕ ಕಾಲದ ವಿಜ್ಞಾನಗಳ ಸಂಸ್ಥೆ, ಡೆಕ್ಕನ್ ಕಾಲೇಜು, ಮ್ಯಾಕ್ಸ್ ಪ್ಲಾಂಕ್ ಸಂಸ್ಥೆ, ಉಜ್ಬೆಕಿಸ್ತಾನದ ಪ್ರಾಕ್ತನಶಾಸ್ತ್ರೀಯ ಸಂಶೋಧನಾ ಸಂಸ್ಥೆ, ಹೈದರಾಬಾದಿನ ಕೋಶೀಯ ಮತ್ತು ಅಣು ಜೀವವಿಜ್ಞಾನ ಕೇಂದ್ರ ಮತ್ತಿತರ ಸಂಸ್ಥೆಗಳ ಒಟ್ಟು 92 ಮಂದಿ ವಿಜ್ಞಾನಿಗಳು ಭಾಗವಹಿಸಿದ್ದರು. ತಳಿವಿಜ್ಞಾನವನ್ನು ಆಧರಿಸಿದ ಈ ಅಧ್ಯಯನ ಪ್ರಾಚೀನ ಕಾಲದಲ್ಲಿ ನಮ್ಮ ಉಪಖಂಡದಲ್ಲಿ ವಾಸಿಸುತ್ತಿದ್ದ ಜನರ ಪೂರ್ವಿಕರು ಯಾರೆಂದು ಕಂಡುಹಿಡಿಯುವ ಪ್ರಯತ್ನವನ್ನು ಮಾಡಿದೆ. ವಿಜ್ಞಾನಿಗಳ ತಂಡ ಮಿಲಿಯಾಂತರ ವರ್ಷಗಳಷ್ಟು ಹಳೆಯ 612 ಮಾನವರ ಡಿಎನ್‌ಎ ಸ್ಯಾಂಪಲ್‌ಗಳನ್ನು ಕಲೆಹಾಕಿ ಅವುಗಳ ಅಧ್ಯಯನ ಕೈಗೊಂಡಿದೆ. ಇದರಲ್ಲಿ ಹಳೆ ಇರಾನಿನ ತುರಾನ್ (ಈಗಿನ ಉಜ್ಬೆಕಿಸ್ತಾನ, ತುರ್ಕಮೆನಿಸ್ತಾನ ಮತ್ತು ತಜಿಕಿಸ್ತಾನ) ಎಂಬಲ್ಲಿನ ಸ್ಯಾಂಪಲ್‌ಗಳೂ ಇದ್ದವು. ಈ ಅಧ್ಯಯನದ ಮೂಲಕ ಲಭ್ಯವಾದ ದತ್ತಾಂಶಗಳನ್ನು ಪ್ರಸಕ್ತ ಕಾಲದ ಮಾನವರ (ದಕ್ಷಿಣ ಏಶ್ಯಾದ 246 ವಿಶಿಷ್ಟ ಗುಂಪುಗಳ ಸದಸ್ಯರನ್ನೂ ಒಳಗೊಂಡಂತೆ) ದತ್ತಾಂಶಗಳೊಂದಿಗೆ ತಾಳೆ ನೋಡಲಾಯಿತು.

ಈ ಹಿಂದೆ ನಡೆಸಲಾದ ಸಂಶೋಧನೆಗಳು ಗೊಂದಲವನ್ನು ಸೃಷ್ಟಿಸಿದ್ದವು. ಸ್ತ್ರೀಯಿಂದ ಸ್ತ್ರೀಗೆ ವರ್ಗಾವಣೆಯಾಗುವ ಮೈಟೋಕಾಂಡ್ರಿಯ ಡಿಎನ್‌ಎ ಆಧರಿಸಿ ನಡೆದ ಅಂದಿನ ಅಧ್ಯಯನಗಳು ಭಾರತದ ಜನ ಸಾವಿರಾರು ವರ್ಷಗಳಿಂದ ಇಲ್ಲೇ ವಾಸಮಾಡುತ್ತಿದ್ದರೆಂದು ಹೇಳಿದವು. ಇದನ್ನು ಕೇಳಿದ ಸಂಘ ಪರಿವಾರ ಸಂತಸದಿಂದ ಉಬ್ಬಿಹೋಗಿತ್ತು. ಆದರೆ ನಂತರ ನಡೆದ ಪುರುಷನಿಂದ ಪುರುಷನಿಗೆ ವರ್ಗಾವಣೆಯಾಗುವ ವೈ-ಕ್ರೊಮೊಸೋಮ್ ಆಧರಿತ ಅಧ್ಯಯನ ಒಂದು ವಾಸ್ತವಿಕ ಹಾಗೂ ಸಮಗ್ರ ಚಿತ್ರಣವನ್ನು ಒದಗಿಸಲು ಸಮರ್ಥವಾಗಿದೆ. ಇದರ ಪ್ರಕಾರ ಭಾರತೀಯ ಉಪಖಂಡದ ಜನರಿಗೆ ಪಶ್ಚಿಮದ ಯುರೇಷಿಯನ್ನರೊಂದಿಗೆ (ಅವರು ಯುರೋಪಿಯನ್ನರಿರಬಹುದು, ಇರಾನ್ ಪೀಠಭೂಮಿಯ ಜನರಿರಬಹುದು ಅಥವಾ ಮಧ್ಯ ಏಶ್ಯಾದ ಜನರಿರಬಹುದು) ಹೆಚ್ಚು ಸಂಬಂಧವಿರುವುದಾಗಿ ತಿಳಿದುಬರುತ್ತದೆ.

ಸಿಂಧೂ ನಾಗರಿಕತೆಯ ಮೂಲ

ಏತನ್ಮಧ್ಯೆ ಸಿಂಧೂ ಕಣಿವೆಯ ಜನ ಯಾರೆಂಬ ಪ್ರಶ್ನೆ ಇನ್ನೂ ಇತ್ಯರ್ಥವಾಗದೆ ಹಾಗೇ ಉಳಿದಿತ್ತು. ಸಂಘಪರಿವಾರಿಗರಂತೂ ಸಿಂಧೂ ಕಣಿವೆಯ ಜನ ‘ಆರ್ಯರು’; ಸಿಂಧೂ ನಾಗರಿಕತೆ ಮತ್ತು ವೈದಿಕ ನಾಗರಿಕತೆ ಎರಡೂ ಒಂದೇ ಎಂದು ವಾದಿಸುತ್ತಲೇ ಬಂದಿದ್ದಾರೆ. ಸಂಘಪರಿವಾರಿಗರು ಸಿಂಧೂ ಕಣಿವೆಯ ನಾಗರಿಕತೆಯನ್ನು ‘ಸಿಂಧೂ ಸರಸ್ವತಿ ನಾಗರಿಕತೆ’ ಎಂದು ಕರೆಯುವ ಉದ್ದೇಶವೂ ಇದೇ ಆಗಿದೆ. ಅವರು ತಮ್ಮ ವಾದಕ್ಕೆ ಸಮರ್ಥನೆಯಾಗಿ ಎನ್.ಎಸ್.ರಾಜಾರಾಮ್‌ರಂಥವರ ಸಂಶೋಧನೆಗಳನ್ನು ಉಲ್ಲೇಖಿಸುತ್ತಾರೆ. ಸಿಂಧೂ ನಾಗರಿಕತೆಯ ಜನ ಅಶ್ವಾರೂಢ ‘ಆರ್ಯರು’ ಎಂಬುದಕ್ಕೆ ಪುರಾವೆಯಾಗಿ ಸಿಂಧೂ ಕಣಿವೆಯ ಉತ್ಖನನಗಳಲ್ಲಿ ಕುದುರೆ ಚಿತ್ರವಿರುವ ಮುದ್ರೆ ದೊರೆತಿದೆ ಎನ್ನುವ ರಾಜಾರಾಮ್‌ರ ‘ಕುದುರೆ’ ಸಿದ್ಧಾಂತವನ್ನು ಆಸ್ಕೊ ಪಾರ್ಪೋಲ, ಮೈಕಲ್ ವಿಟ್‌ಸಲ್, ಸ್ಟೀವ್ ಫಾರ್ಮರ್ ಮುಂತಾದ ಅಂತರ್‌ರಾಷ್ಟ್ರೀಯ ಖ್ಯಾತಿಯ ವಿಜ್ಞಾನಿಗಳು ಚಿಂದಿಚೂರು ಮಾಡಿದ್ದಾರೆ. ತಮ್ಮ ವಾದಕ್ಕೆ ಪುರಾವೆಯಾಗಿ ಕ್ರಿ.ಪೂ. 2000ಕ್ಕೆ ಮೊದಲು ಕುದುರೆ ಎಂಬ ಪ್ರಾಣಿ ದಕ್ಷಿಣ ಏಶ್ಯಾ ಪ್ರದೇಶದಲ್ಲೇ ಇರಲಿಲ್ಲ ಎಂಬ ವೈಜ್ಞಾನಿಕ ಸತ್ಯಾಂಶವನ್ನು ಉಲ್ಲೇಖಿಸಿದ್ದಾರೆ. ನಿಜ ಹೇಳಬೇಕೆಂದರೆ ಈ ‘ಕುದುರೆ’ ಸಿದ್ಧಾಂತ ಎಂಬುದು ಪೂರ್ವನಿಗದಿತ ಫಲಿತಾಂಶವನ್ನು ಇಟ್ಟುಕೊಂಡು ಮಾಡಿದ ಅಧ್ಯಯನದ ಹಾಗಿದೆ. ಸಿಂಧೂ ಕಣಿವೆಯ ಜನ ದ್ರಾವಿಡರೆಂಬ ಇನ್ನೊಂದು ಸಿದ್ಧಾಂತವೂ ಇದೆ. ಹೆಲ್ಸಿಂಕಿ ವಿಶ್ವವಿದ್ಯಾನಿಲಯದಲ್ಲಿ ಇಂಡಾಲಜಿ ಮತ್ತು ದಕ್ಷಿಣ ಏಶ್ಯಾ ಅಧ್ಯಯನದ ಗೌರವಾನ್ವಿತ ನಿವೃತ್ತ ಪ್ರೊಫೆಸರ್ ಆಗಿರುವ ಆಸ್ಕೊ ಪಾರ್ಪೋಲ, ಸಿಂಧೂ ಲಿಪಿ ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದೆ ಎಂದು ಅಭಿಪ್ರಾಯಿಸುತ್ತಾರೆ. ಹಾಗಾದರೆ ನಿಜಕ್ಕೂ ಸಿಂಧೂ ಕಣಿವೆಯ ಜನ ಯಾರು? ಆರ್ಯರೇ? ದ್ರಾವಿಡರೇ? ಎಂಬ ಪ್ರಶ್ನೆಗಳೊಂದಿಗೆ ಭಾರತ ಉಪಖಂಡದ ಜನರು ಯಾರು? ಅವರು ಇಲ್ಲಿನವರೇ? ಹೊರಗಿಂದ ಬಂದವರೇ? ಹೊರಗಿನವರಾದರೆ ಎಲ್ಲಿಂದ ಬಂದರು? ಎಂಬ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳುವುದು ಪ್ರಸಕ್ತ ಅಧ್ಯಯನದ ಉದ್ದೇಶವಾಗಿತ್ತು.

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News

ಜಗದಗಲ
ಜಗ ದಗಲ