ಆರೋಗ್ಯಯುತ ಹೃದಯದ ಗುಟ್ಟು ಇಲ್ಲಿದೆ......

Update: 2018-04-19 10:00 GMT

ಹೃದಯವು ಆರೋಗ್ಯಯುತವಾಗಿದ್ದರೆ ಶರೀರವೂ ಆರೋಗ್ಯಯುತ ವಾಗಿರುತ್ತದೆ. ಹೃದಯವು ನಮ್ಮ ಶರೀರದ ಪ್ರಮುಖ ಅಂಗಗಳ ಲ್ಲೊಂದಾಗಿದೆ ಮತ್ತು ಅದು ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಇತರ ಅಂಗಾಂಗಗಳ ಮೇಲೂ ದುಷ್ಪರಿಣಾಮಗಳುಂಟಾಗುತ್ತವೆ.

ನಮಗೆ ಗೊತ್ತಿರುವಂತೆ ಮಾನವ ಶರೀರದಲ್ಲಿ ಹೃದಯ, ಶ್ವಾಸಕೋಶಗಳು,ಮೂತ್ರಪಿಂಡಗಳು,ಯಕೃತ್ತು ಮತ್ತು ಮಿದುಳಿನಂತಹ ಪ್ರಮುಖ ಅಂಗಾಂಗಗಳಿರುತ್ತವೆ. ಇವುಗಳಲ್ಲಿ ಹೃದಯದ ಕಾರ್ಯ ಗಳು ಅತ್ಯಂತ ಪ್ರಮುಖವಾಗಿವೆ. ಏಕೆಂದರೆ ಅದು ರಕ್ತವನ್ನು ಸೋಸುತ್ತದೆ ಮತ್ತು ಆಮ್ಲಜನಕಯುಕ್ತ ರಕ್ತವನ್ನು ರಕ್ತನಾಳಗಳ ಮೂಲಕ ಶರೀರದ ಪ್ರತಿಯೊಂದು ಭಾಗಕ್ಕೂ ಪೂರೈಸುತ್ತದೆ. ಹೀಗಾಗಿ ಅದು ರೋಗಪೀಡಿತವಾದರೆ ಅಥವಾ ಅದಕ್ಕೆ ಹಾನಿಯುಂಟಾದರೆ ಇತರ ಅಂಗಾಂಗಗಳಿಗೆ ರಕ್ತದ ಪೂರೈಕೆಯಲ್ಲಿ ಅಡಚಣೆಯುಂಟಾಗುತ್ತದೆ. ಆದ್ದರಿಂದ ಹೃದಯದ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವುದು ಮಹತ್ವದ್ದಾಗಿದೆ.

► ಸಪೂರ ಶರೀರವಿದ್ದರೂ ಹೃದ್ರೋಗ ಬರುತ್ತದೆ

ಕೊಬ್ಬಿನ ಅತಿಯಾದ ಶೇಕಡಾವಾರು ಪ್ರಮಾಣ ಮತ್ತು ಹೆಚ್ಚಿನ ಕೊಲೆಸ್ಟ್ರಾಲ್‌ನಿಂದಾಗಿ ಅಧಿಕ ದೇಹತೂಕ ಅಥವಾ ಬೊಜ್ಜು ಹೊಂದಿರು ವವರು ಮಾತ್ರ ಹೃದ್ರೋಗಗಳಿಗೆ ಗುರಿಯಾಗುವ ಅಪಾಯವನ್ನು ಎದುರಿಸುತ್ತಿರುತ್ತಾರೆ ಎನ್ನುವುದು ಹೆಚ್ಚಿನವರು ನಂಬಿರುವ ಸಾಮಾನ್ಯ ಮಿಥ್ಯೆಯಾಗಿದೆ. ಆದರೆ ಸಪೂರ ಅಥವಾ ಕೃಶ ಶರೀರವನ್ನು ಹೊಂದಿರುವ ವ್ಯಕ್ತಿಗಳು ಅನಾರೋಗ್ಯಕರ ಜೀವನಶೈಲಿಯನ್ನು ಅನುಸರಿಸುತ್ತಿದ್ದರೆ, ವಂಶವಾಹಿ ದೋಷಗಳಿದ್ದರೆ ಅಥವಾ ಸೌಮ್ಯವಾದ ಹೃದಯದ ತೊಂದರೆಗಳಿದ್ದರೆ ಅಂತಹವರೂ ಹೃದ್ರೋಗಗಳಿಗೆ ಗುರಿಯಾಗುವ ಅಪಾಯವಿದೆ ಎನ್ನುತ್ತಾರೆ ಹೃದ್ರೋಗ ತಜ್ಞರು. ಹೀಗಾಗಿ ಹೃದಯದ ಬಗ್ಗೆ ಸದಾ ಎಚ್ಚರಿಕೆಯಿಂದಿರುವುದು ಒಳ್ಳೆಯದು.

► ಸಕ್ಕರೆ ನಂ.1 ಶತ್ರು

ಶರೀರದಲ್ಲಿ ಕೊಬ್ಬು ಹೆಚ್ಚಾಗಿದ್ದರೆ ಅದು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಇದು ಹೃದ್ರೋಗಳಿಗೆ ಕಾರಣವಾಗುತ್ತದೆ ಎಂದು ಹೆಚ್ಚಿನವರು ಭಾವಿಸಿರುತ್ತಾರೆ. ಆದರೆ ತಜ್ಞರು ಹೇಳುವಂತೆ ಸಕ್ಕರೆಯು ನಮ್ಮ ಹೃದಯಕ್ಕೆ ನಂ.1 ಶತ್ರುವಾಗಿದೆ. ಶರೀರದಲ್ಲಿ ಸಕ್ಕರೆಯ ಪ್ರಮಾಣವು ಅತಿಯಾದರೆ ಅದು ಇನ್ಸುಲಿನ್ ಮಟ್ಟವನ್ನು ಏರುಪೇರು ಗೊಳಿಸುತ್ತದೆ ಮತ್ತು ಕೊಲೆಸ್ಟ್ರಾಲ್‌ನ್ನೂ ಹೆಚ್ಚಿಸುತ್ತದೆ. ತನ್ಮೂಲಕ ಹೃದ್ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ.

► ಮಲ್ಟಿ ವಿಟಾಮಿನ್‌ಗಳು ಹೃದಯವನ್ನು ರಕ್ಷಿಸುವುದಿಲ್ಲ

ಶರೀರಕ್ಕೆ ಉತ್ತಮ ಪೌಷ್ಟಿಕಾಂಶಗಳು ದೊರೆಯಲು ಮತ್ತು ಅದು ಆರೋಗ್ಯಯುತವಾಗಿರಲು ಮಾತ್ರೆಗಳು ಅಥವಾ ಸಿರಪ್ ರೂಪದಲ್ಲಿ ಮಲ್ಟಿ ವಿಟಾಮಿನ್‌ಗಳನ್ನು ಸೇವಿಸುವಂತೆ ಸಲಹೆ ನೀಡಲಾಗುತ್ತದೆ. ಈ ಮಲ್ಟಿ ವಿಟಾಮಿನ್‌ಗಳು ಹೃದ್ರೋಗಗಳು ಸೇರಿದಂತೆ ಕೆಲವು ಕಾಯಿಲೆಗಳನ್ನು ತಡೆಯುತ್ತವೆ ಎಂದು ಕೆಲವರು ನಂಬಿಕೊಂಡಿರುತ್ತಾರೆ. ಇದೂ ಒಂದು ಮಿಥ್ಯೆಯಾಗಿದೆ. ಏಕೆಂದರೆ ಕೆಲವು ಆರೋಗ್ಯಕರ ಜೀವನಶೈಲಿ ಬದಲಾವಣೆಗಳನ್ನು ಮಾಡಿಕೊಳ್ಳದಿದ್ದರೆ ಕೇವಲ ಮಲ್ಟಿ ವಿಟಾಮಿನ್‌ಗಳನ್ನು ಸೇವಿಸುವುದರಿಂದ ಯಾವುದೇ ಲಾಭವಿಲ್ಲ,ಅವು ಹೃದಯಕ್ಕೆ ರಕ್ಷಣೆಯನ್ನೂ ನೀಡುವುದಿಲ್ಲ.

► ಗರ್ಭಾವಸ್ಥೆಯಲ್ಲಿನ ತೊಂದರೆಯೂ ಹೃದ್ರೋಗಗಳಿಗೆ ಕಾರಣ

ಮಹಿಳೆಯರು ಹೃದಯ ಸಮಸ್ಯೆಗಳಿಂದ ಹೃದ್ರೋಗ ತಜ್ಞರನ್ನು ಭೇಟಿಯಾದ ಸಂದರ್ಭದಲ್ಲಿ ಹಿಂದೆ ಗರ್ಭಿಣಿಯಾಗಿದ್ದಾಗ ಅಥವಾ ಹೆರಿಗೆಯ ಸಂದರ್ಭದಲ್ಲಿ ಯಾವುದಾದರೂ ತೊಂದರೆಗಳಿದ್ದವೇ ಎಂದು ತಿಳಿದುಕೊಳ್ಳಲು ವೈದ್ಯರು ಬಯಸುತ್ತಾರೆ. ಏಕೆಂದರೆ ಅಂತಹ ತೊಂದರೆಗಳು ಹೃದ್ರೋಗಕ್ಕೆ ಒಂದು ಕಾರಣವಾಗಿರುವ ಸಾಧ್ಯತೆ ಯಿರುತ್ತದೆ. ಈ ತೊಂದರೆಗಳು ರಕ್ತನಾಳಗಳಲ್ಲಿ ಈಗಾಗಲೇ ಇರುವ ದೋಷಗಳನ್ನು ಸೂಚಿಸುತ್ತವೆ ಮತ್ತು ಬದುಕಿನಲ್ಲಿ ನಂತರ ಹೃದ್ರೋಗ ಗಳಿಗೆ ನಾಂದಿ ಹಾಡಬಹುದು.

► ರೆಡ್ ವೈನ್ ಹೃದ್ರೋಗದಿಂದ ರಕ್ಷಣೆ ನೀಡುವುದಿಲ್ಲ

ಇದು ಹೃದಯಕ್ಕೆ ಸಂಬಂಧಿಸಿದಂತೆ ಇನ್ನೊಂದು ಮಿಥ್ಯೆಯಾಗಿದೆ. ಪ್ರತಿದಿನ ಒಂದೆರಡು ಗ್ಲಾಸ್ ರೆಡ್ ವೈನ್ ಸೇವಿಸಿದರೆ ಹೃದಯವನ್ನು ಆರೋಗ್ಯಯುತವಾಗಿರಿಸಲು ನೆರವಾಗುತ್ತದೆ ಮತ್ತು ಹೃದ್ರೋಗಗಳು ಬರುವುದಿಲ್ಲ ಎನ್ನುವುದು ಹೆಚ್ಚಿನವರ ನಂಬಿಕೆಯಾಗಿದೆ. ರೆಡ್ ವೈನ್ ಹೃದಯಕ್ಕೆ ಒಳ್ಳೆಯದು ಎನ್ನುವುದು ನಿಜವಿರಬಹುದಾದರೂ ಅತಿಯಾದ ಪ್ರಮಾಣದಲ್ಲಿ ಮತ್ತು ಪ್ರತಿದಿನ ಸೇವಿಸುವುದರಿಂದ ಅದು ಹೃದಯಕ್ಕೆ ಕೆಟ್ಟದ್ದನ್ನೇ ಮಾಡುತ್ತದೆ ಮತ್ತು ಮದ್ಯಸೇವನೆಯ ಚಟಕ್ಕೆ ಕಾರಣವಾಗುವುದರ ಜೊತೆ ಹೃದ್ರೋಗಗಳ ಅಪಾಯವನ್ನೂ ಹೆಚ್ಚಿಸುತ್ತದೆ.

► ಧೂಮ್ರಪಾನವನ್ನು ವರ್ಜಿಸಿ

ಧೂಮ್ರಪಾನವು ಹಲವಾರು ರೋಗಗಳಿಗೆ ಕಾರಣವಾಗಿರುವ ಜೊತೆಗೆ ಮಾರಣಾಂತಿಕ ಚಟವೂ ಆಗಿದೆ. ಹೀಗಾಗಿ ಹೃದಯ ತಜ್ಞರು ಸೇರಿದಂತೆ ಎಲ್ಲ ವೈದ್ಯರೂ ಧೂಮ್ರಪಾನದ ಚಟವಿದ್ದರೆ ಅದನ್ನು ಮೊದಲು ಬಿಡುವಂತೆ ಜನರಿಗೆ ಸಲಹೆ ನೀಡುತ್ತಿರುತ್ತಾರೆ. ಹೃದ್ರೋಗಗಳಿಗೆ ಧೂಮ್ರಪಾನವೂ ಒಂದು ಪ್ರಮುಖ ಕಾರಣವಾಗಿದೆ. ಅದು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ರಕ್ತನಾಳಗಳಲ್ಲಿ ತಡೆಗಳನ್ನುಂಟು ಮಾಡುತ್ತದೆ,ಹೀಗೆ ಹೃದಯ ಸ್ತಂಭನಕ್ಕೂ ಕಾರಣ ವಾಗುತ್ತದೆ.

► ಒತ್ತಡದಿಂದ ಪಾರಾಗಿ

ಜನರಲ್ಲಿ, ಆರೋಗ್ಯಕರ ಜೀವನಶೈಲಿಯನ್ನು ಹೊಂದಿರುವವರಲ್ಲಿ ಸಹ ಒತ್ತಡವು ಹೃದ್ರೋಗಗಳಿಗೆ ಪ್ರಮುಖ ಕಾರಣಗಳಲ್ಲೊಂದಾಗಿದೆ. ಹೀಗಾಗಿ ಮಾನಸಿಕ ಒತ್ತಡಗಳಿದ್ದರೆ ಅದರಿಂದ ಪಾರಾಗುವ ಬಗ್ಗೆ ಅರಿತುಕೊಳ್ಳುವಂತೆ ವೈದ್ಯರು ಸೂಚಿಸುತ್ತಾರೆ. ಯೋಗ,ಧ್ಯಾನದಂತಹ ಸರಳ ಕ್ರಮಗಳು ಒತ್ತಡಗಳನ್ನು ನಿವಾರಿಸುತ್ತವೆ. ಒತ್ತಡರಹಿತ ಜೀವನವು ಹೃದ್ರೋಗಗಳಿಂದ ದೂರವಿರಲು ಪರಿಣಾಮಕಾರಿ ಮಾರ್ಗಗಳ ಲ್ಲೊಂದಾಗಿದೆ.

► ವಸಡುಗಳ ಆರೋಗ್ಯ

 ಸುಮ್ಮನೆ ಒಂದು ಜನರಲ್ ಚೆಕಪ್ ಮಾಡಿಸಿಕೊಳ್ಳಲು ಹೃದಯ ತಜ್ಞರನ್ನು ಭೇಟಿಯಾದಾಗಲೂ ಹೆಚ್ಚಿನವರು ನಿಮ್ಮ ಹಲ್ಲುಗಳು ಮತ್ತು ವಸಡುಗಳ ತಪಾಸಣೆ ನಡೆಸುತ್ತಾರೆ. ವಸಡುಗಳಲ್ಲಿ ಹೆಚ್ಚಿನ ಉರಿಯೂತವಿದ್ದರೆ ಮತ್ತು ರಕ್ತಸ್ರಾವವಾಗುತ್ತಿದ್ದರೆ ಅವುಗಳಲ್ಲಿಯ ರಕ್ತನಾಳಗಳು ನೇರವಾಗಿ ಹೃದಯದ ಸಂಪರ್ಕ ಹೊಂದಿರುವುದರಿಂದ ಹೃದ್ರೋಗಕ್ಕೆ ಒಂದು ಕಾರಣವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News