ಜೀವಿಗಳಿರುವ ಗ್ರಹಗಳ ಪತ್ತೆಗೆ ‘ನಾಸಾ’ ಉಪಗ್ರಹ ಉಡಾವಣೆ

Update: 2018-04-19 17:22 GMT

ವಾಶಿಂಗ್ಟನ್, ಎ. 19: ನಮ್ಮ ಸೌರವ್ಯೂಹದಿಂದ ಹೊರಗಿರುವ ನೂತನ ಜಗತ್ತುಗಳನ್ನು ಅನ್ವೇಷಿಸುವ ಹಾಗೂ ಜೀವಿಗಳನ್ನು ಪೋಷಿಸುವ ಸಾಮರ್ಥ್ಯವುಳ್ಳ ಜಗತ್ತುಗಳನ್ನು ಗುರುತಿಸುವ ಉದ್ದೇಶದ ಉಪಗ್ರಹವೊಂದನ್ನು ಅಮೆರಿಕದ ಖಗೋಳ ಸಂಸ್ಥೆ ‘ನಾಸಾ’ ಗುರುವಾರ ಯಶಸ್ವಿಯಾಗಿ ಉಡಾಯಿಸಿದೆ.

‘ಟ್ರಾನ್ಸಿಟಿಂಗ್ ಎಕ್ಸೋಪ್ಲಾನೆಟ್ ಸರ್ವೇ ಸ್ಯಾಟಲೈಟ್ (ಟಿಇಎಸ್‌ಎಸ್)’ನ್ನು ಫ್ಲೋರಿಡದ ಕೇಪ್ ಕ್ಯಾನವರಲ್ ವಾಯುಪಡೆ ನಿಲ್ದಾಣದಿಂದ ಸ್ಪೇಸ್ ಎಕ್ಸ್ ಫಾಲ್ಕನ್ 9 ರಾಕೆಟ್ ಮೂಲಕ ಭಾರತೀಯ ಕಾಲಮಾನ ಗುರುವಾರ ಮುಂಜಾನೆ 4:21ಕ್ಕೆ ಉಡಾಯಿಸಲಾಯಿತು.

ಈ ಉಪಗ್ರಹವು ನಮ್ಮ ಸೌರವ್ಯೂಹದ ಸಮೀಪದಲ್ಲಿರುವ ನಕ್ಷತ್ರಗಳಿಗೆ ಸುತ್ತು ಬರುತ್ತಿರುವ ಸಾವಿರಾರು ನೂತನ ಬಾಹ್ಯ ಗ್ರಹಗಳನ್ನು ಪತ್ತೆಹಚ್ಚಲಿದೆ.

‘‘ನಮಗೆ ಇನ್ನೂ ಕಲ್ಪಿಸಲು ಸಾಧ್ಯವಾಗದ ಹಾಗೂ ಜೀವಿಗಳ ವಾಸಕ್ಕೆ ಪೂರಕವಾದ ಜಗತ್ತುಗಳನ್ನು ಸಂಶೋಧಿಸಲು ಈ ಉಪಗ್ರಹ ಹೊರಟಿದೆ. ನೂತನ ಗ್ರಹಗಳನ್ನು ಪತ್ತೆಹಚ್ಚುವ ಸಾಧ್ಯತೆಯಿಂದ ನಾವು ರೋಮಾಂಚಿತರಾಗಿದ್ದೇವೆ’’ ಎಂದು ವಾಶಿಂಗ್ಟನ್‌ನಲ್ಲಿರುವ ನಾಸಾದ ವಿಜ್ಞಾನ ಮಿಶನ್ ನಿರ್ದೇಶನಾಲಯದ ಸಹಾಯಕ ಆಡಳಿತಾಧಿಕಾರಿ ಥಾಮಸ್ ಝುರ್ಬುಚನ್ ಹೇಳಿದರು.

‘‘ಹೊಸದಾಗಿ ಪತ್ತೆಯಾಗುವ ಗ್ರಹಗಳನ್ನು ವಿವರವಾಗಿ ಅಧ್ಯಯನ ಮಾಡಲು ನಮ್ಮಲ್ಲಿ ಜೇಮ್ಸ್ ವೆಬ್ ಬಾಹ್ಯಾಕಾಶ ಟೆಲಿಸ್ಕೋಪ್ ಇದೆ. ಹಾಗಾಗಿ, ಈ ಅಗಾಧ ವಿಶ್ವದಲ್ಲಿ ಇರುವ ಜೀವಿಗಳು ನಾವು ಮಾತ್ರವೇ ಎನ್ನುವುದನ್ನು ತಿಳಿಯುವ ದಿನಗಳು ಸಮೀಪಿಸುತ್ತಿವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News