ಯೋಜನೆಗಳ ಸವಲತ್ತು ಒದಗಿಸಲು ಆಧಾರ್ ಉತ್ತಮ ಮಾದರಿ ಎಂಬುದು ಖಚಿತವಾಗಿಲ್ಲ: ಸುಪ್ರೀಂ

Update: 2018-04-19 17:53 GMT

ಹೊಸದಿಲ್ಲಿ, ಎ.19: ಆಧಾರ್ ಪ್ರಾಧಿಕಾರದ ಮೂಲಕ ವ್ಯಕ್ತಿಗಳನ್ನು ಮುಖಾಮುಖಿ ತರುವ ಪ್ರಕ್ರಿಯೆ ಅತ್ಯುತ್ತಮ ಮಾದರಿಯಾಗಿದೆಯೇ ಎಂಬ ಬಗ್ಗೆ ತನಗೆ ಖಚಿತತೆಯಿಲ್ಲ . ಸರಕಾರ ಜನರನ್ನು ಸಂಪರ್ಕಿಸಿ ಸಮಾಜಕಲ್ಯಾಣ ಯೋಜನೆಗಳನ್ನು ಒದಗಿಸಬೇಕು ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಆಧಾರ್ ಕುರಿತು ಸಲ್ಲಿಸಿರುವ ಹಲವು ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ಸದಸ್ಯರ ನ್ಯಾಯಪೀಠದ ಎದುರು ಹೇಳಿಕೆ ನೀಡಿದ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ) ಪರ ವಕೀಲರು , ರಾಷ್ಟ್ರೀಯ ಗುರುತುಪತ್ರವಾಗಿರುವ ಆಧಾರ್ ಕಾರ್ಡ್ ಸೇವೆಯನ್ನು ಒದಗಿಸುವವರು ಹಾಗೂ ಪ್ರಜೆಗಳನ್ನು ಮುಖಾಮುಖಿಯನ್ನಾಗಿಸುತ್ತದೆ ಎಂದು ಹೇಳಿದರು.

  ಆದರೆ ಇದು ಅತ್ಯುತ್ತಮ ಮಾದರಿಯಾಗಿದೆಯೇ ಎಂಬುದು ತಮಗೆ ಖಚಿತವಾಗಿಲ್ಲ . ಪ್ರಜೆಗಳು ಬೇಡುವವರಾಗಿರಬಾರದು. ಸರಕಾರವೇ ಅವರ ಬಳಿಗೆ ಹೋಗಿ ಅವರಿಗೆ ಸವಲತ್ತುಗಳನ್ನು ನೀಡಬೇಕು ಎಂದು ನ್ಯಾಯಪೀಠ ತಿಳಿಸಿದೆ. ಆಧಾರ್‌ಕಾರ್ಡ್ ಗುರುತುಪತ್ತೆಗೆ ಮಾತ್ರ ಎಂದು ಯುಐಡಿಎಐ ಹೇಳುತ್ತಿದೆ. ಆದರೆ ಇದನ್ನು ಯಾರೂ ನಿರಾಕರಿಸುವಂತಿಲ್ಲ ಎಂಬ ಷರತ್ತಿಗೆ ವಿರೋಧ ವ್ಯಕ್ತವಾಗುತ್ತಿದೆ ಎಂದು ನ್ಯಾಯಪೀಠ ತಿಳಿಸಿತು. ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ, ಎ.ಎಂ.ಖಾನ್ವಿಲ್ಕರ್, ಡಿ.ವೈ.ಚಂದ್ರಚೂಡ್ ಮತ್ತು ಅಶೋಕ್ ಭೂಷಣ್ ನ್ಯಾಯಪೀಠದ ಇತರ ಸದಸ್ಯರಾಗಿದ್ದಾರೆ.

ಜನತೆ ಬಡತನದಿಂದ ಮುಕ್ತಗೊಳಿಸಲು ಅಭಿವೃದ್ಧಿ ಅಗತ್ಯ ಎಂದು ಯುಐಡಿಎಐ ಪರ ವಕೀಲರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಜನತೆಯನ್ನು ಬಡತನದಿಂದ ಮುಕ್ತಿಗೊಳಿಸುವ ಸಂದರ್ಭ ಖಾಸಗಿತನದ ಹಕ್ಕನ್ನು ನಿರ್ಲಕ್ಷಿಸುವಂತಿಲ್ಲ ಎಂದು ಹೇಳಿತು. ಆಧಾರ್ ಕಾಯ್ದೆಯ ಸೆಕ್ಷನ್ 7ರಡಿ ದೇಶದ ಬಹಳಷ್ಟು ಜನತೆಯ ಮಾನವ ಹಕ್ಕುಗಳನ್ನು ಸಂರಕ್ಷಿಸಲಾಗಿದೆ. ಓರ್ವ ವ್ಯಕ್ತಿ ನಡೆಸುವ ಎಲ್ಲಾ ವ್ಯವಹಾರಗಳಿಗೂ ಬಯೊಮೆಟ್ರಿಕ್ ಗುರುತುಪತ್ತೆ ಪ್ರಕ್ರಿಯೆ ಅನ್ವಯಿಸಿದರೆ , ಮಾಹಿತಿಯ ಕಣಜವೇ ರೂಪುಗೊಂಡು ಆಗ ದತ್ತಾಂಶಗಳ ಸಂಗ್ರಹಕ್ಕೆ ಒಂದು ಪ್ರತ್ಯೇಕ ವ್ಯವಸ್ಥೆ ಮಾಡುವ ಅಗತ್ಯ ಬರಬಹುದು ಎಂದು ಇದಕ್ಕೂ ಮುನ್ನ ನ್ಯಾಯಪೀಠ ಅಭಿಪ್ರಾಯಪಟ್ಟಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News