ಜಾತಿಯ ಪ್ರಭಾವ ಬೀರಲೆತ್ನಿಸಿದ ಆರೋಪಿಗಳು

Update: 2018-04-19 18:31 GMT

ಬ್ರಾಹ್ಮಣಳಾಗಿ ಬ್ರಾಹ್ಮಣರ ವಿರುದ್ಧವೇ ತನಿಖೆ ನಡೆಸುತ್ತೀಯಾ? ಎಂದದ್ದಕ್ಕೆ ಯೂನಿಫಾರ್ಮ್ ಮಾತ್ರ ತನ್ನ ಧರ್ಮ ಎಂದುತ್ತರಿಸಿದ್ದ ಶ್ವೇತಾಂಬರಿ ಶರ್ಮ

ಮಾನಸಿಕವಾಗಿ ಸವಾಲಿನ ಕೆಲಸ

ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ವಯಸ್ಸಿನಷ್ಟೇ ಪ್ರಾಯದ ಮಗ ತನಗಿದ್ದಾನೆ. ಈ ಮುಗ್ಧ ಬಾಲಕಿಯ ಮೇಲೆ ನಡೆದ ಅಮಾನುಷ ಕೃತ್ಯದ ವಿವರ ಕಲೆ ಹಾಕುವುದು ಮಾನಸಿಕವಾಗಿ ಸವಾಲಿನ ಕೆಲಸವಾಗಿತ್ತು. ಪತಿಯ ಕಡೆಗೂ ಸರಿಯಾಗಿ ಗಮನ ಹರಿಸಲಾಗದೆ, ಕೌಟುಂಬಿಕ ನಿರ್ವಹಣೆಯ ಹೊಣೆಗಾರಿಕೆ ಸಂಪೂರ್ಣ ಗಮನ ಹರಿಸಲಾಗದೆ ರಾತ್ರಿಯಿಡೀ ನಿದ್ದೆಗೆಟ್ಟು ಕೆಲಸ ಮಾಡಬೇಕಾಯಿತು. ಕಡೆಗೂ ನಮ್ಮ ಕಾರ್ಯದಲ್ಲಿ ಯಶಸ್ವಿಯಾಗಿದ್ದೇವೆ. ದುಷ್ಕರ್ಮಿಗಳ ಘೋರ ಕೃತ್ಯವನ್ನು ಪತ್ತೆಹಚ್ಚಿ ಅವರಿಗೆ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಒಂದಿಷ್ಟು ಕಾರ್ಯ ಮಾಡಿದ್ದೇವೆ ಎಂಬ ಸಂತೃಪ್ತಿ ಇದೆ ಎಂದು ಶ್ವೇತಾಂಬರಿ ಹೇಳಿದ್ದಾರೆ.

ಹೀರಾ ನಗರದ ರಸಾನಾ ಎಂಬ ಗ್ರಾಮದ ಬಾಲಕಿ ಜನವರಿ 10ರಂದು ನಾಪತ್ತೆ ಯಾಗಿದ್ದಳು. ಆಕೆಯನ್ನು ಪತ್ತೆಹಚ್ಚಲು ಪೊಲೀಸರು ವಿಫಲರಾಗಿದ್ದಾರೆಂದು ಜಮ್ಮು ಕಾಶ್ಮೀರ ವಿಧಾನಸಭೆಯ ಅಧಿವೇಶನದಲ್ಲಿ ಭಾರೀ ವಾಗ್ವಾದ ನಡೆದು ತೀವ್ರ ಗದ್ದಲಕ್ಕೆ ಕಾರಣವಾಗಿತ್ತು. ವಾರದ ಬಳಿಕ ಆಕೆಯ ಶವ ಕಥುವಾ ಜಿಲ್ಲೆಯ ಅರಣ್ಯದಲ್ಲಿ ಪತ್ತೆಯಾಗಿತ್ತು. ಜನವರಿ 23ರಂದು ಪ್ರಕರಣದ ತನಿಖೆಯನ್ನು ಸರಕಾರ ವಿಶೇಷ ನಿಖಾ ತಂಡ (ಎಸ್‌ಐಟಿ)ಕ್ಕೆ ವಹಿಸಿತ್ತು.

ಕಥುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ)ದ ಏಕೈಕ ಮಹಿಳಾ ಸದಸ್ಯೆಯಾಗಿರುವ ಶ್ವೇತಾಂಬರಿ ಶರ್ಮ ಹಲವು ಅಡ್ಡಿ ಆತಂಕಗಳನ್ನು ಎದುರಿಸಿಯೂ ತಾನು ಹೇಗೆ ಕರ್ತವ್ಯ ನಿಭಾಯಿಸಿದೆ ಎಂಬುದನ್ನು ವಿವರಿಸಿದ್ದಾರೆ.
 ‘‘ಆರೋಪಿಗಳು, ಅವರ ಸಂಬಂಧಿಕರು, ಆರೋಪಿಗಳ ಬಗ್ಗೆ ಅನುಕಂಪ ಹೊಂದಿರುವವರು(ಇವರಲ್ಲಿ ವಕೀಲರ ತಂಡವೂ ಸೇರಿದೆ) ಮುಂತಾದವರು ನಮ್ಮ ಕಾರ್ಯಕ್ಕೆ ಅಡ್ಡಿತರಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ನಡೆಸಿದರು. ನಮ್ಮನ್ನು ಲೇವಡಿ ಮಾಡಿದರು, ನಮಗೆ ಮಾನಸಿಕ ಪೀಡನೆ ನೀಡಿದರು. ಆದರೆ ನಾವು ನಮ್ಮ ಪ್ರಯತ್ನದಿಂದ ಹಿಂದೆ ಸರಿಯಲಿಲ್ಲ’’ ಎಂದು ಜಮ್ಮು ಕಾಶ್ಮೀರ ಪೊಲೀಸ್‌ನ ಕ್ರೈಂಬ್ರಾಂಚ್ ವಿಭಾಗದ ಡಿಎಸ್ಪಿ ಶ್ವೇತಾಂಬರಿ ಶರ್ಮ ತಿಳಿಸಿದ್ದಾರೆ.

 ‘‘ಬಹುತೇಕ ಆರೋಪಿಗಳು ಬ್ರಾಹ್ಮಣರಾಗಿದ್ದು, ನಾನು ಕೂಡಾ ಬ್ರಾಹ್ಮಣ ಜಾತಿಯವಳಾಗಿರುವ ಕಾರಣ ಜಾತಿಯ ಹೆಸರಿನಲ್ಲಿ ನನ್ನ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ್ದರು. ಇಬ್ಬರೂ ಬ್ರಾಹ್ಮಣರಾಗಿರುವ ಕಾರಣ ಮುಸ್ಲಿಂ ಬಾಲಕಿಯ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ತಮ್ಮ ದೋಷಿತ್ವ ಸಾಧಿಸಲು ಪ್ರಯತ್ನಿಸಬಾರದು ಎಂಬುದು ಅವರ ಆಶಯವಾಗಿತ್ತು. ಆದರೆ ನನಗೆ ಯಾವುದೇ ಜಾತಿಯಿಲ್ಲ. ನಾನು ಜಮ್ಮು-ಕಾಶ್ಮೀರ ಪೊಲೀಸ್ ಇಲಾಖೆಯ ಅಧಿಕಾರಿ. ಯೂನಿಫಾರ್ಮ್ ಮಾತ್ರ ನನ್ನ ಧರ್ಮವಾಗಿದೆ’’ ಎಂದು ಖಡಕ್ ಉತ್ತರ ನೀಡಿದ್ದಾಗಿ ಶ್ವೇತಾಂಬರಿ ಶರ್ಮ ತಿಳಿಸಿದ್ದಾರೆ. ‘‘ಹೀರಾನಗರ ಪೊಲೀಸ್ ಠಾಣೆಯ ಸಿಬ್ಬಂದಿಗೂ ಲಂಚ ನೀಡಿ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿರುವುದು ನಮಗೆ ತಿಳಿದು ಬಂದಾಗ ಒಮ್ಮೆ ನಿರಾಶೆಯ ಮೋಡ ಕವಿದಿತ್ತು. ಈ ಸಿಬ್ಬಂದಿ ಸಂತ್ರಸ್ತ ಬಾಲಕಿಯ ಬಟ್ಟೆಗಳನ್ನು ತೊಳೆಯುವ ಮೂಲಕ ಸಾಕ್ಷಿ ನಾಶಕ್ಕೆ ಪ್ರಯತ್ನಿಸಿದ್ದರು. ಆದರೂ ನಾವು ಪವಿತ್ರ ‘ನವರಾತ್ರಿಯ’ ಸಂದರ್ಭ ಈ ಅಮಾನುಷ ಕೃತ್ಯದ ನಿಗೂಢತೆಯನ್ನು ಬಯಲಿಗೆಳೆಯಲು ದೈವಿಕ ಶಕ್ತಿಯೊಂದರ ಸಹಾಯ ಕಾರಣ ಎಂದು ನಾನು ನಂಬುತ್ತೇನೆ. ದುರ್ಗಾ ಮಾತೆಯಲ್ಲಿ ನನಗೆ ನಂಬಿಕೆಯಿದೆ. ಮಾತೆಯ ಆಶೀರ್ವಾದದಿಂದ ನಮ್ಮ ಕಾರ್ಯದಲ್ಲಿ ಯಶಸ್ವಿಯಾಗಿದ್ದೇವೆ’’ ಎಂದು ಶರ್ಮ ತಿಳಿಸಿದ್ದಾರೆ.
ಜನವರಿ 23ರಂದು ಜಮ್ಮು ಕಾಶ್ಮೀರ ಸರಕಾರ ಪ್ರಕರಣದ ತನಿಖೆಯನ್ನು ಕ್ರೈಂಬ್ರಾಂಚ್‌ಗೆ ಹಸ್ತಾಂತರಿಸಿತ್ತು. ವಿಶೇಷ ತನಿಖಾ ತಂಡ ಐಜಿಪಿ ಅಲೋಕ್ ಪುರಿ ಹಾಗೂ ಸೈಯದ್ ಅಹ್ಫದುಲ್ ಮುಜ್ತಬಾ, ಎಸ್‌ಎಸ್‌ಪಿ ರಮೇಶ್ ಕುಮಾರ್ ಜಲ್ಲ, ಎಡಿಷನಲ್ ಎಸ್ಪಿ ನವೀದ್ ಪೀರ್‌ಝಾದ ಹಾಗೂ ಸದಸ್ಯರಾಗಿ ಡೆಪ್ಯುಟಿ ಎಸ್ಪಿ ಶ್ವೇತಾಂಬರಿ, ಸಬ್‌ಇನ್‌ಸ್ಪೆಕ್ಟರ್ ಇರ್ಫಾನ್ ವಾನಿ, ಇನ್‌ಸ್ಪೆಕ್ಟರ್ ಕೆ.ಕೆ.ಗುಪ್ತಾ ಹಾಗೂ ಅಸಿಸ್ಟೆಂಟ್ ಸಬ್‌ಇನ್ಸ್‌ಪೆಕ್ಟರ್ ಾರಿಖ್ ಅಹ್ಮದ್‌ರನ್ನು ಒಳಗೊಂಡಿತ್ತು.
ಮಾತಾ ವೈಷ್ಣೋದೇವಿ ವಿವಿ ಹಾಗೂ ಜಮ್ಮು ವಿವಿಗೆ ಸಂಯೋಜಿತವಾಗಿರುವ ಇತರ ಕೆಲವು ಕಾಲೇಜುಗಳಲ್ಲಿ 7 ವರ್ಷ ಮ್ಯಾನೇಜ್‌ಮೆಂಟ್ ವಿಷಯದಲ್ಲಿ ಬೋಧಕರಾಗಿ ಕಾರ್ಯ ನಿರ್ವಹಿಸಿದ್ದರು ಶ್ವೇತಾಂಬರಿ. 2012ರಲ್ಲಿ ಪೊಲೀಸ್ ಸೇವೆಗೆ ಸೇರ್ಪಡೆಗೊಂಡಾಗ ಅವರು ಮ್ಯಾನೇಜ್‌ಮೆಂಟ್‌ನಲ್ಲಿ ಪಿಎಚ್‌ಡಿ ಮಾಡುತ್ತಿದ್ದರು.

 ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕೆಂಬ ಕುಟುಂಬದ ಒತ್ತಾಯದ ಮಧ್ಯೆಯೇ ಎಪ್ರಿಲ್ 9ರಂದು ಎಸ್‌ಐಟಿ ಎರಡು ಚಾರ್ಜ್‌ಶೀಟ್‌ಗಳನ್ನು ದಾಖಲಿಸಿತ್ತು. ಇದರಲ್ಲಿ ಎಂಟು ಆರೋಪಿಗಳ ಮೇಲೆ ಅತ್ಯಾಚಾರ, ಕೊಲೆ, ಅಪಹರಣ, ಕ್ರಿಮಿನಲ್ ಪಿತೂರಿ ಹಾಗೂ ಸಾಕ್ಷನಾಶದ ಆರೋಪವಿತ್ತು. ಆರೋಪಿಗಳಲ್ಲಿ ಒಬ್ಬ ಯುವಕನನ್ನು ಬಾಲಾಪರಾಧಿ ಎಂದು ತಿಳಿಸಲಾಗಿತ್ತು. ಈತ ಎರಡು ಬಾರಿ ಅತ್ಯಾಚಾರ ನಡೆಸಿದ್ದ ಹಾಗೂ ಕ್ರೂರವಾಗಿ ಆಕೆಯನ್ನು ಕೊಲೆ ಮಾಡಿದ್ದ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿತ್ತು. ಆದರೆ ಶಾಲಾ ಪ್ರವೇಶದ ದಾಖಲಾತಿಯಲ್ಲಿ ಈತ ಬಾಲಾಪರಾಧಿಯಲ್ಲ, ವಯಸ್ಕ ಎಂದು ತಿಳಿದುಬಂದಿದೆ. ಈತನ ವಯಸ್ಸು 19ರಿಂದ 20 ವರ್ಷ ಎಂದು ಜಮ್ಮು ಕಾಶ್ಮೀರದ ಸರಕಾರಿ ವೈದ್ಯಕೀಯ ಕಾಲೇಜಿನ ವೈದ್ಯರು ಪ್ರಮಾಣೀಕರಿಸಿದ್ದಾರೆ. ದೇವಸ್ಥಾನದೊಳಗೆ ಕಾಮಾಂಧರಿಂದ ಅಮಾನುಷವಾಗಿ ಅತ್ಯಾಚಾರಕ್ಕೆ ಒಳಗಾಗಿದ್ದ ಬಾಲಕಿಯ ಬಗ್ಗೆ ಸಾಕ್ಷಗಳನ್ನು ಪತ್ತೆಹಚ್ಚುವುದು ತುಂಬಾ ಸವಾಲಿನ ಕೆಲಸವಾಗಿತ್ತು ಎನ್ನುತ್ತಾರೆ ಶ್ವೇತಾಂಬರಿ ಶರ್ಮ. ಶ್ವೇತಾಂಬರಿ ದೇವಸ್ಥಾನದೊಳಗೆ ಪ್ರವೇಶಿಸಿ ಅಲ್ಲಿ ದೊರೆತಿದ್ದ ಬಾಲಕಿಯ ಕೂದಲನ್ನು ಸಂಗ್ರಹಿಸಿದ್ದರು. ಈ ಕೂದಲು ಅತ್ಯಾಚಾರಕ್ಕೆ ಒಳಗಾದ ಬಾಲಕಿಯದ್ದೇ ಎಂದು ವಿಧಿವಿಜ್ಞಾನ ಪ್ರಯೋಗಾಲಯದಿಂದ ದೃಢಪಟ್ಟಿದೆ.
‘‘ಜಾಮೀನು ಅರ್ಜಿಯ ವಿಚಾರಣೆ ವೇಳೆ ಆರೋಪಿಗಳ ಪರ ವಕೀಲರ ತಂಡದ ವರ್ತನೆ ನನಗೆ ಅಚ್ಚರಿ ತಂದಿತು. ವಾದ ಮಂಡಿಸುವ ಬದಲು ಸುಮಾರು 20 ಮಂದಿ ವಕೀಲರು ಪ್ರತಿಭಟನೆಗೆ ಮುಂದಾದರು. ಆರೋಪಿಗಳ ಹೆಸರನ್ನು ಬಹಿರಂಗಪಡಿಸಿದ್ದೇವೆ ಎಂದು ಆಕ್ಷೇಪಿಸಿದರು. ಈ ಮಧ್ಯೆ ಪ್ರಕರಣದ ಕುರಿತು ಎಫ್‌ಐಆರ್ ದಾಖಲಿಸುವಂತೆ ಠಾಣಾಧಿಕಾರಿಗೆ ಸೂಚಿಸಿದರೂ ಅವರು ಕೇಳಲಿಲ್ಲ. ಬಳಿಕ ಜಿಲ್ಲಾ ಮ್ಯಾಜಿಸ್ಟ್ರೇಟ್‌ರನ್ನು ಸಂಪರ್ಕಿಸಬೇಕಾಯಿತು’’ ಎಂದು ಶ್ವೇತಾಂಬರಿ ತಿಳಿಸಿದ್ದಾರೆ.
ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆಯಿದೆ. ಹಲವು ಪುರಾವೆಗಳನ್ನು ಸಂಗ್ರಹಿಸಿ ಒದಗಿಸಿದ್ದೇವೆ. ಸಂತ್ರಸ್ತರಿಗೆ ನ್ಯಾಯ ದೊರಕಲಿದೆ ಎಂಬ ನಂಬಿಕೆಯಿದೆ ಎಂದು ಶ್ವೇತಾಂಬರಿ ಹೇಳಿದ್ದಾರೆ.

ಕೃಪೆ: thequint.com

Writer - ಅಹಮದ್ ಅಲಿ ಫಯಾಝ್

contributor

Editor - ಅಹಮದ್ ಅಲಿ ಫಯಾಝ್

contributor

Similar News

ಜಗದಗಲ
ಜಗ ದಗಲ