ಮುಖ್ಯನ್ಯಾಯಮೂರ್ತಿ ಪದಚ್ಯುತಿಗೆ ವಿಪಕ್ಷಗಳ ನಿಲುವಳಿ ಮಂಡನೆ?

Update: 2018-04-20 03:46 GMT

ಹೊಸದಿಲ್ಲಿ, ಎ.20: ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಪದಚ್ಯುತಿಗೆ ರಾಜ್ಯಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಲು ಕಾಂಗ್ರೆಸ್ ಹಾಗೂ ಇತರ ನಾಲ್ಕು ವಿರೋಧ ಪಕ್ಷಗಳು ಸಿದ್ಧತೆ ನಡೆಸಿವೆ.

ಕೆಲ ವಾರಗಳಿಂದ ತೆರೆಮರೆಯ ಹಿಂದೆ ನಡೆಯುತ್ತಿದ್ದ ಸಿದ್ಧತೆಗಳು, ಲೋಯಾ ಸಾವಿನ ಕುರಿತಂತೆ ನೀಡಿರುವ ತೀರ್ಪಿನ ಬಳಿಕ ಇನ್ನಷ್ಟು ತೀವ್ರವಾಗಿವೆ. ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಗುಲಾಂ ನಬಿ ಆಝಾದ್ ಶುಕ್ರವಾರ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಭೇಟಿಗೆ ಅವಕಾಶ ಕೋರಿದ್ದು, ಈ ಸಂಬಂಧ ಪ್ರಸ್ತಾವ ಸಲ್ಲಿಸುವ ಸಾಧ್ಯತೆ ಇದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವಿರೋಧ ಪಕ್ಷಗಳ ಮುಖಂಡರು ಸುಳಿವು ನೀಡಿದ್ದಾರೆ. ಪ್ರಸ್ತಾವ ಮಂಡನೆಗೆ ಅವಕಾಶ ಕೋರಿ ಈಗಾಗಲೇ 67 ರಾಜ್ಯಸಭಾ ಸದಸ್ಯರ ಸಹಿ ಸಂಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ.

ಸಿಬಿಐ ನ್ಯಾಯಾಧೀಶ ಬಿ.ಎಚ್.ಲೋಯಾ ಸಾವಿನ ಬಗ್ಗೆ ಇನ್ನು ತನಿಖೆ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ನೀಡಿರುವುದು ವಿರೋಧ ಪಕ್ಷಗಳನ್ನು ಕೆರಳಿಸಿದೆ. ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದ ಬಗ್ಗೆ ಲೋಯಾ ವಿಚಾರಣೆ ನಡೆಸುತ್ತಿದ್ದರು. ಪ್ರಕರಣದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೂಡಾ ಆರೋಪಿಯಾಗಿದ್ದರು. ಲೋಯಾ 2014ರ ಡಿಸೆಂಬರ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಹೇಳಲಾಗಿದೆ. ಇದಾಗ ಕೆಲವೇ ದಿನಗಳಲ್ಲಿ ಶಾ ಅವರನ್ನು ಪ್ರಕರಣದಿಂದ ಆರೋಪಮುಕ್ತಗೊಳಿಸಲಾಗಿತ್ತು. ಈ ನಿಗೂಢ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂಬ ಆಗ್ರಹ ದೇಶಾದ್ಯಂತ ವ್ಯಕ್ತವಾಗಿತ್ತು. ಆದರೆ ಯಾವುದೇ ತನಿಖೆ ನಡೆಸುವ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿರುವುದನ್ನು ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳು, "ಭಾರತದ ನ್ಯಾಯಾಂಗ ಇತಿಹಾಸದ ಅತ್ಯಂತ ಕರಾಳ ದಿನ" ಎಂದು ಬಣ್ಣಿಸಿವೆ.

ಆಝಾದ್ ಶುಕ್ರವಾರ ಬೆಳಗ್ಗೆ 11 ಗಂಟೆಗೆ ವಿರೋಧ ಪಕ್ಷಗಳ ಸಭೆ ಕರೆದಿದ್ದು, ಪದಚ್ಯುತಿಗೆ ನಿಲುವಳಿ ಸೂಚನೆ ಮಂಡಿಸುವ ಪ್ರಸ್ತಾವ ಇದರಲ್ಲಿ ಅಂತಿಮಗೊಳ್ಳಲಿದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News