ಹನ್ನೊಂದರ ಹರೆಯದ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿಯ ಬಂಧನ

Update: 2018-04-20 15:07 GMT
ಸಾಂದರ್ಭಿಕ ಚಿತ್ರ

ಜೈಪುರ, ಎ.20: ಸೂರತ್‌ನಲ್ಲಿ ಹನ್ನೊಂದರ ಹರೆಯದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಯನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ. ಆರೋಪಿ ರಾಮ ಸಹಾಯ್ ಗುಜ್ಜರ್‌ನನ್ನು ಆತನ ಮೊಬೈಲ್ ಫೋನ್ ದಾಖಲೆಯ ಆಧಾರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ರಾಜಸ್ಥಾನದ ಸವಾಯಿ ಮಾಧೋಪುರದ ನಿವಾಸಿಯಾಗಿರುವ ಕಾರಣ ಗುಜರಾತ್ ಪೊಲೀಸರು ರಾಜಸ್ಥಾನ ಪೊಲೀಸರ ನೆರವಿನೊಂದಿಗೆ ಆತನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶದಲ್ಲಿ ಮಕ್ಕಳ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ಸರಣಿಯಲ್ಲಿ ಸೂರತ್ ಪ್ರಕರಣವೂ ಒಂದಾಗಿದೆ. 9-11ರ ಆಸುಪಾಸಿನ ವಯಸ್ಸಿನ ಮಗುವಿನ ಗುರುತನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಮಗುವಿನ ಫೊಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ನಂತರ ಆಂಧ್ರಪ್ರದೇಶದ ದಂಪತಿ ಪೊಲೀಸರನ್ನು ಸಂಪರ್ಕಿಸಿದ್ದು ಆ ಫೊಟೊದಲ್ಲಿರುವುದು ಕಳೆದ ಅಕ್ಟೋಬರ್‌ನಲ್ಲಿ ನಾಪತ್ತೆಯಾದ ತಮ್ಮ ಪುತ್ರಿ ಎಂದು ತಿಳಿಸಿದ್ದಾರೆ. ಆದರೆ ಸಿಕ್ಕ ಮಗುವಿನ ಮೃತದೇಹಕ್ಕೂ ಮತ್ತು ದಂಪತಿ ತಿಳಿಸಿರುವ ಗುರುತಿಗೂ ಕೆಲವೊಂದು ವ್ಯತ್ಯಾಸಗಳಿವೆ. ಮುಖ್ಯವಾಗಿ ಬೆರಳಚ್ಚು, ಎತ್ತರ ಮತ್ತು ಮಚ್ಚೆಗಳಲ್ಲಿ ವ್ಯತ್ಯಾಸವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜನಸಂಚಾರವಿಲ್ಲದ ಪ್ರದೇಶದಲ್ಲಿ ಸಿಕ್ಕ ಮಗುವಿನ ಮೃತದೇಹದ ಮೇಲೆ 80ಕ್ಕೂ ಅಧಿಕ ಗಾಯದ ಗುರುತುಗಳಿದ್ದವು. ಆಕೆಯನ್ನು ಹಲವು ದಿನಗಳ ಕಾಲ ಬಂಧನದಲ್ಲಿಡಲಾಗಿತ್ತು, ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು ಮತ್ತು ಹತ್ಯೆಗೂ ಮುನ್ನ ಹಿಂಸಿಸಲಾಗಿತ್ತು ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತಿಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News