ನೋಟು ಅಮಾನ್ಯ ನಂತರ ಅತೀಹೆಚ್ಚು ನಕಲಿ ನೋಟುಗಳು, ಸಂಶಯಾಸ್ಪದ ವ್ಯವಹಾರಗಳು: ಎಫ್‌ಐಯು ವರದಿ

Update: 2018-04-20 15:57 GMT

ಹೊಸದಿಲ್ಲಿ, ಎ.20: ನೋಟು ಅಮಾನ್ಯದ ನಂತರ ದೇಶದ ಬ್ಯಾಂಕ್‌ಗಳು ಅತೀಹೆಚ್ಚು ನಕಲಿ ನೋಟುಗಳನ್ನು ಪಡೆದುಕೊಂಡಿವೆ ಮತ್ತು ಸಂಶಯಾಸ್ಪದ ವ್ಯವಹಾರಗಳಲ್ಲಿ ಶೇ. 480ಕ್ಕೂ ಅಧಿಕ ಏರಿಕೆಯಾಗಿದೆ ಎಂದು 2016ರ ನೋಟು ಅಮಾನ್ಯೀಕರಣದ ಹಿನ್ನೆಲೆಯಲ್ಲಿ ಅನುಮಾನಾಸ್ಪದ ಠೇವಣಿಗಳ ಬಗ್ಗೆ ಸಲ್ಲಿಸಲಾಗಿರುವ ಪ್ರಥಮ ವರದಿಯಲ್ಲಿ ತಿಳಿಸಲಾಗಿದೆ.

ಕೇಂದ್ರ ವಿತ್ತ ಸಚಿವಾಲಯದ ಭಾಗವಾಗಿರುವ, ಹಣ ವಂಚನೆ ಮತ್ತು ಉಗ್ರರಿಗೆ ಹಣ ಸಹಾಯಕ್ಕೆ ಸಂಬಂಧಿಸಿ ಅನುಮಾನಾಸ್ಪದ ವಾಣಿಜ್ಯ ವ್ಯವಹಾರಗಳ ವಿಶ್ಲೇಷಣೆ ನಡೆಸುವ ವಾಣಿಜ್ಯ ಗುಪ್ತಚರ ವಿಭಾಗ (ಎಫ್‌ಐಯು), 2016-17ರಲ್ಲಿ ಬ್ಯಾಂಕಿಂಗ್ ಮತ್ತು ಇತರ ಆರ್ಥಿಕ ವ್ಯವಸ್ಥೆಗಳಲ್ಲಿ ನಕಲಿ ಕರೆನ್ಸಿ ವ್ಯವಹಾರಗಳ 3.22 ಲಕ್ಷಕ್ಕೂ ಅಧಿಕ ಘಟನೆಗಳನ್ನು ಪತ್ತೆಹಚ್ಚಲಾಗಿದೆ ಎಂದು ವರದಿ ಮಾಡಿದೆ. ಈ ವರದಿಗೂ ಪ್ರಧಾನಿ ನರೇಂದ್ರ ಮೋದಿ 2016ರ ನವೆಂಬರ್ 8ರಂದು ಘೋಷಿಸಿದ ನೋಟು ಅಮಾನ್ಯೀಕರಣಕ್ಕೂ ಹತ್ತಿರದ ನಂಟಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ನಕಲಿ ನೋಟುಗಳು ಪತ್ತೆಯಾಗಿರುವ ವರದಿಗಳಲ್ಲೂ ಗಣನೀಯ ಏರಿಕೆಯಾಗಿದ್ದು 2015-16ರಲ್ಲಿ ಈ ಪ್ರಮಾಣ 4.10 ಲಕ್ಷ ಆಗಿದ್ದರೆ 2016-17ರಲ್ಲಿ 7.33 ಲಕ್ಷಕ್ಕೇರಿತ್ತು. ಇದು ಕೂಡಾ ನೋಟು ಅಮಾನ್ಯದ ಪರಿಣಾಮವಾಗಿದೆ ಎಂದು ವರದಿ ತಿಳಿಸಿದೆ.

ಎಫ್‌ಐಯುಯ ಹಣ ವಂಚನೆ ತಡೆ ನಿಯಮದ ಪ್ರಕಾರ, ಸುಳ್ಳು ದಾಖಲೆಗಳನ್ನು ನೀಡಿ ಅಥವಾ ನಕಲಿ ಕರೆನ್ಸಿ ನೋಟುಗಳನ್ನು ಬಳಸಿ ಮಾಡಲಾಗಿರುವ ಎಲ್ಲ ನಗದು ವ್ಯವಹಾರಗಳ ಬಗ್ಗೆ ಬ್ಯಾಂಕ್‌ಗಳು ಮತ್ತು ಇತರ ಆರ್ಥಿಕ ಸಂಸ್ಥೆಗಳು ವಾಣಿಜ್ಯ ಗುಪ್ತಚರ ಇಲಾಖೆಗೆ ವರದಿ ನೀಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News