2017-18ನೇ ಸಾಲಿಗೆ ರೈಲ್ವೆಯ ನಿರ್ವಹಣೆ ಅನುಪಾತ ಅತ್ಯಂತ ಕಳಪೆ
ಹೊಸದಿಲ್ಲಿ,ಎ.20: ರೈಲ್ವೆಯ ನಿರ್ವಹಣೆ ಅನುಪಾತ 2017-18ನೇ ಸಾಲಿಗೆ ಶೇ.98.5ರಷ್ಟಾಗಲಿದ್ದು, ಇದು 2000-2001ರಿಂದೀಚಿಗೆ ಅತ್ಯಂತ ಕಳಪೆ ಸಾಧನೆಯಾಗಿದೆ. ರೈಲ್ವೆಯ ಕಾರ್ಯ ನಿರ್ವಹಣೆಯ ನೇರ ಸೂಚಕವಾಗಿರುವ ನಿರ್ವಹಣೆ ಅನುಪಾತವು ಆ ಸಾಲಿನಲ್ಲಿ ಶೇ.98.3ರಷ್ಟಿತ್ತು. ರೈಲ್ವೆಯು ತಾನು ಗಳಿಸಿದ ಪ್ರತಿ ಒಂದು ರೂಪಾಯಿಯಲ್ಲಿ ಎಷ್ಟನ್ನು ವೆಚ್ಚ ಮಾಡುತ್ತದೆ ಎನ್ನುವುದನ್ನು ನಿರ್ವಹಣೆ ಅನುಪಾತವು ಸೂಚಿಸುತ್ತದೆ.
ಏಳನೇ ವೇತನ ಆಯೋಗದ ಪರಿಷ್ಕರಣೆಯ ಬಳಿಕ ಹೆಚ್ಚಿರುವ ಭತ್ಯೆಗಳು ಮತ್ತು ಪಿಂಚಣಿಗಳು ಈ ಕಳಪೆ ನಿರ್ವಹಣೆ ಅನುಪಾತಕ್ಕೆ ಕಾರಣವಾಗಿವೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.
ಫೆಬ್ರವರಿಯಲ್ಲಿ ಮಂಡಿಸಲಾಗಿದ್ದ ಮುಂಗಡಪತ್ರದಲ್ಲಿ ಶೇ.96ರಷ್ಟು ನಿರ್ವಹಣೆ ಅನುಪಾತವನ್ನು ಅಂದಾಜಿಸಲಾಗಿತ್ತು. ಆದರೆ ಅದು ಶೇ.2ಕ್ಕೂ ಅಧಿಕ ಹೆಚ್ಚಳಗೊಳ್ಳಲಿದೆ.
ಆಸ್ತಿಗಳ ಮಾರಾಟದಿಂದ ನಿರೀಕ್ಷೆಗಿಂತ ಕಡಿಮೆ ಆದಾಯ ಮತ್ತು ರೈಲ್ವೆ ಮುಂಗಡಪತ್ರವು ಸಾಮಾನ್ಯ ಮುಂಗಡಪತ್ರದೊಂದಿಗೆ ವಿಲೀನಗೊಂಡ ಬಳಿಕ ಸಾರ್ವಜನಿಕ ಕ್ಷೇತ್ರದ ಉದ್ಯಮ(ಪಿಎಸ್‌ಯು)ಗಳ ಲಾಭಾಂಶ ನೇರವಾಗಿ ವಿತ್ತ ಸಚಿವಾಲಯಕ್ಕೆ ಹೋಗುತ್ತಿರುವುದು ರೈಲ್ವೆ ಇಲಾಖೆಯ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ ಎಂದು ಅಧಿಕಾರಿ ಹೇಳಿದರು.
2017-18ನೇ ಸಾಲಿಗೆ ರೈಲ್ವೆಯ ವೇತನ ಪಾವತಿ ಮೊತ್ತದಲ್ಲಿ ಸುಮಾರು 1,0000 ಕೋ.ರೂ. ಮತ್ತು ಪಿಂಚಣಿಗಳ ಮೊತ್ತದಲ್ಲಿ 10,795 ಕೋ.ರೂ.ಗಳ ಏರಿಕೆಯಾಗಿದೆ. ಜೊತೆಗೆ ಪ್ರಯಾಣಿಕರಿಗೆ 33,000 ಕೋ.ರೂ.ಗಳ ಸಬ್ಸಿಡಿ ಹೊರೆಯನ್ನೂ ಅದು ಭರಿಸುತ್ತಿದೆ.
ಕಳೆದ ಆರು ವರ್ಷಗಳಿಂದಲೂ ನಿರ್ವಹಣೆ ಅನುಪಾತವು ಶೇ.90ರ ಮೇಲೆಯೇ ಇದೆ. 2013-14ರಲ್ಲಿ ಅದು ಶೇ.94ರಷ್ಟಿತ್ತು.
ಪ್ರಸಕ್ತ ಹಣಕಾಸು ವರ್ಷಕ್ಕೆ ಈ ಅನುಪಾತವನ್ನು ಶೇ.92.8ಕ್ಕೆ ನಿಗದಿಗೊಳಿಸಲಾಗಿದೆ.