ಆಂಧ್ರಪ್ರದೇಶಕ್ಕೆ ಪ್ರತ್ಯೇಕ ಸ್ಥಾನಮಾನ ಆಗ್ರಹಿಸಿ ಚಂದ್ರಬಾಬು ನಾಯ್ಡು ಅವರಿಂದ ಉಪವಾಸ
ವಿಜಯವಾಡ, ಎ. 20: ಆಂಧ್ರಪ್ರದೇಶಕ್ಕೆ ಪ್ರತ್ಯೇಕ ಸ್ಥಾನಮಾನ ಕುರಿತಂತೆ ಕೇಂದ್ರ ಸರಕಾರ ಅಸಹಕಾರದ ವಿರುದ್ಧ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ವಿಜಯವಾಡದ ಐಜಿಎಂಸಿ ಸ್ಟೇಡಿಯಂನಲ್ಲಿ ಶುಕ್ರವಾರ ಒಂದು ದಿನ ಉಪವಾಸ ಮುಷ್ಕರ ನಡೆಸಿದ್ದಾರೆ. ಒಂದು ದಿನಗಳ ಉಪವಾಸ ನಡೆಸಲಾಗುವುದು ಎಂದು ಕಳೆದ ವಾರ ಘೋಷಿಸಿರುವ ಟಿಡಿಪಿಯ ವರಿಷ್ಠ ಚಂದ್ರಬಾಬು ನಾಯ್ಡು, ಎಪ್ರಿಲ್ 20 ನನ್ನ ಜನ್ಮ ದಿನಾಚರಣೆ. ಅಂದು ನಾನು ರಾಜ್ಯ ಸಮಸ್ಯೆ ಹಾಗೂ ಕೇಂದ್ರದ ನೀತಿ ವಿರೋಧಿಸಿ ಒಂದು ದಿನ ಉಪವಾಸ ನಡೆಸಲಿದ್ದೇನೆ ಎಂದಿದ್ದರು.
ಮಹಾತ್ಮಾ ಗಾಂಧಿ, ಜ್ಯೋತಿಬಾ ಪುಲೆ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ಬಳಿಕ ಅವರು ಉಪವಾಸ ಮುಷ್ಕರ ನಡೆಸಲು ವೇದಿಕೆಗೆ ಆಗಮಿಸಿದರು. ಅವರ ಉಪವಾಸಕ್ಕೆ ತಿರುಮಲ ದೇವಾಲಯ ಹಾಗೂ ಕನಕ ದುರ್ಗಾ ದೇವಾಲಯದ ಪುರೋಹಿತರು ಶುಭ ಹಾರೈಸಿದರು. ಇಸ್ಲಾಂ, ಕ್ರಿಶ್ಚಿಯನ್, ಬುದ್ಧಿಸಂ, ಸಿಖ್ ಹಾಗೂ ಜೈನ ಸಮುದಾಯದ ಹಿರಿಯರು ಆಶೀರ್ವದಿಸಿದರು. ಈ ಸಂದರ್ಭ ಟಿಡಿಪಿಯ ಎಲ್ಲಾ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಉಪವಾಸ ನಡೆಸಿದರು.