ದೇಶದ ಆತ್ಮ ಸಾಕ್ಷಿಯಂತೆ ಬದುಕಿದ ಸಾಚಾರ್

Update: 2018-04-20 18:37 GMT

 ನ್ಯಾಯ ತಕ್ಕಡಿಯ ಮುಳ್ಳುಗಳು ಅನ್ಯಾಯಕ್ಕೊಳಗಾದವರನ್ನು ಇರಿಯುತ್ತಿರುವ ದಿನಗಳು ಇವು. ಸ್ವತಃ ನ್ಯಾಯವ್ಯವಸ್ಥೆಯೇ ನ್ಯಾಯಕ್ಕಾಗಿ ಒದ್ದಾಡಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ. ನ್ಯಾಯಾಧೀಶರ ಸಾವನ್ನೇ ಜನರು ಅನುಮಾನಿಸುತ್ತಿದ್ದಾರೆ ಮತ್ತು ನಮ್ಮ ನ್ಯಾಯಾಲಯ ಸ್ವತಃ ತನಗೆ ತಾನೇ ನ್ಯಾಯ ನೀಡಲು ಅಸಹಾಯಕವಾಗುತ್ತಿವೆ. ದೇಶವಿರೋಧಿ ಪ್ರಕರಣಗಳಲ್ಲಿ ಸಿಲುಕಿಕೊಂಡ ಶಂಕಿತ ಉಗ್ರರು ಸಾಲು ಸಾಲಾಗಿ ಹೊರ ಬರುತ್ತಿದ್ದಾರೆ. ನ್ಯಾಯಾಧೀಶರು ಅನ್ಯಾಯಗಳಿಗಾಗಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಾರೆ. ಇವೆಲ್ಲಕ್ಕೆ ಕಲಶವಿಟ್ಟಂತೆ, ವಿರೋಧ ಪಕ್ಷಗಳು ಅನಿವಾರ್ಯವಾಗಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ವಿರುದ್ಧವೇ ವಾಗ್ದಂಡನೆಗೆ ನಿರ್ಣಯ ಮಂಡಿಸಿದೆ. ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿರುವ ಸಂದರ್ಭದಲ್ಲೇ, ದಲಿತ ದೌರ್ಜನ್ಯ ಕಾನೂನನ್ನು ದುರ್ಬಲಗೊಳಿಸಲು ನ್ಯಾಯಾಲಯವೇ ಪ್ರಯತ್ನಿಸುತ್ತಿದೆ.

ಅಲ್ಪಸಂಖ್ಯಾತರಂತೂ ನ್ಯಾಯ ಸಿಗದೆ ನ್ಯಾಯಾಲಯದೆಡೆಗೆ ಹತಾಶ ನೋಟವನ್ನು ಬೀರುತ್ತಿದ್ದಾರೆ. ನ್ಯಾಯಾಧೀಶರುಗಳು ಹಂತ ಹಂತವಾಗಿ ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಇಂತಹ ದಿನಗಳಲ್ಲೇ, ದೇಶ ರಾಜಿಂದರ್ ಸಾಚಾರ್ ಎನ್ನುವ ಧೀಮಂತ ಕಾನೂನು ತಜ್ಞನನ್ನು ಕಳೆದುಕೊಂಡಿದೆ. ವರ್ತಮಾನದ ಭಾರತದ ಸಾಕ್ಷಿಪ್ರಜ್ಞೆಯಂತಿದ್ದ ಸಾಚಾರ್ ಓರ್ವ ನ್ಯಾಯಾಧೀಶರಾಗಿಯೂ, ನಿವೃತ್ತರಾದ ಬಳಿಕವೂ ಸಂವಿಧಾನಕ್ಕೆ ಪೂರಕವಾಗಿ ಬದುಕಿ ಉಳಿದವರಿಗೆ ಮಾದರಿಯಾದವರು.

  ಮಾನವಹಕ್ಕು ಹೋರಾಟಗಾರರಾಗಿ ಬದುಕಿನ ಕೊನೆಯ ಉಸಿರಿರುವವರೆಗೂ ಹೋರಾಡಿದವರು ಸಾಚಾರ್. ರಾಜಕಾರಣಿಗಳು ಸೃಷ್ಟಿಸಿರುವ ಪೊಳ್ಳುತನಗಳನ್ನು ಬಯಲುಗೊಳಿಸಿ ಭಾರತೀಯ ಸಮಾಜದ ವಾಸ್ತವಕ್ಕೆ ಕನ್ನಡಿ ಹಿಡಿದವರು. ದಿಲ್ಲಿ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಾಧೀಶರಾಗಿದ್ದ ರಾಜಿಂದರ್ ಸಾಚಾರ್ ಭಾರತದ ಮುಸ್ಲಿಮರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಯ ಕುರಿತ ವರದಿಯನ್ನು ರೂಪಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದರು. ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಹಲವಾರು ಶಿಫಾರಸುಗಳನ್ನು ಮಾಡಿದ್ದ ಈ ವರದಿಯು, ಸಾಚಾರ್ ಸಮಿತಿ ವರದಿಯೆಂದೇ ಜನಪ್ರಿಯವಾಗಿತ್ತು. ಮುಸ್ಲಿಮರನ್ನು ತುಷ್ಟೀಕರಣಗೊಳಿಸಲಾಗುತ್ತಿದೆ ಎಂಬ ರಾಜಕೀಯ ಪಕ್ಷವೊಂದರ ಆರೋಪಗಳ ಪೊಳ್ಳುತನವನ್ನು ಸಾಚಾರ್ ವರದಿ ಬಹಿರಂಗಪಡಿಸಿತು. ಈ ದೇಶದ ಮುಸ್ಲಿಮರನ್ನು ‘ನವ ದಲಿತರು’ ಎಂದು ಸಾಚಾರ್ ಕರೆದರು. ಹೇಗೆ ಕಳೆದ 60 ವರ್ಷಗಳಿಂದ ದೇಶದ ಮುಸ್ಲಿಮರು ರಾಜಕೀಯ ಪಕ್ಷಗಳ ವಂಚನೆಗಳಿಗೆ ಬಲಿಯಾಗುತ್ತಾ ಬಂದಿದ್ದಾರೆ ಎನ್ನುವುದನ್ನು ಸಾಚಾರ್ ವರದಿ ಬೆಚ್ಚಿ ಬೀಳಿಸುವಂತೆ ವಿವರಿಸುತ್ತದೆ. ಭಾರತದಲ್ಲಿ ಮುಸ್ಲಿಂ ಸಮುದಾಯವು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವಲ್ಲಿ ಸಾಚಾರ್ ವರದಿ ಬಹಳಷ್ಟು ಮಟ್ಟಿಗೆ ಯಶಸ್ವಿಯಾಯಿತು ಹಾಗೂ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಮುಸ್ಲಿಂ ಸಮುದಾಯದ ಪರಿಸ್ಥಿತಿಯ ಸುಧಾರಣೆಗೆ ಹಲವಾರು ಶಿಫಾರಸುಗಳನ್ನು ಕೂಡಾ ಮಾಡಿತ್ತು. ದೇಶದ ವಿವಿಧೆಡೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕಿಂತಲೂ ಮುಸ್ಲಿಂ ಸಮುದಾಯ ಹಿಂದುಳಿದಿರುವುದಾಗಿ ವರದಿಯು ಬೆಟ್ಟು ಮಾಡಿ ತೋರಿಸಿತ್ತು. ಆದರೆ ಅವರ ವರದಿಯನ್ನು ಜಾರಿಗೆ ತರಲು ಯುಪಿಎ ಸರಕಾರ ವಿಫಲವಾಯಿತು. ಇನ್ನು ಬಿಜೆಪಿ ಸರಕಾರದಿಂದ ಅದನ್ನು ನಿರೀಕ್ಷಿಸುವಂತೆಯೇ ಇಲ್ಲ.

ಸಾಚಾರ್ ಅವರು 1950ರ ದಶಕದ ಆರಂಭದಲ್ಲಿ ಶಿಮ್ಲಾದಲ್ಲಿ ನ್ಯಾಯವಾದಿಯಾಗಿ ತನ್ನ ಕಾನೂನುವೃತ್ತಿಯನ್ನು ಆರಂಭಿಸಿದರು. ಆನಂತರ ಸುಪ್ರೀಂಕೋರ್ಟ್‌ಗೆ ಕಾಲಿಟ್ಟ ಅವರು ಸಿವಿಲ್, ಕ್ರಿಮಿನಲ್ ಹಾಗೂ ಕಂದಾಯ ಪ್ರಕರಣಗಳಲ್ಲಿ ವಕೀಲಿ ವೃತ್ತಿಯನ್ನು ಕೈಗೊಂಡರು. 1972ರಲ್ಲಿ ಸಾಚಾರ್ ಅವರು ಎರಡು ವರ್ಷಗಳ ಅವಧಿಗೆ ದಿಲ್ಲಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು. ಸಾಚಾರ್ ಅವರು ಸಿಕ್ಕಿಂ ಹೈಕೋರ್ಟ್‌ನ ಪ್ರಭಾರ ಮುಖ್ಯ ನ್ಯಾಯಾಧೀಶರಾಗಿ ಹಾಗೂ ರಾಜಸ್ಥಾನ ಹೈಕೋರ್ಟ್‌ನ ನ್ಯಾಯಾಧೀಶರಾಗಿಯೂ ಸೇವೆ ಸಲ್ಲಿಸಿದ್ದರು. ಸತ್ಯನಿಷ್ಠುರರಾದ ಸಾಚಾರ್, ನಾಗರಿಕ ಸ್ವಾತಂತ್ರಗಳ ಪರವಾಗಿ ಪ್ರಬಲವಾಗಿ ಧ್ವನಿಯೆತ್ತಿದವರು. 1990ರಲ್ಲಿ ಕಾಶ್ಮೀರದಲ್ಲಿ ಉಗ್ರವಾದವು ಉಲ್ಬಣಿಸಿದ್ದ ಸಮಯದಲ್ಲಿ ರಿಪೋರ್ಟ್ ಆನ್ ಕಾಶ್ಮೀರ ಸಿಚುಯೇಶನ್ (ಕಾಶ್ಮೀರದ ಪರಿಸ್ಥಿತಿಯ ವರದಿ) ಎಂಬ ಪುಸ್ತಕದ ಲೇಖಕರಲ್ಲೊಬ್ಬರಾಗಿದ್ದರು. ಮಾನವಹಕ್ಕುಗಳ ಕಾಯ್ದೆಯ ರಕ್ಷಣೆಯ ಪರಾಮರ್ಶೆಗಾಗಿ ರಚನೆಯಾಗಿದ್ದ ಸಲಹಾ ಸಮಿತಿಯ ಸದಸ್ಯರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. ಮಾನವಹಕ್ಕುಗಳ ರಕ್ಷಣಾ ಕಾಯ್ದೆಗೆ ವ್ಯಾಪಕವಾದ ಬದಲಾವಣೆಗಳು ಹಾಗೂ ತಿದ್ದುಪಡಿಗಳ ಅಗತ್ಯವಿದೆಯೇ ಎಂಬುದನ್ನು ನಿರ್ಧ ರಿಸುವುದು ಈ ಸಮಿತಿಯ ಕೆಲಸವಾಗಿತ್ತು. ಮುಖ್ಯ ನ್ಯಾಯಮೂರ್ತಿ ಅಝೀಝ್ ಮುಶಾಬ್ಬರ್ ಅಹ್ಮದಿ ಸಮಿತಿಯ ಅಧ್ಯಕ್ಷರಾಗಿದ್ದರು.

ಸಮಿತಿಯು ಸಲ್ಲಿಸಿದ 2 ಸಾವಿರ ಪುಟಗಳ ವರದಿಯಲ್ಲಿ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗದ ಸದಸ್ಯತ್ವದ ಬದಲಾವಣೆ ಹಾಗೂ ಕಾರ್ಯ ನಿರ್ವಹಣಾ ವಿಧಾನದಲ್ಲಿ ಬದಲಾವಣೆ ಹಾಗೂ ಆಯೋಗದ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವ ಬಗ್ಗೆ ಶಿಫಾರಸು ಮಾಡಿತ್ತು. ಸಾಚಾರ್ ಅವರು ಸಂಸತ್‌ನಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಬೇಕೆಂಬ ಬೇಡಿಕೆಯ ಪ್ರಬಲ ಪ್ರತಿಪಾದಕರಾಗಿದ್ದರು. ಸಂಸತ್‌ನಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವುದರಿಂದ ಕಾನೂನು ಪ್ರಕರಣಗಳಲ್ಲಿ ಲಿಂಗ ಪಕ್ಷಪಾತವನ್ನು ತೊಡೆದುಹಾಕಲು ನೆರವಾಗಲಿದೆಯೆಂದು ಅವರು ಪ್ರತಿಪಾದಿಸಿದ್ದರು. 2003ರಲ್ಲಿ ಇರಾಕ್ ಮೇಲೆ ಅಮೆರಿಕದ ಆಕ್ರಮಣದ ವಿರುದ್ಧ ಸಾಚಾರ್ ಅವರು ಖ್ಯಾತ ಸುಪ್ರೀಂಕೋರ್ಟ್ ನ್ಯಾಯವಾದಿ ಪ್ರಶಾಂತ್ ಭೂಷಣ್ ಜೊತೆಗೂಡಿ ಅಭಿಯಾನವನ್ನೇ ನಡೆಸಿದ್ದರು. ಇರಾಕ್ ಮೇಲೆ ಅಮೆರಿಕದ ದಾಳಿಯು ಅಪ್ರಚೋದಿತ, ನ್ಯಾಯಯುತವಲ್ಲದ್ದು ಹಾಗೂ ಅಂತರ್‌ರಾಷ್ಟ್ರೀಯ ಕಾನೂನು ಹಾಗೂ ವಿಶ್ವಸಂಸ್ಥೆಯ ಸನದಿನ ಉಲ್ಲಂಘನೆಯೆಂದು ಅವರು ಬಣ್ಣಿಸಿದ್ದರು.

ಭಾರತದಲ್ಲಿ ಮಾನವಹಕ್ಕು ಹೋರಾಟಕ್ಕೆ ಸಾಚಾರ್ ಕೊಡುಗೆ ಅಪಾರವಾಗಿದ್ದರೂ, ದೇಶದಲ್ಲಿ ಮುಸ್ಲಿಮರ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯ ಕುರಿತಾಗಿ ಅವರು ತಯಾರಿಸಿದ 403 ಪುಟಗಳ ವರದಿಯ ಮೂಲಕ ರಾಷ್ಟ್ರಮಟ್ಟದಲ್ಲಿ ಜನಪ್ರಿಯರಾಗಿದ್ದಾರೆ. 2005ರಲ್ಲಿ ಆಗಿನ ಪ್ರಧಾನಿ ಮನಮೋಹನ್‌ಸಿಂಗ್ ನೇತೃತ್ವದ ಯುಪಿಎ ಸರಕಾರವು ವರದಿ ತಯಾರಿಕೆಯ ಹೊಣೆಯನ್ನು ಸಾಚಾರ್ ನೇತೃತ್ವದ ಸಮಿತಿಗೆ ವಹಿಸಿತ್ತು ಹಾಗೂ ಮಾರನೆಯ ವರ್ಷ ಅದು ಸಂಸತ್‌ನಲ್ಲಿ ಮಂಡನೆಯಾಗಿತ್ತು.ಏಳು ಮಂದಿ ಸದಸ್ಯರಿದ್ದ ಈ ಸಮಿತಿಯು ಆರ್ಥಿಕ, ಸಾಮಾಜಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಮುಸ್ಲಿಂ ಸಮುದಾಯಕ್ಕಿರುವ ಅಡೆತಡೆಗಳನ್ನು ಹೇಗೆ ನಿವಾರಿಸಬೇಕೆಂಬ ಬಗ್ಗೆ ವರದಿಯಲ್ಲಿ ಶಿಫಾರಸುಗಳನ್ನು ಮಾಡಿತ್ತು. ಈ ಸಾಚಾರ್ ವರದಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದೇ ಸಾಚಾರ್‌ರಂತಹ ಶ್ರೇಷ್ಠ ನ್ಯಾಯಾಧೀಶರಿಗೆ ಸಲ್ಲಿಸಬಹುದಾದ ಅತ್ಯುತ್ತಮ ಶ್ರದ್ಧಾಂಜಲಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News