ಒಂದು ನಾಣ್ಯದ ಕಥೆ

Update: 2018-04-20 18:50 GMT

ಸರಕಾರ 2005ರಿಂದ ಚಲಾವಣೆಗೆ ತಂದಿರುವ 10 ರೂಪಾಯಿ ನಾಣ್ಯವನ್ನು ಸ್ವೀಕರಿಸಲು ಜನತೆ ಹಿಂಜರಿಯುತ್ತಿದ್ದಾರೆ. ಇದಕ್ಕೆ ಒಂದು ಕಾರಣ- 10 ರೂಪಾಯಿ ನಾಣ್ಯಗಳಲ್ಲಿರುವ ವೈವಿಧ್ಯ. ಒಟ್ಟು 14 ವಿಧದ 10 ರೂ. ನಾಣ್ಯಗಳು ಚಲಾವಣೆಯಲ್ಲಿವೆ.

ದೇಶದಲ್ಲಿ ಕರೆನ್ಸಿ ನೋಟುಗಳನ್ನು ಚಲಾವಣೆಗೆ ತರುವ ಅಥವಾ ಚಲಾವಣೆಯಿಂದ ಹಿಂದಕ್ಕೆ ಪಡೆಯುವ ಸಂಪೂರ್ಣ ಅಧಿಕಾರ ಸರಕಾರ(ರಿಸರ್ವ್ ಬ್ಯಾಂಕ್)ಕ್ಕಿದೆ. ಆದರೆ ಚಲಾವಣೆಗೆ ಬಂದಿರುವ 10 ರೂ. ಮುಖಬೆಲೆಯ ನಾಣ್ಯವನ್ನು ಜನತೆ ಸ್ವೀಕರಿಸಲು ಒಪ್ಪದ ಅಪರೂಪದ ವಿದ್ಯಮಾನ ಇದೀಗ ದೇಶದಲ್ಲಿ ನಡೆಯುತ್ತಿದೆ. 10 ರೂಪಾಯಿ ಮುಖಬೆಲೆಯ ಕರೆನ್ಸಿ ನಾಣ್ಯಗಳನ್ನು ಯಾರೂ ನಿರಾಕರಿಸುವಂತಿಲ್ಲ ಎಂದು ರಿಸರ್ವ್ ಬ್ಯಾಂಕ್ ಹಲವಾರು ಬಾರಿ ಸ್ಪಷ್ಟನೆ ನೀಡಿದರೂ ಜನಸಾಮಾನ್ಯರಲ್ಲಿ ಇನ್ನೂ ಈ ನಾಣ್ಯಗಳ ಬಗ್ಗೆ ಗೊಂದಲವಿದೆ. ಆದ್ದರಿಂದಲೇ ಬ್ಯಾಂಕ್‌ಗಳ ಬಳಿ ಈಗ 10 ರೂಪಾಯಿ ನಾಣ್ಯಗಳ ರಾಶಿಯೇ ಇದೆ ಎಂದು ಬ್ಯಾಂಕ್‌ನ ಮೂಲಗಳು ತಿಳಿಸಿವೆ.

10 ರೂಪಾಯಿ ನಾಣ್ಯಗಳ ಬಗ್ಗೆ ಗೊಂದಲ, ಸಂದೇಹ ಮೂಡಿದ್ದು ಹೇಗೆ ಎಂಬ ಪ್ರಶ್ನೆ ಮೂಡುವುದು ಸಹಜ. ಜನರ ಮನದಲ್ಲಿ ಗೊಂದಲ ಮೂಡಲು ಗಾಳಿಸುದ್ದಿ ಮೂಲ ಕಾರಣ ಎನ್ನಲಾಗುತ್ತಿದೆ. ಜೊತೆಗೆ, ರಿಸರ್ವ್ ಬ್ಯಾಂಕ್ 14 ವಿಧದ 10 ರೂಪಾಯಿ ನಾಣ್ಯವನ್ನು ಚಲಾವಣೆಗೆ ತಂದಿರುವುದು (ಇದರಲ್ಲಿ 11 ನಾಣ್ಯ ಸ್ಮರಣಾರ್ಥ) ಜನರಲ್ಲಿ ಸಂಶಯ ಹುಟ್ಟಲು ಕಾರಣವಾಗಿದೆ. 2005ರಲ್ಲಿ ಪ್ರಥಮವಾಗಿ ಮುಂಭಾಗದಲ್ಲಿ ಅಶೋಕ ಸ್ತಂಭದ ಸಿಂಹ ಮುದ್ರೆಯ ಬಳಿ 10ರ ಅಂಕೆ, ಮೇಲ್ಭಾಗದಲ್ಲಿ ಹಿಂದಿಯಲ್ಲಿ ‘ಭಾರತ್’ ಮತ್ತು ಇಂಗ್ಲಿಷ್‌ನಲ್ಲಿ ‘ಇಂಡಿಯಾ’ಎಂದು ಬರೆಯಲಾದ, ಇನ್ನೊಂದು ಬದಿಯಲ್ಲಿ ಕ್ರಾಸ್ ಚಿಹ್ನೆ ಯೊಂದಿಗೆ ಮುದ್ರಣಗೊಂಡು ಚಲಾವಣೆಯಲ್ಲಿದ್ದ 10 ರೂ ನಾಣ್ಯದಲ್ಲಿ 2009ರ ತನಕ ಹೆಚ್ಚಿನ ಬದಲಾವಣೆ ಇರಲಿಲ್ಲ. 2009ರಿಂದ ಈ ನಾಣ್ಯಗಳ ವಿನ್ಯಾಸಗಳಲ್ಲಿ ಬದಲಾವಣೆ ಆರಂಭವಾಯಿತು. 10 ರೂಪಾಯಿ ಮುಖಬೆಲೆಯ ವಿವಿಧ ವಿನ್ಯಾಸದ ನಾಣ್ಯಗಳ ವಿವರ ಇಲ್ಲಿದೆ.

♦ 2009 ಮಾರ್ಚ್: ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಎಂಬ ನಿರೂಪಣಾ ವಿಷಯದೊಂದಿಗೆ 10 ರೂಪಾಯಿಯ ನಾಣ್ಯವನ್ನು ಚಲಾವಣೆಗೆ ತರಲಾಯಿತು. ಮುಂಭಾಗದಲ್ಲಿ ಎರಡು ಸಮಾನಾಂತರ ರೇಖೆ ಇದ್ದು ಮೂರು ಭಾಗವಾಗಿ ವಿಭಜಿಸಲಾಗಿದೆ. ಕೇಂದ್ರಭಾಗದಲ್ಲಿ ಅಶೋಕಸ್ಥಂಭದ ಸಿಂಹಗಳ ಮುಖಮುದ್ರೆಯ ಚಿತ್ರ, ಮೇಲ್ಭಾಗದಲ್ಲಿ ಹಿಂದಿಯಲ್ಲಿ ಭಾರತ್, ಇಂಗ್ಲಿಷ್‌ನಲ್ಲಿ ಇಂಡಿಯಾ ಎಂದು ಬರೆಯಲಾಗಿದೆ.

ಹಿಂಭಾಗದಲ್ಲಿ: ಮೇಲ್ಭಾಗದಲ್ಲಿ ಸಂಪರ್ಕ ಮತ್ತು ಅಭಿವೃದ್ಧಿಯ ಸಂಕೇತವಾಗಿ ಮೇಲ್ಮುಖವಾಗಿ ಹೊರಹೊಮ್ಮುವ ಎರಡು ಕಿರಣಗಳ ಚಿತ್ರ, ಮಧ್ಯಭಾಗದಲ್ಲಿ ನಾಣ್ಯದ ಮುಖಬೆಲೆಯನ್ನು ರೋಮನ್ ಅಂಕೆಯಲ್ಲಿ ಬರೆಯಲಾಗಿದೆ.

♦ 2009: ವೈವಿಧ್ಯತೆಯಲ್ಲಿ ಏಕತೆ ಎಂಬ ಧ್ಯೇಯವಾಕ್ಯ ದೊಂದಿಗೆ ದ್ವಿಲೋಹದ 10 ರೂ. ನಾಣ್ಯವನ್ನು ಆರ್‌ಬಿಐ ಚಲಾವಣೆಗೆ ತಂದಿತು. ನಾಣ್ಯದ ಎದುರು ಮುಖವನ್ನು ಮೂರು ಭಾಗಗಳನ್ನಾಗಿ ವಿಭಾಗಿಸಲಾಗಿದೆ. ಮಧ್ಯಭಾಗದಲ್ಲಿ ಅಶೋಕಸ್ಥಂಭದಲ್ಲಿರುವ ಸಿಂಹದ ಮುಖಗಳ ಮುದ್ರೆಯ ಚಿತ್ರ, ಮೇಲ್ಭಾಗದಲ್ಲಿ ಹಿಂದಿಯಲ್ಲಿ ‘ಭಾರತ್’ ಮತ್ತು ಇಂಗ್ಲಿಷ್‌ನಲ್ಲಿ ‘ಇಂಡಿಯಾ’ ಎಂದು ಬರೆಯಲಾಗಿದೆ. ಕೆಳಗಿನ ಭಾಗದಲ್ಲಿ ರೋಮನ್ ಅಂಕೆಗಳಲ್ಲಿ ವರ್ಷವನ್ನು ಬರೆಯಲಾಗಿದೆ.

♦ 2010 ಫೆಬ್ರವರಿ: ಹೋಮಿ ಭಾಭಾ ಜನ್ಮ ಶತಮಾನೋತ್ಸವ ದಿನಾಚರಣೆ ಅಂಗವಾಗಿ ದ್ವಿಲೋಹದ 10 ರೂಪಾಯಿ ಮುಖಬೆಲೆಯ ಹೊಸ ನಾಣ್ಯಗಳನ್ನು ಚಲಾವಣೆಗೆ ತರಲಾಗಿದೆ. ಮುಂಭಾಗದಲ್ಲಿ ಹೆಚ್ಚಿನ ಬದಲಾವಣೆ ಇಲ್ಲ. ನಾಣ್ಯದ ಹಿಂಬದಿಯಲ್ಲಿ ಹೋಮಿ ಭಾಭಾರ ಚಿತ್ರ. ಚಿತ್ರದ ಕೆಳಭಾಗದಲ್ಲಿ 2008-2009 ಎಂದು ಬರೆಯಲಾಗಿದೆ.

♦ 2010ರ ಎಪ್ರಿಲ್ : ರಿಸರ್ವ್ ಬ್ಯಾಂಕಿನ ಪ್ಲಾಟಿನಂ ಜುಬಿಲಿ (75ನೇ ವರ್ಷಾಚರಣೆ) ಅಂಗವಾಗಿ ಘಟನಾವಳಿಯ ಚಿತ್ರಣ ಇರುವ 10 ರೂಪಾಯಿ ನಾಣ್ಯಗಳನ್ನು ಹೊರತರಲಾಗಿದೆ. ನಾಣ್ಯದ ಹಿಂಬದಿಯಲ್ಲಿ ರಿಸರ್ವ್ ಬ್ಯಾಂಕಿನ ಲಾಂಛನ. ಇದರ ಕೆಳಗಡೆ 1935-2010 ಎಂದು ಬರೆಯಲಾಗಿದೆ.

♦ 2011ರ ಜುಲೈ: 10 ರೂಪಾಯಿ ನಾಣ್ಯಗಳ ಹೊಸ ಸರಣಿ ಬಿಡುಗಡೆ.

ಹಿಂಭಾಗದಲ್ಲಿ: ಅಭಿವೃದ್ಧಿ ಮತ್ತು ಸಂಪರ್ಕ ವ್ಯವಸ್ಥೆಯ ಅಭಿವೃದ್ಧಿಯನ್ನು ಸಂಕೇತಿಸುವ 10 ಕಿರಣಗಳು. ಮಧ್ಯಭಾಗದಲ್ಲಿ ರೂಪಾಯಿ ಚಿಹ್ನೆ. ಕೆಳಗಡೆ 10 ರೂಪಾಯಿ ಎಂಬ ಬರಹ.

* 2012 ಜೂನ್: ಭಾರತದ ಸಂಸತ್ತಿಗೆ 60 ವರ್ಷ ತುಂಬಿದ ಪ್ರಯುಕ್ತ ಹೊಸ 10 ರೂ. ನಾಣ್ಯ ಚಲಾವಣೆಗೆ ಬಂದಿತು. ಮುಂಭಾಗದಲ್ಲಿ ಹೆಚ್ಚಿನ ಬದಲಾವಣೆ ಇಲ್ಲ. ಹಿಂಭಾಗದ ಮಧ್ಯಭಾಗದಲ್ಲಿ ಸಂಸತ್ ಭವನದ ಕಟ್ಟಡದ ಚಿತ್ರ. ಈ ಚಿತ್ರದ ಮೇಲ್ಭಾಗದಲ್ಲಿ 1952-2012 ಎಂದು ಬರೆಯಲಾಗಿದೆ.

♦ 2013ರ ಆಗಸ್ಟ್: ಶ್ರೀಮಾತಾ ವೈಷ್ಣೋದೇವಿ ದೇವಸ್ಥಾನ ಮಂಡಳಿಯ ರಜತ ಮಹೋತ್ಸವದ ಅಂಗವಾಗಿ 10 ರೂಪಾಯಿಯ ಹೊಸ ನಾಣ್ಯ ಚಲಾವಣೆಗೆ ಬಂದಿದೆ.

♦ 2014ರ ಜುಲೈ : ನಾರು ಮಂಡಳಿಯ ವಜ್ರಮಹೋತ್ಸವ ಆಚರಣೆಯ ಪ್ರಯುಕ್ತ ಹೊಸ 10 ರೂ. ನಾಣ್ಯ ಚಲಾವಣೆಗೆ ಬಂದಿದೆ.

♦ 2015ರ ಎಪ್ರಿಲ್: ಮಹಾತ್ಮಾಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ ದಿನದ ಶತಮಾನೋತ್ಸವ ಆಚರಣೆಯ ಸ್ಮರಣಾರ್ಥ ಹೊಸ 10 ರೂ. ನಾಣ್ಯ ಚಲಾವಣೆಗೆ ಬಂದಿದೆ.

♦ 2015ರ ಜುಲೈ: ಅಂತರ್‌ರಾಷ್ಟ್ರೀಯ ಯೋಗ ದಿನಾಚರಣೆ ಸ್ಮರಣಾರ್ಥ ಹೊಸ 10 ರೂ. ನಾಣ್ಯ ಚಲಾವಣೆಗೆ ಬಂದಿದೆ. ಮುಂಭಾಗದಲ್ಲಿ ಬದಲಾವಣೆ ಇಲ್ಲ. ಹಿಂಭಾಗದಲ್ಲಿ ಅಂತರ್‌ರಾಷ್ಟ್ರೀಯ ಯೋಗ ದಿನಾಚರಣೆಯ ಲಾಂಛನ ಹಾಗೂ ಅದರ ಕೆಳಗಡೆ ಜೂನ್ 21 ಎಂದು ಬರೆಯಲಾಗಿದೆ.

♦ 2016ರ ಜನವರಿ: ಡಾ ಬಿ.ಆರ್.ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣೆಯ ಪ್ರಯುಕ್ತ ಹೊಸ ನಾಣ್ಯಗಳನ್ನು ಚಲಾವಣೆಗೆ ತರಲಾಗಿದೆ. ಮುಂಭಾಗದಲ್ಲಿ ಬದಲಾವಣೆ ಇಲ್ಲ. ಹಿಂಭಾಗದಲ್ಲಿ ಡಾ ಅಂಬೇಡ್ಕರ್ ರೇಖಾಚಿತ್ರ ಮಧ್ಯದಲ್ಲಿ, ಕೆಳಗಡೆ 125 ಎಂದು ರೋಮನ್ ಸಂಖ್ಯೆಯಲ್ಲಿ ಬರೆಯಲಾಗಿದೆ.

♦ 2016ರ ಜೂನ್: ಸ್ವಾಮಿ ಚಿನ್ಮಯಾನಂದರ ಜನ್ಮಶತಮಾನೋತ್ಸವ ಆಚರಣೆಯ ಪ್ರಯುಕ್ತ ಹೊಸದಾಗಿ 10 ರೂ. ನಾಣ್ಯವನ್ನು ಚಲಾವಣೆಗೆ ತರಲಾಗಿದೆ. ಮುಂಭಾಗದಲ್ಲಿ ಗಮನಾರ್ಹ ಬದಲಾವಣೆ ಇಲ್ಲ. ಹಿಂಭಾಗದಲ್ಲಿ ಸ್ವಾಮಿ ಚಿನ್ಮಯಾನಂದರ ಚಿತ್ರ ಮಧ್ಯಭಾಗದಲ್ಲಿದ್ದರೆ ಕೆಳಗಡೆ 125 ಎಂದು ಅಂಕೆಯಲ್ಲಿ ಬರೆಯಲಾಗಿದೆ.

♦ 2017ರ ಎಪ್ರಿಲ್: ಭಾರತದ ರಾಷ್ಟ್ರೀಯ ಪತ್ರಾಗಾರದ 125ನೇ ವಾರ್ಷಿಕೋತ್ಸವದ ಪ್ರಯುಕ್ತ ಹೊರತಂದಿರುವ 10 ರೂ. ನಾಣ್ಯ. ನಾಣ್ಯದ ಮುಂಭಾಗದಲ್ಲಿ ಗಮನಾರ್ಹ ಬದಲಾವಣೆ ಇಲ್ಲ. ಹಿಂಭಾಗದಲ್ಲಿ ಭಾರತೀಯ ಪತ್ರಾಗಾರದ ಕಟ್ಟಡದ ಚಿತ್ರ ಮಧ್ಯಭಾಗದಲ್ಲಿದೆ. ಇದರ ಕೆಳಗೆ 125 ವರ್ಷ ಎಂದು ಬರೆಯಲಾಗಿದೆ. ಬಳಿಕ ಭಾರತೀಯ ಪತ್ರಾಗಾರ ಇಲಾಖೆ 125 ವರ್ಷ ಎಂಬ ಬರಹವಿದೆ.

♦ 2017ರ ಜೂನ್: ಶ್ರೀಮದ್ ರಾಜಚಂದ್ರ ಅವರ 150ನೇ ಜನ್ಮದಿನಾಚರಣೆಯ ಸ್ಮರಣಾರ್ಥ ಹೊರತಂದಿರುವ 10 ರೂ. ನಾಣ್ಯ.ಮುಂಬದಿಯಲ್ಲಿ ಅಶೋಕ ಚಕ್ರದಲ್ಲಿರುವ ಸಿಂಹದ ಮುಖಗಳು, ಬದಿಯಲ್ಲಿ ರೂಪಾಯಿ ಚಿಹ್ನೆ ಹಾಗೂ ಕೆಳಭಾಗದಲ್ಲಿ 10 ರೂಪಾಯಿ ಎಂದು ಬರೆಯಲಾಗಿದೆ. ಹಿಂಬದಿಯಲ್ಲಿ ಶ್ರೀಮದ್ ರಾಜಚಂದ್ರ ಅವರ ಚಿತ್ರ, ಎಡಬದಿಯಲ್ಲಿ 1867 ಹಾಗೂ ಬಲಬದಿಯಲ್ಲಿ 1901 ಎಂದು ಬರೆಯಲಾಗಿದೆ. ಜನ್ಮದಿನಾಚರಣೆ, ಶತಮಾನೋತ್ಸವ ಮುಂತಾದ ವಿಶೇಷ ದಿನಗಳ ಸ್ಮರಣಾರ್ಥ ಅಂಚೆಚೀಟಿಗಳನ್ನು ಹೊರ ತರುವ ಸಂಪ್ರದಾಯವಿದೆ. ಆದರೆ ಇಂತಹ ಸಂದರ್ಭಗಳ ಸ್ಮರಣಾರ್ಥ ನಾಣ್ಯಗಳನ್ನು ಹೊರತರುವುದು ಸರಿಯೇ ಎಂಬ ಪ್ರಶ್ನೆ ಇಲ್ಲಿ ಮೂಡುತ್ತದೆ.

Writer - ಕೃಷ್ಣಮೂರ್ತಿ ಬೆಳ್ಮಣ್ಣು

contributor

Editor - ಕೃಷ್ಣಮೂರ್ತಿ ಬೆಳ್ಮಣ್ಣು

contributor

Similar News

ಜಗದಗಲ
ಜಗ ದಗಲ