ಹದಗೆಟ್ಟ ಡಾ. ಕಫೀಲ್ ಖಾನ್ ಆರೋಗ್ಯ: ನ್ಯಾಯಕ್ಕಾಗಿ ಪತ್ನಿ ಮೊರೆ

Update: 2018-04-21 04:29 GMT

ಹೊಸದಿಲ್ಲಿ, ಎ. 21: ಗೋರಖ್‌ಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ 60 ಮಕ್ಕಳು ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿರುವ ಡಾ. ಕಫೀಲ್ ಖಾನ್‌ಗೆ ಎಂಟು ತಿಂಗಳಿಂದ ಜಾಮೀನು ಸಿಕ್ಕಿಲ್ಲ. ಈ ಮಧ್ಯೆ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಪತ್ನಿ ಡಾ. ಶಬಿಸ್ತಾ ಖಾನ್ ನ್ಯಾಯಕ್ಕಾಗಿ ಮೊರೆ ಹೋಗಿದ್ದಾರೆ.

ಮಕ್ಕಳ ಜೀವ ಉಳಿಸಲು ಹಗಲು ರಾತ್ರಿ ಶ್ರಮಿಸಿದ್ದ ಕೆಲವೇ ವೈದ್ಯರಲ್ಲಿ ಡಾ. ಖಾನ್ ಕೂಡಾ ಸೇರಿದ್ದನ್ನು ಮಾಧ್ಯಮಗಳು ಬೆಳಕಿಗೆ ತಂದಿದ್ದವು. ಇಷ್ಟಾಗಿಯೂ ಪ್ರಕರಣದಲ್ಲಿ ಜಾಮೀನು ಸಿಗದೇ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಎ.20ರಂದು ಅವರ ಜಾಮೀನು ಅರ್ಜಿಯ ವಿಚಾರಣೆ ನಿಗದಿಪಡಿಸಲಾಗಿತ್ತು. ಆದರೆ ಮತ್ತೆ 25ಕ್ಕೆ ಮುಂದೂಡಲಾಗಿದೆ.

ಈ ಮಧ್ಯೆ ಪತಿಯ ಆರೋಗ್ಯ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಪತ್ನಿ ಡಾ. ಶಬಿಸ್ತಾ ಇದೀಗ ಲಕ್ನೋಗೆ ಧಾವಿಸಿದ್ದು, ಮುಖ್ಯಮಂತ್ರಿ ಆದಿತ್ಯನಾಥ್ ಅವರ ಮೊರೆ ಹೋಗಲು ನಿರ್ಧರಿಸಿದ್ದಾರೆ. ದಂತ ವೈದ್ಯೆಯಾಗಿರುವ ಶಬಿಸ್ತಾ ಪುಟ್ಟ ಮಗಳೊಂದಿಗೆ ಪದೇ ಪದೇ ಜೈಲಿಗೆ ಅಲೆಯುವ ಸ್ಥಿತಿ ಇದೆ. ಒಂದೂವರೆ ವರ್ಷದ ಮಗು ತಂದೆಯ ಬರುವಿಕೆಗೆ ಕಾಯುತ್ತಿದೆ. ಕಳೆದ ಬಾರಿ ಆಸ್ಪತ್ರೆಗೆ ಕರೆತಂದಾಗಲೂ ಪತಿಯನ್ನು ಭೇಟಿ ಮಾಡುವುದು ಶಬಿಸ್ತಾರಿಗೆ ಸಾಧ್ಯವಾಗಿರಲಿಲ್ಲ. ಇದೀಗ ನ್ಯಾಯಕ್ಕೆ ಆಗ್ರಹಿಸಿ ಸುಪ್ರೀಂಕೋರ್ಟ್‌ನ ಕದ ತಟ್ಟುವ ನಿರ್ಧಾರಕ್ಕೆ ಬಂದಿದ್ದಾರೆ.

ಹೃದ್ರೋಗಿಯಾಗಿರುವ ಡಾ. ಖಾನ್‌ಗೆ ಅಧಿಕ ರಕ್ತ ಒತ್ತಡ ಸಮಸ್ಯೆಯೂ ಇದೆ. ಖಿನ್ನತೆ ಹಾಗೂ ಭೀತಿಯಿಂದ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಡುತ್ತಿದೆ. ತೀವ್ರ ಎದೆನೋವಿನಿಂದ ಬಳಲುತ್ತಿದ್ದ ಖಾನ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಕುಟುಂಬ ಒತ್ತಡ ತಂದಿತ್ತು. ಆದರೆ ಇದಕ್ಕೂ ವಿಳಂಬ ಮಾಡಲಾಯಿತು. ಇಸಿಜಿ ಹಾಗೂ ರಕ್ತ ಪರೀಕ್ಷೆ ನಡೆದಿದ್ದು, ಇನ್ನೂ ಕೆಲ ತಪಾಸಣೆಗಳು ಆಗಬೇಕಿವೆ. ಆದರೆ ವೈದ್ಯಕೀಯ ತಪಾಸಣೆ ವರದಿಯ ಬಗ್ಗೆ ನಮಗೆ ಯಾವ ಮಾಹಿತಿಯನ್ನೂ ನೀಡಿಲ್ಲ ಎಂದು ಅವರು ಆಪಾದಿಸುತ್ತಾರೆ.

"ಪ್ರಕರಣದಲ್ಲಿ ತಾನು ಅಮಾಯಕ. ಆಮ್ಲಜನಕ ಕೊರತೆ ಮತ್ತು ಮಕ್ಕಳ ಸಾವಿಗೆ ಅಧಿಕಾರಿಗಳು ಹೊಣೆ. ಆದರೆ ವೈದ್ಯರು ಅದಕ್ಕೆ ಬೆಲೆ ತೆರಬೇಕಾಗಿದೆ" ಎಂದು ಮಾಧ್ಯಮ ಬಳಿ ಮಾತನಾಡಿದ ಡಾ. ಖಾನ್‌ ಹೇಳಿದರು. ತಮ್ಮ ಆರೋಗ್ಯದ ಬಗ್ಗೆಯೂ ಆತಂಕವಿದೆ ಎಂದು ವಿವರಿಸಿದರು. 130 ಅಪರಾಧಿಗಳಿರುವ ಸೆಲ್‌ನಲ್ಲಿ ಇವರನ್ನು ಕೂಡಿ ಹಾಕಲಾಗಿದೆ ಎಂದು ವಿವರಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News