ಮೈಗ್ರೇನ್ ಕುರಿತು ನಿಮಗೆ ಗೊತ್ತಿರಲೇಬೇಕಾದ ಅತ್ಯಗತ್ಯ ಮಾಹಿತಿಗಳು

Update: 2018-04-21 13:24 GMT

ಮೈಗ್ರೇನ್ ಅಥವಾ ಅರೆ ತಲೆನೋವು ನರಸಂಬಂಧಿ ತೊಂದರೆಯಾಗಿದೆ. ತೀವ್ರ ತಲೆನೋವು ಇದರ ವೈಶಿಷ್ಟವಾಗಿದ್ದು, ವಾಕರಿಕೆ,ವಾಂತಿ,ಬೆಳಕಿಗೆ ಸಂವೇದನಾಶೀಲತೆ ಇತ್ಯಾದಿ ಲಕ್ಷಣಗಳೊಂದಿಗೆ ಇದು ಕಾಣಿಸಿಕೊಳ್ಳಬಹುದು. ವ್ಯಕ್ತಿಯಲ್ಲಿ ಇದು ಬಾಲ್ಯದಲ್ಲಿಯೇ ಅಥವಾ ಹದಿಹರೆಯ ತಲುಪಿದಾಗ ಉಂಟಾಗಬಹುದು. ಪುರುಷರಿಗಿಂತ ಮಹಿಳೆಯರನ್ನು ಮೈಗ್ರೇನ್ ಹೆಚ್ಚಾಗಿ ಕಾಡುತ್ತದೆ.

ಮೈಗ್ರೇನ್ ವಂಶಪರಂಪರಾಗತವಾಗಿ ಬರಬಹುದು ಮತ್ತು ಇದು ಈ ಕಾಯಿಲೆಯ ಅತ್ಯಂತ ಸಾಮಾನ್ಯ ಅಪಾಯದ ಅಂಶವಾಗಿದೆ. ಆದರೆ ಮೈಗ್ರೇನ್ ಇತರ ತಲೆನೋವುಗಳಿಗಿಂತ ಭಿನ್ನವಾಗಿದೆ.

ಮೈಗ್ರೇನ್ ಮತ್ತು ಸಾಮಾನ್ಯ ತಲೆನೋವಿಗೂ ಏನು ವ್ಯತ್ಯಾಸ?

 ಮೈಗ್ರೇನ್‌ನಿಂದ ಉಂಟಾಗುವ ತಲೆನೋವು ಮತ್ತು ಒತ್ತಡದಿಂದ ಉಂಟಾಗುವ ತಲೆನೋವು ಸಾಮಾನ್ಯವಾಗಿ ಒಂದೇ ರೀತಿಯಲ್ಲಿರುತ್ತವೆ ಮತ್ತು ಸಾಧಾರಣದಿಂದ ತೀವ್ರ ಪ್ರಮಾಣದಲ್ಲಿರುತ್ತವೆ. ಇವುಗಳ ನಡುವಿನ ವ್ಯತ್ಯಾಸವೆಂದರೆ ಮೈಗ್ರೇನ್ ಯಾವುದೇ ಚಲನವಲನಕ್ಕೆೆ ಸ್ಪಂದಿಸುತ್ತದೆ. ಮೈಗ್ರೇನ್ ಪೀಡಿತರಲ್ಲಿ ನಡಿಗೆಯಂತಹ ಲಘು ದೈಹಿಕ ಚಟುವಟಿಕೆಯೂ ತಲೆನೋವನ್ನು ಹೆಚ್ಚಿಸುತ್ತದೆ. ಆದರೆ ಒತ್ತಡದಿಂದುಂಟಾಗುವ ತಲೆನೋವು ತೀವ್ರವಾಗಿದ್ದರೂ ಸ್ಥಿರವಾಗಿರುತ್ತದೆ. ಅಲ್ಲದೆ ವಾಕರಿಕೆ ಅಥವಾ ವಾಂತಿ,ಬೆಳಕಿಗೆ ಸಂವೇದನಾಶೀಲತೆಯಂತಹ ಲಕ್ಷಣಗಳು ಮೈಗ್ರೇನ್ ಜೊತೆಗೆ ಕಾಣಿಸಿಕೊಳ್ಳುತ್ತವೆ. ಹೆಚ್ಚಿನವರಲ್ಲಿ ತಲೆಯ ಒಂದೇ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ ಮತ್ತು ಇದೇ ಕಾರದಿಂದ ಇದನ್ನು ಅರೆ ತಲೆನೋವು ಎಂದು ಕರೆಯಲಾಗುತ್ತದೆ.

ಯಾವುದಾದರೂ ಕಾರಣದಿಂದ ವ್ಯಕ್ತಿಯ ತಲೆಯಲ್ಲಿನ ರಕ್ತನಾಳಗಳ ಗಾತ್ರದಲ್ಲಿ ಅಸ್ಥಿರತೆಯುಂಟಾಗುತ್ತದೆ. ಮೊದಲು ಅವು ಸಂಕುಚಿತಗೊಂಡು ಬಳಿಕ ವಿಕಸನಗೊಳ್ಳುತ್ತವೆ. ಆಗ ರಕ್ತನಾಳಗಳಿಗೆ ಸಂಬಂಧಿಸಿದ ಸೂಕ್ಷ್ಮ ನರಗಳಲ್ಲಿ ಕೆರಳುವಿಕೆಯುಂಟಾಗಿ ತಲೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದನ್ನೇ ಮೈಗ್ರೇನ್ ಎಂದು ಕರೆಯುತ್ತೇವೆ.

ಲಕ್ಷಣಗಳು

ಮೈಗ್ರೇನ್‌ನ ಲಕ್ಷಣಗಳು ತಲೆನೋವು ಆರಂಭಗೊಳ್ಳುವುದಕ್ಕೆ ಒಂದೆರಡು ದಿನಗಳ ಮೊದಲೇ ಕಾಣಿಸಿಕೊಳ್ಳಬಹುದು. ಈ ಅವಧಿಯಲ್ಲಿ ಏನಾದರೂ ತಿನ್ನುತ್ತಲೇ ಇರಬೇಕೆಂಬ ತುಡಿತ,ಖಿನ್ನತೆ,ಬಳಲಿಕೆ ಅಥವಾ ಶಕ್ತಿಗುಂದುವಿಕೆ,ಅತಿಕ್ರಿಯಾಶೀಲತೆ,ಆಗಾಗ್ಗೆ ಆಕಳಿಕೆ,ಸಿಡುಕು ಮತ್ತು ಕುತ್ತಿಗೆಯಲ್ಲಿ ಬಿಗಿತ ಇತ್ಯಾದಿ ಲಕ್ಷಣಗಳು ಸಾಮಾನ್ಯವಾಗಿರುತ್ತವೆ.

ಈ ಅವಧಿಯ ಬಳಿಕ ದೃಷ್ಟಿ,ಚಲನವಲನ,ಮಾತು ಮತ್ತು ಸಂವೇದನಾಶೀಲತೆಯಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಸ್ಪಷ್ಟವಾಗಿ ಮಾತನಾಡುವಲ್ಲಿ ತೊಂದರೆಯಾಗಬಹುದು, ಮುಖ,ತೋಳುಗಳು ಅಥವಾ ಕಾಲುಗಳಲ್ಲಿ ಚುಚ್ಚಿದಂತಹ ಅಥವಾ ಜುಮ್ಮೆನಿಸುವ ಅನುಭವ, ಕಣ್ಣಿನ ಬದಿಗಳಲ್ಲಿ ಬೆಳಕಿನ ಬಿಂಬಗಳು ಅಥವಾ ಪ್ರಭಾವಳಿ ಸುತ್ತುತ್ತಿರುವಂತೆ ಅನಿಸುವುದು ಅಥವಾ ತಾತ್ಕಾಲಿಕವಾಗಿ ದೃಷ್ಟಿ ಮಂದಗೊಳ್ಳುವುದು ಇತ್ಯಾದಿಗಳು ಉಂಟಾಗಬಹುದು.

ಮೈಗ್ರೇನ್ ನೋವು ಹೆಚ್ಚಾಗಿ ಹಣೆಯಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಸಾಮಾನ್ಯವಾಗಿ ತಲೆಯ ಒಂದು ಭಾಗಕ್ಕೆ ಸೀಮಿತಗೊಂಡಿರುತ್ತದೆ. ಆದರೆ ಅದು ಎರಡೂ ಬದಿಗಳಲ್ಲಿ ಕಾಣಿಸಿಕೊಳ್ಳಬಹುದು ಅಥವಾ ಒಂದು ಬದಿಯಿಂದ ಇನ್ನೊಂದು ಬದಿಗೆ ಸ್ಥಳಾಂತರ ಗೊಳ್ಳುತ್ತಿರಬಹುದು.

ಹೆಚ್ಚಿನ ಮೈಗ್ರೇನ್ ತಲೆನೋವುಗಳು ನಾಲ್ಕು ಗಂಟೆಗಳವರೆಗೆ ಇರಬಹುದು ಮತ್ತು ಅದಕ್ಕೆ ಚಿಕಿತ್ಸೆ ಪಡೆಯದಿದ್ದರೆ 72ಗಂಟೆಗಳಿಂದ ಒಂದು ವಾರದವರೆಗೂ ಕಾಡಬಹುದು.

ವ್ಯಾಯಾಮವು ಮೈಗ್ರೇನ್ ತಡೆಯಲು ನೆರವಾಗುತ್ತದೆ. ನಿತ್ಯದ ಔಷಧಿಗಳೊಂದಿಗೆ ಬಿರುಸಾದ ನಡಿಗೆ ಅಥವಾ ಓಟವು ಮೈಗ್ರೇನ್ ನಿವಾರಿಸುವಲ್ಲಿ ಪರಿಣಾಮಮಕಾರಿಯಾಗಿದೆ.

ಮಹಿಳೆಯರಲ್ಲಿ ಋತುಚಕ್ರಕ್ಕೂ ಮೈಗ್ರೇನ್‌ಗೂ ನಂಟಿದೆ. ಋತುಚಕ್ರವನ್ನು ನಿಯಂತ್ರಿಸುವ ಹಾರ್ಮೋನ್‌ಗಳು ಮೈಗ್ರೇನ್‌ಗೆ ಕೊಡುಗೆಯನ್ನು ನಿಡುತ್ತವೆ. ಹೆಚ್ಚಿನ ಮಹಿಳೆಯರಲ್ಲಿ ಗರ್ಭಿಣಿಯರಾದಾಗ ಮೈಗ್ರೇನ್ ಕಾಣಿಸಿಕೊಳ್ಳುತ್ತದೆ.

ಮೈಗ್ರೇನ್ ಔಷಧಿಗಳನ್ನು ವಾರಕ್ಕೆ ಮೂರು ಸಲಕ್ಕಿಂತ ಹೆಚ್ಚು ಸೇವಿಸಿದರೆ ಅವೂ ತಲೆನೋವಿಗೆ ಕಾರಣವಾಗುತ್ತವೆ. ಪ್ರತಿಬಾರಿ ಮಾತ್ರೆ ನುಂಗಿದಾಗಲೂ ಅಲ್ಪಾವಧಿಗೆ ನೆಮ್ಮದಿ ಕಾಣಬಹುದು. ಆದರೆ ಕಾಲಕ್ರಮೇಣ ಈ ಔಷಧಿಗಳು ಉಂಟುಮಾಡುವ ತನೋವು ಗುಣವಾಗಲು ವಾರಗಳೇ ಬೇಕಾಗಬಹುದು.

ಖಿನ್ನತೆ ನಿವಾರಕಗಳು ಮೈಗ್ರೇನ್ ಗುಣಪಡಿಸುವಲ್ಲಿ ನೆರವಾಗುತ್ತವೆ. ಕೆಲವು ಖಿನ್ನತೆ ನಿವಾರಕಗಳಲ್ಲಿರುವ ಸಕ್ರಿಯ ಘಟಕಗಳು ಮಿದುಳಿನಲ್ಲಿಯ ರಾಸಾಯನಿಕಗಳ ಮಟ್ಟದಲ್ಲಿ ಬದಲಾವಣೆಗಳನ್ನುಂಟು ಮಾಡುತ್ತವೆ. ಇದು ನೀವು ಖಿನ್ನತೆಗೊಳಗಾಗಿರದಿದ್ದರೂ ಮೈಗ್ರೇನ್‌ನ ಅಪಾಯವನ್ನು ನಿವಾರಿಸುತ್ತದೆ.

ನಿವಾರಣೆ

ಮೈಗ್ರೇನ್ ಉಂಟಾದಾಗ ಕೆಲವರಿಗೆ ಯಾವುದಾದರೂ ನೋವು ನಿವಾರಕ ಮಾತ್ರೆಯನ್ನು ಸೇವಿಸಿದರೆ ಗುಣವಾಗುತ್ತದೆ.

ಕೆಲವರಿಗೆ ಯಾವುದೇ ಮಾತ್ರೆಯನ್ನು ಸೇವಿಸದೇ ನಿಶ್ಶಬ್ದ ಕೊಠಡಿಯಲ್ಲಿ ನಿದ್ರಿಸಿದರೂ ಗುಣವಾಗುತ್ತದೆ. ಜೀವನಶೈಲಿಯಲ್ಲಿ ಬದಲಾವಣೆಗಳು ಕೂಡ ಮೈಗ್ರೇನ್ ನಿವಾರಣೆಯಲ್ಲಿ ನೆರವಾಗುತ್ತವೆ.

 ಸಮಯಕ್ಕೆ ಸರಿಯಾಗಿ ನಿದ್ರೆ,ನಿತ್ಯ ವ್ಯಾಯಾಮ,ಸರಿಯಾಗಿ ಊಟದ ಕ್ರಮ,ಪೌಷ್ಟಿಕ ಆಹಾರ,ತಂಬಾಕು ಮತ್ತು ಮದ್ಯವರ್ಜನ, ಕಾಫಿ ಸೇವನೆಯಲ್ಲಿ ಮಿತಿ ಇವೂ ಮೈಗ್ರೇನ್ ಅಪಾಯವನ್ನು ತಗ್ಗಿಸುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News