ರಶ್ಯ, ಟ್ರಂಪ್ ಪ್ರಚಾರ, ವಿಕಿಲೀಕ್ಸ್ ವಿರುದ್ಧ ಡೆಮಾಕ್ರಟಿಕ್ ವ್ಯಾಜ್ಯ

Update: 2018-04-21 17:36 GMT

ವಾಶಿಂಗ್ಟನ್, ಎ. 21: ರಶ್ಯ ಸರಕಾರ, ಟ್ರಂಪ್ ಪ್ರಚಾರ ತಂಡ ಮತ್ತು ವಿಕಿಲೀಕ್ಸ್ ವಿರುದ್ಧ ಅಮೆರಿಕದ ಡೆಮಾಕ್ರಟಿಕ್ ಪಕ್ಷ ಮ್ಯಾನ್‌ಹಟನ್ ನ್ಯಾಯಾಲಯವೊಂದರಲ್ಲಿ ಮೊಕದ್ದಮೆ ದಾಖಲಿಸಿದೆ.

2016ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವು ಡೊನಾಲ್ಡ್ ಟ್ರಂಪ್ ಪರವಾಗಿ ವಾಲುವಂತೆ ಈ ಮೂರು ಪಕ್ಷಗಳು ಪಿತೂರಿ ಹೂಡಿದ್ದವು ಎಂದು ಡೆಮಾಕ್ರಟಿಕ್ ನ್ಯಾಶನಲ್ ಕಮಿಟಿ (ಡಿಎನ್‌ಸಿ) ಆರೋಪಿಸಿದೆ.

ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್‌ಗೆ ಸೋಲುಣಿಸುವುದಕ್ಕಾಗಿ ಟ್ರಂಪ್ ಪ್ರಚಾರ ತಂಡದ ಅಧಿಕಾರಿಗಳು ರಶ್ಯ ಸರಕಾರದ ಅಧಿಕಾರಿಗಳು ಮತ್ತು ಆ ದೇಶದ ಸೇನಾ ಗುಪ್ತಚರ ಸಂಸ್ಥೆಯೊಂದಿಗೆ ಪಿತೂರಿ ಹೂಡಿದರು ಹಾಗೂ ಈ ಪಿತೂರಿಯ ಭಾಗವಾಗಿ ಡಿಎನ್‌ಸಿಯ ಕಂಪ್ಯೂಟರ್ ಜಾಲಕ್ಕೆ ಕನ್ನ ಹಾಕಿ ಅದರಿಂದ ಕದ್ದ ಮಾಹಿತಿಗಳನ್ನು ಬಹಿರಂಗಗೊಳಿಸಲಾಯಿತು ಎಂದು ಮೊಕದ್ದಮೆಯಲ್ಲಿ ಆರೋಪಿಸಲಾಗಿದೆ ಎಂದು ‘ವಾಶಿಂಗ್ಟನ್ ಪೋಸ್ಟ್’ ವರದಿ ಮಾಡಿದೆ.

2016ರ ಚುನಾವಣೆಯಲ್ಲಿ ರಶ್ಯ ನೆರವನ್ನು ಟ್ರಂಪ್ ಪ್ರಚಾರ ತಂಡ ಸಂತೋಷದಿಂದ ಸ್ವೀಕರಿಸಿತು ಎಂದು ಮೊಕದ್ದಮೆ ಆರೋಪಿಸಿದೆ ಹಾಗೂ ಟ್ರಂಪ್ ಪಚಾರ ತಂಡವನ್ನು ‘ಹಗರಣದ ಉದ್ಯಮ’ ಎಂದು ಬಣ್ಣಿಸಿದೆ.

ಕದ್ದ ಮಾಹಿತಿಗಳನ್ನು ವಿಕಿಲೀಕ್ಸ್ ಮೂಲಕ ಪ್ರಸಾರ ಮಾಡಲಾಗಿದೆ ಎಂದು ಡೆಮಾಕ್ರಟಿಕ್ ಪಕ್ಷ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News