ಮುಂದಿನ ಕಾಮನ್‌ವೆಲ್ತ್ ಮುಖ್ಯಸ್ಥರಾಗಿ ರಾಜಕುಮಾರ ಚಾರ್ಲ್ಸ್

Update: 2018-04-21 17:41 GMT

ಲಂಡನ್, ಎ. 21: ಕಾಮನ್‌ವೆಲ್ತ್ ಮುಖ್ಯಸ್ಥೆ ಬ್ರಿಟನ್ ರಾಣಿ ಎಲಿಝಬೆತ್‌ರ ಉತ್ತರಾಧಿಕಾರಿಯಾಗಿ ರಾಜಕುಮಾರ ಚಾರ್ಲ್ಸ್‌ರನ್ನು ನೇಮಿಸುವ ಪ್ರಸ್ತಾಪಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 53 ಕಾಮನ್‌ವೆಲ್ತ್ ದೇಶಗಳ ಸರಕಾರಗಳ ಮುಖ್ಯಸ್ಥರು ಶುಕ್ರವಾರ ಅಂಗೀಕಾರ ನೀಡಿದ್ದಾರೆ.

ರಾಣಿ ದ್ವಿತೀಯ ಎಲಿಝಬೆತ್ ಶನಿವಾರ 92ನೆ ವರ್ಷಕ್ಕೆ ಕಾಲಿಟ್ಟರು. 1952ರಲ್ಲಿ ತನ್ನ ತಂದೆ ದೊರೆ 6ನೇ ಜಾರ್ಜ್ ಸಾವಿನ ಬಳಿಕ ಎಲಿಝಬೆತ್ ಕಾಮನ್‌ವೆಲ್ತ್ ಮುಖ್ಯಸ್ಥೆಯಾಗಿದ್ದಾರೆ.

 ಕಾಮನ್‌ವೆಲ್ತ್ ಸಂಘಟನೆಯ ಸ್ಥಿರತೆ ಮತ್ತು ನಿರಂತರತೆಯನ್ನು ಮುಂದುವರಿಸಿಕೊಂಡು ಹೋಗುವುದಕ್ಕಾಗಿ ರಾಜಕುಮಾರ ಚಾರ್ಲ್ಸ್ ತನ್ನ ಉತ್ತರಾಧಿಕಾರಿಯಾಗಬೇಕೆಂದು ತಾನು ಪ್ರಾಮಾಣಿಕವಾಗಿ ಬಯಸಿದ್ದೇನೆ ಎಂದು ಅವರು ಬುಧವಾರ ಹೇಳಿದ್ದರು.

 ಕಾಮನ್‌ವೆಲ್ತ್ ಸಂಘಟನೆ ಬಗ್ಗೆ ವರ್ಷಗಳಿಂದ ರಾಜಕುಮಾರ ಹೊಂದಿರುವ ಆಸಕ್ತಿ ಹಾಗೂ ನಾಯಕರು ಅವರಿಗೆ ನೀಡಿರುವ ಬೆಂಬಲವನ್ನು ಗಮನಿಸಿದರೆ ಹುದ್ದೆಯನ್ನು ಅವರು ಪಡೆಯುವುದು ಖಚಿತ ಎಂಬುದಾಗಿ ಭಾವಿಸಲಾಗಿದೆ.

‘‘ಕಾಮನ್‌ವೆಲ್ತ್ ಮತ್ತು ಅದರ ಜನರ ಉದ್ಧಾರಕ್ಕಾಗಿ ರಾಣಿ ವಹಿಸಿದ ಪಾತ್ರವನ್ನು ನಾವು ಗುರುತಿಸಿದ್ದೇವೆ. ಮುಂದಿನ ಕಾಮನ್‌ವೆಲ್ತ್ ಮುಖ್ಯಸ್ಥರು ವೇಲ್ಸ್‌ನ ರಾಜಕುಮಾರ ಚಾರ್ಲ್ಸ್ ಆಗಿರುತ್ತಾರೆ’’ ಎಂದು ಕಾಮನ್‌ವೆಲ್ತ್ ಸರಕಾರಗಳ ಮುಖ್ಯಸ್ಥರ ಸಭೆಯ ಕೊನೆಯಲ್ಲಿ ಹೊರಡಿಸಲಾದ ಹೇಳಿಕೆಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News