ಮಹಿಳೆಯ ಜನನಾಂಗ ಛೇದನ ಪದ್ದತಿ ಅಪರಾಧ: ಕೇಂದ್ರ ಸರಕಾರ

Update: 2018-04-21 18:22 GMT

ಹೊಸದಿಲ್ಲಿ, ಎ.21: ಮಹಿಳೆಯರ ಜನನಾಂಗ ಛೇದನಗೊಳಿಸುವ ಪದ್ದತಿ ಈಗಿನ ಕಾನೂನು ಪ್ರಕಾರ ಅಪರಾಧವಾಗಿದೆ ಎಂದು ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಈಗ ಇರುವ ಕಾನೂನಿನ ಪ್ರಕಾರ ಇಂತಹ ಕೃತ್ಯ ನಡೆಸುವವರಿಗೆ 7 ವರ್ಷದ ಜೈಲುಶಿಕ್ಷೆ ವಿಧಿಸಬಹುದು ಎಂದು ಸುಪ್ರೀಂಕೋರ್ಟ್‌ನ ನ್ಯಾಯಪೀಠಕ್ಕೆ ತಿಳಿಸಿದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್, ಈ ವಿಷಯದ ಬಗ್ಗೆ ಗಮನ ಹರಿಸಿ ಸೂಕ್ತ ಆದೇಶ ನೀಡಬೇಕು ಎಂದು ಮನವಿ ಮಾಡಿಕೊಂಡರು. 

ದಾವೂದಿ ಬೋಹ್ರ ಧಾರ್ಮಿಕ ಸಮುದಾಯದಲ್ಲಿ ಹೆಣ್ಣುಮಕ್ಕಳ ಜನನಾಂಗ ಛೇದನ ಮಾಡುವ ಸಂಪ್ರದಾಯವಿದೆ. ಇದು ಜಾಮೀನುರಹಿತ ಅಪರಾಧ ಹಾಗೂ ಇದನ್ನು ಅಕ್ರಮ, ಅಮಾನವೀಯ ಹಾಗೂ ಅಸಾಂವಿಧಾನಿಕ ಎಂದು ಘೋಷಿಸಲು ಸೂಚಿಸಬೇಕೆಂದು ಕೋರಿ ವಕೀಲೆ ಸುನೀತಾ ತಿಹಾರ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಭಾರತವು ಮಕ್ಕಳ ಹಕ್ಕಿನ ಬಗ್ಗೆ ವಿಶ್ವಸಂಸ್ಥೆಯ ಒಪ್ಪಂದಕ್ಕೆ ಸಹಿ ಹಾಕಿದ್ದು ಇದನ್ನು ಅಂಗೀಕರಿಸಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಕೆಲವು ಸಮುದಾಯಗಳಲ್ಲಿ ಸಂಪ್ರದಾಯದ ಹೆಸರಲ್ಲಿ ಪಾಲಿಸಿಕೊಂಡು ಬರುತ್ತಿರುವ ಕೆಲವು ಆಚರಣೆಗಳನ್ನು ನಿಷೇಧಿಸುವ ಕಾನೂನು ಸಂಸತ್ತಿನಲ್ಲಿ ಜಾರಿಯಾಗುವವರೆಗೆ ಇಂತಹ ಕೃತ್ಯಗಳ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾರ್ಗದರ್ಶಿ ಸೂತ್ರವೊಂದನ್ನು ಸುಪ್ರೀಂಕೋರ್ಟ್ ರೂಪಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News