ರಾಯಲ್ಸ್ ವಿರುದ್ಧ ಗೆಲುವಿನ ಓಟ ಮುಂದುವರಿಸಲು ಮುಂಬೈ ಸಜ್ಜು

Update: 2018-04-21 18:41 GMT

ಜೈಪುರ, ಎ.21: ಕೊನೆಗೂ ಗೆಲುವಿನ ಲಯ ಕಂಡುಕೊಂಡಿರುವ ಮುಂಬೈ ಇಂಡಿಯನ್ಸ್ ತಂಡ ಆತಿಥೇಯ ರಾಜಸ್ಥಾನ ರಾಯಲ್ಸ್ ತಂಡ ವನ್ನು ರವಿವಾರ ಇಲ್ಲಿ ಎದುರಿಸಲಿದ್ದು, ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿದೆ.

ಎರಡು ಬಾರಿಯ ಚಾಂಪಿಯನ್ ಮುಂಬೈ ತಂಡ ಸತತ ಮೂರು ಪಂದ್ಯಗಳಲ್ಲಿ ಸೋಲುವ ಮೂಲಕ ಟೂರ್ನಿಯಲ್ಲಿ ಕಳಪೆ ಆರಂಭ ಪಡೆದಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ 94 ರನ್ ಗಳಿಸಿದ್ದ ನಾಯಕ ರೋಹಿತ್ ಶರ್ಮ ತಂಡವನ್ನು ಗೆಲುವಿನ ಹಳಿಗೆ ತಂದಿದ್ದರು.

ಆರ್‌ಸಿಬಿ ವಿರುದ್ಧ 46 ರನ್‌ಗಳಿಂದ ಜಯ ಸಾಧಿಸಿ ನೈತಿಕ ಸ್ಥೈರ್ಯ ಹೆಚ್ಚಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ನಾಳೆ ಸವಾಯ್ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ರಾಜಸ್ಥಾನದ ಮೇಲೆ ಸವಾರಿ ಮಾಡಲು ಎದುರು ನೋಡುತ್ತಿದೆ.

  ರೋಹಿತ್ ಮುಂಬೈ ತಂಡದ ಪ್ರಮುಖ ಆಟಗಾರನಾಗಿದ್ದಾರೆ. ಕಳೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ನ ಎವಿನ್ ಲೂವಿಸ್ 65 ರನ್ ಗಳಿಸಿದ್ದು, ಕೀರೊನ್ ಪೊಲಾರ್ಡ್ ಹಾಗೂ ಪಾಂಡ್ಯ ಸಹೋದರರಾದ ಹಾರ್ದಿಕ್ ಹಾಗೂ ಕೃನಾಲ್ ಪಾಂಡ್ಯ ತಂಡದಲ್ಲಿದ್ದಾರೆ. ಪೊಲಾರ್ಡ್ ಗಾಯದಿಂದ ಚೇತರಿಸಿಕೊಂಡಿರುವುದು ಮುಂಬೈಗೆ ಸಿಹಿ ಸುದ್ದಿಯಾಗಿದೆ. ಕಳೆದ ಪಂದ್ಯದಲ್ಲಿ ಹಾರ್ದಿಕ್ 5 ಎಸೆತಗಳಲ್ಲಿ 17 ರನ್ ಗಳಿಸಿದ್ದರು. ವಿರಾಟ್ ಕೊಹ್ಲಿ ಹಾಗೂ ಎಬಿಡಿ ವಿಲಿಯರ್ಸ್‌ರಂತಹ ದಾಂಡಿಗರನ್ನು ಕಟ್ಟಿಹಾಕಿದ್ದ ಮುಂಬೈ ಬೌಲರ್‌ಗಳು ಆತ್ಮವಿಶ್ವಾಸ ಹೆಚ್ಚಿ ಸಿಕೊಂಡಿದ್ದಾರೆ. ಭಾರತದ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಬೌಲಿಂಗ್ ದಾಳಿ ಬಲಿಷ್ಠವಾಗಿದ್ದು, ಎಂ.ಜೆ. ಮೆಕ್ಲಿನಘನ್, ಹಾರ್ದಿಕ್, ಮುಸ್ತಫಿಝುರ್ರಹ್ಮಾನ್, ಎಂ.ಮರ್ಕಂಡೆ ಹಾಗೂ ಕೃನಾಲ್ ಅವರಿದ್ದಾರೆ. ಆರ್‌ಸಿಬಿ ತಂಡ ಅಂಕಪಟ್ಟಿಯಲ್ಲಿ ಕೇವಲ 2 ಅಂಕ ಗಳಿಸಿ ಆರನೇ ಸ್ಥಾನದಲ್ಲಿದೆ. ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಸೋತಿದೆ. ಇಂತಹ ಪರಿಸ್ಥಿತಿ ಆರ್‌ಸಿಬಿಗೆ ಹೊಸತಲ್ಲ. ಈ ಹಿಂದೆಯೂ ಇಂತಹ ಪರಿಸ್ಥಿತಿಯಿಂದ ಚೇತರಿಸಿಕೊಂಡಿತ್ತು.

ಆತಿಥೇಯ ರಾಯಲ್ಸ್ ತಂಡ ಕಳೆದ ಪಂದ್ಯದಲ್ಲಿ ವಾಟ್ಸನ್ ದಾಳಿಗೆ ಸಿಲುಕಿ ಹೀನಾಯ ಸೋಲುಂಡಿತ್ತು. ಚೆನ್ನೈ ವಿರುದ್ಧ ಸೋಲಿನಿಂದ ಚೇತರಿಸಿಕೊಳ್ಳಲು ಹೆಚ್ಚು ಸಮಯವೂ ಇಲ್ಲವಾಗಿದೆ. ನಾಯಕ ಅಜಿಂಕ್ಯ ರಹಾನೆ ಎಲ್ಲರಿಗೂ ಮಾದರಿಯಾಗಿ ತಂಡವನ್ನು ಮುನ್ನಡೆಸಬೇಕಾಗಿದೆ. ಸಂಜು ಸ್ಯಾಮ್ಸನ್ ಒಂದು ಪಂದ್ಯದಲ್ಲಿ 94 ರನ್ ಗಳಿಸಿದ್ದರು. ಆದರೆ, ಇನ್ನುಳಿದ ಪಂದ್ಯಗಳಲ್ಲಿ ವಿಫಲರಾಗಿದ್ದಾರೆ. ಬೌಲಿಂಗ್‌ನಲ್ಲಿ ಹಿರಿಯ ವೇಗದ ಬೌಲರ್ ಜೈದೇವ್ ಉನದ್ಕಟ್ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ರಾಜಸ್ಥಾನ ತಂಡದ ಸಲಹೆಗಾರ ಸ್ಪಿನ್ ಲೆಜೆಂಡ್ ಶೇನ್ ವಾರ್ನ್ ಸೇವೆಯಿಂದ ವಂಚಿತವಾಗುತ್ತಿದೆ. ವಾರ್ನ್ ತುರ್ತು ಕೆಲಸದ ನಿಮಿತ್ತ ಸ್ವದೇಶಕ್ಕೆ ವಾಪಸಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News