ಚೆನ್ನೈಗೆ ಸನ್‌ರೈಸರ್ಸ್ ಹೈದರಾಬಾದ್ ಎದುರಾಳಿ

Update: 2018-04-21 18:49 GMT

ಹೈದರಾಬಾದ್, ಎ.21: ಸನ್‌ರೈಸರ್ಸ್ ಹೈದರಾಬಾದ್ ತಂಡ ರವಿವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

ಟೂರ್ನಮೆಂಟ್‌ನಲ್ಲಿ ಅಜೇಯ ಗೆಲುವಿನ ಓಟದಲ್ಲಿದ್ದ ಹೈದರಾಬಾದ್‌ಗೆ ಗೇಲ್ ಬಿರುಗಾಳಿ ಬ್ಯಾಟಿಂಗ್‌ನ ಮೂಲಕ ಬ್ರೇಕ್ ಹಾಕಿದ್ದರು.

ಉಭಯ ತಂಡಗಳು ಈ ತನಕ ತಲಾ 4 ಪಂದ್ಯಗಳನ್ನು ಆಡಿದ್ದು ಆರು ಅಂಕ ಪಡೆದಿವೆ. ಈವರೆಗೆ ಕೇವಲ ಒಂದು ಪಂದ್ಯದಲ್ಲಿ ಸೋತಿವೆ. ಉಪ್ಪಲ್‌ನ ರಾಜೀವ್‌ಗಾಂಧಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಜಯ ಸಾಧಿಸುವ ತಂಡ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಲಿದೆ.

 ಸನ್‌ರೈಸರ್ಸ್ ತಂಡ ಸತತ ಮೂರು ಪಂದ್ಯಗಳನ್ನು ಜಯಿಸುವ ಮೂಲಕ ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆದಿತ್ತು. ಹ್ಯಾಟ್ರಿಕ್ ಗೆಲುವಿನಿಂದ ಬೀಗುತ್ತಿದ್ದ ಸನ್‌ರೈಸರ್ಸ್‌ಗೆ ವೆಸ್ಟ್‌ಇಂಡೀಸ್‌ನ ಸ್ಟಾರ್ ದಾಂಡಿಗ ಕ್ರಿಸ್ ಗೇಲ್ ಕಡಿವಾಣ ಹಾಕಿದ್ದಾರೆ.ಮೊಹಾಲಿಯಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಗೇಲ್ 63 ಎಸೆತಗಳಲ್ಲಿ ಔಟಾಗದೆ 104 ರನ್ ಗಳಿಸಿ ಸನ್‌ರೈಸರ್ಸ್ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದ್ದರು.

ಚೆನ್ನೈ ತಂಡ ಟೂರ್ನಿಯಲ್ಲಿ ಮೊದಲ ಎರಡು ಪಂದ್ಯಗಳನ್ನು ಜಯಿಸಿದ ಬಳಿಕ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸೋತಿತ್ತು. ಶುಕ್ರವಾರ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 64 ರನ್‌ಗಳಿಂದ ಗೆಲುವು ಸಾಧಿಸಿರುವ ಚೆನ್ನೈ ತಂಡ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಆಸ್ಟ್ರೇಲಿಯದ ಮಾಜಿ ಹಿರಿಯ ದಾಂಡಿಗ ವಾಟ್ಸನ್ 57 ಎಸೆತಗಳಲ್ಲಿ 106 ರನ್ ಗಳಿಸಿ ಚೆನ್ನೈ ಭರ್ಜರಿ ಗೆಲುವಿಗೆ ಕಾರಣರಾದರು.

 ವಾಟ್ಸನ್ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದು, ಆಲ್‌ರೌಂಡ್ ಪ್ರದರ್ಶನ ನೀಡುತ್ತಿದ್ದಾರೆ. ಪ್ರಸ್ತುತ ಅವರು ಚೆನ್ನೈನ ಅಗ್ರ ಸ್ಕೋರರ್ ಹಾಗೂ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ವಾಟ್ಸನ್ ರವಿವಾರ ಈ ವರ್ಷದ ಐಪಿಎಲ್‌ನ ಸಮತೋಲಿತ ತಂಡದ ಪೈಕಿ ಒಂದಾಗಿರುವ ಹೈದರಾಬಾದ್‌ನ್ನು ಎದುರಿಸಲಿದ್ದಾರೆ.

 ಸನ್‌ರೈಸರ್ಸ್‌ನ ಪ್ರಮುಖ ಬೌಲರ್‌ಗಳಾದ ಭುವನೇಶ್ವರ ಕುಮಾರ್, ಸಿದ್ದಾರ್ಥ್ ಕೌಲ್, ಬಿಲ್ಲಿ ಸ್ಟಾನ್‌ಲೇಕ್ ಹಾಗೂ ಶಾಕಿಬ್ ಅಲ್ ಹಸನ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅಫ್ಘಾನಿಸ್ತಾನದ ಯುವ ಬೌಲರ್ ರಶೀದ್ ಖಾನ್ 4 ಪಂದ್ಯಗಳಲ್ಲಿ ಕೇವಲ 3 ವಿಕೆಟ್‌ಗಳನ್ನು ಪಡೆದು ಪರದಾಟ ನಡೆಸುತ್ತಿದ್ದಾರೆ. ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ರಶೀದ್ ಅವರು ಗೇಲ್ ಅಬ್ಬರಕ್ಕೆ ತತ್ತರಿಸಿದ್ದು 1 ವಿಕೆಟ್‌ಗೆ 55 ರನ್ ನೀಡಿದ್ದರು. ಸಿದ್ದಾರ್ಥ್ ಕೌಲ್ ಟೂರ್ನಿಯಲ್ಲಿ ಈತನಕ 6 ವಿಕೆಟ್‌ಗಳನ್ನು ಕಬಳಿಸಿದ್ದರೆ, ಕುಮಾರ್, ಸ್ಟಾನ್‌ಲೇಕ್ ಹಾಗೂ ಶಾಕಿಬ್ ತಲಾ 5 ವಿಕೆಟ್‌ಗಳನ್ನು ಪಡೆದಿದ್ದಾರೆ. ಸನ್‌ರೈಸರ್ಸ್‌ನ ಬೌಲಿಂಗ್ ವಿಭಾಗದ ಅತ್ಯುತ್ತಮವಾಗಿದೆ. ಚೆನ್ನೈ ಪರ ಆರು ವಿಕೆಟ್‌ಗಳನ್ನು ಕಬಳಿಸಿರುವ ವಾಟ್ಸನ್ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಸೂಪರ್‌ಕಿಂಗ್ಸ್ ಬಲಿಷ್ಠವಾಗಿದೆ. ಏಳನೇ ಕ್ರಮಾಂಕದ ತನಕ ಉತ್ತಮ ದಾಂಡಿಗರಿದ್ದಾರೆ. ಬ್ಯಾಟಿಂಗ್ ವಿಭಾಗವನ್ನು ಮುನ್ನಡೆಸುತ್ತಿದ್ದ ವಾಟ್ಸನ್‌ಗೆ ಅಂಬಟಿ ರಾಯುಡು, ಎಂಎಸ್ ಧೋನಿ ಸಾಥ್ ನೀಡುತ್ತಿದ್ದಾರೆ. ಇಂಗ್ಲೆಂಡ್‌ನ ಸ್ಯಾಮ್ ಬಿಲ್ಲಿಂಗ್ಸ್ ಹಾಗೂ ವೆಸ್ಟ್‌ಇಂಡೀಸ್‌ನ ಡ್ವೇಯ್ನ್ ಬ್ರಾವೊ ಬೌಲಿಂಗ್‌ನ ಜೊತೆಗೆ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಆಸರೆಯಾಗುತ್ತಿದ್ದಾರೆ.

ಸನ್‌ರೈಸರ್ಸ್ ತಂಡದಲ್ಲಿ ಕೇನ್ ವಿಲಿಯಮ್ಸನ್ ಹಾಗೂ ಶಿಖರ್ ಧವನ್ ಪ್ರಮುಖ ದಾಂಡಿಗರಾಗಿದ್ದಾರೆ. ಈ ಇಬ್ಬರು ಈವರೆಗೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಚೆಂಡು ಮಣಿಕಟ್ಟಿಗೆ ತಾಗಿದ ಕಾರಣ ಗಾಯಗೊಂಡು ನಿವೃತ್ತಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News