ನಾನು ವೈದ್ಯನಾಗಿ, ತಂದೆಯಾಗಿ, ಜವಾಬ್ದಾರಿಯುತ ನಾಗರಿಕನಾಗಿ ಮಕ್ಕಳ ಜೀವ ಉಳಿಸಲು ಪ್ರಯತ್ನಿಸಿದೆ

Update: 2018-04-22 09:43 GMT

ಹೊಸದಿಲ್ಲಿ, ಎ.22: "ನಾನು ನಿಜವಾಗಿಯೂ ತಪ್ಪೆಸಗಿದ್ದೇನೆಯೇ ಎಂಬ ಪ್ರಶ್ನೆಯನ್ನು ಕೆಲವೊಮ್ಮೆ ನನಗೆ ನಾನೇ ಕೇಳಿಕೊಳ್ಳುತ್ತೇನೆ. ತಕ್ಷಣ ಹೃದಯಾಂತರಾಳದಿಂದ ಬರುವ ಉತ್ತರ ಇಲ್ಲ, ಇಲ್ಲ, ಎನ್ನುವುದು"... ಇದು ಗೋರಖ್‍ಪುರ ದುರಂತದಲ್ಲಿ ಹಲವು ಮಕ್ಕಳ ಪ್ರಾಣ ಉಳಿಸಿ ಇದೀಗ ಜೈಲು ಪಾಲಾಗಿರುವ ಡಾ.ಕಫೀಲ್ ಖಾನ್ ಅವರ ಪತ್ರ.

ಗೋರಖ್‍ಪುರ ದುರಂತದ ಮೊದಲ ದಿನವಾದ 2017ರ ಆಗಸ್ಟ್ ನಿಂದೀಚೆಗೆ ಡಾ.ಖಾನ್ ಜೈಲಿನಲ್ಲಿದ್ದಾರೆ. ಅವರ ಜಾಮೀನು ಅರ್ಜಿಯ ವಿಚಾರಣೆ ಇದುವರೆಗೆ ಒಂದು ದಿನವೂ ನಡೆದಿಲ್ಲ. ತಾನು ನಿರಪರಾಧಿ ಎಂದು ಕಫೀಲ್ ಖಾನ್ ಪತ್ರ ಬರೆದಿದ್ದು, "ಉನ್ನತ ಮಟ್ಟದ ಆಡಳಿತಾತ್ಮಕ ವೈಫಲ್ಯತೆಗೆ ನಾನು ಸೇರಿ ಇತರರನ್ನು ಬಲಿಪಶು ಮಾಡಲಾಗಿದೆ" ಎಂದಿದ್ದಾರೆ.

ಈ ಬಗ್ಗೆ ಎಪ್ರಿಲ್ 18ರಂದು ಕಫೀಲ್ ಖಾನ್ ಜೈಲಿನಿಂದಲೇ ಪತ್ರ ಬರೆದಿದ್ದು, ಅವರ ಪತ್ನಿ ಶಬಿಸ್ತಾ ಪತ್ರಿಕಾಗೋಷ್ಟಿಯಲ್ಲಿ ಅದನ್ನು ಬಿಡುಗಡೆಗೊಳಿಸಿದ್ದಾರೆ. 2017 ಆಗಸ್ಟ್ 10ರಂದು ತಾನು ರಜೆಯಲ್ಲಿದ್ದೆ. ಆಸ್ಪತ್ರೆಯಲ್ಲಿ ಮಕ್ಕಳ ಸಾವಿನ ಬಗ್ಗೆ ಸುದ್ದಿ ತಿಳಿದ ತಕ್ಷಣ ನಾನು ಆಸ್ಪತ್ರೆಗೆ ಧಾವಿಸಿದೆ. "ಆ ದುರದೃಷ್ಟಕರ ರಾತ್ರಿಯ ಬಗ್ಗೆ ನನಗೆ ವಾಟ್ಸ್ಯಾಪ್ ಸಂದೇಶ ಲಭಿಸಿದ ಕೂಡಲೇ ಸ್ಥಳಕ್ಕೆ ತೆರಳಿದೆ. ನಾನು ವೈದ್ಯನಾಗಿ, ಒಬ್ಬ ತಂದೆಯಾಗಿ, ಭಾರತದ ಜವಾಬ್ದಾರಿಯುತ ನಾಗರಿಕನಾಗಿ ಅಪಾಯದಲ್ಲಿದ್ದ ಪ್ರತಿ ಜೀವವನ್ನು ರಕ್ಷಿಸಲು ಪ್ರಯತ್ನಿಸಿದೆ" ಎಂದವರು ಪತ್ರದಲ್ಲಿ ತಿಳಿಸಿದ್ದಾರೆ. 

ಪುಷ್ಪಾ ಸೇಲ್ಸ್ 14 ಬಾರಿ ಪತ್ರ ಕಳುಹಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಗೋರಖ್ ಪುರದ ಡಿಎಂ, ಡಿಜಿಎಂಇ ತಪ್ಪಿತಸ್ಥರು. ಇದು ಉನ್ನತ ಮಟ್ಟದ ಆಡಳಿತಾತ್ಮಕ ವೈಫಲ್ಯ. ಅವರು ನಮ್ಮನ್ನು ಬಲಿಪಶುಗಳನ್ನಾಗಿ ಮಾಡಿ ಕಂಬಿ ಹಿಂದೆ ತಳ್ಳಿದ್ದಾರೆ ಎಂದು ಕಫೀಲ್ ಖಾನ್ ತಿಳಿಸಿದ್ದಾರೆ.

ಆದಿತ್ಯನಾಥ್ ತನ್ನನ್ನು ಭೇಟಿಯಾದ ನಂತರ ಬದುಕು ತಲೆಕೆಳಗಾಯಿತು. "ಡಾ. ಕಫೀಲ್ ನೀವಾ ಎಂದು ಅವರು ಕೇಳಿದರು. ನೀವು ಸಿಲಿಂಡರ್ ವ್ಯವಸ್ಥೆ ಮಾಡಿದ್ದೀರಾ?... ನಾನು ಹೌದು ಎಂದೆ. ಕೂಡಲೇ ಅವರಿಗೆ ಕೋಪ ಬಂದಿತ್ತು. ಸಿಲಿಂಡರ್ ತಲುಪಿಸುವ ಮೂಲಕ ನೀವು ಹೀರೋ ಆಗುತ್ತೀರಿ ಎಂದು ಭಾವಿಸಿದ್ದೀರಾ? ಎಂದವರು ಪ್ರಶ್ನಿಸಿದರು. ಈ ಘಟನೆ ಮಾಧ್ಯಮಗಳಲ್ಲಿ ವರದಿಯಾಗಿದ್ದಕ್ಕೆ ಅವರು ಆಕ್ರೋಶ ವ್ಯಕ್ತಪಡಿಸಿದ್ದರು" ಎಂದು ಕಫೀಲ್ ಖಾನ್ ಬರೆದಿದ್ದಾರೆ.

"ನನ್ನ ಪತಿ ಯಾವುದೇ ಅಪರಾಧ ಎಸಗಿಲ್ಲ. ಅವರಿಗೆ ಬೇಕಿದ್ದರೆ ತುರ್ತು ಸಮಯದಲ್ಲೂ ಮನೆಯಲ್ಲೇ ಇರಬಹುದಿತ್ತು. ಹಲವು ಸಂದರ್ಭಗಳಲ್ಲಿ ಮಾಸ್ಕ್, ಗ್ಲೌಸ್ ಗಳಿಗೆ ನನ್ನ ಪತಿಯೇ ಹಣ ಪಾವತಿಸಿದ್ದರು" ಎಂದು ಕಫೀಲ್ ಖಾನ್ ಪತ್ನಿ ಶಬಿಸ್ತಾ ಹೇಳಿದರು.

ಗೋರಖ್‍ಪುರ ಬಿಆರ್ ಡಿ ವೈದ್ಯಕೀಯ ಕಾಲೇಜು ದುರಂತಕ್ಕೆ ಸಂಬಂಧಿಸಿ ಕಫೀಲ್ ಖಾನ್ ರನ್ನು ಬಂಧಿಸಲಾಗಿತ್ತು. ಖಾನ್ ಆ ದಿನ ವಾಸ್ತವವಾಗಿ ರಜೆಯಲ್ಲಿದ್ದರು. ಆದರೂ ಸುದ್ದಿ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಆಸ್ಪತ್ರೆಗಳಿಂದ ಮತ್ತು ಕಂಪನಿಗಳಿಂದ ಆಮ್ಲಜನಕ ಸಿಲಿಂಡರ್ ಒಟ್ಟುಗೂಡಿಸಲು ಆರಂಭಿಸಿದ್ದರು. ರೋಗಿಗಳನ್ನು ಬದುಕಿಸಲು ಇನ್ನಿಲ್ಲದ ಪ್ರಯತ್ನ ಮಾಡಿದ್ದರು.

ಜೈಲಿನಲ್ಲಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಪತ್ನಿ ಡಾ.ಸಬಿಷ್ಟಾ ಖಾನ್ ನ್ಯಾಯಕ್ಕಾಗಿ ಮೊರೆ ಹೋಗಿದ್ದಾರೆ. ಹೃದ್ರೋಗಿಯಾಗಿರುವ ಡಾ.ಖಾನ್‍ಗೆ ಅಧಿಕ ರಕ್ತ ಒತ್ತಡ ಸಮಸ್ಯೆಯೂ ಇದೆ. ಖಿನ್ನತೆ ಹಾಗೂ ಭೀತಿಯಿಂದ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಡುತ್ತಿದೆ. ತೀವ್ರ ಎದೆನೋವಿನಿಂದ ಬಳಲುತ್ತಿದ್ದ ಖಾನ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಕುಟುಂಬ ಒತ್ತಡ ತಂದಿತ್ತು. ಆದರೆ ಇದಕ್ಕೂ ವಿಳಂಬ ಮಾಡಲಾಯಿತು. ಇಸಿಜಿ ಹಾಗೂ ರಕ್ತ ಪರೀಕ್ಷೆ ನಡೆದಿದ್ದು, ಇನ್ನೂ ಕೆಲ ತಪಾಸಣೆಗಳು ಆಗಬೇಕಿವೆ. ಆದರೆ ವೈದ್ಯಕೀಯ ತಪಾಸಣೆ ವರದಿಯ ಬಗ್ಗೆ ನಮಗೆ ಯಾವ ಮಾಹಿತಿಯನ್ನೂ ನೀಡಿಲ್ಲ ಎಂದು ಅವರು ಆಪಾದಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News