ನಿಮ್ಮ ದೇಹದಲ್ಲಿರುವ ಈ ಕೊರತೆಯು ಮಧುಮೇಹದ ಅಪಾಯವನ್ನು 5 ಪಟ್ಟು ಹೆಚ್ಚಿಸಬಹುದು

Update: 2018-04-22 13:04 GMT

‘ಸನ್‌ಶೈನ್ ವಿಟಾಮಿನ್’ ಎಂದು ಹೆಸರಾಗಿರುವ ವಿಟಾಮಿನ್ ಡಿ ಕೊರತೆ ನಿಮ್ಮಲ್ಲಿದೆಯೇ? ಹಾಗಿದ್ದರೆ ಎಚ್ಚರಿಕೆಯಿಂದಿರಿ, ಡಯಾಬಿಟಿಸ್ ಅಥವಾ ಮಧುಮೇಹಕ್ಕೆ ತುತ್ತಾಗುವ ಅಪಾಯ ನಿಮಗೆ ಹೆಚ್ಚಿರಬಹುದು.

ಬ್ಲಡ್ ಪ್ಲಾಸ್ಮಾ ಅಥವಾ ರಕ್ತಕಣದ ಜೀವದ್ರವ್ಯದಲ್ಲಿ ಪ್ರತಿ ಎಂಎಲ್‌ಗೆ 50 ನ್ಯಾನೋಗ್ರಾಮ್(ಎನ್‌ಜಿ) 25-ಹೈಡ್ರಾಕ್ಸಿವಿಟಾಮಿನ್ ಡಿ ಮಟ್ಟ ಹೊಂದಿರುವವರಿಗೆ ಹೋಲಿಸಿದರೆ 30 ಎನ್‌ಜಿ/ಎಂಎಲ್‌ಗಿಂತ ಕಡಿಮೆ ಮಟ್ಟ ಹೊಂದಿರುವವರು ಮಧುಮೇಹಕ್ಕೆ ಗುರಿಯಾಗುವ ಸಾಧ್ಯತೆ ಐದು ಪಟ್ಟು ಹೆಚ್ಚಾಗಿರುತ್ತದೆ ಎಂದು ದಕ್ಷಿಣ ಕೊರಿಯಾದ ಸಿಯೋಲ್ ನ್ಯಾಷನಲ್ ಯುನಿವರ್ಸಿಟಿ ಕಾಲೇಜಿನ ಸಂಶೋಧಕರ ತಂಡವು ಪತ್ತೆ ಹಚ್ಚಿದೆ. 30 ಎನ್‌ಜಿ/ಎಂಎಲ್‌ಗಿಂತ ಹೆಚ್ಚು, ಆದರೆ 50 ಎನ್‌ಜಿ/ಎಂಎಲ್‌ಗಿಂತ ಕಡಿಮೆ 25-ಹೈಡ್ರಾಕ್ಸಿವಿಟಾಮಿನ್ ಡಿ ಹೊಂದಿರುವವರಲ್ಲಿ ಈ ಅಪಾಯ ಮೂರು ಪಟ್ಟು ಹೆಚ್ಚಿರುತ್ತದೆ ಎನ್ನುವುದೂ ಸಂಶೋಧನೆಯಲ್ಲಿ ಬೆಳಕಿಗೆ ಬಂದಿದೆ.

ಜರ್ನಲ್ ಪಿಎಲ್‌ಒಎಸ್ ವನ್‌ನಲ್ಲಿ ಇತ್ತೀಚಿಗೆ ಪ್ರಕಟಗೊಂಡಿರುವ ಸಂಶೋಧನಾ ವರದಿಯಂತೆ ತಂಡವು ಪ್ರಿ-ಡಯಾಬಿಟಿಸ್ ಅಥವಾ ಡಯಾಬಿಟಿಸ್‌ನ ಯಾವುದೇ ಲಕ್ಷಣಗಳಿಲ್ಲದ ಸರಾಸರಿ 74 ವರ್ಷ ವಯೋಮಾನದ 903 ಆರೋಗ್ಯವಂತ ವ್ಯಕ್ತಿಗಳನ್ನು ತನ್ನ ಅಧ್ಯಯನಕ್ಕೊಳಪಡಿಸಿತ್ತು.

ಬ್ಲಡ್ ಪ್ಲಾಸ್ಮಾದಲ್ಲಿ 25-ಹೈಡ್ರಾಕ್ಸಿವಿಟಾಮಿನ್ ಡಿಯ ಕನಿಷ್ಠ ಆರೋಗ್ಯಕರ ಮಟ್ಟವು 30 ಎನ್‌ಜಿ/ಎಂಎಲ್ ಇರಬೇಕು ಎನ್ನುವುದನ್ನು ಸಂಶೋಧಕರು ಕಂಡುಕೊಂಡಿದ್ದು,ಇದಕ್ಕಾಗಿ ಪ್ರತಿದಿನದ ಆಹಾರ ಸೇವನೆ 3,000ದಿಂದ 5,000 ಇಂಟರ್‌ನ್ಯಾಷನಲ್ ಯುನಿಟ್(ಐಯು)ನೊಳಗೆ ಇರಬೇಕು ಮತ್ತು ಕನಿಷ್ಠ ಬಟ್ಟೆಯಲ್ಲಿ ಸುಮಾರು 10-15 ನಿಮಿಷಗಳ ಕಾಲ ಸೂರ್ಯನ ಬಿಸಿಲಿಗೆ ಮೈಯೊಡ್ಡಿಕೊಳ್ಳುವುದು ಅಗತ್ಯವಾಗಿದೆ.

ಸದ್ಯದ ಶಿಫಾರಸಿನಂತೆ ಒಂದು ವರ್ಷದವರೆಗಿನ ಮಕ್ಕಳಿಗೆ ಪ್ರತಿದಿನ ಸರಾಸರಿ 400 ಐಯುಗಳಷ್ಟು ವಿಟಾಮಿನ್ ಡಿ ಅಗತ್ಯವಾಗಿದೆ. 1ರಿಂದ 70 ವರ್ಷದವರೆಗಿನ ವ್ಯಕ್ತಿಗಳಿಗೆ 600 ಐಯು(ಗರ್ಭಿಣಿಯರು ಮತ್ತು ಎದೆಹಾಲೂಡಿಸುತ್ತಿರುವ ತಾಯಂದಿರಿಗೆ ಕಡಿಮೆ) ಮತ್ತು 70 ವರ್ಷಕ್ಕೂ ಹೆಚ್ಚು ಪ್ರಾಯದ ವ್ಯಕ್ತಿಗಳಿಗೆ 800 ಐಯು ವಿಟಾಮಿನ್ ಡಿ ಅಗತ್ಯ ವಾಗಿದೆ.

ಸಾಮಾನ್ಯವಾಗಿ ಪ್ರತಿದಿನ ಹೆಚ್ಚು ವಿಟಾಮಿನ್ ಡಿ ಸೇವನೆ ಸುರಕ್ಷಿತವೆಂದು ಪರಿಗಣಿಸಲಾಗಿದೆ. ಆದರೆ 125 ಎನ್‌ಜಿ/ಎಂಎಲ್‌ಗಿಂತ ಹೆಚ್ಚಿನ ಬ್ಲಡ್ ಸೀರಂ ಮಟ್ಟವು ವಾಕರಿಕೆ,ಮಲಬದ್ಧತೆ,ತೂಕನಷ್ಟ,ಎದೆಬಡಿತ ಸಮಸ್ಯೆ ಮತ್ತು ಮೂತ್ರಪಿಂಡ ಹಾನಿಯಂತಹ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು ಎನ್ನುತ್ತಾರೆ ಸಂಶೋಧಕರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News