ಚಾಲಕ ಮುಸ್ಲಿಮ್ ಆಗಿದ್ದ ಕಾರಣ ಕ್ಯಾಬ್ ರದ್ದು ಮಾಡಿದೆ ಎಂದವನ ವಿರುದ್ಧ ಟ್ವಿಟರಿಗರ ಆಕ್ರೋಶ

Update: 2018-04-22 15:54 GMT

#ಈತನ ಫೇಸ್ ಬುಕ್ ನಲ್ಲಿದೆ ಪ್ರಧಾನಿ ಜೊತೆಗಿರುವ ಫೋಟೊ!

ಹೊಸದಿಲ್ಲಿ, ಎ.22: ಕಾರು ಚಾಲಕ ಮುಸ್ಲಿಮ್ ಆಗಿದ್ದ ಕಾರಣ ತಾನು ಓಲಾ ಕ್ಯಾಬನ್ನು ರದ್ದು ಮಾಡಿದೆ ಎಂದು ಯುವಕನೊಬ್ಬ ಮಾಡಿರುವ ಟ್ವೀಟ್ ಇದೀಗ ಭಾರೀ ವಿವಾದ ಸೃಷ್ಟಿಸಿದೆ. ಈತನನ್ನು ಅಭಿಷೇಕ್ ಮಿಶ್ರಾ ಎಂದು ಗುರುತಿಸಲಾಗಿದ್ದು, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತ ಎನ್ನಲಾಗಿದೆ.

“ಜಿಹಾದಿ”ಗಳಿಗೆ ಹಣ ಕೊಡಲು ಇಚ್ಛಿಸದ ಕಾರಣ ಕ್ಯಾಬನ್ನು ರದ್ದು ಮಾಡಿದೆ ಎಂದು ಈತ ಎಪ್ರಿಲ್ 20ರಂದು ಟ್ವೀಟ್ ಮಾಡಿದ್ದ. “ಚಾಲಕ ಮುಸ್ಲಿಮನಾಗಿದ್ದರಿಂದ ಓಲಾ ಕ್ಯಾಬ್ ಬುಕಿಂಗ್ ರದ್ದು ಮಾಡಿದೆ. ಜಿಹಾದಿ ಜನರಿಗೆ ನನ್ನ ಹಣ ನೀಡಲು ಬಯಸುವುದಿಲ್ಲ” ಎಂದು ಆತ ಟ್ವೀಟ್ ಮಾಡಿದ್ದ. ಕೂಡಲೇ ಟ್ವಿಟರಿಗರು ಈತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅವನನ್ನು ಬ್ಯಾನ್ ಮಾಡುವಂತೆ ಒತ್ತಾಯಿಸಿದರು. ಆದರೆ ವಿಪರ್ಯಾಸವೆಂದರೆ ಟ್ವಿಟರ್ ನಲ್ಲಿ ಈತನಿಗೆ 14,000 ಫಾಲೋವರ್ಸ್ ಇದ್ದು, ಈ ಪಟ್ಟಿಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹಾಗು ಮತ್ತೋರ್ವ ಕೇಂದ್ರ ಸಚಿವ ಮಹೇಶ್ ಶರ್ಮಾ ಇದ್ದಾರೆ.

ದ್ವೇಷ ಕಾರುವ ಟ್ವೀಟ್ ಮಾಡಿದ್ದ ಅಭಿಷೇಕ್ ಮಿಶ್ರಾನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾದ ನಂತರ, ಪ್ರತಿಕ್ರಿಯಿಸಿದ ಓಲಾ ಕ್ಯಾಬ್, “ಓಲಾ ನಮ್ಮ ದೇಶದ ಹಾಗೆ. ಅದೊಂದು ಜಾತ್ಯಾತೀತ ವೇದಿಕೆಯಾಗಿದೆ. ಜಾತಿ, ಧರ್ಮ, ಲಿಂಗದ ಆಧಾರದಲ್ಲಿ ನಾವು ಚಾಲಕರನ್ನೋ, ಗ್ರಾಹಕರನ್ನೋ ವಿಂಗಡಿಸುವುದಿಲ್ಲ. ಪರಸ್ಪರರನ್ನು ಗೌರವಿಸುವಂತೆ ನಾವು ಪ್ರತಿ ಬಾರಿ ಚಾಲಕರಲ್ಲೂ, ಗ್ರಾಹಕರಲ್ಲೂ ವಿನಂತಿಸುತ್ತೇವೆ” ಎಂದಿದೆ.

ಅಭಿಷೇಕ್ ಅಯೋಧ್ಯೆಯವಾನಾಗಿದ್ದು, ಲಕ್ನೋದಲ್ಲಿ ಐಟಿ ಉದ್ಯೋಗದಲ್ಲಿದ್ದಾನೆ ಎಂದು ಆತನ ಫೇಸ್ ಬುಕ್ ಪ್ರೊಫೈಲ್ ಹೇಳುತ್ತದೆ. ತಾನು ವಿಶ್ವ ಹಿಂದೂ ಪರಿಷತ್ ಹಾಗು ಬಜರಂಗದಳದ ಸಕ್ರಿಯ ಸದಸ್ಯ ಎಂದು ಆತ ಉಲ್ಲೇಖಿಸಿದ್ದಾನೆ. ಪ್ರಧಾನಿ ಮೋದಿ ಜೊತೆಗಿರುವ ಫೋಟೊ ಕೂಡ ಈತನ ಫೇಸ್ ಬುಕ್ ಪೇಜ್ ನಲ್ಲಿದೆ. ದ್ವೇಷಕಾರುವ ಟ್ವಿಟರ್ ಖಾತೆಗಳನ್ನು ಪ್ರಧಾನಿ ನರೇಂದ್ರ ಮೋದಿ ಸಹಿತ ಹಲವು ಕೇಂದ್ರ ಸಚಿವರು ಫಾಲೋ ಮಾಡುತ್ತಿರುವ ಬಗ್ಗೆ ಈ ಹಿಂದೆಯೂ ವರದಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News