ಕೈತುಂಬಾ ಸಂಬಳದ ಉದ್ಯೋಗ ತೊರೆದು ಹೊಸ ರಾಜಕೀಯ ಪಕ್ಷ ಸ್ಥಾಪನೆಯತ್ತ ಐಐಟಿ ಪದವೀಧರರು

Update: 2018-04-22 16:22 GMT

ಹೊಸದಿಲ್ಲಿ, ಎ.22: ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯ ಸುಮಾರು 50 ಹಳೆಯ ವಿದ್ಯಾರ್ಥಿಗಳು ತಮ್ಮ ಉದ್ಯೋಗಗಳನ್ನು ತೊರೆದಿದ್ದು, ಎಸ್ಸಿ, ಎಸ್ಟಿ ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಹೋರಾಡಲು ರಾಜಕೀಯ ಪಕ್ಷವೊಂದನ್ನು ಸ್ಥಾಪಿಸಲು ಮುಂದಾಗಿದ್ದಾರೆ.

ಚುನಾವಣಾ ಆಯೋಗದಿಂದ ಅನುಮೋದನೆಗಾಗಿ ಇವರು ಕಾಯುತ್ತಿದ್ದು, ಪಕ್ಷಕ್ಕೆ ‘ಬಹುಜನ್ ಆಝಾದ್ ಪಾರ್ಟಿ’ ಎಂದು ಹೆಸರಿಡಲಾಗಿದೆ. “ನಾವು 50 ಮಂದಿಯಿದ್ದೇವೆ. ಎಲ್ಲರೂ ವಿವಿಧ ಐಐಟಿಯಿಂದ ಬಂದವರು. ಪಕ್ಷಕ್ಕಾಗಿ ದುಡಿಯಲು ಎಲ್ಲರೂ ತಮ್ಮ ಉದ್ಯೋಗವನ್ನು ತೊರೆದಿದ್ದಾರೆ. ಅನುಮೋದನೆಗಾಗಿ ಈಗಾಗಲೇ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದೇವೆ. ಈಗಾಗಲೇ ತಳಮಟ್ಟದಲ್ಲಿ ಕೆಲಸ ಆರಂಭಿಸಿದ್ದೇವೆ” ಎಂದು 2015 ಐಐಟಿ ದಿಲ್ಲಿ ಪದವೀಧರ ನವೀನ್ ಕುಮಾರ್ ಹೇಳುತ್ತಾರೆ.

ಈ ಪಕ್ಷವು 2019ರ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇಲ್ಲ ಎನ್ನಲಾಗಿದೆ. “ನಾವು 2020ರ ಬಿಹಾರ ವಿಧಾನಸಭಾ ಚುನಾವಣೆಯಿಂದ ನಮ್ಮ ಪಯಣವನ್ನು ಆರಂಭಿಸುತ್ತೇವೆ. ಆನಂತರ ಲೋಕಸಭಾ ಚುನಾವಣೆಗಳಲ್ಲಿ ಸ್ಪರ್ಧಿಸುತ್ತೇವೆ” ಎಂದು ಕುಮಾರ್ ಹೇಳುತ್ತಾರೆ.

ಈ ಗುಂಪಿನಲ್ಲಿರುವ ಹೆಚ್ಚಿನ ಸದಸ್ಯರು ಎಸ್ಸಿ, ಎಸ್ಟಿ ಹಾಗು ಹಿಂದುಳಿದ ವರ್ಗಕ್ಕೆ ಸೇರಿದವರು. ಈಗಾಗಲೇ ಪಕ್ಷಕ್ಕಾಗಿ ಪೋಸ್ಟರೊಂದನ್ನು ತಯಾರಿಸಲಾಗಿದ್ದು, ಪೋಸ್ಟರ್ ನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಸುಭಾಷ್ ಚಂದ್ರ ಬೋಸ್, ಅಬ್ದುಲ್ ಕಲಾಂ ಸೇರಿ ಹಲವರ ಫೋಟೊಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News