ಮಲೇಶ್ಯದಲ್ಲಿ ಫೆಲೆಸ್ತೀನ್ ಎಂಜಿನಿಯರ್ ಹತ್ಯೆ: ಇಸ್ರೇಲ್ ಗುಪ್ತಚರ ಸಂಸ್ಥೆ ಮೊಸ್ಸಾದ್ ಕೈವಾಡದ ಶಂಕೆ

Update: 2018-04-22 16:56 GMT

ಕೌಲಾಲಂಪುರ, ಎ. 21: ಮಲೇಶ್ಯದಲ್ಲಿ ಅಪರಿಚಿತರ ಗುಂಡಿನ ದಾಳಿಗೆ ಫೆಲೆಸ್ತೀನ್ ಚಳವಳಿಯ ಸಕ್ರಿಯ ಕಾರ್ಯಕರ್ತರೆನ್ನಲಾದ ಫಾದಿ ಅಲ್ ಬತ್ಶ್(35) ಮೃತಪಟ್ಟಿದ್ದಾರೆ. ಕೌಲಾಲಂಪುರದಲ್ಲಿ ಶನಿವಾರ ಬೆಳಗ್ಗೆ ನಮಾಝ್‌ಗಾಗಿ ಮಸೀದಿಗೆ ತೆರಳುತ್ತಿದ್ದ ಬತ್ಶ್ ಅವರನ್ನು ಬೈಕ್‌ನಲ್ಲಿ ಬಂದ ಅಪರಿಚಿತರು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಮೂಲತಃ ಫೆಲೆಸ್ತೀನ್‌ನ ಪಶ್ಚಿಮದಂಡೆಯ ಗಾಝಾ ಪ್ರದೇಶದ ನಿವಾಸಿಯಾದ ಫಾದಿ ಅಲ್ ಬತ್ಶ್, ಕಳೆದ ಹತ್ತು ವರ್ಷಗಳಿಂದ ಮಲೇಶ್ಯದಲ್ಲಿ ನೆಲೆಸಿದ್ದರು.

 ಹಂತಕರು ಬತ್ಶ್‌ಗೆ 14 ಬುಲೆಟ್‌ಗಳನ್ನು ಹಾರಿಸಿದ್ದು, ಅವುಗಳಲ್ಲಿ ಕೆಲವು ಗೋಡೆಗೆ ತಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬತ್ಶ್ ಅವರ ಹಂತಕರು ಯುರೋಪಿಯನ್ ಪ್ರಜೆಗಳಾಗಿದ್ದು, ಅವರಿಗೆ ವಿದೇಶಿ ಬೇಹುಗಾರಿಕಾ ಸಂಘಟನೆಯ ಜೊತೆ ನಂಟಿರುವ ಸಾಧ್ಯತೆಯಿರುವುದಾಗಿ ಉಪಪ್ರಧಾನಿ ಅಹ್ಮದ್ ಸಾಹಿದ್ ಹಮೀದಿ ತಿಳಿಸಿದ್ದಾರೆ. ಎಂಜಿನಿಯರಿಂಗ್ ಉಪನ್ಯಾಸಕರಾದ ಫಾದಿ ಅವರು ಇಲೆಕ್ಟ್ರಿಕಲ್ ಎಂಜಿನಿಯರಿಂಗ್ ಹಾಗೂ ರಾಕೆಟ್ ನಿರ್ಮಾಣದಲ್ಲಿ ತಜ್ಞರಾಗಿದ್ದರೆಂದು ಮಲೇಶ್ಯದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಹತ್ಯೆ ಪ್ರಕರಣದ ಹಿಂದೆ ಇಸ್ರೇಲ್‌ನ ಬೇಹುಗಾರಿಕಾ ಸಂಸ್ಥೆ ಮೊಸ್ಸಾದ್ ನ ಕೈವಾಡವಿರುವುದಾಗಿ ಬತ್ಶ್ ಅವರ ಬಂಧುಗಳು ಆರೋಪಿಸಿದ್ದಾರೆ.

ಫಾದಿ ಅವರ ಫೆಲೆಸ್ತೀನ್ ಹೋರಾಟ ಸಂಘಟನೆ ಹಮಾಸ್‌ನ ಬೆಂಬಲಿಗರಾಗಿದ್ದು, ಅವರಿಗೆ ರಾಕೆಟ್‌ಗಳ ನಿರ್ಮಾಣದಲ್ಲಿ ತಜ್ಞರಾಗಿದ್ದರು. ಹೀಗಾಗಿ ಆತ ಅಪಾಯಕಾರಿ ಯೆಂದು ಇಸ್ರೇಲ್ ಭಾವಿಸಿತ್ತು ಎಂದು ಆತ ಹೇಳಿದ್ದಾರೆ.

ಬತ್ಶ್ ತನ್ನ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಮಲೇಶ್ಯದಲ್ಲಿ ವಾಸವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News