ಭಾರತದಲ್ಲಿ ಸರಕಾರದಿಂದ ಮಾನವಹಕ್ಕುಗಳ ಉಲ್ಲಂಘನೆ: ಅಮೆರಿಕದ ವಿದೇಶಾಂಗ ಇಲಾಖೆ ವರದಿ

Update: 2018-04-22 17:23 GMT

ವಾಶಿಂಗ್ಟನ್,ಎ.22: ಭಾರತದಲ್ಲಿ ನರೇಂದ್ರ ಮೋದಿ ಸರಕಾರವನ್ನು ಟೀಕಿಸುವ ಮಾಧ್ಯಮ ಸಂಸ್ಥೆಗಳಿಗೆ ಕಿರುಕುಳ ನೀಡಲಾಗುತ್ತಿದೆ ಹಾಗೂ ಸೆನ್ಸಾರ್‌ಶಿಪ್ ವಿಧಿಸಲಾಗುತ್ತಿದೆಯೆಂದು ಅಮೆರಿಕ ವಿದೇಶಾಂಗ ಇಲಾಖೆಯ 2017ರ ಮಾನವಹಕ್ಕುಗಳ ವರದಿ ತಿಳಿಸಿದೆ.

ಕೆಲವು ಪತ್ರಕರ್ತರು ಹಾಗೂ ಮಾಧ್ಯಮದ ಮಂದಿ ತಾವು ಮಾಡಿದ ವರದಿಗಾಗಿ ಹಿಂಸೆ ಹಾಗೂ ಕಿರುಕುಳವನ್ನು ಅನುಭವಿಸಿದ್ದಾರೆಂದು ವರದಿ ತಿಳಿಸಿದೆ. 1990ರ ದಶಕದಿಂದೀಚೆಗೆ ಭಾರತದಲ್ಲಿ ಕನಿಷ್ಠ 80 ಮಂದಿ ಪತ್ರಕರ್ತರ ಹತ್ಯೆಯಾಗಿದ್ದು, ಓರ್ವ ಅಪರಾಧಿಗೆ ಮಾತ್ರ ಶಿಕ್ಷೆಯಾಗಿದೆಯೆಂದು ವರದಿಯು ಬೆಟ್ಟು ಮಾಡಿ ತೋರಿಸಿದೆ.

ಪತ್ರಕರ್ತರು ಹಾಗೂ ಸಾಮಾಜಿಕ ಹೋರಾಟಗಾರರು ಅದರಲ್ಲೂ ವಿಶೇಷವಾಗಿ ಮಹಿಳೆಯರು ಆನ್‌ಲೈನ್ ಹಾಗೂ ಮೊಬೈಲ್ ಕಿರುಕುಳಕ್ಕೆ ಗುರಿಯಾಗುತ್ತಿದ್ದಾರೆಂದು ಅದು ಹೇಳಿದೆ.

ಭಾರತದೆಲ್ಲೆಡೆ ಪೊಲೀಸ್ ಹಾಗೂ ಭದ್ರತಾ ಪಡೆಗಳಿಂದ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿದೆಯೆಂದು ಹೇಳಿರುವ ವರದಿಯು, ಪ್ರತ್ಯೇಕತಾವಾದಿ ಬಂಡುಕೋರರು ಮತ್ತು ಉಗ್ರರಿಂದಲೂ ಮಾನವಹಕ್ಕುಗಳಿಗೆ ಗಂಭೀರ ಹಾನಿಯೆಸಗುತ್ತಿದ್ದಾರೆಂದು ಕಳವಳ ವ್ಯಕ್ತಪಡಿಸಿದೆ.

ನ್ಯಾಯಾಂಗೇತರ ಹತ್ಯೆಗಳು, ವ್ಯಕ್ತಿಗಳ ನಿಗೂಢ ನಾಪತ್ತೆಗಳು, ದೌರ್ಜನ್ಯ, ವಾರಂಟ್ ಇಲ್ಲದೆ ಬಂಧನ, ಅತ್ಯಾಚಾರ, ಅತ್ಯಂತ ಕಠೋರವಾದ ಹಾಗೂ ಜೀವಬೆದರಿಕೆಯ ಸನ್ನಿವೇಶವಿರುವ ಕಾರಾಗೃಹಗಳು ಹಾಗೂ ದೀರ್ಘಾವಧಿಯ ತನಿಖಾಪೂರ್ವ ಬಂಧನ ಇವು ಪೊಲೀಸ್ ಹಾಗೂ ಭದ್ರತಾ ಪಡೆಗಳಿಂದ ಆಗುತ್ತಿರುವ ಮಾನವಹಕ್ಕು ಉಲ್ಲಂಘನೆಗಳ ಪ್ರಮುಖ ನಿದರ್ಶನಗಳು ಎಂದು ವಾಷಿಂಗ್ಟನ್ ಶುಕ್ರವಾರ ಬಿಡುಗಡೆಗೊಳಿಸಿದ 2017ರ ಮಾನವಹಕ್ಕುಗಳ ಆಚರಣೆ ಕುರಿತ ದೇಶವಾರು ವರದಿ ತಿಳಿಸಿದೆ.

ಅದೇ ರೀತಿ ಜಮ್ಮುಕಾಶ್ಮೀರ ಮತ್ತು ಈಶಾನ್ಯ ಭಾರತಲ್ಲಿ ಪ್ರತ್ಯೇಕತಾವಾದಿ ಉಗ್ರರು ಹಾಗೂ ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ ಮಾವೊ ಬಂಡುಕೋರರು ಸಶಸ್ತ್ರ ಪಡೆಗಳ ಸಿಬ್ಬಂದಿ, ಪೊಲೀಸರು ಹಾಗೂ ಸರಕಾರಿ ಅಧಿಕಾರಿಗ ಮತ್ತು ನಾಗರಿಕರ ಹತ್ಯೆಗಳನ್ನು ನಡೆಸಿವೆ ಹಾಗೂ ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಕಾಳಗಕ್ಕೆ ಬಳಸಿಕೊಳ್ಳುತ್ತಿವೆ ಎಂದು ವರದಿ ಬೆಟ್ಟು ಮಾಡಿತೋರಿಸಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಆಡಳಿತವು ನಾಗರಿಕರ ಹಕ್ಕುಗಳಿಗೆ ಚ್ಯುತಿ ತರಲು ಯತ್ನಿಸುತ್ತಿದೆ ಹಾಗೂ ಮಾಧ್ಯಮಗಳ ಮೇಲೆ ದಾಳಿ ನಡೆಸುತ್ತಿವೆಯೆಂಬ ಬಗ್ಗೆ ಬಲವಾದ ಆರೋಪ ಕೇಳಿಬರುತ್ತಿರುವ ಸಂದರ್ಭದಲ್ಲಿಯೇ ಅಮೆರಿಕದ ವಿದೇಶಾಂಗ ಇಲಾಖೆ ಈ ವರದಿಯನ್ನು ಬಿಡುಗಡೆಗೊಳಿಸಿದೆ.

ಅತ್ಯಾಚಾರ, ಕೌಟುಂಬಿಕ ಹಿಂಸೆ, ವರದಕ್ಷಿಣೆ ಸಂಬಂಧಿ ಸಾವುಗಳು, ಮರ್ಯಾದೆಯ ಹತ್ಯೆಗಳು, ಲೈಂಗಿಕ ಕಿರುಕುಳ ಹಾಗೂ ಮಹಿಳೆಯರು ಮತ್ತು ಹೆಂಗಸರ ಮೇಲಿನ ತಾರತಮ್ಯಗಳು ಭಾರತದ ಗಂಭೀರ ಸಮಸ್ಯೆಗಳಾಗಿ ಉಳಿದುಕೊಂಡಿವೆಯೆಂದು ವರದಿಯು ಆತಂಕ ವ್ಯಕ್ತಪಡಿಸಿದೆ.

 ಭಾರತದಲ್ಲಿ ಎನ್‌ಜಿಓ ಸಂಸ್ಥೆಗಳು ವಿದೇಶಿ ದೇಣಿಗೆಯನ್ನು ಸ್ವೀಕರಿಸುವುದಕ್ಕೆ ಮೋದಿ ಸರಕಾರವು ನಿರ್ಬಂಧ ವಿಧಿಸಿರುವುದನ್ನು ಕೂಡಾ ವರದಿಯು ಗಮನಸೆಳೆದಿದೆ. ದೇಶದ ಎಂಟು ರಾಜ್ಯಗಳ ಮತಾಂತರಕ್ಕೆ ಕಾನೂನು ನಿರ್ಬಂಧಗಳನ್ನು ವಿಧಿಸಿರುವುದು ಕೂಡಾ ಇನ್ನೊಂದು ಆತಂಕಕಾರಿ ವಿಷಯವಾಗಿದೆಯೆಂದು ವರದಿಯು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News