ಉ.ಕೊರಿಯದಿಂದ ಅಣ್ವಸ್ತ್ರ ಪರೀಕ್ಷೆ ಸ್ಥಗಿತ: ಕಿಮ್‌ಜಾಂಗ್ ಉನ್ ಘೋಷಣೆ

Update: 2018-04-22 17:32 GMT

 ವ್ಯೊಂಗ್‌ಯಾಂಗ್,ಎ.22: ಉತ್ತರ ಕೊರಿಯವು ಅಣ್ವಸ್ತ್ರ ಪರೀಕ್ಷೆಗಳನ್ನು ಹಾಗೂ ಖಂಡಾಂತರ ಕ್ಷಿಪಣಿಗಳ ಪ್ರಾಯೋಗಿಕ ಉಡಾವಣೆಯನ್ನು ಸ್ಥಗಿತಗೊಳಿಸಲಿದೆಯೆಂದು ಆ ದೇಶದ ನಾಯಕ ಕಿಮ್ ಜಾಂಗ್ ಉನ್ ಶನಿವಾರ ಘೋಷಿಸಿದ್ದಾರೆ. ಉತ್ತರ ಕೊರಿಯದ ಈ ನಡೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವಾಗತಿಸಿದ್ದಾರೆ.

ಆಡಳಿತ ಪಕ್ಷದ ಸಭೆಯಲ್ಲಿ ಮಾತನಾಡುತ್ತಿದ್ದ ಕಿಮ್‌ಜಾಂಗ್ ಉನ್ ಅವರು, ಉತ್ತರಕೊರಿಯದ ಪರಮಾಣು ಸಶಸ್ತ್ರೀಕರಣ ಸಾಮರ್ಥ್ಯವು ಈಗ ದೃಢಪಟ್ಟಿರುವುದರಿಂದ, ನಮಗೆ ಇನ್ನೂ ಹೆಚ್ಚಿನ ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸಲು ಅಥವಾ ಮಧ್ಯಮ ಹಾಗೂ ದೀರ್ಘವ್ಯಾಪ್ತಿ ಕ್ಷಿಪಣಿಗಳು ಮತ್ತು ಖಂಡಾಂತರ ಕ್ಷಿಪಣಿಗಳ ಪರೀಕ್ಷೆಗಳನ್ನು ನಡೆಸುವ ಅಗತ್ಯವಿಲ್ಲ’’ ಎಂದು ಹೇಳಿದ್ದಾರೆ.

 ಉತ್ತರ ಕೊರಿಯದ ನಿರ್ಧಾರದೊಂದಿಗೆ ಕೊರಿಯಾ ಪರ್ಯಾಯ ದ್ವೀಪದಲ್ಲಿ ಶಾಂತಿಸ್ಥಾಪನೆಗೆ ನಡೆಯುತ್ತಿರುವ ಪ್ರಯತ್ನಗಳು ಸಕಾರಾತ್ಮಕ ಬೆಳವಣಿಗೆ ಕಂಡು ಬಂದಿದೆಯೆಂದು ವಿದೇಶಿ ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಕೊರಿಯಾ ಪರ್ಯಾಯದ್ವೀಪವನ್ನು ವಿಭಜಿಸುವ ಮಿಲಿಟರೀಕರಣ ರಹಿತ ವಲಯದಲ್ಲಿ ಕಿಮ್‌ಜಾಂಗ್ ಉನ್ ಅವರು ದಕ್ಷಿಣ ಕೊರಿಯ ಅಧ್ಯಕ್ಷ ಮೂನ್ ಎ ಇನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಒಂದೇ ವಾರದೊಳಗೆ ಈ ಬೆಳವಣಿಗೆ ನಡೆದಿದೆ.

 ಆದಾಗ್ಯೂ ಉತ್ತರ ಕೊರಿಯವು ತನ್ನ ಬಳಿ ಈಗಿರುವ ಅಣ್ವಸ್ತ್ರಗಳನ್ನು ಹಾಗೂ ಅಮೆರಿಕವನ್ನು ತಲುಪಬಲ್ಲಂತಹ ಕ್ಷಿಪಣಿಗಳನ್ನು ತ್ಯಜಿಸುವ ಬಗ್ಗೆ ಕಿಮ್ ಜಾಂಗ್ ಉನ್ ಯಾವುದೇ ಸೂಚನೆಯನ್ನು ನೀಡಿಲ್ಲ.

 ಈ ಮಧ್ಯೆ ಅಣ್ವಸ್ತ್ರಗಳು ಹಾಗೂ ಖಂಡಾಂತರ ಕ್ಷಿಪಣಿಗಳ ಪ್ರಾಯೋಗಿಕ ಪರೀಕ್ಷೆಯನ್ನು ಶನಿವಾರದಿಂದಲೇ ಕೈಬಿಡುವುದಾಗಿ ಉತ್ತರ ಕೊರಿಯ ತಿಳಿಸಿದೆ. ಪುಂಗ್ಯೆ-ರಿ ಎಂಬಲ್ಲಿರುವ ಅಣ್ವಸ್ತ್ರ ಪರೀಕ್ಷಾ ಸ್ಥಳವನ್ನು ತೆರವುಗೊಳಿಸಲಾಗುವುದು ಹಾಗೂ ಅಲ್ಲಿ ಪಾರದರ್ಶಕತೆಯನ್ನು ಖಾತರಿಪಡಿಸಲಾಗುವುದು ಎಂದು ಉತ್ತರ ಕೊರಿಯ ತಿಳಿಸಿದೆ.

ಉತ್ತರ ಕೊರಿಯ ಅಣ್ವಸ್ತ್ರ ಹಾಗೂ ಖಂಡಾಂತರ ಕ್ಷಿಪಣಿ ಪರೀಕ್ಷೆಯನ್ನು ಸ್ಥಗಿತ ಗೊಳಿಸಿರುವುದನ್ನು ಚೀನಾ ಸ್ವಾಗತಿಸಿದೆ. ಈ ನಡೆಯು ಕೊರಿಯಾ ಪರ್ಯಾಯ ದ್ವೀಪದಲ್ಲಿ ಶಾಂತಿ ನೆಲೆಸಲು ಕಾರಣವಾಗಲಿದೆಯೆಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News