ಸೌದಿಯಲ್ಲಿ ಆಟಿಕೆ ಡ್ರೋನ್ ಹಾರಾಟ: ನಿಯಂತ್ರಣಕ್ಕೆ ಶೀಘ್ರದಲ್ಲೇ ಕಾಯ್ದೆ

Update: 2018-04-22 17:55 GMT

ಲಾಹೋರ್,ಎ.22: ಸೌದಿ ಅರೇಬಿಯದ ರಾಜಧಾನಿ ರಿಯಾದ್‌ನಲ್ಲಿ ಅರಮನೆಗೆ ತೀರಾ ಸಮೀಪದಲ್ಲಿ ಆಟಿಕೆ ವಿಮಾನವೊಂದು ಹಾರಾಟ ನಡೆಸಿದ ಘಟನೆಯ ಬಳಿಕ ಆ ಪ್ರದೇಶದಲ್ಲಿ ಭದ್ರತಾ ಕಟ್ಟೆಚ್ಚರವನ್ನು ಘೋಷಿಸಲಾದ ಬೆನ್ನಲ್ಲೇ ದೇಶದ ಆಡಳಿತವು ಮನರಂಜನೆಗಾಗಿನ ಡ್ರೋನ್ ಆಟಿಕೆಗಳ ಬಳಕೆಯನ್ನು ನಿಯಂತ್ರಿಸುವ ಕಾಯ್ದೆಗೆ ಅಂತಿಮ ರೂಪು ನೀಡುತ್ತಿದೆ.

 ಈ ಬಗ್ಗೆ ಸೌದಿ ಆರೇಬಿಯದ ಸುದ್ದಿಸಂಸ್ಥೆಯೊಂದು ಹೇಳಿಕೆ ನೀಡಿ, ರಿಮೋಟ್ ನಿಯಂತ್ರಿತ ಡ್ರೋನ್ ವಿಮಾನಗಳ ಬಳಕೆಯನ್ನು ನಿಯಂತ್ರಿಸುವ ಕಾಯ್ದೆಯ ತಯಾರಿಯು ಅಂತಿಮ ಹಂತದಲ್ಲಿದೆ’’ ಎಂದು ಸೌದಿ ಪ್ರೆಸ್ ಏಜೆನ್ಸಿ ವರದಿ ಮಾಡಿದೆ.

  ‘‘ನೂತನ ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೊಳಿಸುವವರೆಗೆ ಉತ್ಸಾಹಿ ಡ್ರೋನ್ ಹಾರಾಟಗಾರರು ಅನುಮತಿಸಲಾದ ಸ್ಥಳಗಳಲ್ಲಿ ಮಾತ್ರ ತಮ್ಮ ಉಪಕರಣಗಳನ್ನು ಹಾರಿಸಲು ಪೊಲೀಸರ ಒಪ್ಪಿಗೆಯನ್ನು ಪಡೆದಿರಬೇಕು’’ ಎಂದು ಸಚಿವಾಲಯ ಸೂಚನೆ ನೀಡಿದೆ.

 ರಾಜಧಾನಿ ರಿಯಾದ್‌ನಲ್ಲಿರುವ ರಾಯಲ್ ಪ್ಯಾಲೇಸ್ ಸಮೀಪದ ಪ್ರದೇಶಗಳಲ್ಲಿ ಹಾರಾಡುತ್ತಿದ್ದ ಅಜ್ಞಾತ ಆಟಿಕೆ ಡ್ರೋನ್ ವಿಮಾನವನ್ನು ಭದ್ರತಾ ಸಿಬ್ಬಂದಿ ಹೊಡೆದುರುಳಿಸಿದ್ದರು.

  ಈ ಮಧ್ಯೆ ಸೌದಿ ಆಡಳಿತವು ಯಾವುದೇ ಭದ್ರತಾ ಉಲ್ಲಂಘನೆಯಾಗಿರುವುದನ್ನು ಅಲ್ಲಗಳೆದಿದೆ ಹಾಗೂ ಘಟನೆಗೆ ಸಂಬಂಧಿಸಿ ತನಿಖೆಯನ್ನು ಆರಂಭಿಸಲಾಗಿದೆಯೆಂದು ಅದು ಹೇಳಿದೆ. ಸೌದಿ ವೈಮಾನಿಕ ಪ್ರಾಧಿಕಾರವು 2015ರಲ್ಲಿ ಯಾವುದೇ ಪೂರ್ವಭಾವಿ ಪರವಾನಗಿಯನ್ನು ಹೊಂದಿರದ ರಿಮೋಟ್ ನಿಯಂತ್ರಿತ ಡ್ರೋನ್‌ಗಳ ಬಳಕೆಯನ್ನು ನಿಷೇಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News