ಸಿನೈ ಕಾರ್ಯಾಚರಣೆಯಿಂದಾಗಿ ಮಾನವೀಯ ಬಿಕ್ಕಟ್ಟು: ಹ್ಯೂಮನ್ ರೈಟ್ಸ್ ವಾಚ್

Update: 2018-04-23 18:08 GMT
ಸಾಂದರ್ಭಿಕ ಚಿತ್ರ

ಬೈರೂತ್, ಎ. 23: ಐಸಿಸ್ ಭಯೋತ್ಪಾದಕ ಸಂಘಟನೆಗೆ ಸೇರಿದ ಗುಂಪೊಂದರ ವಿರುದ್ಧ ನಾರ್ತ್ ಸಿನೈಯಲ್ಲಿ ಈಜಿಪ್ಟ್ ಸೇನೆ ನಡೆಸುತ್ತಿರುವ ಕಾರ್ಯಾಚರಣೆಯಿಂದಾಗಿ ಆ ಪ್ರದೇಶದಲ್ಲಿ ಮಾನವೀಯ ಬಿಕ್ಕಟ್ಟು ಉಂಟಾಗಿದೆ ಎಂದು ಮಾನವಹಕ್ಕುಗಳ ಸಂಘಟನೆ ‘ಹ್ಯೂಮನ್ ರೈಟ್ಸ್ ವಾಚ್’ ಸೋಮವಾರ ಹೇಳಿದೆ.

ಅಲ್ಲಿ ಫೆಬ್ರವರಿ 9ರಂದು ಸೇನಾ ಕಾರ್ಯಾಚರಣೆ ಆರಂಭಿಸಲಾಗಿದ್ದು, ಈಶಾನ್ಯದ 4 ನಗರಗಳ ಸುಮಾರು 4.2 ಲಕ್ಷ ನಿವಾಸಿಗಳು ತುರ್ತು ಮಾನವೀಯ ನೆರವಿನ ಅಗತ್ಯದಲ್ಲಿದ್ದಾರೆ ಎಂದು ಅದು ತಿಳಿಸಿದೆ.

ಸೇನಾ ಕಾರ್ಯಾಚರಣೆಯ ಭಾಗವಾಗಿ ಬಹುತೇಕ ಇಡೀ ನಾರ್ತ್ ಸಿನೈಯಲ್ಲಿ ಜನರು ಮತ್ತು ಸರಕುಗಳ ಚಲನೆ ಮೇಲೆ ತೀವ್ರ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ ತನ್ನ ವರದಿಯೊಂದರಲ್ಲಿ ತಿಳಿಸಿದೆ.

‘‘ಆಹಾರ, ಔಷಧಿ, ಅಡುಗೆ ಅನಿಲ ಮತ್ತು ಇತರ ಅಗತ್ಯ ವಸ್ತುಗಳ ಪೂರೈಕೆಗಳಲ್ಲಿ ತೀವ್ರ ಕುಸಿತವುಂಟಾಗಿರುವುದು ನಮ್ಮ ಗಮನಕ್ಕೆ ಬಂದಿದೆ’ ಎಂದು ನ್ಯೂಯಾರ್ಕ್‌ನಲ್ಲಿ ನೆಲೆ ಹೊಂದಿರುವ ಸಂಸ್ಥೆ ಹೇಳಿದೆ.

ಈ ಪ್ರದೇಶದಲ್ಲಿ ಕಾರುಗಳಿಗೆ ತೈಲ ಮಾರಾಟವನ್ನೂ ಅಧಿಕಾರಿಗಳು ನಿಷೇಧಿಸಿದ್ದಾರೆ ಹಾಗೂ ದೂರಸಂಪರ್ಕ ಸೇವೆಗಳನ್ನು ಸ್ಥಗಿತಗೊಳಿಸಿದ್ದಾರೆ.

ನಾರ್ತ್ ಸಿನೈಯ ಉತ್ತರದ ತುದಿಯ ಹೆಚ್ಚಿನ ಪ್ರದೇಶಗಳಿಗೆ ನೀರು ಮತ್ತು ವಿದ್ಯುತ್ ಪೂರೈಕೆಯನ್ನೂ ಕಡಿತಗೊಳಿಸಲಾಗಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News