ಟ್ರಂಪ್ ಹೊಸ ನಿಯಮದಿಂದ ಸಾವಿರಾರು ಭಾರತೀಯರಿಗೆ ಸಂಕಷ್ಟ

Update: 2018-04-24 17:00 GMT

ವಾಶಿಂಗ್ಟನ್, ಎ. 24: ಎಚ್-1ಬಿ ವೀಸಾ ಹೊಂದಿರುವವರ ಸಂಗಾತಿಗಳು ಅಮೆರಿಕದಲ್ಲಿ ಕಾನೂನುಬದ್ಧವಾಗಿ ಕೆಲಸ ಮಾಡಲು ನೀಡುವ ಅವಕಾಶವನ್ನು ಹಿಂದಕ್ಕೆ ಪಡೆಯುವ ಬಗ್ಗೆ ಟ್ರಂಪ್ ಆಡಳಿತ ಚಿಂತನೆ ನಡೆಸುತ್ತಿದೆ ಎಂದು ಸರಕಾರದ ಸಂಸ್ಥೆಯೊಂದರ ಹಿರಿಯ ಅಧಿಕಾರಿಯೊಬ್ಬರು ಸಂಸದರಿಗೆ ಹೇಳಿದ್ದಾರೆ.

ಇದು ಜಾರಿಗೆ ಬಂದರೆ, ಅಮೆರಿಕದಲ್ಲಿ ಕೆಲಸ ಮಾಡುವ ಸಾವಿರಾರು ಭಾರತೀಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಒಬಾಮ ಅವಧಿಯ ಈ ಕಾನೂನನ್ನು ಹಿಂದಕ್ಕೆ ಪಡೆದರೆ, ಉದ್ಯೋಗ ಪರ್ಮಿಟ್‌ಗಳನ್ನು ಹೊಂದಿರುವ 70,000ಕ್ಕೂ ಅಧಿಕ ಎಚ್-4 ವೀಸಾದಾರರ ಮೇಲೆ ಪರಿಣಾಮ ಬೀರಬಹುದಾಗಿದೆ. ಈ ಪೈಕಿ 90 ಶೇಕಡಕ್ಕೂ ಹೆಚ್ಚು ಮಂದಿ ಭಾರತೀಯರು.

ಎಚ್-1ಬಿ ವೀಸಾದಾರರ ಸಂಗಾತಿಗಳಿಗೆ ಎಚ್-4 ವೀಸಾಗಳನ್ನು ನೀಡಲಾಗುತ್ತದೆ. ಈ ಪೈಕಿ ಗಮನಾರ್ಹ ಸಂಖ್ಯೆಯ ಫಲಾನುಭವಿಗಳು ಭಾರತದ ನಿಪುಣ ಉದ್ಯೋಗಿಗಳು. ಹಿಂದಿನ ಒಬಾಮ ಆಡಳಿತ ಹೊರಡಿಸಿದ ವಿಶೇಷ ಆದೇಶದನ್ವಯ ಅವರು ಉದ್ಯೋಗ ಪರ್ಮಿಟ್‌ಗಳನ್ನು ಪಡೆದಿದ್ದರು.

ಈ ನಿಯಮದ ಗರಿಷ್ಠ ಫಲಾನುಭವಿಗಳು ಭಾರತೀಯ-ಅಮೆರಿಕನ್ನರು.

ಎಚ್-1ಬಿ ವೀಸಾದಾರರ ಸಂಗಾತಿಗಳು ಉದ್ಯೋಗ ಪರ್ಮಿಟ್‌ಗಳನ್ನು ಪಡೆಯಲು ಸಾಧ್ಯವಾಗುವಂತಾಗಲು ಒಬಾಮ ಆಡಳಿತವು 2015ರಲ್ಲಿ ಈ ಕಾನೂನನ್ನು ಜಾರಿಗೆ ತಂದಿತ್ತು. ಎಚ್-1ಬಿ ವೀಸಾದಾರರು ಖಾಯಂ ಪೌರತ್ವ ಸ್ಥಾನಮಾನ ಹೊಂದುವವರೆಗೆ ನೂತನ ನಿಯಮದನ್ವಯ ಅವರ ಸಂಗಾತಿಗಳು ಉದ್ಯೋಗ ಪರ್ಮಿಟ್‌ಗಳನ್ನು ಪಡೆಯಬಹುದಾಗಿದೆ. ಆದರೆ, ಪೌರತ್ವ ಸ್ಥಾನಮಾನ ಪ್ರಕ್ರಿಯೆ ಪೂರ್ಣಗೊಳ್ಳಲು ದಶಕಗಳೇ ಬೇಕಾಗುತ್ತವೆ.

ಈಗ ಈ ನಿಯಮವನ್ನು ಹಿಂದಕ್ಕೆ ಪಡೆಯುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಈ ಸಂಬಂಧ ಔಪಚಾರಿಕ ಸೂಚನೆಯು ಈ ಬೇಸಿಗೆಯಲ್ಲಿ ಹೊರಬೀಳುವ ನಿರೀಕ್ಷೆಯಿದೆ ಎಂದು ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ (ಯುಎಸ್‌ಸಿಐಎಸ್)ಯ ನಿರ್ದೇಶಕ ಫ್ರಾನ್ಸಿಸ್ ಸಿಸ್ನ ಅವರು ಸೆನೆಟರ್ ಚಕ್ ಗ್ರಾಸ್ಲಿಗೆ ಬರೆದ ಪತ್ರವೊಂದರಲ್ಲಿ ಹೇಳಿದ್ದಾರೆ.

93 ಶೇಕಡ ಭಾರತೀಯರು

2017ರ ಜೂನ್‌ವರೆಗೆ ಯುಎಸ್‌ಸಿಐಎಸ್ 71,287 ಉದ್ಯೋಗ ಅನುಮೋದನೆ ದಾಖಲೆಗಳನ್ನು ಎಚ್-4 ವೀಸಾದಾರರಿಗೆ ನೀಡಿದೆ ಎಂದು ಕಳೆದ ವಾರ ಪ್ರಕಟಗೊಂಡ ಅಧ್ಯಯನವೊಂದು ತಿಳಿಸಿದೆ.

ಈ ಪೈಕಿ 94 ಶೇಕಡ ಮಂದಿ ಮಹಿಳೆಯರು ಹಾಗೂ 93 ಶೇಕಡ ಮಂದಿ ಭಾರತೀಯರು. 4 ಶೇಕಡ ಮಂದಿ ಚೀನೀಯರು ಎಂದು ಅಧ್ಯಯನ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News