ಭಯೋತ್ಪಾದನೆ ಮಾನವಹಕ್ಕುಗಳಿಗೆ ಸವಾಲು: ಶಾಂಘೈ ಸಹಕಾರ ಸಂಘಟನೆಯಲ್ಲಿ ಸುಶ್ಮಾ ಸ್ವರಾಜ್

Update: 2018-04-24 18:05 GMT

ಬೀಜಿಂಗ್, ಎ. 24: ಭಯೋತ್ಪಾದನೆಯು ಬದುಕು, ಶಾಂತಿ ಮತ್ತು ಮಾನವಹಕ್ಕುಗಳಿಗೆ ಒಡ್ಡಲಾಗುವ ಸವಾಲಾಗಿದೆ ಎಂದು ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಮಂಗಳವಾರ ಬಣ್ಣಿಸಿದ್ದಾರೆ.

‘‘ಇಂದಿನ ಜಗತ್ತು ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಆ ಪೈಕಿ ಅತ್ಯಂತ ಮಹತ್ವದ್ದೆಂದರೆ- ಜಾಗತಿಕ ಭಯೋತ್ಪಾದನೆ ಮತ್ತು ಅದನ್ನು ಎದುರಿಸಲು ಬಲಿಷ್ಠ ರಕ್ಷಣಾ ವ್ಯವಸ್ಥೆಯೊಂದನ್ನು ನಿರ್ಮಿಸುವ ತುರ್ತು ಅಗತ್ಯ. ಭಯೋತ್ಪಾದನೆಯು ಮೂಲಭೂತ ಮಾನವಹಕ್ಕುಗಳು, ಬದುಕು, ಶಾಂತಿ ಮತ್ತು ಸಮೃದ್ಧಿಯ ಶತ್ರುವಾಗಿದೆ’’ ಎಂದು ಅವರು ಹೇಳಿದರು.

ಬೀಜಿಂಗ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ)ಯ ವಿದೇಶ ಸಚಿವರ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು.

ಭಯೋತ್ಪಾದನೆಗೆ ನೆರವು ನೀಡುವ ಶಕ್ತಿಗಳ ಬಗ್ಗೆಯೂ ಸ್ವರಾಜ್ ಮಾತನಾಡಿದರಾದರೂ, ಅವುಗಳನ್ನು ಹೆಸರಿಸಲಿಲ್ಲ.

‘‘ಭಯೋತ್ಪಾದನೆಯ ವಿರುದ್ಧದ ನಮ್ಮ ಹೋರಾಟವು ಭಯೋತ್ಪಾದಕರನ್ನು ನಿರ್ಮೂಲಗೊಳಿಸುವುದಷ್ಟಕ್ಕೆ ಸೀಮಿತವಲ್ಲ, ಬದಲಿಗೆ ಭಯೋತ್ಪಾದನೆಗೆ ಬೆಂಬಲ ಮತ್ತು ಆರ್ಥಿಕ ನೆರವು ನೀಡುವ ಅಥವಾ ಭಯೋತ್ಪಾದಕರಿಗೆ ಮತ್ತು ಭಯೋತ್ಪಾದಕ ಗುಂಪುಗಳಿಗೆ ಸುರಕ್ಷಿತ ಆಶ್ರಯ ನೀಡುವ ದೇಶಗಳನ್ನು ಗುರುತಿಸಿ ಅವುಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಾವು ಭಾವಿಸಿದ್ದೇವೆ’’ ಎಂದು ಸ್ವರಾಜ್ ಹೇಳಿದರು.

ಭಾರತ ಮತ್ತು ಪಾಕಿಸ್ತಾನಗಳು ಶಾಂಘೈ ಸಹಕಾರ ಸಂಘಟನೆಯ ಪೂರ್ಣ ಸದಸ್ಯರಾದ ಬಳಿಕ ಸಂಘಟನೆಯ ವಿದೇಶ ಸಚಿವರ ಸಮ್ಮೇಳನದಲ್ಲಿ ಸುಶ್ಮಾ ಸ್ವರಾಜ್ ಮೊದಲ ಬಾರಿಗೆ ಭಾಗವಹಿಸುತ್ತಿದ್ದಾರೆ.

ಚೀನಾ ವಿದೇಶ ಸಚಿವ ವಾಂಗ್ ಯಿ ಮತ್ತು ಪಾಕಿಸ್ತಾನದ ವಿದೇಶ ಸಚಿವ ಖ್ವಾಜಾ ಆಸಿಫ್ ಹಾಗೂ ಇತರರು ಸಮ್ಮೇಳನದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News