ಸ್ವರ್ಣಮಂದಿರವನ್ನು ‘ಮಸೀದಿ’ ಎಂದು ಕರೆದ ಬ್ರಿಟನ್ ರಾಜತಾಂತ್ರಿಕ: ಬಳಿಕ ಕ್ಷಮಾಪಣೆ

Update: 2018-04-24 17:44 GMT

ಲಂಡನ್, ಎ. 24: ಅಮೃತಸರದ ಸ್ವರ್ಣಮಂದಿರವನ್ನು ಮಸೀದಿ ಎಂದು ಕರೆದಿರುವುದಕ್ಕಾಗಿ ಬ್ರಿಟನ್ ವಿದೇಶ ಕಚೇರಿಯಲ್ಲಿ ರಾಜತಾಂತ್ರಿಕ ಮುಖ್ಯಸ್ಥರಾಗಿರುವ ಸೈಮನ್ ಮೆಕ್‌ಡೊನಾಲ್ಡ್ ಮಂಗಳವಾರ ಕ್ಷಮೆ ಕೋರಿದ್ದಾರೆ.

ಸೋಮವಾರ ಅಮೃತಸರದ ಸರ್ಣಮಂದಿರಕ್ಕೆ ಭೇಟಿ ನೀಡಿದ್ದ ಅವರು, ‘ಸ್ವರ್ಣ ಮಸೀದಿ’ಗೆ ಭೇಟಿ ನೀಡಿದೆ ಎಂದು ಟ್ವೀಟ್ ಮಾಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಕಾರಣವಾಯಿತು.

ಸಿಖ್ಖರ ಪವಿತ್ರ ಸ್ಥಳವನ್ನು ‘ಮಸೀದಿ’ ಎಂದು ಕರೆದಿರುವುದಕ್ಕಾಗಿ ಸಿಖ್ ಸಮುದಾಯದ ಕ್ಷಮೆ ಕೋರಲು ಸಿಖ್ ಫೆಡರೇಶನ್ (ಯುಕೆ) 24 ಗಂಟೆಗಳ ಸಮಯಾವಕಾಶ ನೀಡಿತ್ತು.

‘‘ನನ್ನಿಂದ ತಪ್ಪಾಗಿದೆ. ನನ್ನನ್ನು ಕ್ಷಮಿಸಿ. ನಾನು ಸ್ವರ್ಣಮಂದಿರ ಎಂದು ಹೇಳಬೇಕಾಗಿತ್ತು. ಅಥವಾ ಶ್ರೀ ಹರ್ಮಂದಿರ್ ಸಾಹಿಬ್ ಎಂದಿದ್ದರೆ ಇನ್ನೂ ಒಳ್ಳೆಯದಿತ್ತು’’ ಎಂದು ಮೆಕ್‌ಡೊನಾಲ್ಡ್ ಮಂಗಳವಾರ ಟ್ವೀಟ್ ಮಾಡಿದ್ದಾರೆ.

‘‘ಇದು ಉನ್ನತ ಸರಕಾರಿ ಅಧಿಕಾರಿಯೊಬ್ಬರು ಮಾಡಿದ ಪ್ರಮಾದವಾಗಿದೆ. ಇದು ಸಂಪೂರ್ಣ ಅಸ್ವೀಕಾರಾರ್ಹ. ಇದು ಅವರ ಸ್ಥಾನದಲ್ಲಿರುವ ವ್ಯಕ್ತಿಯ ಅಜ್ಞಾನದ ಮಟ್ಟವನ್ನು ತೋರಿಸುತ್ತದೆ’’ ಎಂದು ಸಿಖ್ ಫೆಡರೇಶನ್ (ಯುಕೆ)ಯ ಅಧ್ಯಕ್ಷ ಭಾಯ್ ಅಮ್ರಿಕ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News