ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣ: ಸಜ್ಜನರ ಪಾಲೆಷ್ಟು?

Update: 2018-04-25 03:58 GMT

ದೇಶಾದ್ಯಂತ ಅತ್ಯಾಚಾರ ಅದರಲ್ಲೂ ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿರುವ ಸುದ್ದಿಗಳು ಚರ್ಚೆಯಲ್ಲಿರುವ ಹೊತ್ತಿನಲ್ಲೇ ಗುಜರಾತ್‌ನ ಪಠಾಣ್ ಪಟ್ಟಣದಲ್ಲಿ ಭಿನ್ನ ಪ್ರಕರಣವೊಂದು ನಡೆದಿದೆ. ಇಪ್ಪತ್ತೆರಡು ವರ್ಷದ ಯುವಕನೊಬ್ಬ ತನ್ನ ತಾಯಿಯ ಮೇಲೆಯೇ ಅತ್ಯಾಚಾರ ಎಸಗಿದ್ದಾನೆ. ಮಕ್ಕಳ ಮೇಲೆ ಅತ್ಯಾಚಾರ ಎಸಗುವ ದುರುಳರಿಗೆ ಮರಣದಂಡನೆ ವಿಧಿಸುವ ಕಾನೂನೊಂದನ್ನು ಜಾರಿಗೊಳಿಸಿದ ಬೆನ್ನಿಗೇ ಇಂತಹದೊಂದು ಪ್ರಕರಣ ಬೆಳಕಿಗೆ ಬಂದಿದೆ. ತಂದೆಯೇ ತನ್ನ ಮಕ್ಕಳ ಮೇಲೆ ಅತ್ಯಾಚಾರವೆಸಗಿದ ಅದೆಷ್ಟೋ ಬರ್ಬರ ಪ್ರಕರಣಗಳು ಮಾಧ್ಯಮಗಳಲ್ಲಿ ವರದಿಯಾಗಿವೆಯಾದರೂ, ಈಗಷ್ಟೇ ಪ್ರಾಯಕ್ಕೆ ಬಂದ ತರುಣನೊಬ್ಬ ತನ್ನ ತಾಯಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ತೀರಾ ಅಪರೂಪವಾದುದು. ಇಡೀ ಸಮಾಜ ನಾಚಿ ತಲೆತಗ್ಗಿಸಬೇಕಾದ ಘಟನೆ ಇದು. ಇಂತಹ ಘಟನೆ ಯಾಕೆ ಸಂಭವಿಸಿತು? ಅಂತಹದೊಂದು ವಿಕೃತ ಮನಸ್ಥಿತಿಯನ್ನು ಆ ತರುಣ ಹೊಂದಲು ಕಾರಣವಾದವರು ಯಾರು? ಗಲ್ಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆಗಳಿಂದ ಇಂತಹ ಪ್ರಕರಣಗಳನ್ನು ಸರಕಾರಕ್ಕೆ ತಡೆಯಲು ಸಾಧ್ಯವೇ?

 ಎಲ್ಲ ಅತ್ಯಾಚಾರಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ನಾವು ಮಾಡುವ ಮೊದಲ ತಪ್ಪು. ಕಥುವಾ ಅತ್ಯಾಚಾರಕ್ಕೂ, ಯಾವನೋ ಒಬ್ಬ ಕಾಮಾಂಧ ಮಗುವಿನ ಮೇಲೆ ಎಸಗುವ ಅತ್ಯಾಚಾರಕ್ಕೂ ವ್ಯತ್ಯಾಸವಿದೆ. ಕಥುವಾ ಅತ್ಯಾಚಾರದ ಹಿಂದೆ ಮೆರೆದಿರುವುದು ವಿಕೃತವಷ್ಟೇ ಅಲ್ಲ, ರಾಜಕೀಯವೂ ಅದರೊಂದಿಗೆ ತಳಕು ಹಾಕಿಕೊಂಡಿದೆ. ಅಲ್ಲಿಯ ವಿಕೃತಿಗಳಿಗೆ ಆಕೆ ಬೇರೆ ಸಮುದಾಯಕ್ಕೆ ಸೇರಿದ ತರುಣಿ ಎನ್ನುವ ಒಂದು ನೆಪವೂ ಇದೆ. ಈ ಕಾರಣದಿಂದಲೇ ಒಂದು ಗುಂಪು ಆ ವಿಕೃತಿಯನ್ನು ಬೆಂಬಲಿಸಿತು. ಇಂದು ದೇಶಾದ್ಯಂತ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ಜೊತೆಗೆ ಕಥುವಾ ಅತ್ಯಾಚಾರ, ಖೈರ್ಲಾಂಜಿ ಅತ್ಯಾಚಾರಗಳನ್ನು ಜೊತೆಗಿಟ್ಟು ಮಾತನಾಡುವಂತಿಲ್ಲ. ಅಲ್ಲಿ ಕಾರಣಗಳು ಸ್ಪಷ್ಟವಿದೆ. ಅದನ್ನು ಸರಿಪಡಿಸುವ ಮಾರ್ಗವೂ ಸ್ಪಷ್ಟವಿದೆ. ಇವರ ಉದ್ದೇಶ ತಮ್ಮ ವಿಕೃತ ತೆವಲನ್ನು ತೀರಿಸುವುದಷ್ಟೇ ಅಲ್ಲ.

ಆದರೆ ಇಂದು ದೇಶಾದ್ಯಂತ ಬಹುತೇಕ ಮನೆಗಳಲ್ಲೇ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತ್ತಿವೆ. ಅದರ ಅತಿರೇಕವಾಗಿ ನಾವು, ಮಗನೇ ತನ್ನ ತಾಯಿಯ ಮೇಲೆ ನಡೆದ ಅತ್ಯಾಚಾರವನ್ನು ಗುರುತಿಸಬೇಕು. ಅವನಲ್ಲಿ ಅಂತಹ ವಿಕೃತ ಮನಸ್ಥಿತಿಯನ್ನು ಪೋಷಿಸುವುದರಲ್ಲಿ ಸಮಾಜದ ಪಾತ್ರವೂ ಇದೆ. ಗುಜರಾತ್‌ನಲ್ಲಿ ನಡೆದ ಈ ವಿಕೃತಿಯ ಹಿಂದಿರುವ ಕಾರಣವನ್ನು ಗುರುತಿಸಲು ಕಷ್ಟವೇನೂ ಇಲ್ಲ. ಹುಡುಗ ಅಶ್ಲೀಲ ವೀಡಿಯೊಗಳನ್ನು ನೋಡುವ ಚಟವನ್ನು ಅಂಟಿಸಿಕೊಂಡಿದ್ದ. ಅಷ್ಟೇ ಅಲ್ಲ, ತನ್ನ ತಾಯಿಯ ಜೊತೆಗೇ ಆಗಾಗ ಲೈಂಗಿಕ ಬಯಕೆಯನ್ನು ತೋಡಿಕೊಂಡಿದ್ದ. ಆ ಸಂದರ್ಭದಲ್ಲಾದರೂ ಪಾಲಕರು ಎಚ್ಚೆತ್ತು, ಆತನನ್ನು ಮಾನಸಿಕ ವೈದ್ಯರಿಗೆ ತೋರಿಸುವುದು ಕರ್ತವ್ಯವಾಗಿತ್ತು. ಆದರೆ ತನ್ನ ಮಗ ಕಾಯಿಲೆ ಪೀಡಿತನಾಗಿದ್ದಾನೆ ಎನ್ನುವುದನ್ನು ಅವರು ಒಪ್ಪುವುದಕ್ಕೆ ಸಿದ್ಧರಿರಲಿಲ್ಲ. ಪರಿಣಾಮವಾಗಿ ದುರಂತದೊಂದಿಗೆ ಅದು ಮುಕ್ತಾಯವಾಯಿತು.

 ಒಂದು ಕಾಲವಿತ್ತು, ಪತ್ರಿಕೆಗಳಲ್ಲಿ ಸಣ್ಣದೊಂದು ಅಶ್ಲೀಲ ಚಿತ್ರ ಪ್ರಕಟವಾದರೂ ಅದನ್ನು ಮನೆಗೆ ಒಯ್ಯುವುದಕ್ಕೆ ಹಿಂಜರಿಯುತ್ತಿದ್ದರು. ಅಶ್ಲೀಲವನ್ನು ಬರೆಯುವುದಕ್ಕಾಗಿಯೇ ಪತ್ರಿಕೆಗಳು ಇದ್ದವು. ಮಾರುಕಟ್ಟೆಯಲ್ಲಿ ಅವು ಕದ್ದು ಮುಚ್ಚಿ ಓಡಾಡುತ್ತಿದ್ದವು. ಸಿನೆಮಾಗಳನ್ನೇ ಗಮನಿಸಿ. ಹಿಂದೆ, ಕಡಿಮೆ ಬಟ್ಟೆ ಧರಿಸಿ ನರ್ತಿಸುವುದಕ್ಕಾಗಿಯೇ ವಿಶೇಷ ನಟಿಯರಿದ್ದರು. ಅವರು ಒಂದು ದೃಶ್ಯದಲ್ಲಿ ನರ್ತಿಸಿ ಕಾಣೆಯಾಗಿ ಬಿಡುತ್ತಿದ್ದರು. ‘ಕ್ಯಾಬರೆ ನರ್ತಕಿಯರು’ ಎಂದು ಅವರನ್ನು ಕರೆಯಲಾಗುತ್ತಿತ್ತು. ಕ್ರಮೇಣ ಆ ನರ್ತಕಿಯರು ಮಾಯವಾದರು. ಅದರ ಅರ್ಥ, ಸಿನೆಮಾದಲ್ಲಿ ಅಶ್ಲೀಲ ನೃತ್ಯ ಕಣ್ಮರೆಯಾಯಿತು ಎಂದಲ್ಲ. ಕ್ಯಾಬರೆ ನರ್ತಕಿಯರು ನಿರ್ವಹಿಸುವ ದೃಶ್ಯಗಳನ್ನು ನಾಯಕಿಯರೇ ನಿರ್ವಹಿಸತೊಡಗಿದರು. ಕ್ಯಾಬರೆ ನರ್ತಕಿಯರು ಧರಿಸಿದ್ದಕ್ಕಿಂತಲೂ ಕಡಿಮೆ ಬಟ್ಟೆಗಳ ಜೊತೆಗೆ ಸಿನೆಮಾಗಳಲ್ಲಿ ನಾಯಕಿಯರು ಕಾಣಿಸಿಕೊಳ್ಳ ತೊಡಗಿದ್ದಾರೆ. ಈ ಸಿನಿಮಾಗಳ ಮುಖ್ಯ ಪ್ರೇಕ್ಷಕರು ಯುವ ಸಮುದಾಯ ಮಾತ್ರವಲ್ಲ, ಮಕ್ಕಳೂ ಕೂಡ. ಮನೆ ಮನೆಗಳಲ್ಲಿ ಟಿವಿಗಳ ಮುಂದೆ ಕುಳಿತು ಈ ದೃಶ್ಯಗಳನ್ನು ಇಡೀ ಕುಟುಂಬ ವೀಕ್ಷಿಸುತ್ತದೆ. ಇಂದು ಮುಖ್ಯವಾಹಿನಿಯ ಪತ್ರಿಕೆಗಳೇ ಅಶ್ಲೀಲ ಚಿತ್ರಗಳನ್ನು ಮುಖಪುಟದಲ್ಲಿ ಪ್ರಕಟಿಸುತ್ತವೆ. ಆ ಪತ್ರಿಕೆ ಮಕ್ಕಳು, ಯುವಕರು ಎನ್ನುವ ವ್ಯತ್ಯಾಸವಿಲ್ಲದೆ ಎಲ್ಲರ ಕೈಗಳನ್ನು ದಾಟುತ್ತವೆ. ಇಂಟರ್‌ನೆಟ್ ಯುಗದಲ್ಲಿ ಅಶ್ಲೀಲ ದೃಶ್ಯಗಳ ಹೆಬ್ಬಾಗಿಲು ತೆರೆಯಿತು. ಇಂದು ಹತ್ತು ವರ್ಷವಾಗುತ್ತಿದ್ದ ಹಾಗೆಯೇ ಮಕ್ಕಳ ಕೈಯಲ್ಲಿ ಮೊಬೈಲ್‌ಗಳು ಬಂದು ಸೇರುತ್ತವೆ. ಜೊತೆಗೆ ಅಂತರ್ಜಾಲ ಕೂಡ. ಒಳಿತು ಕೆಡುಕುಗಳನ್ನು ನಿರ್ಧರಿಸಲು ಇನ್ನೂ ಸಿದ್ಧವಾಗಿರದ ಒಬ್ಬ ಹುಡುಗ ನಿಧಾನಕ್ಕೆ ಅಶ್ಲೀಲ ದೃಶ್ಯಗಳಿಗೆ ಬಲಿಯಾದರೆ ನಾವು ದೂರಬೇಕಾದುದು ಯಾರನ್ನು? ಅಂತರ್ಜಾಲವೆನ್ನುವುದು ಒಳಿತಿಗಿಂತ ಕೆಡುಕಿನ ಕಡೆಗೆ ವೇಗವಾಗಿ ಒಯ್ಯುತ್ತದೆ.

ಹಿಂದೆ ಅಶ್ಲೀಲ ಪುಸ್ತಕಗಳನ್ನು ಕದ್ದು ಮುಚ್ಚಿ ಓದುತ್ತಿದ್ದರೆ ಇಂದು ಬಹಿರಂಗವಾಗಿಯೇ ತಮ್ಮ ತಮ್ಮ ಮೊಬೈಲ್‌ಗಳಲ್ಲಿ ಅಶ್ಲೀಲ ದೃಶ್ಯಗಳನ್ನು ಮಕ್ಕಳು ಯುವಕರೆನ್ನದೆ ನೋಡುತ್ತಿದ್ದಾರೆ. ಪಾಲಕರು ತಮ್ಮ ತಮ್ಮ ಲೋಕದಲ್ಲಿ ಮೈಮರೆತಿರುವ ಹೊತ್ತಿನಲ್ಲಿ ಮಕ್ಕಳು ನೋಡಬಾರದ್ದನ್ನೆಲ್ಲ ನೋಡಿ, ಅದನ್ನು ಚಟವಾಗಿಸಿಕೊಂಡು ಬಿಟ್ಟಿರುತ್ತಾರೆ. ನಗರ ಪ್ರದೇಶದಲ್ಲಿ ಈ ಸಮಸ್ಯೆ ಹೆಚ್ಚುತ್ತಿವೆ. ಮಕ್ಕಳು ಆ ವಿಕೃತಿಯನ್ನು ಬಹಿರಂಗವಾಗಿ ಪ್ರದರ್ಶಿಸಲು ಮುಂದಾದಾಗಷ್ಟೇ ಪಾಲಕರು ಆ ಕಡೆಗೆ ಗಮನ ಹರಿಸುತ್ತಾರೆ. ಹಿಂದೊಮ್ಮೆ ಸರಕಾರ ‘ಅಶ್ಲೀಲ ವೈಬ್‌ಸೈಟ್’ಗಳಿಗೆ ಕಡಿವಾಣ ಹಾಕಲು ಮುಂದಾದಾಗ ಅದರ ವಿರುದ್ಧ ಹಲವರು ಆಕ್ಷೇಪ ಎತ್ತಿದ್ದರು. ‘ಅಭಿವ್ಯಕ್ತಿ ಸ್ವಾತಂತ್ರ’ದ ಜೊತೆಗೆ ಅದನ್ನು ತಳಕು ಹಾಕಿದ್ದರು. ಅಶ್ಲೀಲ ವೆಬ್‌ಸೈಟ್‌ಗಳಿಗೆ ಕಡಿವಾಣ ಹಾಕುವುದು ಅಷ್ಟು ಸುಲಭವಲ್ಲ. ಆದರೆ ಆ ಕುರಿತಂತೆ ಜಾಗೃತಿಯನ್ನು ಹುಟ್ಟಿಸುವುುದು ಸರಕಾರದ ಕರ್ತವ್ಯ ಮಾತ್ರವಲ್ಲ, ಸಮಾಜದ ಕರ್ತವ್ಯ ಕೂಡ. ಈ ನಿಟ್ಟಿನಲ್ಲಿ ಅಶ್ಲೀಲ ವೆಬ್‌ಸೈಟ್‌ಗಳ ಮೇಲೆ ಗರಿಷ್ಠ ನಿಯಂತ್ರಣ ಹೇರುವುದು ಅತ್ಯಗತ್ಯವಾಗಿದೆ. ನಮ್ಮ ಮಕ್ಕಳ ಮಾನಸಿಕ ಆರೋಗ್ಯ ಕೆಡದೇ ಇರಬೇಕಾದರೆ ಈ ನಿಟ್ಟಿನಲ್ಲಿ ಸರಕಾರ ಮತ್ತು ಸಮಾಜ ಜೊತೆ ಜೊತೆಯಾಗಿ ಕಾರ್ಯಪ್ರವೃತ್ತರಾಗಬೇಕು.

ಮಕ್ಕಳು ಪ್ರಬುದ್ಧರಾಗುವವರೆಗೆ ಅವರ ಕೈಗೆ ಮೊಬೈಲ್ ಸಿಗದಂತೆ ನೋಡುವುದು, ಜೊತೆಗೆ ಅಂತರ್ಜಾಲವಿರುವ ಮೊಬೈಲ್‌ಗಳನ್ನು ಯಾವ ಕಾರಣಕ್ಕೂ ಮಕ್ಕಳ ಕೈಗೆ ನೀಡದೇ ಇರುವುದು ಪಾಲಕರು ಮಾಡಬೇಕಾದ ಮೊತ್ತ ಮೊದಲ ಕೆಲಸವಾಗಿದೆ. ಕೆಟ್ಟು ಹೋದ ಮೇಲೆ ತಿದ್ದುವುದಕ್ಕಿಂತ ಮಾನಸಿಕವಾಗಿ ಕೆಡದಂತೆ ನಮ್ಮ ಮಕ್ಕಳನ್ನು ಜೋಪಾನ ಮಾಡುವುದು ಹೇಗೆ ಎನ್ನುವುದರ ಕುರಿತು ಪಾಲಕರು ಗಮನ ಹರಿಸಬೇಕು. ತಮ್ಮ ಮಕ್ಕಳ ಚಟುವಟಿಕೆಗಳನ್ನು ಸದಾ ಎಚ್ಚರಿಕೆಯಿಂದ ಗಮನಿಸುವುದು, ಸದಾ ಮಕ್ಕಳ ಜೊತೆಗೆ ವ್ಯವಹರಿಸುತ್ತಾ ಅವರ ವ್ಯಕ್ತಿತ್ವವನ್ನು ರೂಪಿಸುವುದು ಪಾಲಕರ ಕರ್ತವ್ಯವಾಗಿದೆ. ಬೀದಿ ಬದಿಯ ಮಕ್ಕಳ ಮೇಲೂ ಅತ್ಯಾಚಾರಗಳು ನಡೆಯುತ್ತಿವೆ. ಬೀದಿ ಬದಿಯ ಮಕ್ಕಳ ರಕ್ಷಣೆ, ಪೋಷಣೆ ಸರಕಾರದ್ದಾಗಿದೆ. ಇದೇ ಸಂದರ್ಭದಲ್ಲಿ ಕೊಳೆಗೇರಿಯಲ್ಲಿರುವ ಮಕ್ಕಳೂ ಅತಿ ಹೆಚ್ಚು ಲೈಂಗಿಕಶೋಷಣೆಗೆ ಒಳಗಾಗುತ್ತಾರೆ. ಇಂತಹ ಮಕ್ಕಳನ್ನು ಗುರುತಿಸಿ ಅವರನ್ನು ಮುಖ್ಯವಾಹಿನಿಗೆ ತರುವುದು, ಶಿಕ್ಷಣ, ಆರೋಗ್ಯವನ್ನು ಅವರಿಗೆ ನೀಡಿ ಮೇಲೆತ್ತುವುದು ಸರಕಾರದ ಕರ್ತವ್ಯ. ನ್ಯಾಯಾಲಯವೇ ಹೇಳುವಂತೆ, ಅಪರಾಧಿಗಳನ್ನು ಗಲ್ಲಿಗೇರಿಸುವುದರಿಂದಷ್ಟೇ ಸಮಸ್ಯೆ ಪರಿಹಾರವಾಗುವುದಿಲ್ಲ. ಅತ್ಯಾಚಾರಕ್ಕೆ ಸಂಬಂಧಪಟ್ಟ ಅಪರಾಧಿಗಳು ಯಾಕೆ, ಹೇಗೆ ಹುಟ್ಟುತ್ತಾರೆ ಎನ್ನುವುದನ್ನು ಗುರುತಿಸಿ ಅದಕ್ಕೆ ಔಷಧಿಯನ್ನು ನೀಡಬೇಕಾದುದು ಇಂದಿನ ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News