ಐಎಸ್‌ಎಸ್‌ಎಫ್ ವಿಶ್ವಕಪ್: ರಿಝ್ವಿಗೆ ಬೆಳ್ಳಿ

Update: 2018-04-24 19:05 GMT

ಹೊಸದಿಲ್ಲಿ, ಎ.24: ದಕ್ಷಿಣ ಕೊರಿಯಾದ ಚಾಂಗ್ವಾನ್‌ನಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್‌ನ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯ ಫೈನಲ್‌ನಲ್ಲಿ 239.8 ಅಂಕ ಗಳಿಸಿರುವ ಶಹ್ಝಾರ್ ರಿಝ್ವಿ ಬೆಳ್ಳಿ ಪದಕ ಜಯಿಸಿದ್ದಾರೆ.

240 ಅಂಕ ಗಳಿಸಿದ ರಶ್ಯದ ಅರ್ಟೆಮ್ ಚೆರ್ನೌಸೊವ್ ಚಿನ್ನದ ಪದಕ ಜಯಿಸಿದರೆ, ಬಲ್ಗೇರಿಯದ ಒಲಿಂಪಿಯನ್ ಸ್ಯಾಮುಯೆಲ್ ಡೊನೊಕೊವ್ 217.1 ಅಂಕ ಗಳಿಸಿ ಕಂಚಿನ ಪದಕ ಜಯಿಸಿದರು.

ರಿಝ್ವಿ ಮೆಕ್ಸಿಕೊದಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ತನ್ನ ಮೊದಲ ಯತ್ನದಲ್ಲಿ ಚಿನ್ನದ ಪದಕ ಜಯಿಸಿ ಗಮನ ಸೆಳೆದಿದ್ದರು. 242.3 ಅಂಕಗಳಿಸಿದ್ದ ರಿಝ್ವಿ ದಾಖಲೆ ನಿರ್ಮಿಸಿದ್ದರು. ಅರ್ಹತಾ ಸುತ್ತಿನಲ್ಲಿ 600ರಲ್ಲಿ 582 ಅಂಕ ಗಳಿಸಿದ ರಿಝ್ವಿ 8 ಸ್ಪರ್ಧಿಗಳಿರುವ ಫೈನಲ್‌ಗೆ ಆರನೇ ಸ್ಥಾನಿಯಾಗಿ ಪ್ರವೇಶ ಪಡೆದರು. ಆದರೆ, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಶೂಟರ್ ಜಿತು ರಾಯ್ ಹಾಗೂ ಕಂಚು ವಿಜೇತ ಮಿಥರ್ವಾಲ್ ಕ್ರಮವಾಗಿ 575 ಹಾಗೂ 581 ಅಂಕ ಗಳಿಸಿ 38ನೇ ಹಾಗೂ 11ನೇ ಸ್ಥಾನ ಪಡೆದಿದ್ದಾರೆ. ಕೊರಿಯಾದಲ್ಲಿ ನಡೆಯುತ್ತಿರುವ ಈ ವರ್ಷದ ಎರಡನೇ ಚರಣದ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ರೈಫಲ್, ಪಿಸ್ತೂಲ್ ಹಾಗೂ ಶಾಟ್‌ಗನ್ ಸ್ಪರ್ಧೆಗಳು ನಡೆಯಲಿವೆ. 70ಕ್ಕೂ ಅಧಿಕ ದೇಶಗಳ 800ಕ್ಕೂ ಅಧಿಕ ಶೂಟರ್‌ಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಟೂರ್ನಿಯು ಸೆಪ್ಟಂಬರ್‌ನಲ್ಲಿ ನಡೆಯಲಿರುವ 52ನೇ ಆವೃತ್ತಿಯ ಐಎಸ್‌ಎಸ್‌ಎಫ್ ವಿಶ್ವ ಚಾಂಪಿಯನ್‌ಶಿಪ್‌ಗೆ ಪೂರ್ವ ತಯಾರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News