ಆ್ಯಕ್ಯುಪಂಕ್ಚರ್ ಬೆನ್ನುನೋವನ್ನು ಗುಣಪಡಿಸುತ್ತದೆಯೇ?

Update: 2018-04-25 10:16 GMT

ಪ್ರತಿ 10ರಲ್ಲಿ ಎಂಟು ಜನರು ತಮ್ಮ ಜೀವನದಲ್ಲಿ ಕನಿಷ್ಠ ಒಂದು ಬಾರಿಯಾದರೂ ಬೆನ್ನುನೋವನ್ನು ಅನುಭವಿಸಿರುತ್ತಾರೆ. ನಿಂತ ನೀರಾಗಿರುವ ಜೀವನಶೈಲಿ ಮತ್ತು ಕಚೇರಿಗಳಲ್ಲಿ ಸುದೀರ್ಘ ಅವಧಿಗೆ ಕುಳಿತು ಕೆಲಸ ಮಾಡುವುದರಿಂದ ಬೆನ್ನುನೋವು ಸಾಮಾನ್ಯವಾಗಿದೆ ಮತ್ತು ನೋವು ತೀವ್ರವಿದ್ದರೆ ತಿಂಗಳುಗಟ್ಟಲೆ ಕಾಡುತ್ತದೆ. ಇಷ್ಟೊಂದು ಸುದೀರ್ಘ ಕಾಲ ಔಷಧಿಗಳನ್ನು ಸೇವಿಸಲು ಹೆಚ್ಚಿನವರು ಇಚ್ಛಿಸುವುದಿಲ್ಲ ಮತ್ತು ಬೆನ್ನುನೋವಿನಿಂದ ಪಾರಾಗಲು ಆ್ಯಕ್ಯುಪಂಕ್ಚರ್‌ನಂತಹ ಪರ್ಯಾಯ ಚಿಕಿತ್ಸೆಗಳಿಗಾಗಿ ತಡಕಾಡುತ್ತಾರೆ. ಆದರೆ ಆ್ಯಕ್ಯುಪಂಕ್ಚರ್ ಬೆನ್ನುನೋವನ್ನು ಗುಣಪಡಿಸುವಲ್ಲಿ ನಿಜಕ್ಕೂ ಪರಿಣಾಮಕಾರಿಯೇ?

ಆ್ಯಕ್ಯುಪಂಕ್ಚರ್ ಎಂದರೇನು?

ಆ್ಯಕ್ಯುಪಂಕ್ಚರ್ ಪ್ರಾಚೀನ ಚೀನಿ ಚಿಕಿತ್ಸಾ ಪದ್ಧತಿಯಾಗಿದ್ದು,ಕನಿಷ್ಠ 2,500 ವರ್ಷಗಳಿಂದಲೂ ಚಾಲ್ತಿಯಲ್ಲಿದೆ ಎನ್ನಲಾಗಿದೆ. ನಮ್ಮ ಶರೀರದಲ್ಲಿ ಶಕ್ತಿಯ ಹರಿವಿಗೆ ಮಾರ್ಗಗಳಿವೆ ಮತ್ತು ಈ ಮಾರ್ಗಗಳಲ್ಲಿ ವ್ಯತ್ಯಯ ಗಳಾದರೆ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ ಎನ್ನುವುದು ಈ ಚಿಕಿತ್ಸೆಯ ಹಿಂದಿನ ಸಾಮಾನ್ಯ ಸಿದ್ಧಾಂತವಾಗಿದೆ. ಶರೀರದಲ್ಲಿಯ ಆ್ಯಕ್ಯುಪಂಕ್ಚರ್ ಬಿಂದುಗಳನ್ನು ಜೋಡಿಸುವ ಮಾರ್ಗಗಳಿಗೆ ಮೆರಿಡಿಯನ್‌ಗಳೆಂದು ಕರೆಯಲಾಗುತ್ತದೆ ಮತ್ತು ಈ ಮಾರ್ಗಗಳಲ್ಲಿ ಪ್ರವಹಿಸುವ ಶಕ್ತಿಯನ್ನು ‘ಚಿ’ಎಂದು ಹೆಸರಿಸಲಾಗಿದೆ. ಆ್ಯಕ್ಯುಪಂಕ್ಚರ್ ಚಿಕಿತ್ಸೆಯಲ್ಲಿ ಈ ಮೆರಿಡಿಯನ್‌ಗಳುದ್ದಕ್ಕೂ ಸೂಜಿಗಳನ್ನು ತೂರಿಸಿ ‘ಚಿ’ಯನ್ನು ಅಲ್ಲಿಗೆ ಆಕರ್ಷಿಸಲಾಗುತ್ತದೆ. ಸೂಕ್ಷ್ಮ,ಸ್ಟರೈಲ್ ಸೂಜಿಗಳನ್ನು ಚರ್ಮದ ಮೂಲಕ ಒಳಸೇರಿಸಿ ನಿರ್ದಿಷ್ಟ ಆ್ಯಕ್ಯು ಪಾಯಿಂಟ್‌ಗಳನ್ನು ಪ್ರಚೋದಿಸಲಾಗುತ್ತದೆ. ಇದರಿಂದಾಗಿ ಮೆರಿಡಿಯನ್‌ಗಳಲ್ಲಿಯ ಯಾವುದೇ ತಡೆ ನಿವಾರಣೆಗೊಂಡು,ವಿವಿಧ ದೈಹಿಕ ವ್ಯವಸ್ಥೆಗಳ ಮೂಲಕ ತನ್ನನ್ನು ತಾನೇ ಸರಿಪಡಿಸಿಕೊಳ್ಳುವ ಶರೀರದ ನೈಸರ್ಗಿಕ ಪ್ರತಿರೋಧ ಶಕ್ತಿಯು ಉದ್ದೀಪನಗೊಳ್ಳುತ್ತದೆ.

ಬೆನ್ನುನೋವಿನ ಚಿಕಿತ್ಸೆಗೆ ಆ್ಯಕ್ಯುಪಂಕ್ಚರ್ ಬಿಂದುಗಳು

ಪುರಾತನ ಚೀನಿ ವೈದ್ಯ ಪದ್ಧತಿಯಂತೆ ‘ಚಿ’ಶಕ್ತಿ ಶರೀರದ ತುಂಬೆಲ್ಲ ಪ್ರವಹಿಸಲು ಆ್ಯಕ್ಯುಪಂಕ್ಚರ್ ನೆರವಾಗುತ್ತದೆ. ಆದರೆ ಪಾಶ್ವಾತ್ಯ ವೈದ್ಯಪದ್ಧತಿಯಂತೆ ಅದು ಸ್ನಾಯುಗಳನ್ನು ಬಿಗಿತದಿಂದ ಮುಕ್ತಗೊಳಿ ಸುತ್ತದೆ ಮತ್ತು ಎಂಡಾರ್ಫಿನ್ ಹಾರ್ಮೋನ್‌ಗಳ ಸ್ರವಿಸುವಿಕೆಯ ಮೂಲಕ ನೋವನ್ನು ಶಮನಗೊಳಿಸುತ್ತದೆ. ಹೊಟ್ಟೆ,ಕೆಳಬೆನ್ನು,ಪ್ರಷ್ಠದ ಮೂಳೆ,ಮಂಡಿಯ ಹಿಂಭಾಗ ಮತ್ತು ಕೈಗಳಲ್ಲಿಯ ಆ್ಯಕ್ಯುಪಂಕ್ಚರ್ ಬಿಂದುಗಳು ಬೆನ್ನುನೋವನ್ನು ಗುಣಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.

ಆ್ಯಕ್ಯುಪಂಕ್ಚರ್ ಸುರಕ್ಷಿತವೇ? ನುರಿತ ಮತ್ತು ಅನುಭವಿ ಆ್ಯಕ್ಯುಪಂಕ್ಚರಿಸ್ಟ್‌ಗಳಿಂದ ಚಿಕಿತ್ಸೆ ಪಡೆಯು ವುದು ಹೆಚ್ಚು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿರುತ್ತದೆ. ಬೆನ್ನುನೋವಿನ ಚಿಕಿತ್ಸೆಯಲ್ಲಿ ಆ್ಯಕ್ಯುಪಂಕ್ಚರ್ ಪರಿಣಾಮಕಾರಿ ಎನ್ನುವುದನ್ನು ವಿವಿಧ ಕ್ಲಿನಿಕಲ್ ಅಧ್ಯಯನಗಳು ಸಾಬೀತುಗೊಳಿಸಿವೆ. ಆದರೆ ಆ್ಯಕ್ಯುಪಂಕ್ಚರ್ ಚಿಕಿತ್ಸೆಯನ್ನು ಪಡೆಯುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು.

ಬೆನ್ನುನೋವಿಗೆ ಆ್ಯಕ್ಯುಪಂಕ್ಚರ್ ಯಾರಿಗೆ ನಿಷಿದ್ಧ?

ಹಿಮೊಫಿಲಿಯಾದಂತಹ ರಕ್ತಸ್ರಾವದ ಕಾಯಿಲೆಯಿರುವವರು ಆ್ಯಕ್ಯುಪಂಕ್ಚರ್ ಚಿಕಿತ್ಸೆಯಿಂದ ದೂರವಿರಬೇಕು. ಇಂತಹವರಲ್ಲಿ ಆ್ಯಕ್ಯುಪಂಕ್ಚರ್ ಸೂಜಿ ಆಕಸ್ಮಿಕವಾಗಿ ರಕ್ತನಾಳಕ್ಕೆ ಚುಚ್ಚಿದರೆ ಶರೀರವು ಭಾರೀ ಪ್ರಮಾಣದಲ್ಲಿ ರಕ್ತವನ್ನು ಕಳೆದುಕೊಳ್ಳುತ್ತದೆ ಮತ್ತು ಅದು ಗಂಭೀರ ಸ್ಥಿತಿಗೆ ಕಾರಣವಾಗಬಹುದು.

 ಗರ್ಭಿಣಿಯರಿಗೂ ಈ ಚಿಕಿತ್ಸೆ ಹೇಳಿದ್ದಲ್ಲ. ಕೆಲವು ನಿರ್ದಿಷ್ಟ ಬಿಂದುಗಳಲ್ಲಿ ಸೂಜಿ ಚುಚ್ಚುವುದು ಅವಧಿಗೆ ಮೊದಲೇ ಹೆರಿಗೆಗೆ ಕಾರಣವಾಗಬ ಹುದು. ಕೆಲವು ಆ್ಯಕ್ಯುಪಂಕ್ಚರಿಸ್ಟ್‌ಗಳು ನೋವನ್ನು ನಿವಾರಿಸಲು ಶರೀರದಲ್ಲಿಯ ವಿದ್ಯುತ್ತನ್ನು ಪ್ರಚೋದಿಸುತ್ತಾರೆ. ಇದನ್ನು ಇಲೆಕ್ಟ್ರೋಆ್ಯಕ್ಯುಪಂಕ್ಚರ್ ಎಂದು ಕರೆಯುತ್ತಾರೆ. ಹೀಗಾಗಿ ಪೇಸ್‌ಮೇಕರ್ ಅಳವಡಿಸಿ ಕೊಂಡಿರುವವರಿಗೆ ಈ ಚಿಕಿತ್ಸೆಯು ನಿಷಿದ್ಧವಾಗಿದೆ.

ಕ್ಯಾನ್ಸರ್,ಏಡ್ಸ್ ಅಥವಾ ಮಧುಮೇಹದಿಂದ ಬಳಲುತ್ತಿರುವವರು ಎಂದೂ ಆ್ಯಕ್ಯುಪಂಕ್ಚರ್ ಚಿಕಿತ್ಸೆಯನ್ನು ಮಾಡಿಸಿಕೊಳ್ಳಬಾರದು.

ಅಡ್ಡ ಪರಿಣಾಮಗಳು

ನುರಿತ ಆ್ಯಕ್ಯುಪಂಕ್ಚರಿಸ್ಟ್‌ಗಳಿಂದ ಸ್ವಚ್ಛ ಮತ್ತು ಸ್ಟರೈಲ್ ಆಗಿರುವ ಸೂಜಿಗಳನ್ನು ಬಳಸಿ ಚಿಕಿತ್ಸೆ ಪಡೆದರೆ ಸಾಮಾನ್ಯವಾಗಿ ಯಾವದೇ ಅಡ್ಡ ಪರಿಣಾಮಗಳಿರುವುದಿಲ್ಲ. ಇದ್ದರೂ ಹೆಚ್ಚು ಬಾಧಕವಾಗಿರುವುದಿಲ್ಲ. ಸೂಜಿಯನ್ನು ತೂರಿಸುವಾಗ ಸಣ್ಣನೋವಾಗಬಹುದು,ಆದರೆ ಸೂಜಿಯನ್ನು ಹೊರತೆಗೆದಾಗ ಈ ನೋವು ಇರುವುದಿಲ್ಲ. ಅಪರೂಪಕ್ಕೆ, ಮೊದಲ ಬಾರಿ ಆ್ಯಕ್ಯುಪಂಕ್ಚರ್ ಚಿಕಿತ್ಸೆ ಮಾಡಿಸಿಕೊಂಡಾಗ ವಾಕರಿಕೆ,ವಾಂತಿ ಮತ್ತು ತಲೆನೋವು ಕಾಣಿಸಿಕೊಳ್ಳಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News