×
Ad

ಎಚ್-1ಬಿ ವೀಸಾದಾರರ ಸಂಗಾತಿಗಳಿಗೆ ಉದ್ಯೋಗ ಪರ್ಮಿಟ್ ರದ್ದು ಪ್ರಸ್ತಾಪ: ಸಂಸದರು, ಐಟಿ ಕಂಪೆನಿಗಳ ವಿರೋಧ

Update: 2018-04-25 23:01 IST

ವಾಶಿಂಗ್ಟನ್, ಎ. 25: ಎಚ್-1ಬಿ ವೀಸಾ ಹೊಂದಿರುವವರ ಸಂಗಾತಿಗಳಿಗೆ ಅಮೆರಿಕದಲ್ಲಿ ಕೆಲಸ ಮಾಡಲು ಸಾಧ್ಯವಾಗುವಂತೆ ನೀಡಲಾಗುವ ಉದ್ಯೋಗ ಪರ್ಮಿಟ್‌ಗಳನ್ನು ಹಿಂದಕ್ಕೆ ಪಡೆಯುವ ಟ್ರಂಪ್ ಆಡಳಿತದ ಪ್ರಸ್ತಾಪಿತ ಯೋಜನೆಗೆ ಅಮೆರಿಕದ ಪ್ರಭಾವಿ ಸಂಸದರು ಹಾಗೂ ಫೇಸ್‌ಬುಕ್ ಸೇರಿದಂತೆ ಅಮೆರಿಕದ ಐಟಿ ಉದ್ಯಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

‘‘ಈ ಕಾನೂನನ್ನು ಹಿಂದಕ್ಕೆ ಪಡೆದು ಅಮೆರಿಕದ ಕಾರ್ಮಿಕ ಸಮೂಹದಿಂದ ಸಾವಿರಾರು ಮಂದಿಯನ್ನು ತೆಗೆದುಹಾಕುವುದರಿಂದ ಆ ಕೆಲಸಗಾರರ ಕುಟುಂಬಗಳ ಪರಿಸ್ಥಿತಿ ಡೋಲಾಯಮಾನವಾಗುತ್ತದೆ ಹಾಗೂ ನಮ್ಮ ಆರ್ಥಿಕತೆಗೂ ಹಾನಿಯಾಗುತ್ತದೆ’’ ಎಂದು ಸಿಲಿಕಾನ್ ವ್ಯಾಲಿಯಲ್ಲಿರುವ ‘ಎಫ್‌ಡಬ್ಲುಡಿ.ಯುಎಸ್’ ಮಂಗಳವಾರ ಪ್ರಕಟಿಸಿದ ವರದಿಯೊಂದರಲ್ಲಿ ಹೇಳಿದೆ.

‘ಎಫ್‌ಡಬ್ಲುಡಿ.ಯುಎಸ್’ನ್ನು ಫೇಸ್‌ಬುಕ್, ಗೂಗಲ್ ಮತ್ತು ಮೈಕ್ರೊಸಾಫ್ಟ್‌ನಂಥ ದೈತ್ಯ ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಸ್ಥಾಪಿಸಿವೆ.

ಎಚ್-1ಬಿ ವೀಸಾಗಳನ್ನು ಹೊಂದಿರುವವರ ಸಂಗಾತಿಗಳಿಗೆ ಎಚ್-4 ವೀಸಾಗಳನ್ನು ನೀಡಲಾಗುತ್ತದೆ ಹಾಗೂ ಅವರಿಗೆ ಅಮೆರಿಕದಲ್ಲಿ ಕೆಲಸ ಮಾಡಲು ಸಾಧ್ಯವಾಗುಂತೆ ಉದ್ಯೋಗ ಪರ್ಮಿಟ್‌ಗಳನ್ನು ನೀಡುವ ಯೋಜನೆಯನ್ನು ಒಬಾಮ ಆಡಳಿತವು ಜಾರಿಗೆ ತಂದಿತ್ತು.

ಎಚ್-4 ವೀಸಾ ಹೊಂದಿರುವವರಿಗೆ ಉದ್ಯೋಗ ಪರ್ಮಿಟ್‌ಗಳನ್ನು ನೀಡುವ ಯೋಜನೆಯನ್ನು ರದ್ದುಪಡಿಸುವ ತನ್ನ ನಿರ್ಧಾರಕ್ಕೆ ಸಂಬಂಧಿಸಿ ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ ಬರೆದ ಪತ್ರದ ಬಗ್ಗೆ ಅಮೆರಿಕದ ಮಾಧ್ಯಮಗಳು ವರದಿ ಮಾಡಿದ ಒಂದು ದಿನದ ಬಳಿಕ ಈ ಬೆಳವಣಿಗೆ ಸಂಬಂಧಿಸಿದೆ.

ಎಚ್-4 ವೀಸಾದಾರರ ಪೈಕಿ ಸುಮಾರು 80 ಶೇಕಡ ಮಹಿಳೆಯರು ಹಾಗೂ ಹೆಚ್ಚಿನವರು ಭಾರತೀಯರು.

ಉದ್ಯೋಗ ಪರ್ಮಿಟ್ ಯಾಕೆ ಅಗತ್ಯ?

ಒಬಾಮ ಆಡಳಿತದ ಕಾನೂನು ಮಹತ್ವದ್ದಾಗಿದೆ. ಯಾಕೆಂದರೆ, ಎಚ್-1ಬಿ ವೀಸಾ ಹೊಂದಿರುವವರು ಅಮೆರಿಕದ ಖಾಯಂ ವಾಸ್ತವ್ಯವನ್ನು ಪಡೆಯುವರೆಗೆ ಅವರ ಸಂಗಾತಿಗಳು ಅಮೆರಿಕದಲ್ಲಿ ಕೆಲಸ ಮಾಡಲು ಕಾಯಬೇಕಾಗಿಲ್ಲ. ಎಚ್-1ಬಿ ವೀಸಾ ಹೊಂದಿರುವವರು ಖಾಯಂ ವಾಸ್ತವ್ಯ ಕೋರಿ ಸಲ್ಲಿಸಿರುವ ಅರ್ಜಿಗಳ ಪೈಕಿ ಕೆಲವು 10 ವರ್ಷಗಳು ಕಳೆದರೂ ಇತ್ಯರ್ಥಗೊಂಡಿಲ್ಲ ಎಂದು ‘ಎಫ್‌ಡಬ್ಲುಡಿ.ಯುಎಸ್’ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News