ಅಮೆರಿಕ ಪರಮಾಣು ಒಪ್ಪಂದ ರದ್ದುಪಡಿಸಿದರೆ ಎನ್‌ಪಿಟಿಯಿಂದ ಹೊರಗೆ: ಇರಾನ್ ಎಚ್ಚರಿಕೆ

Update: 2018-04-25 17:55 GMT

ಟೆಹರಾನ್ (ಇರಾನ್), ಎ. 25: 2015ರ ಪರಮಾಣು ಒಪ್ಪಂದವನ್ನು ಅಮೆರಿಕ ರದ್ದುಪಡಿಸಿದರೆ, ಪರಮಾಣು ಪ್ರಸರಣ ನಿಷೇಧ ಒಪ್ಪಂದ (ಎನ್‌ಪಿಟಿ)ದಿಂದ ಹಿಂದೆ ಸರಿಯುವ ಬಗ್ಗೆ ತನ್ನ ದೇಶ ಪರಿಶೀಲನೆ ನಡೆಸುವುದು ಎಂದು ಇರಾನ್‌ನ ಹಿರಿಯ ಭದ್ರತಾ ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ ಎಂದು ‘ಟೆಹರಾನ್ ಟೈಮ್ಸ್’ ವರದಿ ಮಾಡಿದೆ.

‘‘ಎನ್‌ಪಿಟಿ ನಿಯಮಗಳ ಪ್ರಕಾರ, ಒಪ್ಪಂದದಿಂದ ತಮಗೆ ಪ್ರಯೋಜನವಿಲ್ಲ ಎಂಬುದಾಗಿ ಸಹಿ ಹಾಕಿದ ದೇಶಗಳಿಗೆ ಅನಿಸಿದರೆ ಅವುಗಳು ಒಪ್ಪಂದದಿಂದ ಸುಲಭವಾಗಿ ಹಿಂದೆ ಸರಿಯಬಹುದಾಗಿದೆ ಹಾಗೂ ಇರಾನ್ ಎದುರಿರುವ ಸಂಭಾವ್ಯ ಆಯ್ಕೆ ಇದಾಗಿದೆ’’ ಎಂದು ಇರಾನ್‌ನ ಪರಮೋಚ್ಛ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಅಲಿ ಶಂಖಾನಿ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಭದ್ರತಾ ಸಮ್ಮೇಳನವೊಂದರಲ್ಲಿ ಭಾಗವಹಿಸುವುದಕ್ಕಾಗಿ ರಶ್ಯದ ಸೋಚಿಗೆ ತೆರಳುವ ಮುನ್ನ ಇಲ್ಲಿ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿದ ಶಂಖಾನಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಜಂಟಿ ಸಮಗ್ರ ಕ್ರಿಯಾ ಯೋಜನೆ (ಜೆಸಿಪಿಒಎ) ಎಂಬುದಾಗಿ ಅಧಿಕೃತವಾಗಿ ಕರೆಯಲ್ಪಡುವ ಪರಮಾಣು ಒಪ್ಪಂದದ ಲಾಭದ ಪ್ರಯೋಜನ ಇರನ್‌ಗೆ ಸಿಕ್ಕಿಲ್ಲ ಎಂದು ಅವರು ಹೇಳಿಕೊಂಡರು. ಜಗತ್ತಿನ ಶಕ್ತಿಶಾಲಿ ದೇಶಗಳೊಂದಿಗೆ ಇರಾನ್ ಮಾಡಿಕೊಂಡ ಈ ಪರಮಾಣು ಒಪ್ಪಂದವು 2016 ಜನವರಿಯಲ್ಲಿ ಜಾರಿಗೆ ಬಂದಿತ್ತು.

‘‘ಒಪ್ಪಂದವು ಜಾರಿಗೊಂಡ ಒಂದನೇ ದಿನದಿಂದಲೂ ಒಪ್ಪಂದದ ಒಂದು ಪಕ್ಷವಾಗಿರುವ ಅಮೆರಿಕವು ಅಡೆತಡೆಗಳನ್ನು ಸೃಷ್ಟಿಸುತ್ತಾ ಬಂದಿದೆ’’ ಎಂದು ಶಂಖಾನಿ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News