ಪಂಜಾಬ್ ವಿರುದ್ಧ ಸೇಡು ತೀರಿಸಿಕೊಳ್ಳಲು ಸನ್‌ರೈಸರ್ಸ್ ಚಿತ್ತ

Update: 2018-04-25 19:01 GMT

ಹೈದರಾಬಾದ್, ಎ.25: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿಯಲ್ಲಿ ಗುರುವಾರ ಫಾರ್ಮ್‌ನಲ್ಲಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಎದುರಿಸಲಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ಸೇಡು ತೀರಿಸಿಕೊಳ್ಳುವ ವಿಶ್ವಾಸದಲ್ಲಿದೆ.

ಸನ್‌ರೈಸರ್ಸ್ ತಂಡ ಮಂಗಳವಾರ ಮುಂಬೈ ಇಂಡಿಯನ್ಸ್ ವಿರುದ್ಧ ಕೇವಲ 118 ರನ್ ಗಳಿಸಿದ್ದರೂ ಗೆಲುವು ಸಾಧಿಸಲು ಯಶಸ್ವಿಯಾಗಿತ್ತು. ಈ ಮೂಲಕ ಸತತ ಸೋಲಿನಿಂದ ಹೊರ ಬಂದಿತ್ತು.

ಗಾಯಾಳು ಭುವನೇಶ್ವರ ಕುಮಾರ್ ಸೇವೆಯಿಂದ ವಂಚಿತವಾಗಿದ್ದರೂ ಸನ್‌ರೈಸರ್ಸ್ ತಂಡ ಬೌಲಿಂಗ್‌ನಲ್ಲೂ ಮಿಂಚಿತ್ತು. ವಾಂಖೆಡೆ ಸ್ಟೇಡಿಯಂನಲ್ಲಿ ಗೆಲ್ಲಲು 119 ರನ್ ಗುರಿ ಪಡೆದಿದ್ದ ಮುಂಬೈ ತಂಡವನ್ನು ಕೇವಲ 87 ರನ್‌ಗಳಿಂದ ಆಲೌಟ್ ಮಾಡಿದ ಸನ್‌ರೈಸರ್ಸ್ ತಂಡ 31 ರನ್ ಅಂತರದಿಂದ ಜಯ ಸಾಧಿಸಿತ್ತು. ವೇಗದ ಬೌಲರ್ ಸಿದ್ಧಾರ್ಥ್ ಕೌಲ್ ಹಾಗೂ ಲೆಗ್-ಸ್ಪಿನ್ನರ್ ರಶೀದ್ ಖಾನ್ ಬಿಗಿ ಬೌಲಿಂಗ್ ಸಂಘಟಿಸಿ ಹೈದರಾಬಾದ್‌ಗೆ ಅನಿರೀಕ್ಷಿತ ಗೆಲುವು ತಂದರು.

ಸನ್‌ರೈಸರ್ಸ್ ಸಮತೋಲಿತ ತಂಡವಾಗಿ ಕಾಣುತ್ತಿದ್ದು ನಾಯಕ ಕೇನ್ ವಿಲಿಯಮ್ಸನ್ 259 ರನ್ ಗಳಿಸಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಕೌಲ್ ಟೂರ್ನಿಯಲ್ಲಿ ಈತನಕ ಒಟ್ಟು 9 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ತಂಡ ಹೈದರಾಬಾದ್ ತಂಡವನ್ನು 15 ರನ್‌ಗಳಿಂದ ಸೋಲಿಸಿತ್ತು. 63 ಎಸೆತಗಳಲ್ಲಿ 104 ರನ್ ಗಳಿಸಿದ್ದ ಕ್ರಿಸ್ ಗೇಲ್ ಹೈದರಾಬಾದ್ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದ್ದರು. ವೆಸ್ಟ್‌ಇಂಡೀಸ್‌ನ ದೈತ್ಯ ದಾಂಡಿಗ ಗೇಲ್ ಈ ವರ್ಷ ಒಂದು ಶತಕ ಹಾಗೂ 2 ಅರ್ಧಶತಕಗಳನ್ನು ದಾಖಲಿಸಿ ಭರ್ಜರಿ ಫಾರ್ಮ್ ಪ್ರದರ್ಶಿಸಿದ್ದಾರೆ.

 ಪಂಜಾಬ್ ತಂಡದ ಇನ್ನೋರ್ವ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಎರಡು ಅರ್ಧಶತಕಗಳ ಸಹಿತ 236 ರನ್ ಗಳಿಸಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಪಂಜಾಬ್ ತಂಡ ಈ ಇಬ್ಬರು ಆಟಗಾರರಿಂದ ಮತ್ತೊಮ್ಮೆ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದೆ. ಹೈದರಾಬಾದ್ ತಂಡ ಈ ಇಬ್ಬರನ್ನು ಕನಿಷ್ಠ ಮೊತ್ತಕ್ಕೆ ಪೆವಿಲಿಯನ್‌ಕಳುಹಿಸುವ ವಿಶ್ವಾಸದಲ್ಲಿದೆ.

ಭುವನೇಶ್ವರ್ ಅನುಪಸ್ಥಿತಿಯಲ್ಲಿ ಸಿದ್ಧ್ದಾರ್ಥ್ ಹಾಗೂ ಬಾಸಿಲ್ ಥಾಂಪಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಮೂವರು ಸ್ಪಿನ್ನರ್‌ಗಳಾದ ರಶೀದ್, ಶಾಕಿಬ್ ಅಲ್ ಹಸನ್ ಹಾಗೂ ಮುಹಮ್ಮದ್ ನಬಿ ಮಧ್ಯಮ ಓವರ್‌ಗಳಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ.

 ಸನ್‌ರೈಸರ್ಸ್ ತಂಡ ಶಿಖರ್ ಧವನ್‌ರನ್ನು ಅವಲಂಭಿಸಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಪಂದ್ಯದಲ್ಲಿ ಮಣಿಕಟ್ಟುನೋವಿಗೆ ಒಳಗಾಗಿದ್ದ ಧವನ್ ಕಳೆದ ಪಂದ್ಯದಲ್ಲಿ ಬೇಗನೆ ಔಟಾಗಿದ್ದು, ಮೊದಲಿನ ಲಯ ಕಂಡುಕೊಳ್ಳುವ ವಿಶ್ವಾಸದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News